Untitled Document
Sign Up | Login    
ಸಮಸ್ಯೆ ಇರುವುದು ಕಾಂಗ್ರೆಸ್ಸಿನಲ್ಲೋ ಅಥವಾ ಮೋದಿ ಸರ್ಕಾರದ ಭೂಸ್ವಾಧೀನ ಕಾಯ್ದೆಯಲ್ಲೋ?


ಯುಪಿಎ ಸರ್ಕಾರದ 10 ವರ್ಷಗಳ ಅನಿರ್ಬಂಧಿತ ಆಡಳಿತದಲ್ಲಿ ದೇಶದ ಕೃಷಿ ಬೆಳವಣಿಗೆ( agricultural GDP) ಇದ್ದದ್ದು ಶೇ.3.6%ರಷ್ಟು. ಅತಿ ಹೆಚ್ಚು ಉತ್ಪಾದಿಸುತ್ತಿದ್ದ ರಾಜ್ಯಗಳಿದ್ದದ್ದು ಬಿಜೆಪಿ ಆಡಳಿತದಲ್ಲಿದ್ದರೆ, ಅತಿ ಕಡಿಮೆ ಜಿಡಿಪಿ ದಾಖಲಾಗಿದ್ದು ಮಾತ್ರ ಈಗ ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆಯಿಂದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಬೊಬ್ಬೆ ಹೊಡೆದು, ರೈತ ಪರರೆಂಬ ಪೋಸು ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಒಳಪಟ್ಟಿದ್ದ ರಾಜ್ಯಗಳಲ್ಲಿ.

ಸ್ವಘೋಷಿತ ರೈತಪರರ ಪಕ್ಷದ ಆಡಳಿತವಿದ್ದ ರಾಜ್ಯಗಳಲ್ಲಿ ಕೃಷಿಯ ಅಭಿವೃದ್ಧಿ ಮೇಲೋತ್ಪಾಟನೆಯಾಗುತ್ತಿದ್ದರೆ, ಇಂದು ರೈತ ವಿರೋಧಿ ಭೂಸ್ವಾಧೀನ ಮಸೂದೆ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್, ಕಳೆದ ಒಂದು ದಶಕದಿಂದ ಶೇ.9ರಷ್ಟು ಕೃಷಿ ಉತ್ಪಾದನಾ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ. ಕಚ್ ನಂತಹ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲೂ ಅತ್ಯಧಿಕ ಉತ್ಪಾದನೆಯಾಗುತ್ತಿದೆ. ಮೋದಿ ರೈತ ವಿರೋಧಿಯಾಗಿದ್ದರೆ. ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚುವುದರ ಬದಲು ಕಾಂಗ್ರೆಸ್ ರಾಜ್ಯಗಳಂತೆಯೇ ಮೇಲೋತ್ಪಾಟನೆಯಾಗಬೇಕಿತ್ತು. ಹಾಗಾಗಲಿಲ್ಲ ಅಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಭೂಸ್ವಾಧೀನ ಮಾಡಿಕೊಂಡರೆ ರೈತರಿಗೆ ವಸ್ತುನಿಷ್ಠವಾದ ಪರಿಹಾರ ನೀಡಲಾಗುತ್ತಿತ್ತು. ಕೃಷಿಗೆ ಹಾನಿಯಾಗದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು. ಏಕೆಂದರೆ ಸರ್ಕಾರ ರೈತರ ಪರವಾಗಿದೆ, ಅನಿಲ್ ಅಂಬಾನಿ, ಅದಾನಿ ವಿರುದ್ಧವಾಗಿದೆ ಎಂದು ತೋರಿಸಿಕೊಳ್ಳಲು ವೈಜ್ನಾನಿಕವಾಗಿ ಪರಿಹಾರ ನೀಡದೇ, ಎಲ್ಲವನ್ನೂ ಈಡೇರಿಸಲಾಗದ ವಾಗ್ದಾನದ ಮೂಲಕವೇ ಕೊಳ್ಳೆ ಹೊಡೆಯುವ ಮನಸ್ಥಿತಿ ಮೋದಿಗೆ ಇಲ್ಲ.

ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಮಸೂದೆಯಲ್ಲಿ ರೈತ ವಿರೋಧಿ ಅಂಶಗಳಿವೆ, ಕೃಷಿ ಕ್ಷೇತ್ರಕ್ಕೆ ಹಾನಿಯಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ಸಿಗರು, ಕೈಗೆ ಸಿಕ್ಕ ಭೂಮಿಗಳನೆಲ್ಲಾ ಸ್ಪೆಷಲ್ ಎಕೆನಾಮಿಕ್ ಜೋನ್ ಗಳಿಗಾಗಿ ನೀಡಿ ಕೃಷಿಭೂಮಿಗಳನ್ನು ನಿರ್ನಾಮ ಮಾಡಿದ್ದನ್ನು ಬಿಟ್ಟರೆ, ಕೃಷಿ ಜಿಡಿಪಿಯನ್ನು ಏರಿಕೆ ಮಾಡುವ ಒಂದಾದರೂ ಕ್ರಮ ಕೈಗೊಂಡಿದ್ದಾರಾ? ಅದಿರಲಿ 'Land Act a fraud, learn from Gujarat' (http://archive.indianexpress.com/news/land-act-a-fraud-learn-from-gujarat-says-sc/827449/) ಈ ಮಾತನ್ನು ಕೇಳಿದ್ದೀರಾ? ಇದು ಯಾರೋ ಬಿಜೆಪಿ ಸಂಸದನೋ, ಶಾಸಕನೋ, ಸಚಿವನೋ ಹೇಳಿದ ಮಾತಲ್ಲ. ಯುಪಿಎ ಸರ್ಕಾರವಿದ್ದಾಗ ಉತ್ತರ ಪ್ರದೇಶದಲ್ಲಿ ಲೆದರ್ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಗಾಗಿ 82 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದ ದಾಖಲಾರ್ಹ ಅಂಶ.

ಇಷ್ಟಕ್ಕೂ ಗುಜರಾತ್ ನಿಂದಲೇ ಏಕೆ ಕಲಿಯಬೇಕು ಎಂದರೆ, ಕೇಂದ್ರದಲ್ಲಿ 1894ರ ಭೂಸ್ವಾಧೀನ ಕಾಯ್ದೆ ಜಾರಿಯಲ್ಲಿರುವಾಗಲೇ ಗುಜರಾತ್ ನಲ್ಲಿ 2011ರ ವೇಳೆಗೆ ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೆ ತರಲಾಗಿತ್ತು. ಆಗ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದದ್ದು, ಇಂದಿನ ಪ್ರಧಾನಿ ನರೇಂದ್ರ ಮೋದಿ. ಇಷ್ಟೇ ಅಲ್ಲ ಅರ್ಜೆನ್ಸಿ ಪರ್ಪಸ್ (ತ್ವರಿತ ಉದ್ದೇಶಕ್ಕಾಗಿ) ಶೇ.70 ರೈತರ ಅನುಮತಿ ಇಲ್ಲದೇ ಭೂಸ್ವಾಧೀನ ಪಡಿಸಿಕೊಂಡು ರೈತರಿಗೆ ಸೂಕ್ತ ಪರಿಹಾರವನ್ನು ನೀಡುವ ಗುಜರಾತ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ನ ನ್ಯಾ.ಹೆಚ್.ಎಲ್ ದತ್ತು ಅವರಿದ್ದ ಪೀಠ, "forcible acquisition" using an emergency clause under the Act had almost become a norm to Gujarat. "But there is one state from where we do not receive any such complaints. Look at Ahmedabad which is developing but there are no complaints from that place. ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು. ಜೊತೆಗೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈತರಿಗೆ ಪರಿಹಾರ ನೀಡುವ ಸಂಬಂಧ ಗುಜರಾತ್ ನಿಂದ ದೇಶದ ಇತರ ಭಾಗದ ಅಧಿಕಾರಿಗಳು ತರಬೇತಿ ಪಡೆಯುವುದು ಸೂಕ್ತ ಎಂದೂ ಸಲಹೆ ನೀಡಿತ್ತು.
ಇಂದಿನ ಕೇಂದ್ರ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರ ಒಪ್ಪಿಗೆ ಇಲ್ಲದೇ ಅರ್ಜೆನ್ಸಿ ಪರ್ಪಸ್ ಗಾಗಿ ಭೂಸ್ವಾಧೀನ ಪಡಿಸಿಕೊಳ್ಳಬಹುದೆಂದು ವಿಧಿಸಿರುವ ಷರತ್ತನ್ನು 2011ರಲ್ಲೇ ಗುಜರಾತ್ ಸರ್ಕಾರ ಮಾಡಿ ತೋರಿಸಿತ್ತು. ಹಾಗಾದರೂ ಅಲ್ಲಿ ಯಾವುದೇ ರೈತರು ದಂಗೆ ಏಳಲಿಲ್ಲ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿಲ್ಲ. ಒಬ್ಬನೇ ಒಬ್ಬ ರೈತ ಕೂಟ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಕೋರ್ಟ್ ಮೆಟ್ಟಿಲು ಹತ್ತಲಿಲ್ಲ. ಯಾವ ಕೋರ್ಟೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಏಕೆಂದರೆ ಸರ್ಕಾರಕ್ಕೆ, ರಾಜ್ಯದ ಅಭಿವೃದ್ಧಿಗೆ ಭೂಮಿ ನೀಡಿದ್ದ ರೈತರಿಗೆ ಅನ್ಯಾಯವಾಗಲು ಮೋದಿ ಬಿಡಲಿಲ್ಲ. ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಆ ಕ್ಷೇತ್ರಕ್ಕೆ ಕೈಗಾರಿಕೆಗಳಷ್ಟೇ ಆದ್ಯತೆ ನೀಡುವುದನ್ನೂ ಮರೆಯಲಿಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೇ ರೈತರಿಗೆ ಅನ್ಯಾಯವಾಗುವುದಕ್ಕೆ ಅವಕಾಶ ನೀಡದ ಮೋದಿ, ಇನ್ನು ಒಬ್ಬ ಪ್ರಧಾನಿಯಾಗಿದ್ದುಕೊಂಡು ಸಮಸ್ತ ದೇಶದ ರೈತರ ಹಿತಾಸಕ್ತಿಯನ್ನು ಬಲಿ ಕೊಡುವ ಸಾಧ್ಯತೆಗಳಿವೆಯೇ ಎಂಬುದು ಯೋಚಿಸಬೇಕಾದ ಸಂಗತಿ.

ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಮಸೂದೆಯಲ್ಲಿ ಯುಪಿಎ ಸರ್ಕಾರದ ಭೂಸ್ವಾಧೀನ ಕಾಯ್ದೆಯಲ್ಲಿ ಶೇ.70ರಷ್ಟು ರೈತರ ಒಪ್ಪುಗೆ, ಹಾಗೂ ಸೋಷಿಯಲ್ ಇಂಪ್ಯಾಕ್ಟ್ ಅಸೆಸ್ ಮೆಂಟ್ ನ್ನೇ ಕೈಬಿಟ್ಟಿರುವುದು ಭ್ರಷ್ಟಾಚಾರವನ್ನು. ರಿಯಲ್ ಎಸ್ಟೇಟ್ ಧಂಧೆಯಲ್ಲಿ ತೊಡಗಿರುವವರಿಗೆ ಹಣ ಮಾಡಲು ಅವಕಾಶವೇ ಇರುವುದಿಲ್ಲ ಎಂಬುದು ಅರಿವಾಗಿದ್ದರೂ, ಕಾಯ್ದೆಯನ್ನು ವಿರೋಧಿಸಲು ಭ್ರಷ್ಟಾಚಾರ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಹಿ ಸತ್ಯ, ವ್ಯಥೆ ಕಾಂಗ್ರೆಸ್ ನ್ನು ಕಾಡುತ್ತಿರಬಹುದು. ಅಥವಾ ಎಲ್ಲವೂ ನೇರಾನೇರವಾಗಿದ್ದರೆ ದೇಶದ ಜನತೆಗೆ ಮೋಸ ಮಾಡಲು ಸಾಧ್ಯವಾಗುವುದಿಲ್ಲ ತಾನು ಕೊಳ್ಳೆ ಹೊಡೆಯಲು ಸಾಧ್ಯವಿಲ್ಲ ಎಂಬ ಕೊರತೆ ಕಾಡುತ್ತಿರಬಹುದು. ಎಷ್ಟೇ ಆದರೂ ಸುಳ್ಳು ಹೇಳಿ ಜನರನ್ನು ನಂಬಿಸುವುದು, ಈಡೇರಿಸಲು ಸಾಧ್ಯವಾಗದ ಭರವಸೆಗಳನ್ನು ನೀಡಿ ಮಂಗನನ್ನಾಗಿ ಮಾಡುವುದೇ ಕಾಂಗ್ರೆಸ್ ನ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಸಿದ್ಧಾಂತ ಅಲ್ಲವೇ?
ಕಾಂಗ್ರೆಸ್ ಗೆ ಎನ್.ಡಿ.ಎ ಸರ್ಕಾರದ ಭೂಸ್ವಾಧೀನ ಮಸೂದೆಯನ್ನು ವಿರೋಧಿಸಲು ಮತ್ತೂ ಒಂದು ಕಾರಣವಿದೆ. ಏನೆಂದರೆ, ನರೇಂದ್ರ ಮೋದಿ ಮಾದರಿಯಲ್ಲಿ, ಕೃಷಿ ಹಾಗೂ ಕೈಗಾರಿಕೆ ಎರಡಕ್ಕೂ ಸಮಾನ ಆದ್ಯತೆ ನೀಡಿ, ಎರಡೂ ಕ್ಷೇತ್ರಗಳ ಅಭಿವೃದ್ಧಿ ಮೂಲಕ balancing ಮಾಡುವ ದೂರದೃಷ್ಟಿ ಇಲ್ಲ ಅನಿಸುತ್ತದೆ. ಇದ್ದಿದ್ದರೆ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆಗೆ ಖಂಡಿತ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಕಾಂಗ್ರೆಸ್ ಗೆ ಬೇಕಿರುವುದು ದೇಶದ ಅಭಿವೃದ್ಧಿಯಲ್ಲ, ಬದಲಾಗಿ ಅದಕ್ಕೆ ಬೇಕಿರುವುದು ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆಯುವುದು, ರೈತರ ಹೆಸರಿನಲ್ಲಿ ಕಣ್ಣೀರು ಹಾಕಿ ಒಳ್ಳೆಯ ಕೆಲಸಗಳಿಗೆ ವಿರೋಧವೊಡ್ಡುವುದು, ಕಾಂಗ್ರೆಸ್ಸೇತರ ರಾಜ್ಯಗಳಲ್ಲಿ ಅಭಿವೃದ್ಧಿ ಪಥದಲ್ಲಿ ನಡೆದಿರುವ ಕೆಲಸಗಳ ಬಗ್ಗೆ ಅದೆಷ್ಟೇ ನಿದರ್ಶನಗಳಿದ್ದರೂ ಅದನ್ನು ನಿರಾಕರಿಸಿ, ತರ್ಕಬದ್ಧವಾಗಿ ವಾದಿಸದೇ, ತಲೆಗೆ ತೋಚಿದನ್ನೇ ಹರಟುತ್ತಾ ದೇಶದ ಜನರನ್ನು ದಾರಿ ತಪ್ಪಿಸಿ ಮೂರ್ಖರನ್ನಾಗಿಸುವುದು ಮಾತ್ರ. ಮೋದಿ ಸರ್ಕಾರದ ವಿಚಾರವಾಗಿ ಯಾವುದೇ ಕೋರ್ಟುಗಳು ಏನನ್ನೇ ಹೇಳಲಿ, ಎಸ್.ಐ.ಟಿ ಏನೇ ತೀರ್ಪು ನೀಡಲಿ, ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿಗಾಗಿ ಯಾರು ಏನೇ ಹೇಳಲಿ ಕಾಂಗ್ರೆಸ್ ನದ್ದು ಇರುವುದು ಒಂದೇ ನಿರಾಕರಣೆ.
ಕಾಂಗ್ರೆಸ್ ಗೆ ವಾದಿಸಲು ಉಳಿದಿರುವುದು ಎರಡೇ ವಿಷಯ, ಗುಜರಾತ್ ನಲ್ಲಿ ಈಗಾಗಲೇ ಅನುಸರಿಸುತ್ತಿರುವ ಮೋದಿಯ ಕಾಯ್ದೆಯ ಪರಿಣಾಮ ರೈತರೂ ಇಲ್ಲ, ಕೃಷಿ ಚಟುವಟಿಕೆಯೂ ನಡೆಯುತ್ತಿಲ್ಲ. ಇಲ್ಲವೇ ಅಲ್ಲಿನ ಸರ್ಕಾರ ಯುಪಿಎ ಸರ್ಕಾರದ 2013ರ ಕಾಯ್ದೆಗಿಂತಲೂ ಮುಂಚೆ ಅನುಸರಿಸುತ್ತಿದ್ದ ಭೂಸ್ವಾಧೀನಾ ಕಾಯ್ದೆ ಸರಿಯಾಗಿದ್ದು ರೈತರಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂಬುದು. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಅನುಸರಿಸುತಿದ್ದ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಈಗ್ಗೆ 4 ವರ್ಷಗಳ ಹಿಂದೆ (2011ರಲ್ಲೇ) ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ಗೆ ಮೆಚ್ಚುಗೆಯಾಗಿರುವ ಸಂಗತಿ ದೇಶದ್ಯಂತ ಜಾರಿಗೆ ಬಂದರೆ ತಪ್ಪೇನು, ಸರ್ವೋಚ್ಛ ನ್ಯಾಯಾಲಯಕ್ಕೂ ಸಮ್ಮತವಾಗಿರುವುದು ಕಾಂಗ್ರೆಸ್ ಗೆ ಸಮ್ಮತವಾಗುವುದಿಲ್ಲ ಎಂದರೆ ಸಮಸ್ಯೆ ಇರುವುದು ಕಾಂಗ್ರೆಸ್ಸಿನಲ್ಲೋ ಅಥವಾ ಕಾಯ್ದೆ ಮಾಡಿರುವ ಮೋದಿ ಸರ್ಕಾರದಲ್ಲೋ?

 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited