Untitled Document
Sign Up | Login    
ಒವೈಸಿ, ಬೆನ್ನಿ ಹಿನ್ ಗಿಲ್ಲದ ನಿಷೇಧ ತೊಗಾಡಿಯಾಗೇಕೆ?


ವಿಶ್ವ ಹಿಂದೂ ಪರಿಷತ್‌ನ ಸುವರ್ಣ ಮಹೋತ್ಸವ ಅಂಗವಾಗಿ, ಬೆಂಗಳೂರಿನಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಯಲಿದೆ. ಇದು ಧರ್ಮ ಪ್ರಚಾರಕ್ಕಾಗಿಯೇ ನಡೆಯುತ್ತಿರುವ ಕಾರ್ಯಕ್ರಮವೇನು ಅಲ್ಲ, ಆದರೆ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸಲು ಶ್ರಮಿಸುತ್ತಿರುವ ಸಂಘಟನೆಯ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮ, ಇಂತಹ ಕಾರ್ಯಕ್ರಮಗಳನ್ನು ಅದೆಷ್ಟೋ ಸಂಘಟನೆಗಳು ತಮ್ಮ ಸಂಘಟನೆ ಸ್ಥಾಪನೆಯಾದ 25 ವರ್ಷಗಳಿಗೋ, 50 ವರ್ಷಗಳಿಗೋ ಒಮ್ಮೆ ನಡೆಸುತ್ತವೆ. ರಾಜ್ಯದಲ್ಲಿ, ದೇಶದಲ್ಲಿ ಇದು ತೀರಾ ಸಾಮಾನ್ಯವಾದ ವಿಷಯ.

ಇಂತಹ ಕಾರ್ಯಕ್ರಮಗಳಿಗೆ ಆ ಸಂಘಟನೆಗಳಿಗೆ ಆಪ್ತರಾಗಿರುವ ರಾಜಕಾರಣಿಗಳನ್ನು, ಗಣ್ಯರನ್ನು ಆಹ್ವಾನಿಸಲಾಗುತ್ತದೆ. ಒಂದು ವೇಳೆ ಅದು ಒಂದು ಸಮುದಾಯಕ್ಕೆ ಸೇರಿದ ಸಂಘಟನೆಯಾದರೆ ಆ ಕಾರ್ಯಕ್ರಮಕ್ಕೆ ಸಮುದಾಯವನ್ನು ಪ್ರತಿನಿಧಿಸುವ ನಾಯಕರ ಉಪಸ್ಥಿತಿ ಪಕ್ಷಾತೀತವಾಗಿ ಇದ್ದೇ ಇರುತ್ತದೆ. ಹಾಗೆಯೇ ವಿಶ್ವಹಿಂದೂ ಪರಿಷತ್ ನ ಸುವರ್ಣ ಮಹೋತ್ಸವಕ್ಕೆ ಆ ಸಂಘಟನೆಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರನ್ನು ಆಹ್ವಾನಿಸಲಾಗಿದೆ. ಆದರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸರ್ಕಾರದ ಇಬ್ಬಗೆಯ ನೀತಿ ಇಲ್ಲೂ ಜಗಜ್ಜಾಹೀರಾಗಿದೆ. ಧರ್ಮಪ್ರಚಾರವನ್ನೇ ಮುಖ್ಯ ಉದ್ದೇಶವನ್ನಾಗಿಸಿಕೊಂಡಿದ್ದ ಬೆನ್ನಿ ಹಿನ್ ಬೆಂಗಳೂರಿಗೆ ಆಗಮಿಸಿದ್ದಾಗ ಇದೇ ಕಾಂಗ್ರೆಸ್ ಸರ್ಕಾರ ಹಾರ ತುರಾಯಿಗಳನ್ನು ಹಿಡಿದು ಸ್ವಾಗತಿಸಿತ್ತು. ಈಗ ವಿಶ್ವಹಿಂದೂ ಪರಿಷತ್ ನ ಪ್ರವೀಣ್ ತೊಗಾಡಿಯಾ ಬೆಂಗಳೂರಿಗೆ ಬರುವುದನ್ನು ಇದೇ ಕಾಂಗ್ರೆಸ್ ಸರ್ಕಾರ ನಿಷೇಧ ಹೇರಿದೆ!
ಇಷ್ಟಕ್ಕೂ ಕಾಂಗ್ರೆಸ್ ನೀಡಿರುವ ಕಾರಣಗಳೇನು? ಪ್ರವೀಣ್ ತೊಗಾಡಿಯಾ ಅವರು ಪ್ರಚೋದನಾಕಾರಿ ಭಾಷಣ ಮಾಡುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿಗೆ ಬರದಂತೆ ನಿಷೇಧ ಹೇರಲಾಗಿದೆ ಎಂದು ಸಮರ್ಥನೆಗಳು ಕೇಳಿಬರುತ್ತಿವೆ. ಹಾಗಾದರೆ ಕೇವಲ ಭಾಷಣ ಮಾಡುವುದಷ್ಟೇ ಪ್ರಚೋದನಾಕಾರಿಯೇ? ಮತ್ತೊಂದು ಧರ್ಮದವರನ್ನು ಆಮಿಷವೊಡ್ಡಿ ತಮ್ಮ ಮತಕ್ಕೆ ಮತಾಂತರಗೊಳಿಸುವುದೂ ಸಹ ಪ್ರಚೋದನಕಾರಿಯೇ ಅಲ್ಲವೇ? ಈ ದೃಷ್ಟಿಯಿಂದ ನೋಡಿದರೆ ಕ್ರೈಸ್ತ ಧರ್ಮ ಪ್ರಚಾರಕ ಬೆನ್ನಿ ಹಿನ್ ಗೆ ಬೆಂಗಳೂರು ಪ್ರವೇಶಿಸಲು ಕಾಂಗ್ರೆಸ್ ಸರ್ಕಾರ ಹೇಗೆ ಅನುಮತಿ ನೀಡಿತ್ತು? ಭಾರತದ ನಾಗರಿಕ ದೇಶದ ಯಾವುದೇ ಭಾಗಕ್ಕೆ ತೆರಳಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿದೆ. ಒಂದು ವೇಳೆ ನ್ಯಾಯಾಲಯ ಆತನಿಗೆ ನಿಷೇಧ ಹೇರಿದ್ದರೆ ಮಾತ್ರ ಅದು ಮಾನ್ಯವಾಗುತ್ತದೆ. ಆದರೆ ಪ್ರಚೋದನಕಾರಿ ಭಾಷಣ ಮಾಡುತ್ತಾರೆ ಎಂಬ ಊಹೆಯಲ್ಲೇ ನಿಷೇಧ ಹೇರುವುದು ಎಷ್ಟರ ಮಟ್ಟಿಗೆ ಸರಿ? ಪೊಲೀಸರು 5 ನಿಮಿಷ ಸುಮ್ಮನಿದ್ದರೆ ಈ ದೇಶದಲ್ಲಿ ಹಿಂದೂಗಳೇ ಇಲ್ಲದಂತೆ ಮಾಡುತ್ತೇವೆ ಎಂದು ಹೇಳಿದ್ದ ಎಂಐಎಂ ನ ಒವೈಸಿ, ಹಾಗೆ ಹೇಳಿದ್ದ ಎಂಬ ಕಾರಣವನ್ನೇ ಮುಂದಿಟ್ಟು ಇವತ್ತು ಯಾವ ರಾಜ್ಯಗಳಲ್ಲೂ ಅವನಿಗೆ ನಿಷೇಧ ಹೇರಿಲ್ಲ. ಬೆನ್ನಿ ಹಿನ್ ಬಂದು ಅಕ್ರಮ ಮತಾಂತರ ಮಾಡಿದ್ದ, ಮತ್ತೊಮ್ಮೆ ಅವನು ಬೆಂಗಳೂರಿಗೆ ಬರುತ್ತಾನೆಂದು ಗೊತ್ತಾದಾಗ ನಿಷೇಧ ಹೇರುವ ಮಾತಿರಲಿಲ್ಲ. ಆದರೆ ಕರ್ನಾಟಕದ ಮಟ್ಟಿಗೆ ಅಂತಹ ಪ್ರಚೋದನಾತ್ಮಕ ಹೇಳಿಕೆ ನೀಡದ ಪ್ರವೀಣ್ ತೊಗಾಡಿಯಾ ಬರುವುದಕ್ಕೂ ಮುನ್ನವೇ ಅವರಿಗೆ ನಿಷೇಧದ ತಡೆ ಎದುರಾಗಿದೆ. ಎಲ್ಲಿದೆ ಸಾಮಾಜಿಕ ನ್ಯಾಯ?
ಒಂದು ವರ್ಗದವರು ಪ್ರಚೋದನಾಕಾರಿ ಹೇಳಿಕೆ ನೀಡಿದ ನಂತರ ತಡೆಯಲಾರದ ಒತ್ತಡ ಬಂದರೆ ಮಾತ್ರ ಅವರ ವಿರುದ್ಧ ಕ್ರಮ, ಮತ್ತೊಂದು ವರ್ಗದವರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೋ ಇಲ್ಲವೋ ಅದೇ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಆಗಲೇ ಆಗಮನವನ್ನು ನಿಷೇಧ ಮಾಡಿಬಿಡಬೇಕು. ಕಾಂಗ್ರೆಸ್ ನ ಸಾಮಾಜಿಕ ನ್ಯಾಯ ಎಂದರೆ ಇದೇ.

ಬೆಂಗಳೂರಿನ ಕಾರ್ಯಕ್ರಮದಲ್ಲಿ ತಾವು ಯಾವ ಅಂಶಗಳ ಬಗ್ಗೆ ಮಾತನಾಡಬೇಕೆಂಬುದನ್ನು ಸ್ವತಃ ಪ್ರವೀಣ್ ತೊಗಾಡಿಯಾ ಅವರೇ ನಿರ್ಧರಿಸಿದ್ದರೆಯೋ ಇಲ್ಲವೋ ಆದರೆ ವಿಧಾನಸೌಧದಲ್ಲಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರವೀಣ್ ತೊಗಾಡಿಯಾ ಅವರು ಇಂತಹದ್ದೇ ಪ್ರಚೋದನಾಕಾರಿ ಭಾಷಣ ಮಾಡಲಿದ್ದಾರೆ ಎಂಬುದು ದಿವ್ಯ ದೃಷ್ಟಿಗೆ ಗೋಚರಿಸಿದಂತಿದೆ. ಪ್ರವೀಣ್ ತೊಗಾಡಿಯಾ ಬೆಂಗಳೂರಿಗೆ ಬರುವುದಕ್ಕೂ ಮುನ್ನವೇ ಅವರು ಪ್ರಚೋದನಾಕಾರಿ ಭಾಷಣ ಮಾಡಲಿದ್ದಾರೆ ಎಂದು ಊಹಿಸುವುದಕ್ಕೆ ಹೇಗೆ ಸಾಧ್ಯ? ಸಿದ್ದರಾಮಯ್ಯ ಸರ್ಕಾರ ವಿಶ್ವಹಿಂದೂ ಪರಿಷತ್ ನ ಕಾರ್ಯಾಧ್ಯಕ್ಷರಿಗೆ ನಿಷೇಧ ಹೇರುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಚರ್ಚೆ ನಡೆಯಬೇಕಿದೆ.

 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited