Untitled Document
Sign Up | Login    
ದೇಶದ ಪ್ರಗತಿಗೇ ಮಾರಕವಾದ ಕಾಂಗ್ರೆಸ್ ಪ್ರತಿಭಟನೆಗೆ ಕಾರಣವೇನು ?


ಪ್ರಜಾಪ್ರಭುತ್ವದ ದೇಗುಲ ಎಂದು ಭಾವಿಸಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ನಿಯುಕ್ತರಾಗಿ ಪ್ರಥಮ ಬಾರಿಗೆ ಪಾರ್ಲಿಮೆಂಟ್ ಭವನವನ್ನು ಮೆಟ್ಟಿಲುಗಳಿಗೆ ಮಂಡಿಯೂರಿ ನಮಿಸಿ ಒಳಗೆ ಪ್ರವೇಶಿಸಿದ್ದರು. ಆದರೆ ಅದೇ ಸಂಸತ್ ಭವನ ಕಾಂಗ್ರೆಸ್ ನಾಯಕರಿಗೆ ದೇಗುಲವಾಗಿ ಕಾಣಲಿಲ್ಲ. ಅವರಿಗೆ ಅದು ಕ್ಷುಲ್ಲಕ ರಾಜಕೀಯದ ಚದುರಂಗದಾಟಕ್ಕೆ ಒಂದು ವೇದಿಕೆಯಾಯಿತು ಅಷ್ಟೆ.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಂದಿನಿಂದ ಒಂದೇ ಒಂದು ದಿನವೂ ಕಲಾಪವನ್ನು ನಡೆಸಲು ಬಿಡದೆ ಕ್ಷುಲ್ಲಕ ನೆಪಗಳನ್ನೊಡ್ಡಿ ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಉದ್ದೇಶವನ್ನೇ ದೇಶ ಪ್ರಶ್ನಿಸುವಂತಾಗಿದೆ. ದೇಶದ ಪ್ರಗತಿಗೆ, ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಅಗತ್ಯವಾದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಂಥ ಮಹತ್ವದ ಮಸೂದೆಗಳನ್ನು ಚರ್ಚಿಸುವ ವಿಚಾರ ಬಿಡಿ, ಮಂಡಿಸಲು ಸಹ ಬಿಡದೆ ನಿರಂತರವಾಗಿ ಕೋಲಾಹಲ ಎಬ್ಬಿಸಿ, ಘೋಷಣೆಗಳನ್ನು ಕೂಗುತ್ತ, ಸದನದ ಬಾವಿಯಲ್ಲಿ ಘೋಷಣಾ ಫಲಕಗಳನ್ನು ಎತ್ತಿ ಹಿಡಿದು ಸ್ಪೀಕರ್ ಗೂ ಅವಮಾನ ಮಾಡುತ್ತ ಪ್ರತಿಭಟಿಸುತ್ತಿರುವುದರ ಹಿಂದೆ ಕಾಂಗ್ರೆಸ್ ಗೆ ಯಾವ ಉದ್ದೇಶವಿದೆ?. ಮಾಜಿ ಐ.ಪಿ.ಎಲ್ ಮುಖ್ಯಸ್ಥ ಲಲಿತ್ ಮೋದಿಗೆ ಸಹಾಯ ಮಾಡಿದ್ದಕ್ಕೆ ಸುಷ್ಮಾ ಸ್ವರಾಜ್, ವಸುಂಧರಾ ರಾಜೆ ಅಥವಾ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ಸಿನ ಅಡೆತಡೆ ನೀತಿಗೆ ಅದೊಂದೇ ಕಾರಣವೇ ಅಥವಾ ಇನ್ನೇನಾದರೂ ಹುದುಗಿರುವ ಕಾರಣವಿದೆಯೆ ?

ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಈ ಪರಿಯ ನೈತಿಕತೆ ತೋರುತ್ತಿದೆ ಎಂದರೆ ದೇಶದ ಜನತೆಗೆ 'ಭೂತದ ಬಾಯಲ್ಲಿ ಭಗವದ್ಗೀತೆ' ಕೇಳಿದಂತೆ ಅನಿಸುವುದು ಸಹಜ. ಯಾಕೆಂದರೆ ಈ ದೇಶದಲ್ಲಿ ಭ್ರಷ್ಟಾಚಾರದ ವಿವಿಧ ಅವತಾರಗಳನ್ನು ಪರಿಚಯ ಮಾಡಿದ್ದೇ ಕಾಂಗ್ರೆಸ್ ಎನ್ನುವುದು ಸರ್ವವಿಧಿತ ಸತ್ಯ. ಕ್ಯಾನ್ಸರ್ ಚಿಕಿತ್ಸೆಯ ಸಂದರ್ಭದಲ್ಲಿ ಲಲಿತ್ ಮೋದಿ ತನ್ನ ಪತ್ನಿಯ ಸನಿಹ ಇರಲು ಅಗತ್ಯವಾದ ಪ್ರವಾಸ ದಾಖಲೆ ಪತ್ರ ಸಿಗಲು ಸುಷ್ಮಾ ಸ್ವರಾಜ್ ಸಹಾಯ ಮಾಡಿರುವುದು ಅಷ್ಟೊಂದು ದೊಡ್ಡ, ಅಕ್ಷಮ್ಯ ಅಪರಾಧವೆ?

2014ರ ಲೋಕಸಭಾ ಚುನಾವಣೆಯಲ್ಲಿ ಹಾಗೂ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲೂ ಹೀನಾಯವಾದ ಸರಣಿ ಸೋಲು ಅನುಭವಿಸಿದ ಕಾಂಗ್ರೆಸ್ ಗೆ, ಅದರಲ್ಲೂ ಮುಖ್ಯವಾಗಿ ಗಾಂಧಿ ಪರಿವಾರಕ್ಕೆ ಈಗ ಅಸ್ಥಿತ್ವದ ಪ್ರಶ್ನೆ. ಬಿಜೆಪಿಯ 'ಕಾಂಗ್ರೆಸ್ ಮುಕ್ತ ಭಾರತ' ಎಂಬ ಗುರಿ ಸಾಧನೆ ಸಮೀಸುತ್ತಿದೆ ಎಂಬ ಅರಿವು ಕಾಂಗ್ರೆಸ್ ನಾಯಕತ್ವದಲ್ಲಿ ತಡವಾಗಿ ಉಂಟಾದರೂ ಪಕ್ಷದ ಅವನತಿಯನ್ನು ತಡೆಯಲು ಕಾಂಗ್ರೆಸ್ ಅನುಸರಿಸುತ್ತಿರುವ (ವಾಮ)ಮಾರ್ಗೋಪಾಯಗಳು ನಿರೀಕ್ಷಿತ ಫಲವನ್ನು ಕೊಡಲಾರವು ಎನ್ನುವ ಸತ್ಯ ಮಾತ್ರ ಅವರಿಗೆ ತಿಳಿದಂತಿಲ್ಲ. ತೆರೆಮರೆಗೆ ಸರಿಯುತ್ತಿರುವ ಗಾಂಧಿ ಪರಿವಾರವನ್ನು ರಾಜಕೀಯವಾಗಿ ಪ್ರಸ್ತುತವಾಗಿ ಇರಿಸಲು ದೇಶದ ಪ್ರಗತಿಯನ್ನೇ ಒತ್ತೆ ಇಡಲು ಹೊರಟ ಕಾಂಗ್ರೆಸ್ ರಣತಂತ್ರ ಪಕ್ಷಕ್ಕೇ ತಿರುಗುಬಾಣವಾಗುತ್ತಿರುವುದು ಪಕ್ಷದ ನಾಯಕತ್ವಕ್ಕೆ ಇನ್ನೂ ಅರಿವಿಗೆ ಬಂದಂತಿಲ್ಲ. ಒಂದು ವೇಳೆ ಕೆಲವರಿಗೆ ಬಂದರೂ ಪಕ್ಷದ ಚುಕ್ಕಾಣಿ ಹಿಡಿದವರಿಗೆ ಬೇರೇನೋ ಉದ್ದೇಶ ಇದ್ದ ಹಾಗೆ ತೋರುತ್ತದೆ. ಇಲ್ಲವಾದಲ್ಲಿ, ಕಾಂಗ್ರೆಸ್ ಸದಸ್ಯರ ಪ್ರತಿಭಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದರೂ ಕ್ಯಾರೇ ಅನ್ನದೆ ಸಂಸತ್ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದನ್ನು ಮುಂದುವರಿಸಿದ ಕಾಂಗ್ರೆಸ್ ನೀತಿಗೆ ಬೇರೆ ಅರ್ಥವೇ ಇಲ್ಲ.

ಹಾಗಾದರೆ ಕಾಂಗ್ರೆಸ್ ಯಾಕೆ ಕಲಾಪಕ್ಕೆ ಈ ರೀತಿ ಅಡ್ಡಿಪಡಿಸಿ ಮುಂಗಾರು ಅಧಿವೇಶನ ಸಂಪೂರ್ಣವಾಗಿ ನೀರುಪಾಲಾಗುವಂತೆ ಮಾಡಿದೆ? ಲೋಕಸಭೆಯಲ್ಲಿ ಈಗಾಗಲೇ ಅಂಗೀಕಾರವಾದ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಪಾಸ್ ಮಾಡಲು ಸುತರಾಂ ಬಿಡುತ್ತಿಲ್ಲ? ಕಾಂಗ್ರೆಸ್ ಗೆ ಅದು ಬೇಕಾಗಿಲ್ಲ. ಯಾಕೆಂದರೆ, ಜಿ.ಎಸ್.ಟಿ ಕಾಯ್ದೆ ಸ್ವಾತಂತ್ರ್ಯಾ ನಂತರದ ಅತ್ಯಂತ ಮಹತ್ವದ ಹಾಗೂ ದೇಶದ ಆರ್ಥಿಕತೆಯ ನಕಾಶೆಯನ್ನೇ ಬದಲಿಸಬಹುದಾದ ಕಾಯ್ದೆ ಎನ್ನುವುದು ಆರ್ಥಿಕ ತಜ್ನರ ಅಭಿಪ್ರಾಯ. ಈ ಕಾಯ್ದೆ ಜಾರಿಗೆ ಬಂದರೆ ದೇಶದಲ್ಲಿ ಬಹುತೇಕ ಎಲ್ಲಾ ಸರಕುಗಳ ಬೆಲೆಯೂ ಕಡಿಮೆಯಾಗುತ್ತದೆ ಮತ್ತು ದೇಶದ ಜಿ.ಡಿ.ಪಿ (ಆರ್ಥಿಕತೆ) ಕನಿಷ್ಠ ಶೇ.2ರಷ್ಟು ವೃದ್ಧಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ, ಭಾರತದ ಜಿಡಿಪಿ ಎರಡಂಕಿ ವೇಗದಲ್ಲಿ ಬೆಳೆಯಲಾರಂಭಿಸುತ್ತದೆ! ಅಷ್ಟೆ ಅಲ್ಲ, ಇದರಿಂದ ಭಾರತ ಚೀನವನ್ನೂ ಹಿಂದಿಕ್ಕಿ ಪ್ರಪಂಚದ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುವ ಅರ್ಥಿಕತೆಯನ್ನಾಗಿ ಮಾಡಲು ಸಹಾಯವಾಗುತ್ತದೆ. ನಿಸ್ಸಂದೇಹವಾಗಿ ಇದರ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ಅಲ್ಲದೆ, 2019ರ ಚುನಾವಣೆಯಲ್ಲೂ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಲು ಹಾದಿ ಸುಗಮವಾಗುತ್ತದೆ.

ಇದರಿಂದ ಕಾಂಗ್ರೆಸ್ಸಿಗೇನು ಲಾಭ ? ಭಾರತವನ್ನು ಆಳುವುದು ತಮ್ಮದೇ ಹಕ್ಕು ಎಂದು ಭಾವಿಸಿದ, ಅದರಂತೆ ವರ್ತಿಸುವ ಗಾಂಧಿ ಕುಟುಂಬಕ್ಕೆ ಇದು ಸಹಿಸಲು ಆಗುತ್ತಿಲ್ಲ. ಅಲ್ಲದೆ, ಅಧಿಕಾರದಿಂದ ಬಹಳ ಕಾಲ ದೂರವಿರಲು ತಯಾರಿಲ್ಲದ ಕಾಂಗ್ರೆಸ್ ನಾಯಕರೂ ತಮ್ಮ ಸರಕಾರ ಯಾವಾಗ ಮತ್ತೆ ಅಧಿಕಾರ ಪಡೆಯುವುದೋ ಎಂದು ಕಾಯುತ್ತಿದ್ದಾರೆ. ಆದರೆ, ಮೋದಿ ಸರಕಾರ ಉತ್ತಮ ಕಾರ್ಯಗಳನ್ನು ಮಾಡಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರೆ ತಾವು ಮತ್ತು ತಮ್ಮ್ ಪಕ್ಷ ಪುನಃ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎನ್ನುವುದನ್ನು ಅರಿತ ಕಾಂಗ್ರೆಸ್ಸಿಗರು ಮೋದಿ ಸರಕಾರಕ್ಕೆ ನಿರಂತರ ಅಡ್ಡಿಪಡಿಸಿ ಜನರಲ್ಲಿ ಮೋದಿ ಹಾಗೂ ಸರಕಾರದ ಬಗ್ಗೆ ಋಣಾತ್ಮಕ ಭಾವನೆ ಉಂಟುಮಾಡುವುದನ್ನು ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಈ ಘನ ಕಾರ್ಯಕ್ಕೆ ಕೆಲವು ಮಾಧ್ಯಮಗಳೂ ಸಾಥ್ ನೀಡುತ್ತಿರುವುದೂ ಸ್ಪಷ್ಟವಾಗಿ ಕಾಣಿಸುತ್ತಿದೆ.

ಹಾಗಾಗಿ, ಜಿ.ಎಸ್.ಟಿ ಮಸೂದೆ ಇರಲಿ, ಅಥವಾ, ಮೇಕ್ ಇನ್ ಇಂಡಿಯಾ ಯೋಜನೆ ನನಸಾಗಲು ಅತ್ಯಂತ ಅಗತ್ಯವಾದ ಭೂ ಕಾಯ್ದೆ ಇರಲಿ, ಯಾವುದೇ ಮಹತ್ವದ, ದೇಶದ ಅಭಿವೃದ್ಧಿಗೆ ಕಾರಣವಾಗುವ ಮಸೂದೆಗಳು ಜಾರಿಗೆ ಬರುವುದು ಕಾಂಗ್ರೆಸ್ಸಿಗೆ ಬೇಕಾಗಿಲ್ಲ.

ದೇಶ ಆಳಲು ತಾವೊಬ್ಬರೇ ಹಕ್ಕುದಾರರು ಎಂದು ನಂಬಿದ ಗಾಂಧಿ ಪರಿವಾರ ಹಾಗೂ ಪಕ್ಷದ ನಾಯಕರಿಂದ ಇನ್ನೇನು ನಿರೀಕ್ಷಿಸಬಹುದು?

 

Author : ಸಮಚಿತ್ತ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited