Untitled Document
Sign Up | Login    
ಕಾಲ ಉರುಳಿದಂತೆ ಕೆಲವರು ಬ್ರಿಟೀಷರ ಏಜೆಂಟರಾಗಿ ಕಂಡರೆ, ಇವರು ಮಾತ್ರ ಎಂದಿಗೂ ಭಾರತದ ಭಕ್ತರಾಗಿಯೇ ಕಾಡುತ್ತಾರೆ!

ಸುಖ್ ದೇವ್,ಭಗತ್ ಸಿಂಗ್ ಹಾಗೂ ರಾಜ್ ಗುರು

ಅದು 1931 ಮಾರ್ಚ್ 23, ಇಂದಿಗೆ ಬರೋಬ್ಬರಿ 84ರ್ಷಗಳ ಹಿಂದೆ ಸುಖ್ ದೇವ್, ಭಗತ್ ಸಿಂಗ್, ರಾಜ್ ಗುರು ಎಂಬ ಯುವತರುಣರನ್ನು ದೇಶವನ್ನು ಪ್ರೀತಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತಪ್ಪಿಗೆ ನೇಣು ಹಾಕಲಾಯಿತು.

ಈ ಘಟನೆ ನಡೆದು ಸುಮಾರು ಒಂದು ಪೀಳಿಗೆಯ ಅವಧಿಯೇ ಮುಗಿಯುತ್ತಾ ಬಂದಿದೆ. ಆದರೂ ಪ್ರತಿ ವರ್ಷದ ಮಾ.23 ಬಂತೆಂದರೆ ದೇಶದ ಜನತೆಯಲ್ಲಿ ಮಡುಗಟ್ಟಿದ ಶೋಕ ಹಸಿಯಾಗಿರುವುದು ಕಾಣುತ್ತದೆ. ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುವುದಕ್ಕಾಗಿ ಇದೇ ದಿನದಂದು ಗಲ್ಲಿಗೇರಿದ ಆ ಮೂವರು ಯುವಕರೇನು ಉಪವಾಸ ಸತ್ಯಾಗ್ರಹ ಮಾಡಿರಲಿಲ್ಲ. ಮಿತಿ ಮೀರಿದ ಶಾಂತಿಯ ಬೋಧನೆಯನ್ನೂ ಮಾಡಲಿಲ್ಲ. ಬಹುಷಃ ಹಾಗೆ ಮಾಡಿದ್ದರೆ ಅವರ ಆಯಸ್ಸು ಗಟ್ಟಿಯಾಗಿರುತ್ತಿತ್ತು. ದೇಶದ ಮಹಾತ್ಮ ಎಂಬ ಆಲದ ಮರದ ಕೆಳಗೆ ಅವರ ಕೊಡುಗೆಗಳೆಲ್ಲವೂ ಮಣ್ಣುಪಾಲಾಗಿರುತ್ತಿತ್ತು.

ಆದರೆ ಈ ಶಾಂತಿ, ಉಪವಾಸಗಳೆಲ್ಲವೂ ಅಂದಿನ ಸ್ಥಿತಿಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಶೀಘ್ರವಾಗಿ ದಕ್ಕುವುದಕ್ಕೆ ಬಿಡುವುದಿಲ್ಲ ಎಂದು ಆ ಯುವಕರಿಗೂ ಗೊತ್ತಿತ್ತು. ತಮ್ಮನ್ನು ಯಾರು ಆರಾಧಿಸುತ್ತಾರೋ ಬಿಡುತ್ತಾರೋ, ತಮ್ಮನ್ನು ಯಾರು ಮಹಾತ್ಮ ಎಂದು ಕರೆಯುತ್ತಾರೋ ಇಲ್ಲವೋ, ಅವೆಲ್ಲವೂ ಆ ಬಿಸಿರಕ್ತದ ಯುವಕರಿಗೆ ನಗಣ್ಯವಾದ ವಿಷಯ. ಅವರಿಗೆ ಬೇಕಾಗಿದ್ದದ್ದು ಒಂದೇ.. ಅದು ಭಾರತ ಮಾತೆ ಬ್ರಿಟೀಷರ ಸಂಕೋಲೆಗಳಿಂದ ಮುಕ್ತಳಾಗಬೇಕೆಂಬುದು. ಶಾಂತಿಯ ಮಂತ್ರದಿಂದ ಸ್ವಾತಂತ್ರ್ಯ ಸುಲಭವಾಗಿ ದಕ್ಕುವುದಿಲ್ಲ ಎಂದು ತಿಳಿದು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡರು, ರಾಷ್ಟ್ರ ರಕ್ಷಣೆ ಮಾಡುವ ಕ್ಷತ್ರಿಯರಂತೆ ಹೋರಾಡಿದರು. ಮುಖಕ್ಕೆ ಕಪ್ಪುಬಟ್ಟೆ ತೊಡದೆ ಗಲ್ಲಿಗೇರಿದರು. ಸ್ವಾತಂತ್ರ್ಯ ಹೋರಾಟವನ್ನು ತಪಸ್ಸಿನಂತೆ ಆಚರಿಸಿದ್ದರಿಂದಲೇ ಒಂದು ಪೀಳಿಗೆಯಲ್ಲ, ಅದೆಷ್ಟು ಪೀಳಿಗೆಗಳು ಕಳೆದರೂ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಅವರನ್ನು ಗಲ್ಲಿಗೇರಿಸಿದ ದಿನವನ್ನು ನೆನೆಯಲಾಗುತ್ತದೆ. ಅವರಿಗೆ ಹೆಮ್ಮೆಯಿಂದ ಗೌರವ ಅರ್ಪಿಸಲಾಗುತ್ತದೆ. ದೇಶಭಕ್ತಿಯ ಮೂರ್ತ ರೂಪವೆಂದೇ ಕಾಣಲಾಗುತ್ತದೆ.

ಒಬ್ಬ ಖೈದಿಗೆ ಎಷ್ಟು ಆಹಾರ ನೀಡಬೇಕೆಂಬುದನ್ನು ನಿರ್ಧರಿಸುವಂತೆ ತನ್ನ ದಾಸ್ಯದಲ್ಲಿರುವ ಭಾರತೀಯರಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕೆಂಬುದನ್ನು ನಿರ್ಧರಿಸಲು 1928, ಅಕ್ಟೋಬರ್ 30ರಂದು, ಸೈಮನ್ ಆಯೋಗ ಇಂಗ್ಲೆಂಡ್ ನಿಂದ ಆಗಮಿಸಿತ್ತು. ಆಯೋಗ ಭಾರತಕ್ಕೆ ಬಂದಿಳಿದ ಬೆನ್ನಲ್ಲೆ ನೌಜವಾನ್ ಭಾರತ್ ಸಭಾ ಲಾಲಾ ಲಜಪತ್ರಾಯ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಕಪ್ಪು ಬಾವುಟ ತೋರಿಸಿ ವಾಪಸ್ಸು ಹೋಗಿ ಎಂಬ ಘೋಷಣೆಗಳನ್ನು ಕೂಗಲಾಯಿತು. ಈ ಪ್ರತಿಭಟನೆಗೆ ನೇತೃತ್ವ ವಹಿಸಲು ಲಾಲಾ ಲಜಪತ್ ರಾಯ್ ಅವರನ್ನು ಒಪ್ಪಿಸಿದ್ದರು. ಲಾಹೋರ್ ನ ನ್ಯಾಷನಲ್ ಕಾಲೇಜು ವಿದ್ಯಾರ್ಥಿ ಭಗತ್ ಸಿಂಗ್. ಪ್ರತಿಭಟನೆ ನಡೆಸಿದ್ದ ನೌಜವಾನ್ ಭಾರತ್ ಸಭಾ ನ್ನು ಕಟ್ಟಿ ಬೆಳೆಸಿದ್ದೂ ಭಗತ್ ಸಿಂಗ್. ಪ್ರತಿಭಟನೆ ನೇತೃತ್ವ ವಹಿಸಿದ್ದ ಲಾಲಾ ಲಜಪತ್ ರಾಯ್ 1928, ನವೆಂಬರ್ 17ರಲ್ಲಿ ನಿಧನರಾದರು. ಇದಾದ ನಂತರವೇ ಭಗತ್ ಸಿಂಗ್ ನಲ್ಲಿದ್ದ ಕ್ರಾಂತಿಕಾರಿಯೊಬ್ಬ ಉಗಮವಾಗಿದ್ದು. ಲಜಪತ್ ರಾಯ್ ಅವರ ನಿಧನಕ್ಕೆ ಕಾರಣನಾದ ಬ್ರಿಟೀಷ್ ಅಧಿಕಾರಿ ಸ್ಯಾಂಡರ್ಸ್ ನ್ನು ಭಗತ್ ಸಿಂಗ್, ರಾಜ್ ಗುರು, ಗುಂಡಿಕ್ಕಿ ಕೊಲೆಗೈದು ಪರಾರಿಯಾದರು.

ಇನ್ನು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ 1929ರ ಏಪ್ರಿಲ್ ನಲ್ಲಿ ಬ್ರಿಟೀಷ್ ಸರ್ಕಾರ ಮಸೂದೆಯನ್ನು ಜಾರಿಗೆ ತರುವುದನ್ನು ತಡೆಯಲು ಅಧಿವೇಶನ ನಡೆಯುತ್ತಿದ್ದಾಗಲೇ ಸದನದೊಳಗೇ ಬಾಂಬ್ ಸ್ಫೋಟಿಸಿದ್ದರು. ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ವೀಟೋ ಪವರ್’ ಉಪಯೋಗಿಸಿ ಮಸೂದೆಗೆ ಅಂಗೀಕಾರ ಪಡೆಯುವ ಬದಲು ಮಸೂದೆ ಸುಟ್ಟು ಬೂದಿಯಾಗಿತ್ತು. ಮುಂದಿನದ್ದು ಭಗತ್ ಸಿಂಗ್ ಬಂಧನ, ವಿಚಾರಣೆ. ಅವರನ್ನು ಗಲ್ಲಿಗೇರಿಸಬೇಕೆಂದು ದೇಶಾದ್ಯಂತ ಸಹಿ ಸಂಗ್ರಹ. ಇದಾದ ಕೆಲವೇ ದಿನಗಳಲ್ಲಿ ಅಸಹಕಾರ ಚಳುವಳಿಯನ್ನು ಕೈಬಿಡುವ ಸಂಬಂಧ ಇಂಗ್ಲೆಂಡಿನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ರನ್ನು ಗಲ್ಲಿನಿಂದ ಪಾರು ಮಾಡಿಸುವಂತೆ 'ಮಹಾತ್ಮ' ಗಾಂಧಿ ಅವರಿಗೆ ಇಡೀ ದೇಶ ಒಕ್ಕೊರಲ ಮನವಿ ಮಾಡಿತ್ತು. ಆದರೆ ಮಹಾತ್ಮನಿಗೆ ದೇಶದ ಜನತೆಯ ಕೂಗು ಕೇಳಲಿಲ್ಲ. ಅಸಹಕಾರ ಚಳುವಳಿಯನ್ನು ಕೈಬಿಡಲು ಭಗತ್ ಸಿಂಗ್ ರನ್ನು ಬಿಡುಗಡೆ ಮಾಡಬೇಕೆಂಬ ಷರತ್ತು ವಿಧಿಸುವುದನ್ನು ಮರೆತರು!.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಭಗತ್ ಸಿಂಗ್ ಕ್ರಾಂತಿಯ ಮಾರ್ಗ ಹಿಡಿದರೂ ಅವರು ಹಿಂಸೆ ಮಾಡಲಿಲ್ಲ, ಭಗತ್ ಸಿಂಗರು 'ಪಿಸ್ತೂಲು ಮತ್ತು ಬಾಂಬು ಎಂದಿಗೂ ಕ್ರಾಂತಿ ತರುವುದಿಲ್ಲ. ಬದಲಿಗೆ ವಿಚಾರಗಳ ಆಧಾರದಲ್ಲಿ ಕ್ರಾಂತಿ ಉಂಟಾಗುತ್ತದೆ' ಎಂದು ನಂಬಿದ್ದರು. ಭಗತ್ ಸಿಂಗ್ ಅವರು ಓರ್ವ ನಟರೂ ಆಗಿದ್ದರು. ರಾಣಾಪ್ರತಾಪರು, ಸಾಮ್ರಾಟ್ ಚಂದ್ರಗುಪ್ತ, ಭರತ ನ ಕುರಿತಾದ ನಾಟಕದಲ್ಲಿ ನಟನೆ ಮಾಡಿದ್ದ ಭಗತ್ ಸಿಂಗ್ ರಲ್ಲಿ ಅವರೆಲ್ಲರೂ ಆವಿರ್ಭವಿಸಿದ್ದರು ಎಂದೆನಿಸದೇ ಇರದು. ಅತ್ಯಂತ ಎಳೆ ವಯಸ್ಸಿನಲ್ಲೇ ಆತನನ್ನು ಅತಿಯಾಗಿ ಕಾಡಿದ್ದು ಜಲಿಯನ್ವಾಲಾ ಬಾಗ್ ಹತ್ಯಾಕಾಂಡ. ಜಲಿಯನ್ವಾಲಾಬಾಗ್ನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ ದೇಶವಾಸಿಗಳ ರಕ್ತದಿಂದ ತೊಯ್ದಿದ್ದ ಮಣ್ಣನ್ನು ತಂದು ಪೂಜಾಕೊಠಡಿಯಲ್ಲಿಟ್ಟು ಆರಾಧಿಸುತ್ತಿದ್ದರು ಭಗತ್ ಸಿಂಗ್. ಆಗ ಅವರಿಗೆ ಕೇವಲ 12 ವರ್ಷ. ಇನ್ನು ಅವರ ವಯಸ್ಸಿನ ಮಕ್ಕಳು ಆಟದಲ್ಲಿ ಮಗ್ನರಾಗಿದ್ದರೆ, ಬ್ರಿಟೀಷರನ್ನು ಭಾರತದಿಂದ ಹೊರದಬ್ಬುವ ಮಾತುಗಳನ್ನಾಡುತ್ತಿದ್ದ ಭಗತ್ ಸಿಂಗ್ ಜನ್ಮಜಾನ ದೇಶಪ್ರೇಮಿಯಾಗಿದ್ದರು. ಭಗತ್ ಸಿಂಗ್ ರಲ್ಲಿ ದೇಶಪ್ರೇಮ ಹಾಗೂ ಕ್ರಾಂತಿಯ ವಿಚಾರಗಳ ಹೊರತಾಗಿ ಭಾಷಾ ಪಾಂಡಿತ್ಯವನ್ನೂ ಗುರುತಿಸಬಹುದು. 23 ವರ್ಷಕ್ಕೇ ನೇಣಿಗೇರಿದ ಆ ಮಹಾತ್ಮ ಹಿಂದಿ, ಪಂಜಾಬಿ, ಉರ್ದು, ಇಂಗ್ಲಿಷ್, ಬಂಗಾಳಿ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಇಪ್ಪತ್ತರ ಆಸುಪಾಸಿನಲ್ಲೇ ಪಂಚಭಾಷೆಗಳಲ್ಲಿ ಪಾಂಡಿತ್ಯ ಸಾಧಿಸಿದ್ದರು. ಇಂತಹ ಜ್ನಾನಭಂಡಾರವನ್ನು ಹೊಂದಿದ್ದ ಅವರು ಸ್ವಾತಂತ್ರ್ಯಕ್ಕಾಗಿ ಚಿಕ್ಕವಯಸ್ಸಿನಲ್ಲೇ ನೇಣಿಗೇರದೇ, ವಿದೇಶಕ್ಕೆ ಹೋಗಿ ಬ್ಯಾರಿಸ್ಟರ್ ಪದವಿಯನ್ನೋ ಅಥವಾ ಉನ್ನತ ವ್ಯಾಸಂಗವನ್ನೋ ಮಾಡಿದ ನಂತರ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಬಹುದಿತ್ತು. ಆದರೆ ಆ ಯಾವ ಸ್ವಾರ್ಥವೂ ಅವರಿಗೆ ಬೇಕಾಗಿರಲಿಲ್ಲ.

ಸ್ವಾತಂತ್ರ್ಯ 'ತಂದುಕೊಟ್ಟ' ಕೆಲವರು ನ್ಯಾ.ಮಾರ್ಕಾಂಡೇಯ ಕಾಟ್ಜು ಅಂತಹ ಮಹನೀಯರ ಪಾಲಿಗೆ ಹಲವು ದಶಕಗಳ ನಂತರ ಬ್ರಿಟೀಷರ ಏಜೆಂಟರಂತೆ ಕಾಣಿಸಿಕೊಳ್ಳಬಹುದು. ಆದರೆ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಅರ್ಪಿಸಿದ ಮಹನೀಯರು ದೇಶಭಕ್ತರಾಗಲ್ಲದೇ ಭಾರತದ ಯಾವೊಬ್ಬ ನಾಗರಿಕನಿಗೂ ಎಂದಿಗೂ ಇನ್ನಾವುದೇ ರೂಪದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ.

ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಆ ಮಾಹಾನ್ ಚೇತನಗಳಿಗೆ ನಮನಗಳು.

 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited