Untitled Document
Sign Up | Login    
ರೈತರಿಗೆ ವರದಾನ: ದೇಶದ ಅತಿ ದೊಡ್ಡ ಫುಡ್ ಪಾರ್ಕ್

ತುಮಕೂರಿನ ವಸಂತನರಸಾಪುರದ ಮೆಗಾಫುಡ್ ಪಾರ್ಕ್

ದೇಶದ ಅತಿ ದೊಡ್ಡ ಆಹಾರೋದ್ಯಾನ ಫುಡ್ ಪಾರ್ಕ್ ನ ಮೊದಲ ಘಟಕಕ್ಕೆ ಚಾಲನೆ ದೊರೆತಿದೆ. ತುಮಕೂರಿನ ವಸಂತನರಸಾಪುರದಲ್ಲಿ ಮೆಗಾಫುಡ್ ಪಾರ್ಕ್ ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. 11ನೇ ಪಂಚವಾರ್ಷಿಕ ಯೋಜನೆಯಡಿ ರೂಪಿಸಲಾದ ಈ ಫುಡ್ ಪಾರ್ಕ್ 100 ಕೋಟಿ ವೆಚ್ಚ, 110 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಬೃಹತ್ ಇಂಡಿಯಾ ಫುಡ್ ಪಾರ್ಕ್ ಆಗಿದೆ.

ದೇಶದಲ್ಲಿ ಈ ರೀತಿಯ 30 ಫುಡ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದ್ದು, ಈ ಪೈಕಿ 10ಕ್ಕೆ ಅನುಮೋದನೆ ದೊರೆತಿದೆ. ಇವುಗಳಲ್ಲಿ ತುಮಕೂರಿನದ್ದು ಮೊದಲನೆಯದ್ದಾಗಿದೆ. ಈ ಫುಡ್ ಪಾರ್ಕ್ ಗೆ ಸಧ್ಯ 250 ಕೋಟಿ ರೂ. ಹೂಡಿಕೆ ಮಾಡಲಾಗಿದ್ದು, ಮುಂದೆ 1000 ಕೋಟಿ ರೂ. ಗುರಿ ಹೊಂದಲಾಗಿದೆ.

12 ಜಿಲ್ಲೆಗಳ ವ್ಯಾಪ್ತಿಯ ರೈತರಿಂದ ಹಣ್ಣು, ತರಕಾರಿ, ಧಾನ್ಯ ಸಂಗ್ರಹಿಸಿ ಸಿದ್ಧ ಆಹಾರ ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. 250 ಟನ್ ಹಣ್ಣು, ತರಕಾರಿ ಸಂಗ್ರಹಕ್ಕೆ ಫ್ರೀಜರ್ ಸೌಲಭ್ಯವಿದ್ದು, ಪ್ರತಿ ದಿನ 6-7 ಟನ್ ಸಿದ್ಧ ಆಹಾರ ತಯಾರಿಸುವ ಗುರಿ ಹೊಂದಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 50 ಕೋಟಿ ರೂ. ಸಬ್ಸಿಡಿ ನೀಡಿದೆ. ಈ ಫುಡ್ ಪಾರ್ಕ್ ನಿಂದ 10 ಸಾವಿರ ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಯ ನಿರೀಕ್ಷೆಯಿದೆ.

ಆಹಾರ ದಾಸ್ತಾನಿನ ಸೌಲಭ್ಯ ದೇಶದಲ್ಲಿ ಇನ್ನೂ ಸುಧಾರಣೆಯಾಗಿಲ್ಲ, ಹಣ್ಣು, ತರಕಾರಿ, ಬೇಳೆಕಾಳು ಸೇರಿದಂತೆ ಇತರೆ ಆಹಾರಗಳು ಬೆಳೆಯುವ ರೈತರಿಂದ ಗ್ರಾಹಕರಿಗೆ ತಲುಪುವಷ್ಟರಲ್ಲೇ ವಾರ್ಷಿಕ 13,300 ಕೋಟಿ ರೂ ನಷ್ಟು ಹೋಗುತ್ತಿವೆ. ಶೀತಲ ದಾಸ್ತಾನು ಮಾಡಬಹುದಾದ ಪ್ರಮಾಣ ಶೇ.32ರಷ್ಟು ಮಾತ್ರ ಇದ್ದು, ಇದರ ಅಗತ್ಯವನು ಶೇ.61ಕ್ಕಿಂತಲೂ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ 42 ಫುಡ್ ಪಾರ್ಕ್ ಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಪ್ರತಿ ಫುಡ್ ಪಾರ್ಕ್ ಗಳ ಸ್ಥಾಪನೆಗೆ ಸುಮಾರು 125 ಕೋಟಿ ರೂ.ಗಳ ಬಂಡವಾಳ ತೊಡಗಿಸಲಾಗುತ್ತಿದ್ದು, ಅವುಗಳಲ್ಲಿ 10 ಫುಡ್ ಪಾರ್ಕ್ ಗಳ ನಿರ್ಮಾಣ ಕಾರ್ಯ ವಿವಿಧ ರಾಜ್ಯಗಳಲ್ಲಾಗುತ್ತಿದ್ದು, ತುಮಕೂರಿನದ್ದು ಮೊದಲನೇಯದ್ದಾಗಿದೆ.

ವಿಶ್ವಮಟ್ಟದ ಅತ್ಯುತ್ತಮ ಆಧುನಿಕ ಯಂತ್ರೋಪಕರಣಗಳನ್ನು ಈ ಫುಡ್ ಪಾರ್ಕ್ ಹೊಂದಿದೆ. ಇದರೊಂದಿಗೆ ಮಾರುಕಟ್ಟೆ ಪ್ರಕ್ರಿಯೆಗಳಿಗೆ ಪ್ಯಾಕಿಂಗ್, ವಿದೇಶಗಳಿಗೆ ರಫ್ತು ಮಾಡುವ ಸೌಲಭ್ಯಗಳನ್ನು ಹೊಂದಿದೆ. ರೈತರ ಹೊಲದಿಂದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ, ಬೇಗನೇ ಹಾಳಾಗುವ ಕೃಷಿ ಉತ್ಪನ್ನಗಳನ್ನು ಶೈತ್ಯಲೀಕರಣ ಘಟಕಗಳಲ್ಲಿ ಸಂರಕ್ಷಿಸಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದಾಗಿದೆ.

ರೈತರ ಮನೆ ಬಾಗಿಲಿನ ಬಳಿಯೇ ಅವರು ಬೆಳೆದ ಬೆಳೆಗಳನ್ನು ಸೂಕ್ತ ಬೆಲೆ ನೀಡಿ ಖರೀದಿಸುವ ಹಾಗೂ ರೈತರಿಗೆ ಆದಾಯ ತರಬಲ್ಲ ತಳಿಗಳನ್ನು ಪರಿಚಯಿಸಿ ಅವುಗಳನ್ನು ಬೆಳೆಯುವಂತೆ ಮಾಡಿ ಅವುಗಳಿಗೆ ಮಾರುಕಟ್ಟೆ ಕಲ್ಪಿಸುವ ಯೋಜನೆಯನ್ನು ಈ ಫುಡ್ ಪಾರ್ಕ್ ಹೊಂದಿದೆ. ರೈತರ ಹೊಲದಿಂದಲೇ ಆಹಾರ ಬೆಳೆ ಸಂಗ್ರಹಿಸಿ, ಶೇಖರಣೆ, ಸಂಸ್ಕರಣೆ, ಪರೀಕ್ಷೆ, ಪ್ಯಾಕೇಜಿಂಗ್ ಹಾಗೂ ಮಾರುಕಟ್ಟಗೆ ತಲುಪಿಸುವ ಕೆಲಸ ಫುಡ್ ಪಾರ್ಕ್ ನಿಂದಲೇ ಆಗುತ್ತದೆ.

ತುಮಕೂರಿನ ಫುಡ್ ಪಾರ್ಕ್ ನಿಂದಾಗಿ ಸುತ್ತಮುತ್ತಲ 200 ಕಿ.ಮೀ ವ್ಯಾಪ್ತಿಯಲ್ಲಿನ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳ ರೈತರಿಗೆ ಪ್ರಯೋಜನವಾಗಲಿದೆ. ಇದರಿಂದ ಸ್ಥಳೀಯ ಮಟ್ಟದಿಂದಲೂ ಆಹಾರ ಶೇಖರಣೆ, ಪೂರೈಕೆ, ರವಾನೆಗೆ ನೆರವಾಗಲಿದೆ.

 

Author : ಲೇಖಾ ರಾಕೇಶ್ .

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited