Untitled Document
Sign Up | Login    
ಅಲೋಪಥಿಗೆ ಜಗತ್ತು ಹುಡುಕುತ್ತಿರುವ ಪರ್ಯಾಯ ಚಿಕಿತ್ಸಾ ವಿಧಾನಕ್ಕೆ ಸನಾತನ ಮೌಲ್ಯದ ಆಯುರ್ವೇದವೇ ಪ್ರಧಾನ


India is one of the three top medical tourism destinations in Asia (ವೈದ್ಯಕೀಯ ಪ್ರವಾಸೋದ್ಯದಲ್ಲಿ ಭಾರತ ಏಶಿಯಾದಲ್ಲೇ ಮೊದಲ ಮೂರು ಸ್ಥಾನಗಳಲ್ಲಿದೆ), ಇತ್ತೀಚೆಗೆ ಹೀಗೊಂದು ಸಂಶೋಧನೆ ಹೊರಬಿದ್ದಿದೆ. ಅಗ್ಗದ ದರದಲ್ಲಿ ಉತ್ತಮ ಚಿಕಿತ್ಸೆ, ನ್ಯೂರೋ ಸರ್ಜರಿ, ಮೂಳೆ ಚಿಕಿತ್ಸೆ, ನೆಫ್ರಾಲಜಿ ಮತ್ತು ಹೃದ್ರೋಗ ಚಿಕಿತ್ಸೆಗಳಲ್ಲಿ ಭಾರತ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ಪ್ರತಿಫಲ ಒಂದು ಕಾರಣವಾದರೆ, ಆಯುರ್ವೇದ, ಪ್ರಕ್ಇತಿ ಚಿಕಿತ್ಸೆ ಮತ್ತು ಯೋಗದಂತಹ ಇತರ ಚಿಕಿತ್ಸೆ ಪದ್ಧತಿಯ ಲಭ್ಯತೆ ಮತ್ತೊಂದು ಕಾರಣ.

ಅನಾರೋಗ್ಯವನ್ನು ಅತಿ ವೇಗವಾಗಿ ಪರಿಹರಿಸುವುದರೊಂದಿಗೆ, ಅಷ್ಟೇ ಪರಿಣಾಮಕಾರಿಯಾಗಿ ಅಡ್ಡಪರಿಣಾಮಗಳನ್ನು ಹೊತ್ತು ತರುವ ಅಲೋಪಥಿಕ್ ಚಿಕಿತ್ಸಾ ವಿಧಾನಕ್ಕೆ ಇಡೀ ಜಗತ್ತು ಪರ್ಯಾಯವಾದ ಚಿಕಿತ್ಸಾಪದ್ಧತಿಯನ್ನು ಅರಸಿ ಹೊರಟಿದೆ. ಭಾರತ ಮಾತ್ರ ಅಂತಹ ಪರ್ಯಾಯ ಚಿಕಿತ್ಸಾ ಪದ್ಧತಿಯನ್ನು ತನ್ನ ಒಡಲಲ್ಲೇ ಹೊತ್ತು ಪೋಷಿಸುತ್ತಿದೆ. ಅತಿ ವೇಗದ ಜಗತ್ತಿನಲ್ಲಿ ವೇಗವಾಗಿಯೇ ಎಲ್ಲವೂ ನಡೆಯಬೇಕು, instant food ನಿಂದ ಹಿಡಿದು ಆರೋಗ್ಯದವರೆಗೂ ಎಲ್ಲವೂ ಕ್ಷಿಪ್ರ. instant cure ಎಂಬ ಒಂದೇ ಒಂದು ಕಾರಣದಿಂದ ಅಲೋಪಥಿಕ್ ಚಿಕಿತ್ಸಾ ಪದ್ಧತಿಯಿಂದ ಅದೆಷ್ಟೋ ಅಡ್ಡ ಪರಿಣಾಮಗಳು instant ಆಗಿಯೇ ಮನುಷ್ಯನನ್ನು ಆವರಿಸಿಕೊಳ್ಳುತ್ತಿದೆ. ರಾಸಾಯನಿಕಗಳೇ ಕೃಷಿ ಪದ್ಧತಿಯಿಂದ ಹಿಡಿದು ಚಿಕಿತ್ಸಾ ಪದ್ಧತಿಯವರೆಗೂ ಹಾಸುಹೊಕ್ಕಾಗಿದ್ದು ಮನುಷ್ಯನ ದೇಹ ಕೆಮಿಕಲ್ ಫ್ಯಾಕ್ಟರಿಯಾಗಿ ಮಾರ್ಪಾಡಾಗುತ್ತಿದೆ. ಮುಂದಾಗುವ ಅಪಾಯವನ್ನು ತಡೆಗಟ್ಟಲು ಜಗತ್ತಿನ ಅದೆಷ್ಟೋ ರಾಷ್ಟ್ರಗಳು ಪರ್ಯಾಯ ಚಿಕಿತ್ಸಾ ಪದ್ಧತಿ ಮೊರೆ ಹೋಗುತ್ತಿವೆ. ಒಂದು ಸಮೀಕ್ಷೆಯ ಪ್ರಕಾರ, ರಷ್ಯಾದಲ್ಲಿ ಅಲ್ಲಿನ ಡಾಕ್ಟರ್ ಗಳು ಸಾಗರೋಪಾದಿಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಅಲೋಪಥಿಕ್ ಚಿಕಿತ್ಸಾ ಪದ್ಧತಿ ಕೆಲಸಕ್ಕೆ ಬಾರದ್ದು ಎಂಬ ನಿರ್ಧಾರ ತಳೆದವರಂತೆ, ಪರ್ಯಾಯ ಚಿಕಿತ್ಸಾ ಪದ್ಧತಿ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ.

ಇನ್ನು ಕಾರ್ಯವ್ಯಸನಿಗಳಾಗಿರುವ ಅಮೆರಿಕಾದಂತಹ ರಾಷ್ಟ್ರಗಳಲ್ಲಂತೂ ಮನಸ್ಸಿಗೆ ಶಾಂತಿ ದೊರೆಯದೇ ಯೋಗ ಚಿಕಿತ್ಸೆಗಾಗಿ ಹಾತೊರೆಯುತ್ತಿದ್ದಾರೆ. ಜಗತ್ತಿನ ಪರಿಸ್ಥಿತಿ ಹೀಗಿರುವಾಗ ಭಾರತ ಮತ್ತೊಮ್ಮೆ ವಿಶ್ವದ ಕೇಂದ್ರ ಬಿಂದುವಾಗಿದೆ. ಏಕೆಂದರೆ ಅಲೋಪಥಿಕ್ ಗೆ ಪರ್ಯಾಯ ಚಿಕಿತ್ಸಾ ಪದ್ಧತಿ ಜೀವಂತವಾಗಿರುವುದು ಭಾರತದಲ್ಲಿಯೇ. ಹೃದಯ ಕಸಿ ಸೇರಿದಂತೆ ಅಂಗಾಂಗ ಕಸಿ ಮಾಡಿ ಜೀವದಾನ ಮಾಡುವುದರಲ್ಲಿ ಅಲೋಪಥಿಯನ್ನು ಬಿಟ್ಟರೆ ಮತ್ತೊಂದು ಪರ್ಯಾಯ ಚಿಕಿತ್ಸೆ ಇಲ್ಲವೆಂಬ ಸ್ಥಿತಿ ನಿರ್ಮಾಣವಾಗಿದೆ. ಅಲೋಪಥಿ ಪದ್ಧತಿ ಪರಿಚಯಾಗುವುದಕ್ಕೂ ಮುನ್ನ ಕ್ರಿ.ಪೂ.600ರಲ್ಲೇ) ಪ್ರಾಚೀನ ಭಾರತದ ಶಸ್ತ್ರವೈದ್ಯ ನಿಪುಣ ಸುಶ್ರುತರು ಶಸ್ತ್ರ ಚಿಕಿತ್ಸೆ, ಅಂಗಾಂಗಗಳ ಕಸಿ ಮಾಡಿದ್ದರು. ಹೀಗಿದ್ದ ಭಾರತ 21ನೇ ಶತಮಾನದ ಹೊತ್ತಿಗೆ ಅತಿಯಾದ ಅಲೋಪಥಿ ವ್ಯಾಪ್ತಿಗೊಳಪಟ್ಟು, ಪ್ರಾಚೀನಾ ಆಯುರ್ವೇದವನ್ನು ಅಳಲೆಕಾಯಿ ಪಂಡಿತ ನೀಡುವ ಔಷಧ ಪದ್ಧತಿಯೆಂದು ಹಂಗಿಸುವ ಸ್ಥಿತಿಗೆ ತಲುಪಿದೆ. ಇನ್ನು ಯಾರನ್ನಾದರೂ ಅಲೋಪಥಿಯ ಅಡ್ಡ ಪರಿಣಾಮದ ಬಗ್ಗೆ ಪ್ರಶ್ನಿಸಿ ಆಯುರ್ವೇದ ಚಿಕಿತ್ಸೆಗೆ ಸಲಹೆ ನೀಡಿದರೆ, ಆಯುರ್ವೇದದಲ್ಲಿ ಪರಿಣಾಮವೇ ಇರುವುದಿಲ್ಲ ಇನ್ನು ಅಡ್ಡಪರಿಣಾಮ ಎಲ್ಲಿಂದ ಬರಬೇಕೆಂಬ ಲೇವಡಿಯ ಮಾತು ಢಳವಾಗಿರುತ್ತವೆ.
ಇಷ್ಠಿದ್ದರೂ ಭಾರತದ ಪುರಾತನ ಚಿಕಿತ್ಸಾ ಪದ್ಧತಿ ವಿದೇಶಿಗರನ್ನು ಆಕರ್ಷಿಸುತ್ತಿದೆ. ಡೆಂಗ್ಯೂ( ಅಲೋಪಥಿಯಲ್ಲಿ ಈವರೆಗೂ ಪರಿಣಾಮಕಾರಿ ಔಷಧಿ ಇಲ್ಲ), ಕ್ಯಾನ್ಸರ್, ಹೃದ್ರೋಗ, ಸೇರಿದಂತೆ ಮಾರಣಾಂತಿಕ ರೋಗಗಳಿಗೆ ಆಯುರ್ವೇದದ ಚಿಕಿತ್ಸೆ ಮೂಲಕ ದೊರೆಯುವ ಪರಿಹಾರದ ಮುಂದೆ ಇಂಗ್ಲೀಷ್ ಪದ್ಧತಿ ಚಿಕಿತ್ಸೆ ನಿರುತ್ತರವಾಗುತ್ತದೆ. ಇಂದಿಗೂ ಅದೆಷ್ಟೋ ಮಂದಿ ಕ್ಯಾನ್ಸರ್ ಪೀಡಿತರು ಆಯುರ್ವೇದ, ಯೋಗ ಚಿಕಿತ್ಸಾ ಪದ್ಧತಿಯಿಂದ ಜೀವಂತವಾಗುಳಿದಿದ್ದು, ಸೋ ಕಾಲ್ಡ್ ಅಲೋಪಥಿಗೆ ದೊಡ್ಡ ಸೋಜಿಗವಾಗಿ ಕಾಣುತ್ತಿದ್ದಾರೆ. ಭಾರತೀಯ ಪುರಾತನ ಚಿಕಿತ್ಸಾ ಪದ್ಧತಿಯ ಹೀಗಿದೆ.

ಇತ್ತೀಚೆಗಷ್ಟೇ ಹೆಸರಾಂತ ಪತ್ರಿಕೆ ದಿ ಗಾರ್ಡಿಯನ್ ಪ್ರಕಟಿಸಿದ್ದ ವರದಿಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆ, ಆಕ್ಯುಪಂಕ್ಚರ್ ಹಾಗೂ ಭಾರತದ ಪ್ರಾಚೀನ ಆಯುರ್ವೇದವನ್ನು ಶಾಸನ ಬದ್ಧಗೊಳಿಸಿದೆ ಎಂದು ಹೇಳಿದೆ(http://www.theguardian.com/global-development-professionals-network/2014/sep/17/acupuncture-ayurveda-medicine-health-india). ಇದನ್ನೇ ಆಧಾರವಾಗಿಟ್ಟುಕೊಂಡು ಗಾರ್ಡಿಯನ್ ಪತ್ರಿಕೆ ಆಯುರ್ವೇದದ ಬಳಕೆಯ ಪ್ರಮಾಣದ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದ್ದು ಶೇ.65ರಷ್ಟು ಗ್ರಾಮೀಣ ಭಾಗದ ಜನತೆ ಆರೋಗ್ಯ ರಕ್ಷಣೆಗೆ ಆಯುರ್ವೇದ ಹಾಗೂ ಔಷಧೀಯ ಸಸ್ಯಗಳನ್ನು ಬಳಸುತ್ತಾರೆ ಎಂದು ಹೇಳಿದೆ. ಇಷ್ಟೇ ಅಲ್ಲ, ಪ್ರತಿ ದೇಶದಲ್ಲೂ ಇಂತಹ ಸಮೀಕ್ಷೆ ನಡೆಸಿರುವ ಪತ್ರಿಕೆ, ಆಫ್ರಿಕಾದಲ್ಲಿ ಶೇ.80ರಷ್ಟು ಜನರು, ಚೀನಾದಲ್ಲಿ ಶೇ.40ರಷ್ಟು ಜನರು ಸಾಂಪ್ರದಾಯಿಕ ಔಷಧವನ್ನೇ ಬಳಸುತ್ತಾರೆ ಎಂದು ವರದಿ ಮಾಡಿದೆ. ಗಾರ್ಡಿಯನ್ ನೀಡಿರುವ ವರದಿ ಭಾರತದ ಮಟ್ಟಿಗೆ ಆಯುರ್ವೇದ ಪದ್ಧತಿಯ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಜಾಗತಿಕ ದೃಷ್ಠಿಯಿಂದ ನೋಡಿದರೆ ಅಲೋಪಥಿಯಿಂದ ಪರ್ಯಾಯ ಚಿಕಿತ್ಸಾ ಪದ್ಧತಿಯೆಡೆಗೆ ಹೆಚ್ಚಿನ ಆಸಕ್ತಿ ಬೆಳೆಯುತ್ತಿರುವುದು ಸ್ಪಷ್ಟವಾಗುತ್ತದೆ. ಗಿಡ ಮೂಲಿಕೆಗಳ, ಪ್ರಕೃತಿದತ್ತವಾಗಿ ದೊರೆಯುವ ಜೀವ ಸೆಲೆಯಂತಿರುವ ಆಯುರ್ವೇದ, ಸಾಂಸ್ಕೃತಿಕ ಚಿಕಿತ್ಸಾ ಪದ್ಧತಿಯ ಮುಂದೆ ಕೆಮಿಕಲ್ ಗಳಿಂದ ತಯಾರಾಗುವ ಇಂಗ್ಲೀಷ್ ಔಷಧ ಎಷ್ಟು ದಿನ ತಾನೆ ಅಸ್ಥಿತ್ವ ಉಳಿಸಿಕೊಳ್ಳಬಹುದು? ಆರ್ಥ್ರಿಟಿಸ್, ಸ್ಪಾಂಡಿಲೈಟಿಸ್, ಸ್ಲಿಪ್ ಡಿಸ್ಕ್, ಒತ್ತಡ, ಖಿನ್ನತೆ ವ್ಯಾಧಿಗಳಿಗೆ ಮುಂತಾದ ವ್ಯಾಧಿಗಳಿಗೆ ಅಡ್ಡ ಪರಿಣಾಮ ವಿಲ್ಲದೇ ಇರುವ ಔಷಧಗಳೇ ಇಲ್ಲ ಎಂಬುದು ಹಲವು ಆರೋಗ್ಯ ತಜ್ನರ ಅಭಿಪ್ರಾಯ.
ಈ ಆಯಾಮದಿಂದ ನೋಡುವುದಾದರೆ ಅಲೋಪಥಿಯಂತೆ ಆಯುರ್ವೇದವು, ರೋಗ ವಕ್ಕರಿಸಿದಾಗ ಹೋಗಿ ವ್ಯಾಧಿಯನ್ನು ನಿವಾರಿಸಲೆಂದು ಬಳಸುವ ಚಿಕಿತ್ಸಾ ವಿಧಾನ ಅಲ್ಲ ಎಂದು ಹೇಳಬಹುದು. ಆಯುರ್ವೇದ ಎಂಬುದು ಸನಾತನ ಧರ್ಮದ ಜೊತೆ ಜೊತೆಗೇ ಬಂದಿರುವ ಜೀವನ ಶೈಲಿ. ಮತ್ತೊಂದು ರೀತಿಯಲ್ಲಿ ನಮ್ಮ ಪೂರ್ವಜರು ತಮ್ಮ ದಿನಚರಿಯಲ್ಲೇ ಆರೋಗ್ಯವನ್ನು ನಿಯಂತ್ರಿಸಿಕೊಳ್ಳುವ ನಿಟ್ಟಿನಲ್ಲಿ ಚಿಕಿತ್ಸಾ ವಿಧಾನಗಳನ್ನು ಪಾಲಿಸುತ್ತಿದ್ದರು. ತನ್ಮೂಲಕ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದರ ಬದಲು ರೋಗ ಬರದಂತೆಯೇ ಎಚ್ಚರ ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಯುರ್ವೇದ ಒಂದು ವಿಧವಾದ ಚಿಕಿತ್ಸಾ ಪದ್ಧತಿಯಾಗಿದ್ದರೂ ಸಹ ಅದು ಅಲೋಪಥಿಯಂತೆ ಇಂತಹ ಖಾಯಿಲೆಗೆ ಇಂಥಹದ್ದೇ ಚುಚ್ಚುಮದ್ದು ನೀಡಬೇಕೆಂಬ ನಿಯಮ ಹೊಂದಿಲ್ಲ. ಬದಲಾಗಿ ಪರಿಪೂರ್ಣ ಆರೋಗ್ಯ ಹೊಂದಲು ಅನುಕೂಲವಾಗಿದೆ.

ಆಧುನಿಕ ಚಿಕಿತ್ಸಾ ವಿಧಾನ ದೇಹದ ಮೇಲೇ ಕೇಂದ್ರೀಕೃತವಾಗಿರುವುದರಿಂದ ರೋಗಿಯ ಮನಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲೋಪಥಿಕ್ ಮಟ್ಟಿಗೆ ಈ ಅಂಶದ ಅಗತ್ಯವೂ ಬಹಳ ದೂರವಾಗಿಯೇ ಉಳಿದಿದೆ. ಆದರೆ ಆಯುರ್ವೇದದ ಮನಸ್ಸು, ಇಂದ್ರಿಯಗಳಿಗೆ ಚಿಕಿತ್ಸೆ ನೀಡುವುದೂ ಅತ್ಯಂತ ಪ್ರಮುಖ ವಿಷಯವಾದದ್ದು. ಇಂದಿನ ಆಧುನಿಕ ಯುಗದಲ್ಲೂ ಸಹ ಅಯುರ್ವೇದ ತನ್ನದೇ ಅಸ್ಥಿತ್ವವನ್ನು ಉಳಿಸಿಕೊಂಡು ಪರ್ಯಾಯ ಚಿಕಿತ್ಸಾ ಪದ್ಧತಿಯನ್ನು ಶೋಧಿಸುತ್ತಿರುವ ಜಗತ್ತಿನ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಕೇರಳದ ಆಯುರ್ವೇದ ಚಿಕಿತ್ಸೆ ಯುರೋಪ್ ನಿಂದ 600,000 ಜನ ಪ್ರವಾಸಿಗರನ್ನು ಆಕರ್ಶಿಸಿಸುವುದೇ ಇದಕ್ಕೆ ಉತ್ತಮ ನಿದರ್ಶನ. ಇಂತದ್ದೇ ಹಲವು ನಿದರ್ಶನಗಳು ಅಮೆರಿಕಾ, ಬ್ರೆಜಿಲ್ ನಲ್ಲಿಯೂ ಕಾಣಸಿಗುತ್ತದೆ. ಹೇಗೆ ಯೋಗಕ್ಕೆ ಅಮೆರಿಕಾ ಶರಣಾಗಿದೆಯೋ ಹಾಗೆಯೇ ಆಯುರ್ವೇದ ಪದ್ಧತಿಗೂ ಮಾರು ಹೋಗಿದೆ. ಇನ್ನು ಹಿಂದೊಮ್ಮೆ ಭಾರತದ ತುಂಡಾಗಿದ್ದ, ಬಗಲಲ್ಲೇ ಇರುವ ಬಾಂಗ್ಲಾ ಸಹ ಆಯುರ್ವೇದ ಕಾಲೇಜು ಆರಂಭಿಸಲು ತೀರ್ಮಾನಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ಜಪಾನ್ ಈಗಾಗಲೇ 30 ವರ್ಷದಿಂದ ಆಯುರ್ವೇದ, ಯೋಗ ಚಿಕಿತ್ಸೆಯನ್ನು ಮುಂದುವರೆಸುತ್ತಿದೆ.
ಶ್ರೀಲಂಕಾ, ಬರ್ಮಾ ದೇಶಗಳಂತೂ ಆಯುರ್ವೇದದ ಶಕ್ತಿಗೆ ಅಚ್ಚರಿ ವ್ಯಕ್ತಪಡಿಸಿ ಅದರ ಹಿಂದೆ ಬಿದ್ದಿದ್ದಾರೆ. alternative medicines (ಪರ್ಯಾಯ ಔಷಧಿ) ಗಾಗಿ ಅಲೆದಾಡುತ್ತಿರುವ ಇಂತಹ ಸಂದರ್ಭದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಪುರಾತನ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿವೆ ಎಂದರೆ ಹೆಮ್ಮೆಯ ವಿಷಯವಲ್ಲವೇ?

ಇನ್ನು ಆಯುರ್ವೇದ ಎಂದಾಕ್ಷಣ ಹಿಗ್ಗಿ, ಎಲ್ಲವೂ ಸರಿ ಇದೆ ಎಂಬ ಭ್ರಾಂತಿ ಬೇಡ. ಸನಾತನ ಧರ್ಮದ ಕೊಡುಗೆಯನ್ನು ಅಪಪ್ರಚಾರ ಮಾಡಿ ಮೂಲ ತತ್ವಕ್ಕೇ ಮಸಿ ಬಳಿಯುವಂತಹ ಕೆಲಸ ಎಲ್ಲಾ ಕ್ಷೇತ್ರಗಳಲ್ಲೂ ನಡೆಯುತ್ತಿರುತ್ತದೆ. ಹಾಗೆಯೇ ಕೈಗೆ ಸಿಕ್ಕ ನಾರು-ಬೇರುಗಳನ್ನೆಲ್ಲಾ ತಂದು ಫುಟ್ ಪಾಥ್ ಮೇಲೆ ಕುಳಿತು ಆಯುರ್ವೇದದ ಬಣ್ಣ ಬಳಿದು ಅರಚುತ್ತಾ ಜನರ ದಿಕ್ಕು ತಪ್ಪಿಸುವವರೂ ಇದ್ದಾರೆ. ಇಂತಹವರಿಂದಲೇ ಆಯುರ್ವೇದ ಎಂದರೆ ಕನಿಷ್ಠ ಮಟ್ಟದ ಭಾವನೆ ಮೂಡುತ್ತದೆ. ಹಿಮಾಲಯದಲ್ಲಿ ಅಪೂರ್ವ ಗಿಡ ಮೂಲಿಕೆಗಳಿರುವುದೂ ನಿಜ, ಅದನ್ನು ಔಷಧಗಳಿಗೆ ತಯಾರು ಮಾಡಲೂ ಸಾಧ್ಯವಿದೆ.
ಅಂದ ಮಾತ್ರಕ್ಕೆ ಸಿಕ್ಕ ಸಿಕ್ಕವರೆಲ್ಲ ಅದನ್ನು ತಯಾರು ಮಾಡು ಶುರು ಮಾಡಿಬಿಟ್ಟಿದ್ದಾರೆ. ಮುಂದೊಂದು ದಿನ ಇದೇ ನಮಗೆ ಮುಳುವಾಗುವ ಸಾಧ್ಯತೆಗಳಿವೆ. ಹಾಗೆಂದ ಮಾತ್ರಕ್ಕೆ ರಾತ್ರೋ ರಾತ್ರಿ ಎಲ್ಲವನ್ನೂ ಆಯುರ್ವೇದಮಯಮಾಡಿಬಿಡಬೇಕೆಂದಲ್ಲ. ಏಕೆಂದರೆ ನಾವು ಪಾಶ್ಚಾತ್ಯ ಜೀವನ ಶೈಲಿಗೆ ಬಹು ವರ್ಷಗಳಿಂದ ಒಗ್ಗಿ ಹೋಗಿದ್ದೇವೆ. ತಕ್ಷಣವೇ ಪ್ರಾಣ ಹೋಗುವ ಸ್ಥಿತಿ ಎಂದರೆ ಆಯುರ್ವೇದ ಬರಲಿ ಅಲೋಪಥಿ ಬೇಡ ಎನ್ನಲು ಸಾಧ್ಯವಿಲ್ಲ. ಇಂದಿನ ಜೀವನ ಶೈಲಿಗೆ ಪುರಾತನ ಚಿಕಿತ್ಸಾ ಪದ್ಧತಿಯಿಂದ ಅತಿ ವೇಗದಲ್ಲಿ ಎಲ್ಲವೂ ನಿಯಂತ್ರಣಕ್ಕೆ ಬಂದುಬಿಡುತ್ತದೆ ಎನ್ನಲು ಸಾಧ್ಯವಿಲ್ಲ. ಬದಲಾಗಿ ಹಂತ ಹಂತವಾಗಿ ಜಾರಿಗೆ ತರುವ ಅಗತ್ಯವಿದೆ. ಈ ದೃಷ್ಥಿಯಿಂದಲೇ ಮೊನ್ನೆ ಸೆ.15ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಆಯುಷ್ ಹೆಲ್ತ್ ಮಿಷನ್(ಆಯುರ್ವೇದ, ಯೋಗ, ನ್ಯಾಚರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ) ಗೆ ಚಾಲನೆ ನೀಡುವ ನಿರ್ಧಾರ ಕೈಗೊಂಡಿದ್ದು ಅಲೋಪತಿ ಪದ್ಧತಿಯ ಚಿಕಿತ್ಸೆಗೆ ಪರ್ಯಾಯವಾದ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಲು ಮುಂದಾಗಿದೆ. ಈ ಯೋಜನೆ ಮೂಲಕ ಪ್ರಮುಖವಾಗಿ ದುರ್ಬಲ ಮತ್ತು ದೂರದ ಗುಡ್ಡಗಾಡಿನ ಪ್ರದೇಶಗಳಲ್ಲಿ ಈ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಲು ತೀರ್ಮಾನಿಸಲಾಗಿದೆ.

ಕೇಂದ್ರ ಸರ್ಕಾರದ ಆಯುಷ್ ಹೆಲ್ತ್ ಮಿಷನ್ ಮೂಲಕ, ಆಯುಷ್ ಆಸ್ಪತ್ರೆಗಳ ಹಾಗೂ ಔಷಧಾಲಯಗಳ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಲಿದೆ. ಸಾವಯವ ಕೃಷಿಯಿಂದ ಆಯುಷ್ ಚಿಕಿತ್ಸಾ ವಿಧಾನಕ್ಕೆ ಔಷಧ ತಯಾರಿಕೆಯಾಗಲಿದ್ದು ಇದಕ್ಕೂ ಉತ್ತೇಜನ ದೊರೆಯಲಿದೆ. ಭಾರತದ ಪುರಾತನ ಚಿಕಿತ್ಸಾ ವಿಧಾನಗಳು ಜಗತ್ತು ಹುಡುಕುತ್ತಿರುವ ಅಲೋಪತಿಗೆ ಪರ್ಯಾಯ ಚಿಕಿತ್ಸಾ ಪದ್ಧತಿಯಾಗಿ ನಿಲ್ಲಲಿವೆ.

 

Author : ಬೆಂಗಳೂರು ವೇವ್ಸ್

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited