Untitled Document
Sign Up | Login    
ಹೊಸ ಹುರುಪಿನ ನಿರೀಕ್ಷೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತ

ಯುಗಾದಿ ಆಚರಣೆ

ಭಾರತದಲ್ಲಿ ಹೊಸ ವರ್ಷದ ಆಚರಣೆಯೆಂದರೆ ಯುಗಾದಿ ವರ್ಷದ ಆಚರಣೆ, ಪಂಚಾಗವೆಂಬ ಹೊಸ ವರ್ಷದ ಕ್ಯಾಲೆಂಡರ್ ಗೆ ಪೂಜೆ ಮಾಡಿ, "ಬೇವು-ಬೆಲ್ಲ." ಜೀವನದ ಸಿಹಿ-ಕಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬ ಆಶಯದಿಂದ ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.

ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂದು ಬೇರೆ ಬೇರೆಯಾಗಿ ಆಚರಿಸುತ್ತಾರೆ. ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದು ಚಾಂದ್ರಮಾನ ಹಾಗೂ ಸೂರ್ಯನ ಚಲನೆಯನ್ನಾಧರಿಸಿ ಆಚರಿಸುವುದು ಸೂರ್ಯಮಾನ ಯುಗಾದಿಯಾಗಿದೆ.

ವೈಜ್ನಾನಿಕ ಹಿನ್ನೆಲೆಯಲ್ಲಿಯೂ ಯುಗಾದಿ ಗಮನ ಸೆಳೆಯುತ್ತದೆ. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಯುಗಾದಿಯ ದಿನದಿಂದ ಚಿಗುರು ಕಾಣುತ್ತದೆ. ಎಲ್ಲಾ ಹಬ್ಬಗಳಲ್ಲಿ ಮನುಷ್ಯರಿಗೆ ಮಾತ್ರ ನವೋಲ್ಲಾಸ ಕಾಣಲು ಸಾಧ್ಯವಿದ್ದರೆ, ಯುಗಾದಿಯಲ್ಲಿ ಪ್ರಕೃತಿಯ ಚಿಗುರಿನಲ್ಲೂ ನವೋಲ್ಲಾಸವನ್ನು ಕಾಣಬಹುದು. ಆದ್ದರಿಂದ ಯುಗಾದಿಯನ್ನು ಪ್ರಕೃತಿಯ ಸೊಬಗನ್ನು ಕಾಣುವ ಅಮೋಘ ಕಾಲವಾಗಿದೆ.

ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಒಂದು ಚಾಂದ್ರಮಾನ ಸಂವತ್ಸರ. ರವಿ-ಚಂದ್ರರ ಗತಿಯನ್ನವಲಂಬಿಸಿ, 11 ರಿಂದ 12 ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಈ ಯುಗಾದಿ ನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ. ಅದರಿಂದ ನಮ್ಮ ಪೂರ್ವಿಕರ ಖಗೋಳ ಗಣಿತದ ಅಪಾರ ಜ್ನಾನಭಂಡಾರ ಅನಾವರಣಗೊಳ್ಳುತ್ತದೆ.
ಇತರ ಹಬ್ಬಗಳನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸುವಂತೆಯೇ ಬೇರೆ ಬೇರೆ ರಾಜ್ಯಗಳಲ್ಲಿ ಯುಗಾದಿಯನ್ನು ಬೇರೆ ಬೇರೆ ರೀತಿಯಿಂದ ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ - ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗಗಳಲ್ಲಿರುವ ಅನೇಕ ಗ್ರಾಮಗಳಲ್ಲಿ ಈ ಪದ್ಧತಿಯನ್ನು ನೋಡಬಹುದಾಗಿದೆ.

ಇನ್ನು ಯುಗಾದಿಯಂದು ಬೇವು ಬೆಲ್ಲ ಸೇವಿಸುವ ಸಂದರ್ಭದಲ್ಲಿ ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ ಎಂಬ ಅರ್ಥವಿರುವ ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ| ಎಂಬ ಶ್ಲೋಕವನ್ನು ಹೇಳುತ್ತಾರೆ.
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷಾಚರಣೆಯಲ್ಲಿ ಮನುಷ್ಯರಲ್ಲಿ ಉಲ್ಲಾಸವಿದ್ದರೂ ಪ್ರಕೃತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಇರುವುದಿಲ್ಲ. ಮಧ್ಯರಾತ್ರಿಯಲ್ಲಿ ಮದಿರೆಯನ್ನು ಹಿಡಿದು ಸಂಭ್ರಮಿಸುವುದಕ್ಕೂ, ಪ್ರಕೃತಿಯ ಚಿಗುರನ್ನು ಕಂಡು ಸಂಭ್ರಮಿಸಿ ಹೊಸ ವರ್ಷಾಚರಣೆ ಮಾಡುವುದಕ್ಕೂ ವ್ಯತ್ಯಾಸವಿದೆ. ಪ್ರಕೃತಿಯ ಸೊಬಗನ್ನು ಆಸ್ವಾದಿಸಿದರೆ ಮನಸ್ಸಿಗೂ ಹೊಸ ಆಲೋಚನೆಗಳು ಸ್ಫುರಿಸಲಿವೆ. ಮನಸ್ಸಿಗೆ ಹೊಸತು ಸ್ಫುರಿಸಿದರೆ, ಹೊಸ ಸಾಧನೆಗಳಿಗೂ ದಾರಿ ತೆರೆದುಕೊಳ್ಳಲಿವೆ. ಯುಗಾದಿಯ ಆಚರಣೆಗೂ ಹಿಂದಿನ ದಿನಗಳಲ್ಲಿ ನಡೆದಿರುವ ಕಹಿಘಟನೆಗಳನ್ನು ಮರೆತು, ಹೊಸ ವರ್ಷ ಹೊಸ ಹುರುಪು ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಯುಗಾದಿಯನ್ನು ಆಚರಿಸೋಣ.

 

Author : ಬೆಂಗಳೂರು ವೇವ್ಸ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited