Untitled Document
Sign Up | Login    
ವರುಷ ತುಂಬಿದ ಹರುಷ: ಮೋದಿ ಸರ್ಕಾರದ ಮುಂದಿರುವ ಸವಾಲುಗಳು

ಮೇಕ್ ಇನ್ ಇಂಡಿಯಾ ಉದ್ಘಾಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಭಾಗ - 2

ಹಲವಾರು ಅಡೆತಡೆ, ಇತಿಮಿತಿಗಳ ನಡುವೆಯೂ ಜನರ ಮೆಚ್ಚುಗೆ ಗಳಿಸುವಂತೆ ಆಡಳಿತ ನಡೆಸಿದ ಪ್ರಧಾನಿ ಮೋದಿಯವರಿಗೆ ಮುಂದಿನ ಒಂದೆರಡು ವರ್ಷ ಅತ್ಯಂತ ಪ್ರಾಮುಖ್ಯ ಪಡೆದಿವೆ. ಸವಾಲುಗಳ ಮಧ್ಯೆ ಅವರು ಈವರೆಗೆ ಹಾಕಿಕೊಂಡ ಅಭಿವೃದ್ಧಿಯ ಪಥದ ಅಡಿಪಾಯ ಕುಸಿಯದಂತೆ ನೋಡಿಕೊಳ್ಳುವುದರೊಂದಿಗೆ ಆರ್ಥಿಕ ಬೆಳವಣಿಗೆ ಸೇರಿದಂತೆ ರೈತರ, ನಿರುದ್ಯೋಗ, ಭದ್ರತೆ ಮುಂತಾದ ಕ್ಲಿಷ್ಠಕರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಬಂಡವಾಳ ಹೂಡಿಕೆಗೆ ವಿಶ್ವದ ಅನೇಕ ದೇಶಗಳು ತುದಿಗಾಲಲ್ಲಿ ನಿಂತಿದ್ದು, ಮುಂದಿನ ದಿನಗಳಲ್ಲಿ ವಿದೇಶಿ ಹಣ, ತಂತ್ರಜ್ನಾನಗಳು ಭಾರತದತ್ತ ಹರಿದುಬರಲಿದೆ. ಈ ನಿಟ್ಟಿನಲ್ಲಿ ಅಗತ್ಯವಾದ ಪರಿಸರವನ್ನು ಸರಕಾರ ಸೃಷ್ಠಿಸುತ್ತಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯ ಫಲ ಕಣ್ಣಿಗೆ ಕಾಣಿಸಿಕೊಳ್ಳಲಿದೆ.

ಆದರೂ ಮೋದಿ ಹಾದಿ ಸುಗಮವಾಗಿಲ್ಲ ಎನ್ನುವುದೂ ನಿಜವೇ. ಮೋದಿ ವಿರುದ್ಧ ಸದಾ ಕತ್ತಿಮಸೆಯುತ್ತಿರುವ ಕಾಂಗ್ರೆಸ್ ಮತ್ತು ಇತರೇ ಪಕ್ಷಗಳು ಅವರ ಸರಕಾರದ ಪ್ರತಿಯೊಂದು ನೀತಿ, ಯೋಜನೆಗಳನ್ನೂ ಟೀಕಿಸುವುದಲ್ಲದೆ ಅವುಗಳ ವಿರುದ್ಧ ಜನಾಭಿಪ್ರಾಯವನ್ನೂ ಉಂಟುಮಾಡಲು ಪ್ರಯತ್ನಗಳನ್ನು ಮುಂದುವರಿಸಲಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ ಜಾರಿಗೆ ತಂದ ಭೂ ಸ್ವಾಧೀನ ಕಾಯ್ದೆಗೆ ಅತೀ ಅವಶ್ಯವಾದ ತಿದ್ದುಪಡಿಗಳನ್ನು ತರಲು ತಡೆಯೊಡ್ದುವುದರೊಂದಿಗೆ ಆ ಕಾಯ್ದೆಯಿಂದ ರೈತರಿಗೆ ನಷ್ಟವುಂಟಾಗಿ ಅವರು ಬೀದಿಪಾಲಾಗುತ್ತಾರೆ ಎಂಬ ಭ್ರಮೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ನೇತೃತ್ವದಲ್ಲಿ ಪಕ್ಷ ಈಗಾಗಲೇ ಮಾಡುತ್ತಿದೆ. ರೈತರ ಬಗ್ಗೆ ಕಾಳಜಿಗಿಂತ ಹೆಚ್ಚಾಗಿ ತನ್ನ ನೆಲೆ ಉಳಿಸಿಕೊಳ್ಳುವ ತಂತ್ರಕ್ಕೆ ಕಾಂಗ್ರೆಸ್ ಮೊರೆಹೋಗಿದೆ. ಹಾಗಾಗಿ, ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಮೋದಿ ಸರಕಾರ ಈ ಕಾಯ್ದೆಯನ್ನು ಹೇಗೆ ಜಾರಿಗೆ ತರುತ್ತದೆ ಎಂಬುದು ಕುತೂಹಲದ ವಿಷಯ, ಮಾತ್ರವಲ್ಲ, ದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ, ವಿದೇಶೀ ಬಂಡವಾಳ ಹೂಡಿಕೆಗೆ ಅದು ಅತೀ ಅವಶ್ಯಕ ಕೂಡ.

ಭಾರತದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತಿದ್ದು, ಮುಂದಿನ ವರ್ಷಗಳಲ್ಲಿ ಜಿಡಿಪಿ ಅಂದಾಜು 8-8.5 ಪ್ರತಿಶತ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಆದರೂ ವಿತ್ತ ಕೊರತೆ ಜಿಡಿಪಿಯ ಶೇ.3ಕ್ಕೆ ಸೀಮಿತಗೊಳಿಸುವುದೂ ಸರಕಾರಕ್ಕೆ ಸವಾಲಾಗಿದೆ. ಇದು ಸಾಧ್ಯವಾದರೆ ಭಾರತದಲ್ಲಿ ಬಂಡವಾಳ ಹೂಡುವ ವಿದೇಶೀ ಸಂಸ್ಥೆಗಳಿಗೆ ಹೆಚ್ಚಿನ ವಿಶ್ವಾಸ ಮೂಡುತ್ತದೆ.

ಭಾರತ ವಿಶ್ವದಲ್ಲೇ ಅತಿ ಹೆಚ್ಚು ಬಂಗಾರ ಆಮದು ಮಾಡಿಕೊಳ್ಳುವ ದೇಶ. ಮಾತ್ರವಲ್ಲ, ಮನೆ ಮನೆಗಳಲ್ಲಿ, ತಿಜೋರಿ, ಕಪಾಟುಗಳಲ್ಲಿ ಹುದುಗಿರುವ ಬಂಗಾರವೇನಾದರೂ ದೇಶದ ಅಭಿವೃದ್ಧಿಗೆ ಬಳಕೆಯಾದರೆ ಭಾರತದ ಜಿಡಿಪಿ ಬೆಳವಣಿಗೆ ಕನಿಷ್ಠ ಒಂದೆರಡು ಪ್ರತಿಶತ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಸರಕಾರ 'Gold Monetization' ಮತ್ತು ಗೋಲ್ಡ್ ಬಾಂಡ್ ಗಳ ಮೂಲಕ ಹಣದ ಹರಿವು ಬರುವಂತೆ ಮಾಡಲಿದೆ.

ಜನಪರ ಯೋಜನೆಗಳು ಕುಂಠಿತವಾಗದಂತೆ ಸರಕಾರೀ ವೆಚ್ಚಗಳನ್ನು ನಿಯಂತ್ರಿಸುವುದು, ಈ ಮೂಲಕ ವಿತ್ತೀಯ ಕೊರತೆಯನ್ನು ತಗ್ಗಿಸುವುದು ಸರಕಾರದ ಮುಂದಿರುವ ಇನ್ನೊಂದು ಸವಾಲು. ಇದಕ್ಕೆ ಬೇಕಾಗುವ ಹಣವನ್ನು ಸಾಲ ರೂಪದಲ್ಲಲ್ಲದೆ ಇತರೇ ನವೀನ ರೀತಿಗಳಲ್ಲಿ ಒದಗಿಸುವುದೂ ಅವಶ್ಯವಾಗಿದೆ. ಅನಗತ್ಯ ಸಬ್ಸಿಡಿಗಳನ್ನು ಕಡಿತಗೊಳಿಸುವುದು ಮತ್ತು ಸಬ್ಸಿಡಿ ಹಣ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮಾಗೊಳಿಸುವುದರಿಂದಲೂ ಸಾಕಷ್ಟು ಉಳಿತಾಯ ಸಾಧ್ಯ. ಆಡುಗೆ ಅನಿಲಕ್ಕೆ ಕೊಡುವ ಸಬ್ಸಿಡಿ ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ಜಮಯಾಗುತ್ತಿರುವುದು ಇದಕ್ಕೊಂದು ಉದಾಹರಣೆ.

ಕಾನೂನುಗಳ ಸರಳೀಕರಣ ಸೇರಿದಂತೆ ಉದ್ಯಮಿಗಳಿಗೆ ಉತ್ತೇಜನ ನೀಡಲು ವ್ಯವಹಾರ ಸುಲಭೀಕರಣಗೊಳಿಸುವುದು ಮೋದಿ ಸರಕಾರದ ಪ್ರಯತ್ನವಾಗಿದೆ. ಇದಕ್ಕಾಗಿ ವ್ಯವಸ್ಥೆಯಲ್ಲಿ ಬದಲಾವಣೆ, ಅಧಿಕಾರಿಗಳ ಕಾರ್ಯಕ್ಷಮತೆ, ಮನೋಸ್ಥಿತಿಯಲ್ಲೂ ಸುಧಾರಣೆ ಅಗತ್ಯ.

ಅಡುಗೆ ಅನಿಲಕ್ಕೆ ಸೀಮಿತವಾದ ನೇರ-ನಗದು-ವರ್ಗಾವಣೆ ಮೂಲಕ ಆಹಾರ ಹಾಗೂ ರಸಗೊಬ್ಬರ ಸಬ್ಸಿಡಿಗಳನ್ನೂ ಫಲಾನುಭವಿಗಳ ಖಾತೆಗಳಿಗೆ ಜಮಾಗೊಳಿಸುವುದು - ಇದರಿಂದ ಸಾವಿರಾರು ಕೋಟಿ ರೂ.ಗಳು ಸೋರಿಕೆಯಾಗುವುದನ್ನು ತಡೆಗಟ್ಟಬಹುದು ಮತ್ತು ಹಣ ಉಳಿತಾಯವಾಗಬಹುದು.

ಏಕ ರೂಪದ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಜಾರಿಗೆ ಬಂದರೆ ದೇಶದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ತೇಜಿ ಬರಲಿದೆ. ಈ ಕಾಯ್ದೆ ಎಪ್ರಿಲ್ 1, 2016 ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ.

ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಾಗಿದೆ. ನೀರಾವರಿ ಯೋಜನೆ ಸೇರಿದಂತೆ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ತೆಗೆಯುವ ವಿಧಾನಗಳನ್ನು ಭಾರತೀಯ ರೈತರು ಅಳವಡಿಕೊಳ್ಳುವ ಅವಶ್ಯಕತೆ ಇದೆ. ಇಸ್ರೇಲ್, ಆಸ್ಟ್ರೇಲಿಯಾ ದೇಶಗಳಲ್ಲಿ ಈ ದಿಶೆಯಲ್ಲಿ ಅದ್ಭುತ ಸಾಧಿನೆಗಳನ್ನು ಮಾಡಲಾಗಿದ್ದು, ಪ್ರಧಾನಿ ಮೋದಿ ಇದನ್ನು ಭಾರತದಲ್ಲೂ ಅಳವಡಿಸುವ ಪ್ರಯತ್ನದಲ್ಲಿದ್ದಾರೆ. ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ದೊರಕಿಸುವುದು, ಹಣ್ಣು ತರಕಾರಿಗಳನ್ನು ಸಂರಕ್ಷಿಸಿಡುವುದು ಕೂಡ ಮೋದಿ ಸರಕಾರದ ಗುರಿಗಳಲ್ಲಿ ಒಂದು.

ಭಾರತೀಯರು ವಿದೇಶಗಳಲ್ಲಿ ಹುದುಗಿಸಿಟ್ಟ ಕಪ್ಪು ಹಣವನ್ನು ವಾಪಸ್ ತರುವುದು ಮೋದಿಯವರ ಬಹು ಚರ್ಚಿತ ಉದ್ದೇಶಗಳಲ್ಲಿ ಒಂದು. ಇದು ಸಾಧ್ಯವಾದರೆ, ಭಾರತದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಸಹಾಯಕವಾಗಬಹುದು.

ರಾಷ್ಟ್ರೀಕೃತ ಬ್ಯಾಂಕುಗಳು ಹೆಚ್ಚಿನ ಪಾರದರ್ಶಕತೆ ಮತ್ತು ಕ್ಷಮತೆಯಿಂದ ಕೆಲಸ ಮಾಡಬೇಕಿದೆ. ಇದಕ್ಕಾಗಿ ಪ್ರತಿಭಾವಂತರನ್ನು ನೇಮಿಸಿಕೊಳ್ಳುವುದೂ ಸೇರಿದಂತೆ ಬ್ಯಾಂಕುಗಳು ನಷ್ಟವನ್ನು ಕಡಿತಗೊಳಿಸಿ ಯೋಜನಾ ಗುರಿ ತಲಪುವತ್ತ ಹೆಜ್ಜೆ ಹಾಕಬೇಕು. ಹೊಸ ಬ್ಯಾಂಕುಗಳ ಸ್ಥಾಪನೆಯೆ ಯೋಜನೆಯೂ ಮೋದಿ ಸರಕಾರದ ಮುಂದಿದೆ.

ಮೋದಿ ಸರಕಾರದ ಬಹಳ ಮುಖ್ಯ ಯೋಜನೆಗಳಲ್ಲಿ ಒಂದಾದ, ದೇಶಾದ್ಯಂತ 24/7 ವಿದ್ಯುತ್ ಸರಬರಾಜು ಯೋಜನೆ ಕಾರ್ಯಗತವಾಗಲು ಸಾಕಷ್ಟು ಅಡಚಣೆಗಳಿದ್ದು, ಸರಕಾರ ಇದನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ತೆರಿಗೆ ನೀತಿಗಳಲ್ಲೂ ಸುಧಾರಣೆ, ಬದಲಾವಣೆಗಳ ಅವಶ್ಯಕತೆ ಇದ್ದು, ಕೈಗಾರಿಕೆಗಳ ಅಭಿವೃದ್ಧಿಗೆ ಇವು ಅಗತ್ಯವಾಗಿದೆ. ಭಾರತಕ್ಕೆ ತೀವ್ರ ಪೈಪೋಟಿ ಕೊಡುತ್ತಿರುವ ಚೀನಾದ ಸರಕು, ವಸ್ತುಗಳು ಭಾರತಕ್ಕೆ ಹರಿದು ಬರುತ್ತಿದ್ದು, ನಮ್ಮ ದೇಶದಲ್ಲಿ ಉತ್ಪಾದನೆಯಾದ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಚೀನಾದಲ್ಲಿ ಕಡಿಮೆ ಬಡ್ದಿ ದರದಲ್ಲಿ ಬಂಡವಾಳ ಲಭ್ಯತೆ ಮತ್ತು ಕಡಿಮೆ ದರದ ತೆರಿಗೆಗಳು ಚಾಲ್ತಿಯಲ್ಲಿರುವುದೂ ಸೇರಿದಂತೆ ರಫ್ತುದಾರರಿಗೆ ಅಲ್ಲಿಯ ಸರಕಾರ ವಿಶೇಷ ಧನರೂಪದ ಸಹಾಯ ಮಾಡುತ್ತಿದೆ. ಮೋದಿ ಸರಕಾರ ಸಹ ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

ಮೋದಿಯವರ ಮೆಚ್ಚಿನ ಯೋಜನೆಗಳಲ್ಲೊಂದಾದ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಬುಲ್ಲೆಟ್ ಟ್ರೈನ್ ಯೋಜನೆಗಳಿಗೆ ಹಣಕಾಸಿನ ಮತ್ತು ಭೂ ಸ್ವಾಧೀನ ತಡೆಗಳು ಎದುರಾಗಬಹುದು. ಈ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಯೋಜನೆಗಳನ್ನು ಕಾರ್ಯಗತಗೊಳಿಸುವುದು ಸರಕಾರಕ್ಕೆ ಸವಾಲಾಗಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ಕೊಟ್ಟು ಅವುಗಳು ಹೆಚ್ಚಿದ ಉತ್ಪಾದಕತೆ ಹೊಂದುವುದು ದೇಶದ ಅಭಿವೃದ್ಧಿಗೆ ಅಗತ್ಯ. ಅತಿ ಹೆಚ್ಚು ಉದ್ಯೋಗ ಸೃಷ್ಟಿ ಈ ವಲಯದಲ್ಲಿ ಆಗುತ್ತಿರುವುದು ಗಮನಾರ್ಹ.
ಕೈಗಾರಿಕೆಗಳ ಸ್ಥಾಪನೆ ಮತ್ತು ಕ್ಷಿಪ್ರ ಆರ್ಥಿಕ ಅಭಿವೃದ್ದಿಗೆ ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ, ವಿದ್ಯುತ್, ನೀರು ಮುಂತಾದ ಮೂಲಭೂತ ಸೌಕರ್ಯಗಳು ಅತ್ಯಂತ ಪ್ರಮುಖವಾಗಿವೆ. ಇವುಗಳನ್ನು ಕ್ಷಿಪ್ರವಾಗಿ ಒದಗಿಸಿದರೆ ಮಾತ್ರ ಒಟ್ಟಾರೆ ದೇಶದ ಅಭಿವೃದ್ಧಿ ಸಾಧ್ಯ. ಬೃಹತ್ ಪ್ರಮಾಣದ ಹಣಕಾಸಿನ ಅಗತ್ಯವಿರುವ ಈ ಯೋಜನೆಗಳಿಗೆ ಬಂಡವಾಳ ಒದಗಿಸಲು ಸರಕಾರ ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ.

ಇವೆಲ್ಲದರ ಜೊತೆಗೆ ಮೋದಿ ಸದಾ ವಿಪಕ್ಷಗಳ ಟೀಕೆ, ಅಸಹಕಾರ ಎದುರಿಸಬೇಕಾಗಿದೆ. ಅವರನ್ನು ಹಣಿಯಲು ಕಾಂಗ್ರೆಸ್ ಸಮೇತ ಪ್ರತಿಪಕ್ಷಗಳು ಯಾವುದೇ ಅವಕಾಶವನ್ನೂ ಬಿಟ್ಟುಕೊಡಲು ತಯಾರಿಲ್ಲ ಎನ್ನುವುದೂ ಸತ್ಯ. ಅಲ್ಲದೆ, ಮೋದಿ ವಿರುದ್ಧ ಕಳೆದ ೧೩-೧೪ ವರ್ಷಗಳಿಂದ ನಿರಂತರವಾಗಿ ಅಪಪ್ರಚಾರ ಮಾಡುತ್ತಾ ಬಂದಿರುವ ಕೆಲವು ಮಾಧ್ಯಮಗಳು ಇನ್ನೂ ಸಹ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದು, ನರೇಂದ್ರ ಮೋದಿ ಇವೆಲ್ಲ ಪ್ರತಿಕೂಲತೆಗಳಿದ್ದರೂ ತಮ್ಮ ಗುರಿ ಸಾಧನೆಗೆ ಇನ್ನಷ್ಟು ಪ್ರಯತ್ನ ಮಾಡುವುದು ಅನಿವಾರ್ಯ.

ಕೇವಲ ಒಂದು ವರ್ಷದ ಅವಧಿಯಲ್ಲಿ ಭಾರತ ವಿಶ್ವದ ಎದುರು ತೆಲೆ ಎತ್ತಿ ನಿಲ್ಲುವಂತೆ ಮಾಡಿದ ಮತ್ತು 'ನಾನು ಭಾರತೀಯ' ಎಂದು ವಿದೇಶಗಳಲ್ಲೂ ಹೆಮ್ಮೆಯಿಂದ ನಾವೆಲ್ಲರೂ ಹೇಳಿಕೊಳ್ಳುವಂತೆ ಮಾಡಿದ ಪ್ರಧಾನಿ ಮೋದಿ ಭಾರತ ದೇಶ ಕಂಡ ಅತ್ಯಂತ ಯಶಸ್ವಿ ಪ್ರಧಾನಿಯಾಗಿದ್ದಾರೆ ಎನ್ನುವುದಲ್ಲಿ ಸಂದೇಹವೇ ಇಲ್ಲ. ಮೊಸರಿನಲ್ಲೂ ಕಲ್ಲು ಹುಡುಕುವ ಪ್ರವೃತ್ತಿಯ ರಾಜಕಾರಣಿಗಳಿಗೆ, ಮಾಧ್ಯಮಗಳಿಗೆ, ವಿಶ್ಲೇಷಕರಿಗೆ ಭ್ರಷ್ಟಾಚಾರವನ್ನೇ ಮೈಗೂಡಿಸಿಕೊಂಡು ದೇಶವನ್ನು ಒಂದೆರಡು ದಶಕಗಳಷ್ಟು ಹಿಂದೆ ಕೊಂಡೊಯ್ದ ಯುಪಿಎ ಸರಕಾರದ ಮಹಸ್ಸಾಧನೆಗಳು ಕಣ್ಣಿಗೆ ಕಾಣದೆ ಮೋದಿ ಸರಕಾರ ಸಣ್ಣ ಪುಟ್ಟ ಲೋಪ ದೋಷಗಳೇ ಬೃಹದಾಕಾರವಾಗಿ ಕಾಣುತ್ತಿರುವುದು ವಿಷಾದನೀಯ.

ಮೋದಿ ಸರಕಾರದ ಮುಂದಿನ ವರ್ಷದ ಅಭಿವೃದ್ಧಿ ವರದಿ ಇನ್ನಷ್ಟು ಆಶಾದಾಯಕ ಹಾಗೂ ದೇಶದ ಜನತೆ ಮೆಚ್ಚುವಂತೆ ಇರಲಿ ಎಂದು ಆಶಿಸೋಣ, ಅಲ್ಲವೆ?..

 

Author : ಸಮಚಿತ್ತ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited