Untitled Document
Sign Up | Login    
ಬೆಂಗಳೂರು ಕೆರೆಗಳು ವಿಷದ ಒಡಲುಃ ರಾಸಾಯನಿಕ ನೊರೆಗೆ ಬಿತ್ತು ಬೆಂಕಿ


ಹರಿಯುತ್ತಿರುವ ಕೆರೆಯ ನೀರಿಗೆ ಧಗ್ಗನೆ ಬೆಂಕಿ ಬಿಡ್ಡು ಹೊತ್ತಿ ಉರಿದ ಘಟನೆ ಕೇಳಿದ್ದೀರಾ. ಹೌದು. ಬೆಂಗಳೂರಿನ ವರ್ತೂರು ಕೆರೆಯಲ್ಲಿ ಇತ್ತೀಚೆಗೆ ಭಾರಿ ಪ್ರಮಾಣದ ವಿಷಕಾರಿ ನೊರೆ ಕಂಡು ಜನತೆ ಭಯಭೀತರಾಗಿರುವ ಬೆನ್ನಲ್ಲೇ ನಗರದ ಅತಿ ದೊಡ್ಡ ಕೆರೆ ಎಂದು ಹೆಸರು ಪಡೆದಿರುವ ಬೆಳ್ಳಂದೂರು ಅಮಾನಿ ಕೆರೆಯ ಕೋಡಿಯಲ್ಲಿ ಭಾರಿ ಪ್ರಮಾಣದ ವಿಷಕಾರಿ ನೊರೆ ಕಂಡಿದೆ ಅಲ್ಲದೇ, ಆ ಕೆರೆಗೆ ಬೆಂಕಿ ಹೊತ್ತಿಕೊಂಡಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಬೆಳ್ಳಂದೂರು- ಯಮಲೂರು ಬಳಿ ಇರುವ 891 ಎಕರೆ ಭಾರಿ ವಿಸ್ತೀರ್ಣದ ಅಮಾನಿ ಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದೆ. ಕಳೆದ 4 ವರ್ಷಗಳ ಹಿಂದೆ ಕೃಷಿ ಯೋಗ್ಯ ಮಟ್ಟದಲ್ಲಿದ್ದ ನೀರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿರ್ವಹಣಾ ಲೋಪದಿಂದ ಪ್ರಸ್ತುತ ಸಂಪೂರ್ಣ ಕಲುಷಿತಗೊಂಡಿದೆ.

ಕೆರೆಗೆ ನೀರು ಸೇರುವ ಮಾರ್ಗದಲ್ಲಿ ನೂತನವಾಗಿ ನಾಲ್ಕು ಕಾರ್ಖಾನೆಗಳು ತಲೆ ಎತ್ತಿವೆ. ಇದಲ್ಲದೇ ಅಪಾರ್ಟ್‌ ಮೆಂಟ್‌ಗಳು ಹಾಗೂ ವಸತಿ ಕಟ್ಟಡಗಳ ಶೌಚಾಲಯದ ನೀರು, ರಾಸಾಯನಿಕ ಹಾಗೂ ಮಾರ್ಜಕಗಳ ಪ್ರಮಾಣ ಹೆಚ್ಚಾಗಿ ಕೆರೆ ಕೋಡಿ ಬಳಿ ಭಾರಿ ಪ್ರಮಾಣದ ವಿಷಕಾರಿ ನೊರೆ ಉಂಟಾಗುತ್ತಿದೆ. ಎರಡು ಕೋಡಿ ಮಾರ್ಗದಲ್ಲಿ 1 ಕೋಡಿ ಮಾರ್ಗ ಬಿಬಿಎಂಪಿ ಕಾಮಗಾರಿ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್‌ ಮಾಡಿದ್ದು, ಮತ್ತೂಂದು ಕೋಡಿ ಮೇಲೆ ಒತ್ತಡ ಹೆಚ್ಚಾಗಿದೆ.

ಹೀಗಾಗಿ, ಇಲ್ಲಿ ಭಾರಿ ಪ್ರಮಾಣದ ನೊರೆ ಉತ್ಪತ್ತಿಯಾಗುತ್ತಿದ್ದು ರಾಸಾಯನಿಕಗಳಿಗೆ ಕಿಡಿ ತಾಗಿ ನೊರೆಗೆ ಬೆಂಕಿ ಹೊತ್ತಿಕೊಂಡಿದೆ.

ವರ್ತೂರು ಕೆರೆ ಸರಣಿಗೆ ಸೇರುವ ಈ ಕೆರೆಗೆ ಲಾಲ್‌ ಬಾಗ್‌ ಕೆರೆ, ನಾಗಸಂದ್ರ ಕೆರೆ, ಮಡಿವಾಳ ಕೆರೆ, ಅಗರಂ ಕೆರೆ, ಚೆನ್ನಘಟ್ಟ ಹಾಗೂ ಕೋರಮಂಗಲ ಕಾಲುವೆ, ಅಲಸೂರು ಕೆರೆ, ಬೆಳ್ಳಂದೂರು ಕೆರೆ ಮೂಲಕ ಹತ್ತಾರು ಕೆರೆಗಳಿಂದ ನೀರು ಸೇರುತ್ತದೆ.

ವರ್ತೂರು ಹಾಗೂ ಬೆಳ್ಳಂದೂರು ಕೆರೆ ಸರಣಿಯ ವ್ಯಾಪ್ತಿಯು ಬಿಬಿಎಂಪಿಗೆ ಇತ್ತೀಚೆಗೆ ಸೇರ್ಪಡೆಗೊಂಡಿರುವ ನಗರಸಭೆ ಹಾಗೂ ಪುರಸಭೆ ಪ್ರದೇಶದಲ್ಲಿದೆ. ಹೀಗಾಗಿ ಈ ಭಾಗದಲ್ಲಿ ಇನ್ನೂ ಒಳಚರಂಡಿ ಮಾರ್ಗ ಅಳವಡಿಕೆಯಾಗಿಲ್ಲ. ಹೀಗಾಗಿ, ಕೈಗಾರಿಕೆಗಳ ತ್ಯಾಜ್ಯ, ಮನೆಗಳಲ್ಲಿ ನಿತ್ಯ ಬಳಕೆಗೆ ಉಪಯೋಗಿಸುವ ಸೋಪು, ಶಾಂಪು, ಟಾಯ್ಲೆಟ್‌ ಕ್ಲೀನರ್‌ ಕೆಮಿಕಲ್ಸ್‌ಗಳಿಂದಾಗಿ ಫಾಸ್ಪೇಟ್‌, ನೈಟ್ರೇಟ್‌ಗಳ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ರಾಸಾಯನಿಕ ನೊರೆ ಉಂಟಾಗುತ್ತದೆ.

ಶೌಚಾಲಯದ ನೀರು ಹಾಗೂ ಕೈಗಾರಿಕೆಗಳ ಮಾರ್ಜಕದಿಂದ ನೊರೆ ಉಂಟಾಗುತ್ತಿದೆ. ಈ ಮಲಿನ ನೀರಿನಿಂದ "ಕೊಲಿಫಾರ್ಮ್' ಬ್ಯಾಕ್ಟೀರಿಯಾ ಅಂತರ್ಜಲಕ್ಕೆ ಸೇರಿ ಜನರು ವಿಷಮಜ್ವರ, ಮೂತ್ರಜನಕಾಂಗದ ವೈಫ‌ಲ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ಯಮಲೂರು ಕೆರೆ ಜಲಾನಯನ ವ್ಯಾಪ್ತಿಯಲ್ಲಿ ಸಾಕಷ್ಟು ಕೈಗಾರಿಕೆಗಳಿವೆ. ಅಲ್ಲದೇ ವಿಮಾನ ತಯಾರಿಕಾ ಕೈಗಾರಿಕೆಗಳೂ ಇವೆ. ಇವುಗಳಿಂದ ಬರುವ ತ್ಯಾಜ್ಯ ನೀರಿನಲ್ಲಿ ಪೆಟ್ರೋಲಿಯಂ, ಹೈಡ್ರೋಕಾರ್ಬನ್‌ ಅಂಶ ಹೆಚ್ಚಿದ್ದು, ನೇರವಾಗಿ ಕೆರೆ ಸೇರುತ್ತಿದೆ. ಈ ನೀರು ಕೋಡಿಯಲ್ಲಿ ಹರಿಯುವ ನೊರೆಯಾಗಿ ಪರಿವರ್ತನೆಯಾಗಿ ಗಡಸು ರೂಪ ಪಡೆಯುತ್ತದೆ. ಈ ವೇಳೆ ನೊರೆಗೆ ಬೆಂಕಿ ಕಿಡಿ ಬಿದ್ದರೆ ಬೆಂಕಿ ಹೊತ್ತಿಕೊಂಡು ಉರಿಯುತ್ತದೆ. ನೊರೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪ್ರಮಾಣ ಇರುವುದಿರಂದ ಸ್ಥಳೀಯರು ನೊರೆಗೆ ಬೆಂಕಿ ತಾಗದಂತೆ ಎಚ್ಚರ ವಹಿಸಬೇಕು ಎಂದು ಐಐಎಸ್‌ಸಿ ಪರಿಸರ ವಿಜ್ಞಾನ ಕೇಂದ್ರದ ಡಾ| ಟಿ.ವಿ.ರಾಮಚಂದ್ರ ಹೇಳುತ್ತಾರೆ.

ಬೆಳ್ಳಂದೂರು ಕೆರೆ ವಿಷದ ಓಡಲಾಗುತ್ತಿರುವುದು ಇಂದು ನಿನ್ನೆಯ ಕಠೆಯಲ್ಲ, ಇದಕ್ಕೆ 15-20 ವರ್ಷಗಳ ಇತಿಹಾಸವೇ ಇದೆ. ಇನ್ನು ನಗರದ ಬಹುತೇಕ ಕೆರೆಗಳು ಭವಿಷ್ಯದಲ್ಲಿ ರಾಸಾಯನಿಕ ನೊರೆ ಉಕ್ಕುವ ಸಾಧ್ಯತೆ ದಟ್ಟವಾಗಿದೆ.

ಅಂಚೇಪಾಳ್ಯ, ಲಕ್ಕೇನಹಳ್ಳಿ, ಯಲ್ಲಮ್ಮ, ವರ್ತೂರು, ಅಬ್ಬಿಗೆರೆ, ಕಮ್ಮಗೊಂಡನಹಳ್ಳಿ ಮಲ್ಲಸಂಧ್ರ ವಡೇರ ಹಳ್ಳಿ, ಬೇಗೂರು, ಮಡಿವಾಳ,ರಾಯಸಂಧ್ರ ಮೊದಲಾದ ಕೆರೆಗಳಲ್ಲಿ ಕೂಡ ರಾಸಾಯನಿಕದಿಂದ ನೊರೆ ಉಕ್ಕುವ ಭೀತಿ ಎದುರಾಗಿದೆ.

ಕೆರೆಗೆ ಬರುವ ನೀರು ಮತ್ತು ಹೊರಹೋಗುವ ನೀರನ್ನು ಶುದ್ಧೀಕರಣಗೊಳ್ಳದೇ ಇರುವುದರಿಂದ ಎಲ್ಲಾ ಬಗೆಯ ಅಪಾಯಕಾರಿ ಮತ್ತು ನೀರಿನಲ್ಲಿ ಕರಗದ ರಾಸಾಯನಿಕಗಳು ಕೆರೆಗಳಲ್ಲೇ ಶೇಖರಗೊಳ್ಳುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಕೆರೆಗಳು ಕೂಡ ವಿಷಪೂರಿತ ನೊರೆ ಸೃಷ್ಟಿಸುವ ಕೆರೆಗಳಾಗಿ ಮಾರ್ಪಾಡಾಗುವ ಸಾಧ್ಯತೆಯಿದೆ.

 

Author : ಸಂಗ್ರಹ ವರದಿ

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited