Untitled Document
Sign Up | Login    
ಮೋದಿ ಸರ್ಕಾರಕ್ಕೆ ವರುಷ - ದೇಶದ ಜನರಿಗಿದೆಯೇ ಹರುಷ ?

ಜನಸಾಮಾನ್ಯರಿಗಾಗಿ ಪೆನ್ಶನ್ ಮತ್ತು ವಿಮಾ ಯೋಜನೆಗಳನ್ನು ಉದ್ಘಾಟಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ..

ಭಾಗ - 1

ಬಹುಶಃ ಕೇಂದ್ರದಲ್ಲಿ ಸರಕಾರವೊಂದು ಅಧಿಕಾರಕ್ಕೆ ಬಂದಂದಿನಿಂದ ಇಷ್ಟೊಂದು ನಿರೀಕ್ಷೆ, ಕುತೂಹಲ ಮೂಡಿಸಿದ ಇನ್ನೊಂದು ಸರಕಾರ ಇರಲಾರದು. ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರ ಒಂದು ವರ್ಷ ಪೂರೈಸುತ್ತಿದ್ದು, ಸರಕಾರದ ಸಾಧನೆ, ಕಾರ್ಯವೈಖರಿಗಳು ಜನಸಾಮನ್ಯರ, ರಾಜಕೀಯ ವಿಶ್ಲೇಷಕರ, ಕೈಗಾರಿಕೋದ್ಯಮಿಗಳ, ಆರ್ಥಿಕ ತಜ್ನರ, ಮಾಧ್ಯಮಗಳ, ಎಲ್ಲಕ್ಕೂ ಮಿಗಿಲಾಗಿ ಪ್ರತಿಪಕ್ಷಗಳ ಅಭೂತಪೂರ್ವ ಟೀಕೆ, ವಿಶ್ಲೇಷಣೆ, ಹೊಗಳಿಕೆಗಳಿಗೆ ಪಾತ್ರವಾಗಿದೆ. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಈ ಸರಕಾರ ಸಫಲವಾಗಿದೆಯೆ? ಅಥವಾ, ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆಯೆ ?..

ಭ್ರಷ್ಟಾಚಾರ ನಿರ್ಮೂಲನೆ, ಉತ್ತಮ ಆಢಳಿತ, ವಿದೇಶಾಂಗ ನೀತಿ, ರಾಷ್ಟ್ರೀಯ ಭದ್ರತೆ, ಆರ್ಥಿಕ ನೀತಿ, ಹಣದುಬ್ಬರ, ಕೃಷಿ, ಕೈಗಾರಿಕೆ, ರಸ್ತೆ, ಬಂದರು, ರೈಲು ಮುಂತಾದ ಮೂಲಸೌಕರ್ಯ ನಿರ್ಮಾಣ ಮತ್ತು ಅಭಿವೃದ್ಧಿ, ನಿರುದ್ಯೋಗ ನಿವಾರಣೆ, ಮಹಿಳೆಯರಿಗೆ ಭದ್ರತೆ, ಶಿಕ್ಷಣ, ಕೌಶಲ್ಯ ವೃದ್ಧಿ, ವಿದೇಶೀ ಬಂಡವಾಳ ಹೂಡಿಕೆ, ಮೇಕ್ ಇನ್ ಇಂಡಿಯಾ, ಕಪ್ಪು ಹಣ ನಿಯಂತ್ರಣ, ಇಂಧನ ಹಾಗೂ ಆಹಾರ ಭದ್ರತೆ, ಭಯೋತ್ಪಾದನಾ ಚಟುವಟಿಕೆಗಳ ನಿಗ್ರಹ, ಸ್ವಚ್ಚ ಭಾರತ, ಗಂಗಾ ನದಿ ಸ್ವಚ್ಚತಾ ಅಭಿಯಾನ, ಪರಿಸರ ಮಾಲಿನ್ಯ ನಿಯಂತ್ರಣ.. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹಾಗೂ ಗುರಿಗಳನ್ನು ಹೊತ್ತು ಅಧಿಕಾರಕ್ಕೆ ಬಂದ ಮೋದಿ ಸರಕಾರ ತನ್ನ ಒಂದು ವರ್ಷದ ಆಡಳಿತದಲ್ಲಿ ಎಷ್ಟರ ಮಟ್ಟಿಗೆ ದೇಶವನ್ನು ಮುನ್ನಡೆಸುವಲ್ಲಿ ಸಫಲವಾಗಿದೆ ಮತ್ತು, ಈ ನಿಟ್ಟಿನಲ್ಲಿ ಸರಕಾರ ಸರಿಯಾದ ದಾರಿಯಲ್ಲಿ ನಡೆಯುತ್ತಿದೆಯೆ ಎಂಬುದನ್ನು ಅಳೆದು ಸುರಿಯಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ.

ಮಾಮೂಲಿನಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮೋದಿ ಸರಕಾರವನ್ನು ಇನ್ನಿಲ್ಲದಂತೆ ಹಣಿಯುತ್ತಿದ್ದಾರೆ. ಚುನಾವಣೆಯಲ್ಲಿ ಧೂಳೀಪಟವಾಗಿದ್ದ ಕಾಂಗ್ರೆಸ್, ಎಡ ಪಕ್ಷಗಳು, ಮುಲಾಯಂ ನೇಟೃತ್ವದ ಎಸ್.ಪಿ. ಮಾಯಾವತಿ ನೇತೃತ್ವದ ಬಿ.ಎಸ್.ಪಿ., ಲಾಲೂ ಪ್ರಸಾದ್ ಅವರ ಆರ್.ಜೆ.ಡಿ. ನಿತೀಶ್ ಕುಮಾರರ ಜೆ.ಡಿ(ಯು) ಮುಂತಾದ ಪ್ರಾದೇಶಿಕ ಪಕ್ಷಗಳು ರಾಜಕೀಯವಾಗಿ ಇನ್ನು ತಲೆ ಎತ್ತಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಸೋತು ಸುಣ್ಣವಾಗಿದ್ದವು. ಈಗ ಅವರೆಲ್ಲರೂ ತಮ್ಮ ರಾಜಕೀಯ ಸಿದ್ಧಾಂತ (ಏನಾದರೂ ಇದ್ದರೆ) ಗಳನ್ನು ಬದಿಗೊತ್ತಿ, ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಹಾಗಾಗಿ ಮೋದಿ ವಿರುದ್ಧ ಒಟ್ಟಾಗೊ ಸೆಣಸಲು ಪಣತೊಟ್ಟು, ಸಾಮೂಹಿಕವಾಗಿ ಮೋದಿ ಸರಕಾರವನ್ನು ಟೀಕಿಸುತ್ತಿದ್ದಾರೆ. ತನ್ನ ಹಾಗೂ ಗಾಂಧಿ ಕುಟುಂಬದ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ತೀವ್ರ ಅನಿವಾರ್ಯತೆ ಎದುರಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯಂತೂ ಮೋದಿ ಸರಕಾರಕ್ಕೆ ಹತ್ತರಲ್ಲಿ ಸೊನ್ನೆ ಅಂಕವನ್ನು ದಯಪಾಲಿಸಿದ್ದಾರೆ!. ಇನ್ನು ಕೆಲವು ರಾಜಕೀಯ ಮತ್ತು ಮಾಧ್ಯಮ ವಿಶ್ಲೇಷಕರು ಮೋದಿ ಸರಕಾರದ ಸಾಧನೆಗಳಿಗಿಂತ ಅಲ್ಲಿ ಇಲ್ಲಿ ಕಂಡು ಬಂದ ಲೋಪ ದೋಷಗಳನ್ನೇ ಎತ್ತಿ ಹಿಡಿದು ಅವುಗಳ ಬಗ್ಗೆಯೇ ಸದಾ ಚರ್ಚಿಸುತ್ತಾ, ಸರಕಾರ ಸೋತಿದೆ ಎಂಬ ರೀತಿಯಲ್ಲಿ ಬಿಂಬಿಸುವ ಯತ್ನಗಳಲ್ಲಿ ತೊಡಗಿರುವುದೂ ಸ್ಪಷ್ಟ.

ಹಾಗಿದ್ದರೆ ಮೋದಿ ಸರಕಾರದ ಸಾಧನೆಗಳೇನು? ಕಳೆದ 60 ವರ್ಷಗಳಲ್ಲಿ ಸಾಧಿಸಲಾಗದ್ದನ್ನು, ಅದರಲ್ಲೂ ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ ದೇಶದ ಆರ್ಥಿಕ, ಆಢಳಿತ ವ್ಯವಸ್ಥೆಯನ್ನು ಹದಗೆಡಿಸಿ ಭ್ರಷ್ಟಾಚಾರವೇ ಬಹುದೊಡ್ಡ ಸಾಧನೆಯನ್ನಾಗಿಸಿದ, ಜನಸಾಮಾನ್ಯರಲ್ಲಿ ಹತಾಶೆ ಮೂಡಿಸಿದ್ದ ಯುಪಿಎ ಸರಕಾರದ ವೈಫಲ್ಯಗಳನ್ನು ಸರಿಪಡಿಸಿಕೊಂಡು ಇಷ್ಟು ದೊಡ್ಡ ದೇಶವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಥದಲ್ಲಿ ಸಾಗಿಸಲು ಕೇವಲ ಒಂದು ವರ್ಷ ಸಾಕೇ? ಮೋದಿ ಸರಕಾರವನ್ನು ದೂಷಿಸುವವರು, ಟೀಕಿಸುವವರು ಅವರ ಮುಂದಿರುವ ಸವಾಲುಗಳು ಹಾಗೂ ಇತಿ-ಮಿತಿಗಳನ್ನು ಅರಿತಿಲ್ಲವೆ?.. ಏನೇ ಇರಲಿ, ಮೋದಿಯವರ ಕಳೆದೊಂದು ವರ್ಷದ ಸಾಧನೆಗಳತ್ತ ಮತ್ತು ಅವರ ಮುಂದಿನ ಯೋಜನೆಗಳ, ಗುರಿಗಳತ್ತ ಒಂದು ನೋಟ ಬೀರುವುದು ನಮ್ಮ ಉದ್ದೇಶ. ಈ ಒಂದು ವರ್ಷದಲ್ಲಿ ಅವರ ಸಾಧನೆಗಳನ್ನು ನೋಡೋಣ..


1. ಅಮೆರಿಕ ಸೇರಿದಂತೆ ವಿಶ್ವದ ಮುಂದುವರಿದ ರಾಷ್ಟ್ರಗಳನ್ನು ಎದುರು ಹಾಕಿಕೊಂಡರೂ ಕೊನೆಗೆ ಅವರೆಲ್ಲರೂ ಡಬ್ಲ್ಯು.ಟಿ.ಒ ಆಹಾರ ಒಪ್ಪಂದದಲ್ಲಿ ಭಾರತದ ನಿಲುವನ್ನು (ಆಹಾರ ಭದ್ರತೆ) ಒಪ್ಪುವಂತೆ ಮಾಡಿದ್ದು.

2. ಹಿಂದಿನ ಯುಪಿಎ ಸರಕಾರ ಭಾರತದ ನೆರೆಹೊರೆಯ ದೇಶಗಳೊಂದಿಗೆ ಸಂಬಂಧಗಳನ್ನು, ವ್ಯವಹಾರಗಳನ್ನು ಸಂಪೂರ್ಣ ಕಡೆಗಣಿಸಿತ್ತು. ಭಾರತದ ಈ ವಿಫಲತೆಯನ್ನು ಭಾರತದ ಸುತ್ತಲೂ ತನ್ನ ಪ್ರಭಾವಲಯ ಸೃಷ್ಠಿಸಲು ಚೀನಾ ಚಾಣಾಕ್ಷತೆಯಿಂತ ಬಳಸಿಕೊಂಡಿತು. ಈ ಬೆಳವಣಿಗೆಗಳು ಭಾರತದ ಭದ್ರತಾ ದೃಷ್ಟಿಯಿಂದ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಾರಭಿಸಿದವು. ಪ್ರಧಾನಿ ಮೋದಿ ಈ ಬಗ್ಗೆ ಅತ್ಯಂತ ಕ್ಷಿಪ್ರವಾಗಿ ಕಾರ್ಯೋನ್ಮುಖರಾಗಿ, ಭೂತಾನ್, ನೇಪಾಳ, ಮಾಯನ್ಮಾರ್, ಶ್ರೀಲಂಕಾ, ಮಾರಿಷಸ್, ಸೇಶೆಲ್ಲಸ್ ಮುಂತಾದ ದೇಶಗಳಿಗೆ ಭೇಟಿಯಿತ್ತು, ಈ ಎಲ್ಲಾ ದೇಶಗಳೊಂದಿಗೆ ಬಾಂಧವ್ಯವನ್ನು ಪುನರ್ ಸ್ಥಾಪಿಸಿದರು ಮತ್ತು ಚೀನಾದ ಪ್ರಭಾವವನ್ನು ತಗ್ಗಿಸುವಲ್ಲಿ ಬಹುಮಟ್ಟಿಗೆ ಯಶಸ್ವಿಯಾದರು.

ಭಾರತ-ಚೀನಾ ಸಂಬಂಧ ವೃದ್ಧಿ ಮತ್ತು ಚೀನೀ ಬಂಡವಾಳ ಹೂಡಿಕೆಗಾಗಿ ಮೋದಿ ಚೀನಾ ಪ್ರವಾಸ..
3. ಕಳೆದೊಂದು ವರ್ಷದಲ್ಲಿ ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಕೆನಡಾ, ಚೀನಾ, ದಕ್ಷಿಣ ಕೊರಿಯಾ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳಿಗೆ ಭೇಟಿಯಿತ್ತು ಭಾರತದಲ್ಲಿ ಬಂಡವಾಳ ಹೂಡಿಕೆಗೆ ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನದಲ್ಲಿ ಭಾಗವಹಿಸಲು ಅಲ್ಲಿಯ ಕೈಗಾರಿಕೋದ್ಯಮಿಗಳಿಗೆ ಆಹ್ವಾನವಿತ್ತರು. ಅಲ್ಲದೆ, ತಮ್ಮ ವ್ಯಕ್ತಿತ್ವ ಮತ್ತು ನಾಯಕತ್ವ ಗುಣಗಳಿಂದ ಭಾರತ ವಿಶ್ವದಲ್ಲೇ ಅಗ್ರಮಾನ್ಯ್ ದೇಶಗಳಲ್ಲೊಂದು ಎಂಬುದನ್ನು ಸಾಬೀತುಪಡಿಸಿದರು. ಅಮೆರಿಕಾದೊಂದಿಗೂ ಸಹ ಸಮಾನ ಸ್ಥರದಲ್ಲಿ ಸಂಬಂಧ ಬೆಳೆಸುವ, ವ್ಯವಹರಿಸುವ ತಮ್ಮ ಇರಾದೆಯನ್ನು ನಿಚ್ಚಳಗೊಳಿಸಿದರು.

4. ಅಮೆರಿಕ-ಇಸ್ರೇಲ್-ಭಾರತ ಜೊತೆಯಾಗಿ ವಿಶ್ವದಾದ್ಯಂತ ತೆಲೆಯೆತ್ತಿರುವ ಭಯೋತ್ಪಾದನೆ ಮತ್ತು ಉಗ್ರರ ಅಟ್ಟಹಾಸವನ್ನು ಮಟ್ಟಹಾಕುವ ಪ್ರಯತ್ನಗಳಿಗೆ ಮೋದಿ ಸರಕಾರ ಚಾಲನೆ ನೀಡಿತು. ಭಾರತದ ದಿಟ್ಟ ನಿಲುವಿನಿಂದಾಗಿ ಉಗ್ರರ ಸ್ವರ್ಗ ಪಾಕಿಸ್ತಾನ ಸಹ ಪ್ರಪಂಚದಲ್ಲಿ ಪ್ರತ್ಯೇಕವಾಗಿ ನಿಲ್ಲುವ ಸ್ಥಿತಿ ಬಂತು. ಮಾತ್ರವಲ್ಲ, ಇಡೀ ವಿಶ್ವವೇ ಭಾರತದ ಪರ ನಿಲ್ಲುವಂತಾಯಿತು.

5. ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ನಿರಂತರವಾಗಿ ಗುಂಡಿನ ದಾಳಿ ಮಾಡುತ್ತಾ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ನುಗ್ಗಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಮೋದಿ ಸರಕಾರ ಸಾಕಷ್ಟು ಯಶಸ್ವಿಯಾಗಿಯಿತು. ಭಾರತದ ವಿರುದ್ಧ ಪಾಕಿಸ್ತಾನದ ಉದ್ಧಟತನವೂ ಇತ್ತೀಚೆಗೆ ಸಾಕಷ್ಟು ಕಡಿಮೆಯಾಗಿರುವುದಕ್ಕೆ ಮೋದಿ ಸರಕಾರದ ದಿಟ್ಟ ನಿಲುವೇ ಕಾರಣ. ಇದೇ ರೀತಿ ಚೀನಾದ ಸೈನಿಕರು ಭಾರತದ ಗಡಿಯೊಳಗೆ ನುಗ್ಗಿದ ಪ್ರಸಂಗದಲ್ಲೂ ಮೋದಿ ಸರಕಾರ ಅತ್ಯಂತ ಧೈರ್ಯ, ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಕೂಡಾ ಚೀನಾ ತೆಪ್ಪಗೆ ಹಿಮ್ಮೆಟ್ಟಲು ಕಾರಣವಾಯಿತು.

6. ಒಂದು ದಶಕದಿಂದ ಯುಪಿಎ ಸರಕಾರದ ಏಕೈಕ ಸಾಧನೆ ಎನ್ನಲಾಗಿದ್ದ, ಆದರೆ, ಅಣು ಅಪಘಾತ ಹೊಣೆಗಾರಿಕೆ ವಿಚಾರದಲ್ಲಿ ಭಾರತ ಮತ್ತು ಅಮೆರಿಕಾಗಳ ನಡುವೆ ಬಗೆಹರಿಯದ ವಿವಾದಗಳಿಂದ ಬಹುತೇಕ ನೆನೆಗುದಿಗೆ ಬಿದ್ದಿದ್ದ ಅಣು ಒಪ್ಪಂದವನ್ನು ಯಶಸ್ವಿಯಾಗಿ ಪುನಶ್ಚೇತನಗೊಳಿಸುವಲ್ಲಿ ಮೋದಿ ಯಶಸ್ವಿಯಾದರು.
ಅಮೇರಿಕಾ ಪ್ರವಾಸದ ವೇಳೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಮಾ ಜೊತೆ ಪ್ರಧಾನಿ ಮೋದಿ
7. ವಿಶ್ವ ಸಂಸ್ಥೆಯಲ್ಲಿ ಭಾಷಣ ಮಾಡಿದ ಮೋದಿ, ಜೂನ್ 21 ವಿಶ್ವ ಯೋಗದಿನವಾಗಿ ಆಚರಿಸುವಂತೆ ಕೊಟ್ಟ ಕರೆಗೆ ಎಲ್ಲಾ ದೇಶಗಳು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಹಾಗೂ ಇದೇ ಜೂನ್ 21ರಿಂದ ಇದು ಜಾರಿಗೆ ಬರುತ್ತಿರುವುದು ಮೋದಿ ವಿಶ್ವ ನಾಯಕನಾಗಿ ಬೆಳೆಯುತ್ತಿರುವ ಸಂಕೇತ ಮತ್ತು ಭಾರತಕ್ಕೆ ಹೆಮ್ಮೆಯ ವಿಚಾರ.

8. ಜನ-ಧನ ಯೋಜನೆ ಮೂಲಕ 15 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು ಬಡಜನರಿಗೆ ಪೆನ್ಶನ್ ಹಾಗೂ ವಿಮಾ ಪಾಲಿಸಿ ವಿಸ್ತರಣೆ. ಗ್ಯಾಸ್ ಸಬ್ಸಿಡಿ ನೇರವಾಗಿ ಫಲಾನುಭವಿಗಳ ಅಕೌಂಟ್ ಗೇ ಜಮಾವಾಗುವಂತೆ ಮಾಡಿದ್ದಲ್ಲದೆ, ವಾರ್ಷಿಕ ಸುಮಾರು 5ಬಿಲಿಯನ್ ಡಾಲರ್ ಸಬ್ಸಿಡಿ ಹಣ ಉಳಿತಾಯದ ಗುರಿ.

9. ರೈಲ್ವೇ, ರಕ್ಷಣಾ ಕ್ಷೇತ್ರಗಳಲ್ಲಿ ವಿದೇಶೀ ಬಂದವಾಳ ಹೂಡಿಕೆ ಮಿತಿ ಹೆಚ್ಚಳದಿಂದ ಮೇಕ್-ಇನ್-ಇಂಡಿಯಾ ಯೋಜನೆ, ವಿದೇಶೀ ತಂತ್ರಜ್ನಾನದ ವರ್ಗಾವಣೆ ಮತ್ತು ವಿದೇಶಗಳಿಗೆ ಹರಿದು ಹೋಗುವ ಹಣ ಉಳಿತಾಯ.

10. ಸ್ವಚ್ಚ ಭಾರತ ಯೋಜನೆಯಡಿ ಕಾರ್ಪೊರೇಟ್ ಸಂಸ್ಥೆಗಳನ್ನು ತೊಡಗಿಸಿಕೊಂಡು ದೇಶಾದ್ಯಂತ ಸ್ವಚ್ಚತೆಯ ವಿಚಾರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಅಡಿಪಾಯ.

11. ದೇಶದಲ್ಲಿ 100 ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸುವ ಯೋಜನೆಗೆ ಚಾಲನೆ. ಇದರಿಂದ ಲಕ್ಷಾಂತರ ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿವೆ.

12. ಮುಂದಿನ 5 ವರ್ಷಗಳಲ್ಲಿ ಸ್ಪೀಡ್ ಟ್ರೈನ್ ಸೇರಿದಂತೆ ರೈಲ್ವೇ ಸಾರಿಗೆ ಅಭಿವೃದ್ಧಿಗಾಗಿ 130ಬಿಲಿಯನ್ ಡಾಲರ್ ಯೋಜನೆಗೆ ಚಾಲನೆ. ಇದರಲ್ಲಿ ಹೆಚ್ಚಿನ ಪಾಲು ವಿದೇಶೀ ಬಂಡವಾಳ ಹೂಡಿಕೆಯ ನಿರೀಕ್ಷೆ.

13. 2G ಸ್ಪೆಕ್ಟ್ರಂ ಮತ್ತು ಕಲ್ಲಿದ್ದಲು ಹರಾಜಿನಿಂದ ಈಗಾಗಲೇ 3ಲಕ್ಷ ಕೋಟಿ ರೂ. ಆದಾಯ ಸರಕಾರಿ ಖಜಾನೆಗೆ. ಇನ್ನಷ್ಟು ಗಣಿಗಳು ಹರಾಜಾಗಲು ಬಾಕಿಯಿದ್ದು ಈ ಮೊತ್ತ ಬಹಳಷ್ಟು ಅದಾಯವನ್ನು ಸರಕಾರಕ್ಕೆ ತರಲಿವೆ.

14. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಯೋಜನೆಗಳಿಗೆ ಚಾಲನೆ. ಇದರಿಂದ ಉದ್ಯೋಗ ಸೃಷ್ಟಿ ಮತ್ತು ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ಸೌಲಭ್ಯ ಸೇರಿದಂತೆ ಮೂಲಭೂತ ಸೌಕರ್ಯಗಳ ವಿಸ್ತರಣೆ. ಡಿಜಿಟಲ್ ಇಂಡಿಯಾದ ಯಶಸ್ಸಿನಿಂದ ಬ್ಯಾಂಕಿಂಗ್, ಸರಕಾರಿ ಸೇವೆಗಳು ಸೇರಿದಂತೆ ಉತ್ತಮ ಶಿಕ್ಷಣ ಹಾಗೂ ವೈದ್ಯಕೀಯ ಸೇವೆಗಳು ಹಳ್ಳಿ ಹಳ್ಳಿಗೂ ಲಭ್ಯವಾಗಲಿವೆ.

15. ಹಲವಾರು ಸಂಪುಟಗಳನ್ನು ಒಟ್ಟು ಸೇರಿಸಿ ಸರಕಾರದ ಆಡಳಿತ ಯಂತ್ರವನ್ನು ಚುರುಕುಗೊಳಿಸಿದ್ದು. ಮಾತ್ರವಲ್ಲ, ನೂರಾರು ಅನುಪಯುಕ್ತ ಕಾನೂನುಗಳನ್ನು ಕಿತ್ತುಹಾಕಿದ್ದು ಹಾಗೂ, ಫಾರ್ಮುಗಳನ್ನು ಸರಳೀಕರಿಸಿರುವುದು.
ಮಾಡಿಸನ್ ಸ್ಕ್ವೇರ್ ನಲ್ಲಿ ಮೋದಿ ಮೋಡಿ..
16. ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಿರುವುದು. ಕಳೆದ ಅನೇಕ ವರ್ಷಗಳಲ್ಲಿ ಇವೆರಡೂ ಮೊದಲ ಬಾರಿಗೆ ನಿಯಂತ್ರಣಕ್ಕೆ ಬಂದಿರುವುದು ವೇದ್ಯ.

17. ಕಾರ್ಪೊರೇಟ್ ತೆರಿಗೆ ನೀತಿಯಲ್ಲಿ ಸರಳಿಕರಣ, ಸ್ಪಷ್ಟತೆ ಹಾಗೂ ಜನಸಾಮಾನ್ಯರಿಗೆ ಅನೇಕ ರೀತಿಯ ರಿಯಾಯಿತಿ. ಇದರಿಂದ ಉಳಿತಾಯ ಹೆಚ್ಚಳ ಮತ್ತು ವಿದೇಶೀ ಬಂಡವಾಳ ಹೂಡಿಕೆದಾರರಿಗೆ ಉತ್ತೇಜನ.

18.ಕೈಗಾರಿಕೆಗಳ ಸ್ಥಾಪನೆ ಮತ್ತು ಹೞಿ ಹೞಿಗೂ ಶಾಲೆ, ಕಾಲೇಜು, ರಸ್ತೆ, ನೀರಾವರಿ, ಆಸ್ಪತ್ರೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯವಾದ ಭೂ ಸ್ವಾಧೀನ ಕಾಯ್ದೆ (ಲ್ಯಾಂಡ್ ಬಿಲ್) ಯಲ್ಲಿ ಅಗತ್ಯ ತಿದ್ದುಪಡಿಗೆ ಕ್ರಮ. ಆದರೆ, ಕೇವಲ ರಾಜಕೀಯ ಉದ್ದೇಶಕ್ಕಾಗಿ ಪ್ರತಿಪಕ್ಷಗಳು ಈ ಕಾಯ್ದೆಯನ್ನು ವಿರೋಧಿಸುತ್ತಿರುವುದು ವಿಷಾದನೀಯ.

19. 36 ರಾಫೆಲ್ ಯುದ್ಧ ವಿಮಾನಗಳ ಖರೀದಿ ಸೇರಿದಂತೆ ದೇಶದ ರಕ್ಷಣೆಗೆ ಅಗತ್ಯವಾದ ಸವಲತ್ತು, ಸಲರಣೆಗಳನ್ನು ಪೂರೈಸಲು ತುರ್ತು ಕ್ರಮಗಳನ್ನು ಮೋದಿ ಸರಕಾರ ಕೈಗೊಂಡಿದೆ. ಜೊತೆಗೆ ಸಾಧ್ಯವಾದಷ್ಟು ರಕ್ಷಣಾ ಸಾಮಗ್ರಿಗಳನ್ನು ದೇಶೀಯವಾಗಿ ನಿರ್ಮಿಸಿ ಉದ್ಯೋಗ ಸೃಷ್ಟಿ ಮತ್ತು ರಫ್ತು ಮಾಡುವ ಉದ್ದೇಶ.

ಒಟ್ಟಾರೆ, ಸರಕಾರದ ಸಾಧನೆಯನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ಅಳೆಯಲಾಗದು. ಆದರೆ, ಸರಕಾರದ ಉದ್ದೇಶ, ಗುರಿ ಹಾಗೂ ಅದು ಅನುಸರಿಸುತ್ತಿರುವ ಮಾರ್ಗ ಸರಿಯಾದುದೇ ಎಂಬುದನ್ನು ಮಾತ್ರ ಈ ಅವಧಿಯಲ್ಲಿ ಸ್ಪಷ್ಟವಾಗಿ ತಿಳಿಯಬಹುದು. ಈ ನಿಟ್ಟಿನಿಂದ ನೋಡಿದರೆ ಮೋದಿ ಸರಕಾರ ಸಾಕಷ್ಟು ಪ್ರಯತ್ನಗಳನ್ನು ಈಗಾಗಲೇ ಮಾಡಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಈಗಾಗಲೇ ಹಾಕಲಾಗುತ್ತಿರುವ ಅಡಿಪಾಯದಲ್ಲಿ ಅಭಿವೃದ್ಧಿ ಹೊಂದಿದ, ಭವ್ಯ ಭಾರತವೊಂದು ತಲೆ ಎತ್ತಿ ನಿಲ್ಲುವುದರಲ್ಲಿ ಸಂದೇಹವಿಲ್ಲ.

ಆದರೂ, ಇವೆಲ್ಲವನ್ನೂ ಸಾಧಿಸುವುದು ಅಷ್ಟೊಂದು ಸುಲಭವಲ್ಲ. ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸಿಕೊಂಡು, ಸಚಿವರುಗಳನ್ನು ಮತ್ತು ಆಢಳಿತ ಯಂತ್ರವನ್ನು ಚುರುಕುಗೊಳಿಸುತ್ತಾ, ಜನರನ್ನೂ ದೇಶ ಕಟ್ಟುವಲ್ಲಿ ತೊಡಗಿಸಿಕೊಳ್ಳುವುದೂ ಮೋದಿ ಮುಂದಿರುವ ಬಹಳ ದೊಡ್ಡ ಸವಾಲು.

ಪ್ರಧಾನಿ ಮೋದಿಯವರ ಪ್ರಾಮಾಣಿಕತೆ, ದೇಶದ ಬಗ್ಗೆ ಅವರಿಗಿರುವ ನಿಷ್ಠೆ, ದೂರದರ್ಶಿತ್ವದ ಬಗ್ಗೆ ಅನುಮಾನವೇ ಇಲ್ಲ. ಆದರೆ, ಅವರ ಮುಂದಿರುವ ಸವಾಲುಗಳು ಏನು ಎಂಬುದನ್ನೂ ಲೇಖನದ ಮುಂದಿನ ಭಾಗದಲ್ಲಿ ಪರಾಂಬರಿಸೋಣ..

 

Author : ಸಮಚಿತ್ತ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited