Untitled Document
Sign Up | Login    
ಭಾರತಾಂಬೆಯ ಹೆಮ್ಮೆಯ ಪುತ್ರ ಡಾ.ಅಬ್ದುಲ್ ಕಲಾಂ ಅವರಿಗೊಂದು ನಮನ


ಅವರೊಬ್ಬ ಕರ್ಮಯೋಗಿ. ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ. ಮಹಾ ಮೇಧಾವಿ. ಅವರು ಈ ದೇಶ ಕಂಡ ಅತ್ಯುತ್ತಮ ವಿಜ್ನಾನಿಗಳಲ್ಲೊಬ್ಬರು. ಚಿಕ್ಕ ಮಕ್ಕಳಿಂದ ಆರಂಭವಾಗಿ ಐಐಟಿ, ಐಐಎಂ ವಿದ್ಯಾರ್ಥಿಗಳಿಗೆಲ್ಲರಿಗೂ ಅಚ್ಚುಮೆಚ್ಚಿನ ಗುರು, ಶಿಕ್ಷಕ. ಸಹನೆ, ಸರಳತೆ, ಸಜ್ಜನಿಕೆಗೆ ಅತ್ಯುತ್ತಮ ಉದಾಹರಣೆ. ಅವರು ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಕೋಟ್ಯಾಂತರ ಯುವಕರಿಗೆ ಕನಸುಗಳನ್ನು ಕಟ್ಟಿಕೊಟ್ಟ, ದೇಶಕ್ಕಾಗಿ ದುಡಿಯಲು ಅವರಿಗೆ ಸದಾ ಪ್ರೇರಣೆ ನೀಡುತ್ತಿದ್ದ ಒಬ್ಬ ಮಹಾನ್ ನಾಯಕ. ಅವರೇ ಭಾರತದ ಮಿಸ್ಸೈಲ್ ಮ್ಯಾನ್, ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ..

ಇಂದು ಅವರು ನಮ್ಮೊಡನಿಲ್ಲ. ಅವರಿಗಾಗಿ ಇಡೀ ದೇಶ ಕಂಬನಿ ಮಿಡಿಯುತ್ತಿದೆ. 83 ವರ್ಷದ ಡಾ.ಕಲಾಂ ತಮ್ಮ ಅಚ್ಚುಮೆಚ್ಚಿನ ಕೆಲಸ ಮಾಡುತ್ತಲೇ ದೇಹ ತ್ಯಾಗ ಮಾಡಿದರು. ಅಂದರೆ, ವಿದ್ಯಾರ್ಥಿಗಳೊಂದಿಗೆ ಮಿಳಿತವಾಗಿ ಅವರಿಗೆ ಉಪನ್ಯಾಸ ಮಾಡುತ್ತಿರುವಾಗಲೇ ಕೊನೆಯುಸಿರೆಳೆದರು. ಅವರ ನಿಧನಕ್ಕೆ ಪಕ್ಷ, ಮತ, ವಯಸ್ಸು ಎಂಬಿತ್ಯಾದಿ ಬೇಧಗಳನ್ನು ಮೀರಿ ದೇಶಕ್ಕೆ ದೇಶವೇ ಸಂತಾಪ ವ್ಯಕ್ತಪಡಿಸುತ್ತಿದೆ. ಬಹುಶಃ ಇತ್ತೀಚಿನ ವರ್ಷಗಳಲ್ಲಿ ಒಬ್ಬ ನಾಯಕ ನಮ್ಮನ್ನಗಲಿದಾಗ ಈ ಪರಿಯ ಕಂಬನಿ ವ್ಯಕ್ತವಾದದ್ದು ನನ್ನ ಅರಿವಿನಂತೆ ಇದೇ ಮೊದಲು. ದೇಶಕ್ಕಾಗಿ ತನ್ನನ್ನು ತಾನು ಕೊಟ್ಟ ನಾಯಕನಿಗೆ ದೇಶ ತನ್ನ ಕೃತಜ್ನತೆಯನ್ನು ಸಮರ್ಪಿಸುತ್ತಿದೆ.

ಅಕ್ಟೋಬರ್ 15, 1931ರಲ್ಲಿ ತಮಿಳುನಾಡಿನ ಪುಣ್ಯಕ್ಷೇತ್ರ ರಾಮೇಶ್ವರದಲ್ಲಿ ಜನಿಸಿದ ಆವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ಒಬ್ಬ ವಿಜ್ನಾನಿಯಾಗಿ, ವೈಜ್ನಾನಿಕ ಸಲಹೆಗಾರನಾಗಿ, ಭಾರತದ ಬಾಹ್ಯಾಕಾಶ ಸಂಶೋಧನೆಗಳ ನಾಯಕತ್ವ ವಹಿಸಿ, ಅದರಲ್ಲೂ ಅತ್ಯಾಧುನಿಕ ಕ್ಷಿಪಣಿಗಳ ಸಂಶೋಧನೆ ಹಾಗೂ ತಯಾರಿಕೆಯಲ್ಲಿ ಮಹತ್ವವಾದ ಪಾತ್ರವಹಿಸಿ ವಿಶ್ವದಲ್ಲೇ ಭಾರತದ ಹೆಸರು ಮಂಚೂಣಿಗೆ ಬರುವಂತೆ ಮಾಡಿ, ಮುಂದೆ 2002ರಿಂದ 2007ರವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಜನ ಮೆಚ್ಚುಗೆ ಗಳಿಸಿದ ಡಾ. ಕಲಾಂ ಅವರ ಜೀವನ ಚರಿತ್ರೆ ಯಾರಿಗಾದರೂ ಪ್ರೇರಣೆ ನೀಡುವಂಥದ್ದು. ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡ ಕಲಾಂ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಲೇ ಹೋದರು. ಜೊತೆಗೆ ತಮ್ಮೊಡನೆ ಕೆಲಸಮಾಡುತ್ತಿದ್ದ ಇತರ ವಿಜ್ನಾನಿಗಳನ್ನು ಹುರಿದುಂಬಿಸುತ್ತಾ ದೇಶ ಸೇವೆಗೆ, ದೇಶದ ಅಭಿವೃದ್ಧಿಗಾಗಿ ತೊಡಗಿಸಿಕೊೞಲು ತಯಾರು ಮಾಡಿದರು.

ಭೌತ ಶಾಸ್ತ್ರ ಹಾಗೂ ವಿಮಾನಯಾನ (ಏರೋಸ್ಪೇಸ್) ಎಂಜಿನಿಯರಿಂಗ್ ವ್ಯಾಸಂಗ ಮಾಡಿದ ಅಬ್ದುಲ್ ಕಲಾಂ, ಮುಂದೆ ನಾಲ್ಕು ದಶಕಗಳ ಕಾಲ ವಿಜ್ನಾನಿಯಾಗಿ, ವೈಜ್ನಾನಿಕ ನಿರ್ವಾಹಕರಾಗಿ ಸೇವೆ ಸಲ್ಲಿಸಿದರು. ಅದರಲ್ಲೂ ಮುಖ್ಯವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ದಲ್ಲಿ ಕಲಾಂ ಅವರು ಭಾರತದ ನಾಗರಿಕ ಬಾಹ್ಯಾಕಾಶ ಯೋಜನೆಗಳಲ್ಲಿ ಮಾಡಿದ ಸಾಧನೆ ಗಣನೀಯ. ಅಷ್ಟೇ ಅಲ್ಲ, ಭಾರತದ ಮಿಸ್ಸೈಲ್ (ಕ್ಷಿಪಣಿ) ಅಭಿವೃದ್ಧಿ ಯೋಜನೆಗಳಲ್ಲಿ ಅವರ ಪಾತ್ರ ಅತ್ಯಂತ ಶ್ಲಾಘನೀಯವಾದದ್ದು. ಭಾರತ ಬಲಿಷ್ಠವಾಗಿದ್ದರೆ ಮಾತ್ರ ಇತರ ದೇಶಗಳೂ ಭಾರತಕ್ಕೆ ಗೌರವ ಕೊಡುತ್ತದೆ ಎಂದು ನಂಬಿದ ಕಲಾಂ, 21ನೇ ಶತಮಾನದಲ್ಲಿ ಸೇನಾ ಪಡೆಗಳಿಗೆ ಅತ್ಯಂತ ಅವಶ್ಯಕವಾದ ಶಕ್ತಿಯುತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾಗೂ ಉಡಾವಣಾ ವಾಹನಗಳನ್ನು ತಯಾರಿಸುವತ್ತ ತಮ್ಮ ಚಿತ್ತ ಹರಿಸಿದರು. ಇಂದು ವಿಶ್ವದಲ್ಲೇ ಕೆಲವೊಂದು ಅತ್ಯಂತ ಮುಂದುವರಿದ ಕ್ಷಿಪಣಿಗಳನ್ನು ಭಾರತ ತಯಾರಿಸುತ್ತಿದ್ದರೆ ಅದಕ್ಕೆ ಮೂಲ ಪ್ರೇರಣೆ ಡಾ.ಕಲಾಂ ಅನ್ನುವುದರಲ್ಲಿ ಸಂದೇಹವಿಲ್ಲ. ಅದಕ್ಕಾಗಿಯೇ ಅವರು 'ಮಿಸ್ಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದೇ ಹೆಸರುವಾಸಿಯಾದರು.

1998 ರಲ್ಲಿ ಅಮೆರಿಕಾ ಸಹಿತ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದ ಭಾರತದ ಫೋಖ್ರಾನ್-2 ಅಣ್ವಸ್ತ್ರ ಪರೀಕ್ಷೆಯ ವಿಚಾರದಲ್ಲಂತೂ ಡಾ.ಅಬ್ದುಲ್ ಕಲಾಂ ಅವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಪ್ರಥಮ ಅಣು ಪರೀಕ್ಷೆ 1974ರಲ್ಲಿ ನಡೆಡಿತ್ತು. ಅ ನಂತರ ತೀವ್ರವಾದ ಅಂತಾರಾಷ್ಟ್ರೀಯ ವಿರೋಧ, ಅದರಲ್ಲೂ ಮುಖ್ಯವಾಗಿ ಅಮೆರಿಕದ ನಿರಂತರ ಒತ್ತಡಗಳ ನಡುವೆಯೂ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಣು ಪರೀಕ್ಷೆ ನಡೆಸಲು ಕೈಗೊಂಡ ನಿರ್ಧಾರಕ್ಕೆ ಇಡೀ ವಿಶ್ವವೇ ದಂಗಾಗಿ ಹೋಯಿತು, ಮಾತ್ರವಲ್ಲ, ಭಾರತ ಒಂದು ಅಣ್ವಸ್ತ್ರ ಹೊಂದಿದ ದೇಶ ಎಂಬುದನ್ನೂ ಇತರ ದೇಶಗಳು ಒಲ್ಲದ ಮನಸ್ಸಿನಿಂದ ಒಪ್ಪುವಂತಾಯಿತು, ಹಾಗೂ ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲೊಂದಾಗಿ ಮಾರ್ಪಾಡು ಹೊಂದಿತು, ವಿಶ್ವ ಮನ್ನಣೆ ಗಳಿಸಲಾರಂಭಿಸಿತು.

2002ರಲ್ಲಿ ಡಾ.ಅಬ್ದುಲ್ ಕಲಾಂ ಅವರು ಅಂದಿನ ಸರಕಾರ ನಡೆಸುತ್ತಿದ್ದ ಬಿಜೆಪಿ ಹಾಗೂ ವಿಪಕ್ಷಗಳ ಬೆಂಬಲದೊಂದಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಐದು ವರ್ಷಗಳ ಸೇವೆ ಸಲ್ಲಿಸಿ ಅವರು ನಾಗರಿಕ ಜೀವನಕ್ಕೆ ಮರಳಿ ವಿದ್ಯಾಭ್ಯಾಸ, ಬರವಣಿಗೆ ಮತ್ತು ಜನಸೇವೆಯಲ್ಲಿ ತೊಡಗಿಕೊಂಡರು.

ತಮ್ಮ ಸಾಧನೆಗಳಿಗಾಗಿ ಡಾ.ಕಲಾಂ ವಿಶ್ವದ ಪ್ರತಿಷ್ಟಿತ ವಿಶ್ವ ವಿದ್ಯಾನಿಲಯಗಳೂ ಸೇರಿದಂತೆ ಹಲವಾರು ಡಾಕ್ಟರೇಟ್ ಗಳನ್ನು ಪಡೆದಿದ್ದಾರೆ. ಅಲ್ಲದೆ, ರಾಮಾನುಜಂ ಪ್ರಶಸ್ಥಿ, ವೀರ್ ಸಾವರ್ಕರ್ ಪ್ರಶಸ್ಥಿ, ಅಮೆರಿಕದ ಹೂವರ್ ಪ್ರಶಸ್ಥಿ, ಪದ್ಮ ವಿಭೂಷಣ, ಪದ್ಮ ಭೂಷಣ ಮುಂತಾದ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾದರು. ಅವರ ಮಹತ್ತರವಾದ ಸೇವೆಗೆ 1997 ರಲ್ಲಿ ಭಾರತ ರತ್ನ ಪ್ರಶಸ್ಥಿಯನ್ನು ಸರಕಾರ ಕೊಟ್ಟು ಗೌರವಿಸಿತು.

ಸ್ವತಃ ಬ್ರಹ್ಮಚಾರಿಯಾಗಿದ್ದ ಡಾ.ಕಲಾಂಗೆ ಮಕ್ಕಳೆಂದರೆ ಬಹಳ ಪ್ರೀತಿ. ಅವರು ಎಲ್ಲೇ ಹೋದರೂ ಮಕ್ಕಳನ್ನು ಕಂಡರೆ ಅವರೊಂದಿಗೆ ಬೆರೆತು ಮಾತನಾಡಿಸದೇ ಹೋದದ್ದೇ ಇಲ್ಲ. ಚಿಕ್ಕ ಮಕ್ಕಳಿಂದ ವಿಶ್ವವಿದ್ಯಾಲಯದ ಮಕ್ಕಳವರಗೆ ಅವರ ಮಟ್ಟಕ್ಕೆ ಅರ್ಥವಾಗುವ ರೀತಿಯಲ್ಲಿ ವೈಜ್ನಾನಿಕ ವಿಷಯಗಳ ಬಗ್ಗೆ, ಅವರ ಭವಿಷ್ಯ ರೂಪಿಸುವುದರ ಬಗ್ಗೆ ಕಲಾಂ ಗಂಟೆಗಟ್ಟಲೆ ಮಾತನಾಡುತ್ತಿದ್ದರು. 83ರ ಇಳಿ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವ ರೀತಿಯಲ್ಲಿ ಅವರು ದುಡಿಯುತ್ತಿದ್ದರು. ದೇಶಾದ್ಯಂತ ಸಂಚರಿಸಿ ತಮ್ಮ ಜ್ನಾನವನ್ನು ಮುಂದಿನ ಪೀಳಿಗೆಗೆ ಧಾರೆ ಎರೆದ ಡಾ.ಕಲಾಂ ನಮ್ಮೆಲ್ಲರಿಗೂ ಆದರ್ಶಪ್ರಾಯ.

ಅವರು ಎಂದಿಗೂ ರಾಜಕಾರಣಿಯಾಗಲು ಒಪ್ಪಲೇ ಇಲ್ಲ, ಅಥವಾ ಸಾಧ್ಯವಾಗಲಿಲ್ಲ. ಬಹುಶಃ ಇದೇ ಕಾರಣಕ್ಕಾಗಿಯೇ ಇರಬೇಕು ಕಲಾಂ ಅವರ ಸೇವೆ ಯಾವುದೋ ಪಕ್ಷದ ಬದಲಾಗಿ ದೇಶಕ್ಕೆ ದೊರೆಯಿತು.

ಭಾರತಾಂಬೆಯ ಒಡಲಲ್ಲಿ ಹುಟ್ಟಿ ಅವಳ ಗರಿಮೆ ಹೆಚ್ಚಿಸಿದ ಈ ಮಹಾ ಚೇತನಕ್ಕೆ ನಮ್ಮೆಲ್ಲರ ಶ್ರದ್ಧಾಂಜಲಿ. ಅವರ ಜೀವನ ನಮಗೂ ಮುಂದಿನ ಪೀಳಿಗೆಗೂ ದಾರಿದೀಪವಾಗಲಿ. ಅಗಲಿದ ದೇಶಭಕ್ತ ಡಾ.ಅಬ್ದುಲ್ ಕಲಾಂ ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ.

 

Author : ಸಮಚಿತ್ತ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited