Untitled Document
Sign Up | Login    
ಬಾಯೊಳಗಿಷ್ಟು ಹಲ್ಲುಗಳಿದ್ದರೆ...


ಬಾಯಿಯಲ್ಲಿ ಹಲ್ಲುಗಳು ಇದ್ದರೆ ಒಳ್ಳೆಯದಲ್ಲವೆ? ಕೆಲವರು, ನೋವು ಯಾರಿಗೆ ಬೇಕು ಸರ್, ತೆಗೆದು ಬಿಡಿ ಎನ್ನುವವರಿದ್ದಾರೆ. ಹಲ್ಲುನೋವು ತೀವ್ರವಾದಾಗ, ಅದು ಹೆರಿಗೆ ನೋವಿನಷ್ಟು ತೀವ್ರ ಎಂದು ಬಣ್ಣಿಸಿದವರಿದ್ದಾರೆ. ಹೌದು, ಹಲ್ಲಿನಲ್ಲಿ ಹುಳುಕು ಉಂಟಾಗಿ, ಅದು ಹಲ್ಲಿನ ಮೇಲ್ಪದರಗಳನ್ನು ದಾಟಿ, ಒಳಪದರಕ್ಕೆ ತಲುಪಿದರೆ, ಅಲ್ಲಿರುವ ರಕ್ತನಾಳ, ದಂತ ನರಗಳ ಪ್ರಚೋದನೆಯಿಂದ ವಿಪರೀತ ನೋವು ಉಂಟಾಗುತ್ತದೆ. ಹಲ್ಲಿನ ಹುಳುಕು ಮೇಲ್ಪದರದಲ್ಲಿರುವಾಗ ಅದಕ್ಕೆ ಚಿಕಿತ್ಸೆ ಪಡೆದುಕೊಂಡರೆ, ತೀವ್ರತೆಯನ್ನು ತಡೆಯಬಹುದು. ಆದರೆ, ಕೆಲವರು ನೋವನ್ನು ಲೆಕ್ಕಿಸದೆ, ಹಲ್ಲು ಪೂರ್ತಿ ಹುಳುಕಿನಿಂದ ಹಾಳಾದ ಮೇಲೆ ಬಂದು, ಸರ್ ಹುಳ ಫುಲ್‌ ತಿಂದ್ಬಿಟ್ಟಿದೆ ಸರ್‌ ಏನಾದ್ರು ಮಾಡಿ ಎನ್ನುವವರು ಇದ್ದಾರೆ.

ಇಲ್ಲಿ ಬಣ್ಣಿಸಿರುವಂತೆ, ಹಲ್ಲಿನ ಹುಳುಕು ಅಥವಾ ದಂತಕ್ಷಯ ಹಲ್ಲಿನ ಒಳ ಪದರಗಳನ್ನು ಆವರಿಸಿದಾಗ ಉಂಟಾಗುವ ಹಲ್ಲು ನೋವು ಸಾಮಾನ್ಯವಾಗಿ ಕಂಡು ಬರುವ ಕಾರಣ. ಇದಲ್ಲದೆ, ಹಲ್ಲಿನ ಸವೆತ ಉಂಟಾಗಿ 'ಜುಮ್' ಎನಿಸುವ ನೋವು ಕಾಣಬರುತ್ತದೆ. ಹಲ್ಲಿನ ಮುರಿತದಿಂದಲೂ ನೋವು ಬರಬಹುದು. ಹೀಗೆ, ಹಲ್ಲು ನೋವಿನ ಕಾರಣಗಳು ಹಲವಾರು. ಹಲ್ಲಿನ ಶುಚಿತ್ವ ಕಾಪಾಡದಿದ್ದಲ್ಲಿ, ಹಲ್ಲಿನ ಸುತ್ತ ಪಾಚಿ ಬೆಳೆದುಕೊಂಡು, ವಸಡಿನ ತೊಂದರೆಯಿಂದ ನೋವು ಬರಬಹುದು, ಅಲ್ಲದೇ ಹಲ್ಲು ಸಧ್ರಡತೆಯನ್ನು ಕಳೆದುಕೊಂಡು ಅಲುಗಾಡುವ ಪರಿಸ್ಥಿತಿಯೂ ಬರಬಹುದು. ಹಿಂದಿನ ಕಾಲದಲ್ಲಿ ಹಲ್ಲು ನೋವು ತಡೆಯಲಾಗದ ಪರಿಸ್ಥಿತಿ ಬಂದಾಗ ಹಲ್ಲನ್ನು ಕೀಳುವುದೇ ಪರಿಹಾರವಾಗಿತ್ತು. ಇಂದು, ದಂತ ವೈದ್ಯ ಕ್ಷೇತ್ರ ಬಹಳಷ್ಟು ಮುಂದುವರೆದಿದೆ. ಹಲ್ಲನ್ನು ಉಳಿಸಿಕೊಳ್ಳಲು ಹಲವು ಬಗೆಯ ಚಿಕಿತ್ಸೆಗಳಿವೆ. ಎಲ್ಲಾ ಓಕೆ, ಹಲ್ಲನ್ನು ಉಳಿಸಿಕೊಳ್ಳಬಹುದು ಎಂದು ಏಕೆ ಇಷ್ಟು ಹೇಳುತ್ತಿದ್ದಾರೆ ಎಂದೆನಿಸಿಬಹುದು. ಹಲ್ಲಿನ ಪ್ರಾಮುಖ್ಯತೆಯನ್ನು ಅರಿತುಕೊಂಡರೆ ಇದಕ್ಕೆ ಉತ್ತರ ಸಿಗುತ್ತದೆ.

ಸಿಂಪಲ್ ವಿಷಯಗಳನ್ನು ತೆಗೆದುಕೊಳ್ಳೊಣ. ನಮ್ಮ ನಿಮ್ಮೆಲ್ಲರ ನಗುವಿನ ಅಂದ ಹೆಚ್ಚಿಸುವುದು ಹಲ್ಲು. ಬೊಚ್ಚು ಬಾಯಿ ಬಿಟ್ಟು ಅಜ್ಜಿ ನಕ್ಕರೆ ಚಂದ ಎಂದು ಹಾಡಿದರೂ, ಸುಂದರವಾದ ಹಲ್ಲಿನ ಪಂಕ್ತಿಯಿದ್ದಾಗ ನಗುವಿನ ಶೋಭೆಯೇ ಬೇರೆಯಲ್ಲವೆ?. ಮುಖದ ಸೌಂದರ್ಯದಲ್ಲಿ ಹಲ್ಲಿನ ಪಾತ್ರ ಮುಖ್ಯವಾಗಿದೆ. ಎದುರಿನ ಹಲ್ಲುಗಳು ನಗುವನ್ನು ಅಂದಗೊಳಿಸುವುದಲ್ಲದೆ, ತುಟಿಗಳಿಗೆ ಆಧಾರವಾಗಿರುತ್ತದೆ. ಆಧಾರವಿಲ್ಲದ ತುಟಿಗಳು ಕುಸಿದಂತೆ ಕಾಣುತ್ತದೆ. ಕೆನ್ನೆಗಳಿಗೂ ಹಲ್ಲುಗಳ ಆಧಾರ ಮುಖ್ಯ.

ಇನ್ನು ನಮ್ಮ ಆಹಾರದ ಬಗ್ಗೆ ಯೋಚಿಸಿದರೆ, ಒಳ್ಳೆಯ ಹಲ್ಲುಗಳಿದ್ದರಷ್ಟೇ ಅದರ ಸ್ವಾದವನ್ನು, ಸರಿಯಾಗಿ ಸವಿಯಲು ಸಾಧ್ಯ. ಗಟ್ಟಿ ಪದಾರ್ಥಗಳನ್ನು ತಿನ್ನಲು ಸಧ್ರಡವಾದ ಹಲ್ಲುಗಳು ಬೇಕೇ ಬೇಕು. ಹಲ್ಲು ಕಳೆದುಕೊಂಡಲ್ಲಿ, ಅದರ ವಸಡಿನ ಒಳಪದರವು ನಾಶವಾಗುತ್ತದೆ. ಅಹಾರ ಪದಾರ್ಥಗಳನ್ನು ಸಮರ್ಪಕವಾಗಿ ಅಗೆಯಲು, ವಸಡಿನ ಒಳ ಪದರ ಬಹುಮುಖ್ಯ. ಇದರ ಮಹತ್ವ ಅರಿಯಬೇಕಿದ್ದರೆ, ಬೊಚ್ಚು ಬಾಯಿಯಲ್ಲಿ ಅಜ್ಜಿ ಚಕ್ಕುಲಿ ತಿನ್ನಲಾಗದೆ ಪಡುವ ವ್ಯಥೆಯನ್ನು ಕೇಳಿ ನೋಡಿ. ಮೀನು, ಕೋಳಿ ಪದಾರ್ಥಗಳನ್ನು ತಿನ್ನಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡವರಿದ್ದಾರೆ. ಹಲ್ಲು ಕಳೆದುಕೊಂಡಿರುವವರ ತೊದಲು ಮಾತನ್ನು ನೀವು ಗಮನಿಸಿರಬಹುದು. ಹಲವು ಪದಗಳ ಸರಿಯಾದ ಉಚ್ಚಾರ ಹಲ್ಲುಗಳಿದ್ದರೆ ಮಾತ್ರ ಸಾಧ್ಯ.

ಆಹಾರ, ಮಾತು, ನಗು ಮತ್ತು ಸೌಂದರ್ಯ ಪ್ರತಿಯೊಬ್ಬರ ಜೀವನದಲ್ಲಿ ಎಷ್ಟು ಮುಖ್ಯವೆಂದು ನಾವೆಲ್ಲರೂ ತಿಳಿದಿರುವ ವಿಚಾರ. ಈ ನಿಟ್ಟಿನಲ್ಲಿ ಹಲ್ಲಿನ ಆರೋಗ್ಯವನ್ನು ಕಾಪಾಡುವುದು ಮುಖ್ಯವಾಗುತ್ತದೆ.

ಬಾಯೊಳಗಿಷ್ಟು ಹಲ್ಲುಗಳಿದ್ದರೆ.... ಸುಂದರವಾದ ನಗು, ಮುಖದ ಸೌಂದರ್ಯ, ಆಹಾರ ಸೇವನೆ ಹಾಗು ಸ್ಪಷ್ಟ ಮಾತಿಗೆ ಸಹಕಾರಿಯಾಗುತ್ತದೆ.

 

Author : ಅಶ್ವಿನ್ ಪಿ ಎಸ್ ಭಟ್  

Author's Profile

ಅಶ್ವಿನ್ ಪಿ ಎಸ್
ಅಂತಿಮ ವರ್ಷದ ಬಿಡಿಎಸ್ ವಿದ್ಯಾರ್ಥಿ,
ಸರ್ಕಾರಿ ದಂತ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು
psbhatashwin@gmail.com
www.facebook.com/ForAHappySmile

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited