Untitled Document
Sign Up | Login    
ಬಿಜೆಪಿಗೆ ದೆಹಲಿಯಲ್ಲಿ ವಿಪಕ್ಷ ಸ್ಥಾನ ಇಲ್ಲ, ಕರ್ನಾಟಕದಲ್ಲಿ ಇದ್ದರೂ ಉಪಯೋಗಿಸಿಕೊಳ್ಳುತ್ತಿಲ್ಲ!


ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ, ಆಂತರಿಕ ಭಿನ್ನಮತ.

ಇಂಥದ್ದೇ ಅಂಶಗಳನ್ನು ಮುಂದಿಟ್ಟುಕೊಂಡು 2013ರಲ್ಲಿ ದೆಹಲಿ ಬಿಜೆಪಿಗೆ ಪೂರ್ಣ ಬಹುಮತ ದೊರೆಯದೇ ಇದ್ದ ಪ್ರಮುಖ ಕಾರಣಗಳನ್ನು ವಿಶ್ಲೇಷಿಸಲಾಗಿತ್ತು. ಯಾವುದೇ ಪಕ್ಷಗಳಾದರೂ ಪ್ರತಿ ಚುನಾವಣೆಯಲ್ಲೂ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆ ಎದುರಿಸಲು ಯತ್ನಿಸುತ್ತವೆ. ವಿಪರ್ಯಾಸವೆಂದರೆ ದೆಹಲಿ ಚುನಾವಣೆ ಮಟ್ಟಿಗೆ ಬಿಜೆಪಿ ಮಾತ್ರ ಹೊಸ ತಪ್ಪುಗಳೊಂದಿಗೆ ಹಿಂದಿನ ಚುನಾವಣೆಯ ತಪ್ಪುಗಳನ್ನೇ ಮುಂದುವರೆಸಿತ್ತು! ಪರಿಣಾಮ 2015ರ ದೆಹಲಿ ಚುನಾವಣೆಯಲ್ಲಿ ಕೇವಲ 3 ಸ್ಥಾನಗಳನ್ನು ಗಳಿಸಿದೆ.

ದೆಹಲಿ ಒಂದು ರಾಜ್ಯವೇ ಅಲ್ಲ, ಅಲ್ಲಿ ನಡೆಯುವ ಚುನಾವಣೆ ದೇಶದ ರೆಫರೆಂಡಮ್ ಅಲ್ಲ, ದೆಹಲಿ ಚುನಾವಣೆ ಫಲಿತಾಂಶದಿಂದ ಮೋದಿ ಇಮೇಜ್ ಡ್ಯಾಮೇಜ್ ಆಗಿಲ್ಲ ಎಂದು ಎಷ್ಟೇ ಸಮರ್ಥನೆ ನೀಡಬಹುದು. ಆದರೆ ದೆಹಲಿ ಚುನಾವಣೆಯನ್ನು ಗೆಲ್ಲಲು ಇದ್ದ ಅವಕಾಶವನ್ನು ಬಿಜೆಪಿ ಹಾಳುಮಾಡಿಕೊಂಡಿತ್ತು ಎಂಬುದನ್ನಂತೂ ತಳ್ಳಿಹಾಕಲು ಸಾಧ್ಯವಿಲ್ಲ. ಮೋದಿ ಹೆಸರಿನಲ್ಲಿ ಮಹಾರಾಷ್ಟ್ರ ಗೆದ್ದದ್ದಾಯಿತು, ಹರ್ಯಾಣದಲ್ಲೂ ಅಧಿಕಾರಕ್ಕೆ ಬಂದಾಗಿದೆ. ಜಾರ್ಖಂಡ್ ನಲ್ಲೂ ಜಯಭೇರಿ ಭಾರಿಸಿದರು, ಮೋದಿ ಅವರ ವರ್ಚಸ್ಸನ್ನೇ ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಮಟ್ಟಕ್ಕೆ ಬೆಳೆದದ್ದಾಗಿದೆ, ಮೋದಿ ಹೆಸರಿನ ಮೂಲಕವೇ ಗೆಲುವನ್ನು ಸುಲಭವಾಗಿ ದಕ್ಕಿಸಿಕೊಳ್ಳಬಹುದೆಂಬ ಭ್ರಮೆ ಬಿಜೆಪಿಯ ಕೆಲವು ಘಟಕಗಳಿಗೆ ನೆತ್ತಿಗೇರತೊಡಗಿತ್ತು. ಅದಕ್ಕೆ ಈಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಈಗ ದೆಹಲಿಯ ನಂತರದ ಸ್ಥಾನದಲ್ಲಿ ಕರ್ನಾಟಕವೂ ನಿಂತಿದೆ!

ಕರ್ನಾಟಕದ ಬಿಜೆಪಿ ಘಟಕವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಅಲ್ಲಿ ದೆಹಲಿಯ ಮಿನಿ ಬಿಜೆಪಿ ಘಟಕ ಕಾಣಿಸುತ್ತದೆ. ಒಳಗೊಳಗೇ ಇರುವ ಭಿನ್ನಾಭಿಪ್ರಾಯ. ಚುನಾವಣೆ ತಯಾರಿ, ಕೇಂದ್ರ ಸರ್ಕಾರದ ಯೋಜನೆಗಳನ್ನಾಗಲೀ ಮತದಾರರಿಗೆ ತಲುಪಿಸುವ ವಿಚಾರದಲ್ಲಿ ಉದಾಸಿನತೆ ನಾಯಕರನ್ನು ನೋಡಿದರೆ ಕರ್ನಾಟಕ ಬಿಜೆಪಿ ಘಟಕವೂ ದೆಹಲಿಯ ಮಿನಿ ಬಿಜೆಪಿ ಘಟಕವನ್ನೇ ನೆನಪಿಸುತ್ತಿದೆ.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಂದ ನಂತರ ಜಾರಿಯಾದ ಜನ್-ಧನ್ ಯೋಜನೆ, ಬೆಲೆ ಇಳಿಕೆ, ಹಣದುಬ್ಬರ ಇಳಿಕೆ, ದೆಹಲಿ ಗದ್ದುಗೆಯನ್ನೇ ಅಲ್ಲಾಡಿಸಲು ಸಾಮರ್ಥ್ಯವಿರುವ ಈರುಳ್ಳಿ-ಆಲೂಗೆಡ್ಡೆ ಬೆಲೆ ಇಳಿಕೆ, ತರಕಾರಿ ಬೆಲೆ ಇಳಿಕೆಯಂತಹ, ದೆಹಲಿ ಜನರನ್ನು ಸುಲಭವಾಗಿ ತಲುಪಬಲ್ಲ, ಅನೇಕ ಕ್ರಮ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ, ಉಳಿದ ಯಾವ ನಾಯಕರಾದರೂ ಅದನ್ನು ಜನರಿಗೆ ಮನವರಿಕೆ ಮಾಡಲು ಯತ್ನಿಸಿರುವ ಉದಾಹರಣೆಗಳಿವೆಯೇ?

ಬಿಜೆಪಿಯ ಉಳಿದ ನಾಯಕರಿಗೆ ಗೆಲುವಿನ ಮದ ಎಷ್ಟಿತ್ತೆಂದರೆ ದೆಹಲಿಯಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿದಿದ್ದರೂ ಪಕ್ಷವನ್ನು ಯಾರು ಮುನ್ನಡೆಸಬೇಕು, ಯಾರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಬೇಕೆಂಬ ಯೋಚನೆಗಳಿಗೆ ತಿಲಾಂಜಲಿಯಿತ್ತಿದ್ದರು. ಅತ್ತ ಆಮ್ ಆದ್ಮಿ ಪಕ್ಷದವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ, ಮೋದಿ ಅವರನ್ನು ತೆಗೆಳುವುದರ ಜೊತೆಗೆ ತಮ್ಮ ಪ್ರಚಾರದ ಕೆಲಸವನ್ನು ಸಾಂಗವಾಗಿ ನಡೆಸುತ್ತಿದ್ದರು. ಆದರೆ ಇತ್ತ ಸಾಲು ಸಾಲು ವಿಧಾನಸಭೆ ಚುನಾವಣೆ ಗೆದ್ದು ಮೋದಿ ಅಲೆಯಲ್ಲೇ ತೇಲುತ್ತಿದ್ದ ಬಿಜೆಪಿ ನಾಯಕರು ಮೋದಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜನರಿಗೆ ಅಪ್ ಡೇಟ್ ಮಾಡುವ ಬದಲು ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸುವುದನ್ನೇ ಪೂರ್ಣಾವಧಿ ಕೆಲಸವಾಗಿಸಿಕೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ಇನ್ನೊಂದು ತಿಂಗಳಿರಬೇಕಾದರೆ ಡಾ.ಹರ್ಷವರ್ಧನ್ ಅವರನ್ನು ಸಿ.ಎಂ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ಆದರೆ ಈ ಬಾರಿ ಪಕ್ಷದವರನ್ನು ಕಡೆಗಣಿಸಿ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಸಂಬಂಧವೇ ಇಲ್ಲದವರನ್ನು ಕರೆತಂದು ಪಕ್ಷದ ಸದಸ್ಯತ್ವದ ಜೊತೆಯಲ್ಲೇ ಸಿ.ಎಂ ಅಭ್ಯರ್ಥಿ ಹುದ್ದೆಯನ್ನೂ ದಯಪಾಲಿಸಿದ್ದರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದಿದ್ದ ಶೇ.29ರಷ್ಟು ಮತಗಳಲ್ಲಿ ಬಹುತೇಕ ಈ ಬಾರಿ ಆಮ್ ಆದ್ಮಿ ಪಕ್ಷದತ್ತ ಹೊರಳಿದ್ದು, ಬಿಜೆಪಿಯೇತರ ಮತಗಳು ಒಗ್ಗೂಡಿರುವ ಕಾರಣ ಪಕ್ಷಕ್ಕೆ ಸೋಲುಂಟಾಗಿದೆ ಎಂಬ ಸಿದ್ಧ ಉತ್ತರವಿಟ್ಟುಕೊಂಡು ಬಿಜೆಪಿ ಸೋಲಿನ ವಿಮರ್ಶೆಯನ್ನು ಒಂದೇ ಏಟಿಕೆ ಮುಗಿಸಿ ಬಿಡಬಹುದು. ಆದರೆ ಬಿಜೆಪಿಗೆ ಇಂಥದ್ದೊಂದು ಅಪಾಯ ಎದುರಾಗುವ ಲಕ್ಷಣಗಳು ಗೋಚರಿಸಿದ್ದು ಇದೇ ಮೊದಲೇ? ಲೋಕಸಭಾ ಚುನಾವಣೆಯಲ್ಲೇ ಈ ಪ್ರಯೋಗ ನಡೆದಿತ್ತು. ಬಿಹಾರದಲ್ಲಿ ಆರ್.ಜೆ.ಡಿ. ಜೆಡಿಯು, ಕಾಂಗ್ರೆಸ್ ಒಗ್ಗೂಡಿತ್ತು. ಆದರೂ ಬಿಜೆಪಿ ಎಚ್ಚೆತ್ತುಕೊಳ್ಳಲಿಲ್ಲ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹಗರಣದ ಆರೋಪ ಹೊತ್ತಿದ್ದ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಮೂರನೇ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅವರನ್ನು ಅಧಿಕಾರಕ್ಕೇರಿಸುವವರೆಗೂ ಬಿಜೆಪಿ ರಾಷ್ಟ್ರೀಯ ನಾಯಕರ ವಿಳಂಬ ಹಾಗೂ ತಪ್ಪು ನಿರ್ಧಾರಗಳನ್ನು ಹೀನಾಯವಾಗಿ ಜರಿಯುವ ಕಾಲವಿತ್ತು. ಈಗ ಮಾಜಿ ಬಿಜೆಪಿ ವರಿಷ್ಠರಿಗೂ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಹೊರಟಿರುವ ಬಿಜೆಪಿ ವರಿಷ್ಠರಿಗೂ ಇರುವ ವ್ಯತ್ಯಾಸವಾದರೂ ಏನು?

ರಾಷ್ಟ್ರ ರಾಜಧಾನಿ ಎಂಬ ಕಾರಣಕ್ಕೆ ಬಿಜೆಪಿಗೆ ದೆಹಲಿ ಎಷ್ಟು ಪ್ರತಿಷ್ಠೆಯ ಕಣವಾಗಿತ್ತೋ, ದಕ್ಷಿಣ ಭಾರತದ ವಿಚಾರಕ್ಕೆ ಬಂದರೆ ಕರ್ನಾಟಕವೂ ಅಷ್ಟೇ ಪ್ರತಿಷ್ಠೆಯ ಕಣವಾಗಿದೆ. ಇಡೀ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಪಣತೊಟ್ಟಿರುವ ಅಮಿತ್ ಶಾ ಗೆ ದಕ್ಷಿಣ ಭಾರತವನ್ನು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕಾದ ಅನಿವಾರ್ಯತೆ ಇದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲಾ ಅವಕಾಶಗಳಿರುವುದು ಸಧ್ಯದ ಮಟ್ಟಿಗೆ ಕರ್ನಾಟಕದಲ್ಲಿ ಮಾತ್ರ. ಆದರೆ ಬಿಜೆಪಿ ಪಾಲಿಗೆ ಎರಡನೇ ದೆಹಲಿ ಘಟಕವಾಗಿರುವ ಕರ್ನಾಟಕದಲ್ಲೂ ಆ ಅವಕಾಶಗಳನ್ನು ಗಾಳಿಗೆ ತೂರುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕರ್ನಾಟಕದಲ್ಲಿ ವಿರೋಧ ಪಕ್ಷ ಇರುವುದು ಗೋಚರವಾಗುವಂತಹ ಘಟನೆಗಳು ನಡೆದಿದೆಯಾ ಹೇಳಿ? ಮೂಢನಂಬಿಕೆ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಮಸೂದೆ ವಾಪಸ್, ಮಠಗಳ ಮೇಲೆ ನಿಯಂತ್ರಣ ಮಸೂದೆಯಂತಹ ಭಾವನಾತ್ಮಕ ವಿಷಯಗಳಲ್ಲಿ ಎದುರಾದ ಪ್ರತಿರೋಧಗಳಿಂದ ಸರ್ಕಾರ ಕೆಲವು ಸಂದರ್ಭಗಳಲ್ಲಿ ತನ್ನ ನಿರ್ಧಾರಗಳನ್ನು ಬದಲಿಸಿಕೊಂಡಿದ್ದಿದೆ. ಸಿದ್ದರಾಮಯ್ಯ ಸರ್ಕಾರ ಏನಾದರೂ ಮಣಿದಿದ್ದರೆ ಅದು ಈ ವಿಷಯಗಳಿಗೆ ಎಂಬುದು ಗಮನಾರ್ಹ. ಆದರೆ ಅದು ಸಂಪೂರ್ಣವಾಗಿ ಬಿಜೆಪಿಯ ಹೋರಾಟದ ಫಲ ಎಂದು ಹೇಳಲು ಖಂಡಿತಾ ಸಾಧ್ಯವಿಲ್ಲ. ಮೂಢನಂಬಿಕೆ ಕಾಯ್ದೆ, ಮಠಗಳ ಮೇಲೆ ನಿಯಂತ್ರಣ ಮಸೂದೆಯಂತಹ ವಿಷಯಗಳಲ್ಲಿ ಸಾರ್ವಜನಿಕ ವಲಯದಲ್ಲೇ ಒಂದು pressure group ಕ್ರಿಯೇಟ್ ಆಗಿತ್ತು. ಸಿದ್ದರಾಮಯ್ಯ ಸರ್ಕಾರ ಮಣಿದಿದ್ದು ಆ pressure groupಗೆ. ಸಿದ್ದರಾಮಯ್ಯ ಸರ್ಕಾರ ಶಾದಿ ಭಾಗ್ಯ ಹೆಸರಿನಲ್ಲಿ ಧರ್ಮಾಧಾರಿತ ರಾಜಕಾರಣ ಮಾಡಿ ಕೇವಲ ಒಂದು ವರ್ಗಕ್ಕೆ ಮಾತ್ರ ಯೋಜನೆಯನ್ನು ಮೀಸಲಿಟ್ಟಿತ್ತು. ಕೆಂಡಾಮಂಡಲರಾಗಿದ್ದ ಯಡಿಯೂರಪ್ಪ ಸಿದ್ದರಾಮಯ್ಯ ಸರ್ಕಾರಕ್ಕೆ ನೀರಿಳಿಸಿದ್ದರು. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರಕ್ಕೆ ವಿಪಕ್ಷದಲ್ಲಿ ಗಟ್ಟಿ ಧ್ವನಿ ಎತ್ತುವ ನಾಯಕನೇ ಇಲ್ಲದಂತಾಯಿತು. ಅದಾದ ನಂತರ ಎಷ್ಟೋ ಸಂದರ್ಭದಲ್ಲಿ ಮಾಧ್ಯಮಗಳೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದೆ. ರಾಜ್ಯದಲ್ಲಿ ಬಿಜೆಪಿಯ ಜಡತ್ವ ಯಾವ ಮಟ್ಟದಲ್ಲಿದೆ ಎಂದರೆ ಕೇಂದ್ರದಲ್ಲಿ ತಮ್ಮದೆ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿದರೆ ರಾಜ್ಯ ಸರ್ಕಾರ ಬಸ್ ದರ ಇಳಿಕೆ ಮಾಡಲು ಮಾಧ್ಯಮಗಳು ಒತ್ತಡ ಹೇರಬೇಕಾಯಿತು!.

ರಾಜ್ಯ ಬಿಜೆಪಿಯನ್ನು ನೋಡಿದರೆ ದೆಹಲಿಯಲ್ಲಿ ಯುಪಿಎ ಸರ್ಕಾರವಿದ್ದಾಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ನೆನೆಪಿಗೆ ಬರುತ್ತಿದೆ. 2009ರ ನಂತರ ಕಾಂಗ್ರೆಸ್ ಅದೆಷ್ಟೇ ಹಗರಣಗಳನ್ನು ಮಾಡಿದರೂ ದುರಾಡಳಿತ ನಡೆಸಿದ್ದರೂ ಬಿಜೆಪಿ ನಾಯಕರು ಯಾವತ್ತೂ ಕಾಂಗ್ರೆಸ್ ವಿರುದ್ಧ ಒಂದು ಗಟ್ಟಿ ಧ್ವನಿಯೆತ್ತಲಿಲ್ಲ. ಕಾಂಗ್ರೆಸ್- ಬಿಜೆಪಿಯ ನಿಲುವು ನೀನು ಹೊಡೆದಂಗೆ ಮಾಡು, ನಾ ಅತ್ತಂಗೆ ಮಾಡ್ತೀನಿ ಎಂಬಂತ್ತಿದ್ದವು. ರಾಜ್ಯ ಬಿಜೆಪಿಯದ್ದೂ ಅದೇ ಕಥೆಯಾಗಿದೆ. ಕಾಂಗ್ರೆಸ್ ನ ದೌರ್ಬಲ್ಯಗಳನ್ನು, ದುರಾಡಳಿತವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವ ಸುವರ್ಣಾವಕಾಶ ಬಿಜೆಪಿಯ ಮುಂದಿದೆ. ಆದರೆ ಬಿಜೆಪಿ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ.

ಇನ್ನು ದೆಹಲಿಯ ಐತಿಹಾಸಿಕ ಚುನಾವಣೆ ನಂತರ ಆಮ್ ಆದ್ಮಿ ಪಕ್ಷದ ದೃಷ್ಟಿ ಬಿಬಿಎಂಪಿ ಚುನಾವಣೆ ಮೇಲೆ ಬಿದ್ದಿದೆ. ಕಾಂಗ್ರೆಸ್ ಗೆ ತನ್ನ ಭವಿಷ್ಯದ ಬಗ್ಗೆ ಅರಿವಾಗಿದೆ. ದೆಹಲಿಯಲ್ಲಾದಂತೆ ಕಾಂಗ್ರೆಸ್ ನ ಸಾಂಪ್ರದಾಯಿಕ ಮತದಾರರಿಗೆ ಕಾಂಗ್ರೆಸ್ ಬಿಟ್ಟರೆ ಬಿಜೆಪಿಯೇ ಬೇರೆ ದಾರಿ ಇಲ್ಲದ ಆಯ್ಕೆ ಎಂಬ ಭಾವನೆ ಹೋಗಿ ಮತ ಹಾಕಲು ಪರ್ಯಾಯ ಪಕ್ಷವೊಂದು ದೊರೆತಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿಯಿಲ್ಲ. ಇಂತಹ ಸಂದರ್ಭದಲ್ಲೇ ಮೋದಿ ಅಲೆ ಇಲ್ಲ ಎಂಬುದನ್ನು ನಿರೂಪಿಸುವುದಕ್ಕಾದರೂ ಬಿಜೆಪಿಯನ್ನು ಸೋಲಿಸಲು ಉಳಿದ ಎಲ್ಲಾ ಪಕ್ಷಗಳು ಕೈಜೋಡಿಸುವ ತಂತ್ರ ಅನುಸರಿಸಲು ಸಿದ್ಧವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿ ಇನ್ನೂ ತಾನು ಏನನ್ನೂ ಮಾಡದೇ ಮೋದಿ ಅಲೆಯನ್ನೇ ಮುಂದಿಟ್ಟುಕೊಂಡು ಗೆಲುವನ್ನು ಸುಲಭವಾಗಿ ದಕ್ಕಿಸಿಕೊಳ್ಳಬಹುದೆಂಬ ಭ್ರಮೆಯಲ್ಲಿದ್ದಂತಿದೆ. ದೆಹಲಿ ಬಿಜೆಪಿಯ ಬೇಜವಾಬ್ದಾರಿತನದಿಂದ ಈಗ ವಿಪಕ್ಷ ಸ್ಥಾನವೂ ಇಲ್ಲದಂತಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ವಿಪಕ್ಷ ಸ್ಥಾನ ಇದ್ದೂ ಇಲ್ಲದಂತಾಗಿದೆ. ಎಚ್ಚೆತ್ತುಕೊಳ್ಳದಿದ್ದರೆ ದೆಹಲಿಯಂತೆಯೇ ಅಧಿಕಾರಕ್ಕೆ ಬರಲು ಸಾಧ್ಯವಿದ್ದರೂ ಬೇಜವಾಬ್ದಾರಿತನದಿಂದ ಅವಕಾಶ ಕೈತಪ್ಪುವ ಸಾಧ್ಯತೆ ಇದೆ ಎಚ್ಚರ!

 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited