Untitled Document
Sign Up | Login    
ಬರದ ನಾಡಿಗೆ ಹರಿಯಲಿರುವ ಕೃಷ್ಣಾ: 2. 85 ಲಕ್ಷ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ


ಉತ್ತರ ಕರ್ನಾಟಕದ ತ್ರಿವಳಿ ಜಿಲ್ಲೆಗಳಾದ ಕೊಪ್ಪಳ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಕೃಷ್ಣೆ ಹರಿಯಲು ಸಜ್ಜಾಗುತ್ತಿದ್ದಾಳೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಲ್ಲಿನ ಕೊಪ್ಪಳ ಏತ ನೀರಾವರಿ ಯೋಜನೆಯ ಮೂಲಕ ಈ ತ್ರಿವಳಿ ಜಿಲ್ಲೆಗಳ 2. 85 ಲಕ್ಷ ಎಕರೆ ಪ್ರದೇಶಕ್ಕೆ ಕೃಷ್ಣೆ ಹರಿಯಲು ಸಿದ್ಧವಾಗುತ್ತಿದ್ದಾಳೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾನದಿ ಹರಿಯುತ್ತಿದ್ದರೂ, ಅಲ್ಲಿನ ಬಾದಾಮಿ, ಹುನಗುಂದ ಸೇರಿದಂತೆ ವಿವಿಧೆಡೆ ನೀರಿಗೆ ಬರವಿದೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾನದಿ ಇದ್ದರೂ, ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ಭಾಗಶಃ ಪ್ರದೇಶಗಳಿಗೆ ಮಾತ್ರ ನೀರಾವರಿ ಇದೆ. ಉಳಿದಂತೆ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ ರೈತರು ಹೆಚ್ಚಾಗಿ ಮಳೆಯನ್ನೇ ಆಶ್ರಯಿಸಿದ್ದಾರೆ. ಇನ್ನು ಗದಗ ಜಿಲ್ಲೆಯಲ್ಲೂ ಬಹುತೇಕ ರೈತರು ಮಳೆರಾಯನ ಕೃಪೆಗಾಗಿ ಕಾಯುವುದೇ ಹೆಚ್ಚು. ಈ ತ್ರಿವಳಿ ಜಿಲ್ಲೆಗಳ ಸ್ಥಿತಿ ಹೀಗಿರುವಾಗ, ಇನ್ನು ಈ ಭಾಗದಲ್ಲಿ ಕೃಷ್ಣೆ ಹರಿದು ಬಂದು, ಸಮೃದ್ಧ ಫಸಲಿನ ಕನಸು ನನಸಾಗಲಿದೆ ಎನ್ನುವ ಸಂಗತಿ ರೈತರ ಸಂತಸಕ್ಕೆ ಕಾರಣವಾಗಿದ್ದು, ಕೊಪ್ಪಳ ಏತ ನೀರಾವರಿ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ.

ಏನಿದು ಕೊಪ್ಪಳ ಏತ ನೀರಾವರಿ ಯೋಜನೆ ?:

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಿರುವ ಕರ್ನಾಟಕ ಸರ್ಕಾರ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ- 3 ರಲ್ಲಿ ನಾರಾಯಣಪೂರ ಜಲಾಶಯದಿಂದ ಕೊಪ್ಪಳ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸುವ ಉಪ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗಾಗಿ 12. 815 ಟಿ.ಎಂ.ಸಿ. ನೀರು ಹಂಚಿಕೆ ಮಾಡಲಾಗಿದೆ. ಈ ನೀರನ್ನು ಬಳಸಿಕೊಂಡು ತ್ರಿವಳಿ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸುವ ಯೋಜನೆಯೇ ’ಕೊಪ್ಪಳ ಏತ ನೀರಾವರಿ ಯೋಜನೆ’. ಈ ಯೋಜನೆಯಡಿ 12. 815 ಟಿ.ಎಂ.ಸಿ. ನೀರನ್ನು ಬಳಸಿ ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆ ಅಂದರೆ ಕಾಲುವೆ ಜಾಲದ ಮೂಲಕ ಹೆಚ್ಚಿನ ಪ್ರದೇಶಗಳಿಗೆ ನೀರಾವರಿ ಕಲ್ಪಿಸಲು ಸಾಧ್ಯವಿಲ್ಲ. ಅಲ್ಲದೆ ಇದರಿಂದ ನೀರು ವ್ಯರ್ಥವಾಗುವುದೇ ಹೆಚ್ಚು, ಎಂಬುದನ್ನು ಮನಗಂಡ ತಜ್ಞರು, ಇದಕ್ಕೆ ಬದಲಾಗಿ ಆಧುನಿಕ ತಂತ್ರಜ್ಞಾನದಲ್ಲಿ ’ಸೂಕ್ಷ್ಮ ನೀರಾವರಿ ವ್ಯವಸ್ಥೆ’ ಅಂದರೆ ತುಂತುರು ನೀರಾವರಿ ಯೋಜನೆ (ಮೈಕ್ರೋ ಇರಿಗೇಷನ್) ಅಳವಡಿಸಲು ಯೋಜನೆ ರೂಪಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ.

ಫಲಾನುಭವಿ ತಾಲೂಕುಗಳು : ಬರಪೀಡಿತ ಪ್ರದೇಶಗಳಿಗೆ ವರದಾನವಾಗಲಿರುವ ಕೊಪ್ಪಳ ಏತ ನೀರಾವರಿ ಯೋಜನೆಯಿಂದ ಸುಮಾರು 2. 85 ಲಕ್ಷ ಎಕರೆ ಜಮೀನು ನೀರಾವರಿಗೆ ಒಳಪಡಲಿದ್ದು, ಬಾಗಲಕೋಟೆ ಜಿಲ್ಲೆಯ ಹುನಗುಂದ ಹಾಗೂ ಬಾದಾಮಿ ತಾಲೂಕುಗಳು. ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ಕನಕಗಿರಿ ಭಾಗದ ಪ್ರದೇಶಗಳು. ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಜಮೀನಿಗೂ ಕೃಷ್ಣೆ ಹರಿಯಲಿದ್ದಾಳೆ. ಕೃಷ್ಣಾ ಭಾಗ್ಯ ಜಲ ನಿಗಮವು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.


ಯೋಜನೆಯ ತಾಂತ್ರಿಕತೆ : ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಎರಡು ಹಂತಗಳಲ್ಲಿ 1050 ಕೋಟಿ ರೂ. ಮೊತ್ತದ ’ಟರ್ನ್ ಕೀ’ ಆಧಾರದ ಮೇಲೆ ಅನುಷ್ಠಾನಗೊಳಿಸಲಾಗುತ್ತಿದ್ದು, ಈಗಾಗಲೆ ಕಾಮಗಾರಿ ಪ್ರಾರಂಭಗೊಂಡಿದೆ. ಮೊದಲನೆ ಹಂತದಲ್ಲಿ ಕೃಷ್ಣಾ ನದಿಯಿಂದ 510 ಮೀ. ಇನ್‌ಟೆಕ್ ಕಾಲುವೆಯಿಂದ ಮೊದಲನೆ ಜಾಕ್‌ವೆಲ್ ಅಂದರೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮರೋಳ ಗ್ರಾಮದ ಹತ್ತಿರ ಆರ್.ಎಲ್. 486 ಮೀ. ನಿಂದ ಆರ್.ಎಲ್. 580 ಮೀ. ವರೆಗೆ ಇನ್‌ಟೆಕ್ ಕಾಲುವೆ ನಿರ್ಮಾಣಗೊಂಡು, ಜಾಕ್‌ವೆಲ್/ಪಂಪ್‌ಹೌಸ್ ನಿರ್ಮಾಣವಾಗಲಿದೆ. 21 ಕಿ.ಮೀ. ಉದ್ದದ 3. 09 ಮೀ. ವ್ಯಾಸದ ಕಬ್ಬಿಣದ ಜೋಡಿ ಏರು ಕೊಳವೆಗಳನ್ನು ಅಳವಡಿಸಲಾಗುವುದು. ಆರ್.ಎಲ್. 580 ರ ಸ್ಥಳದಲ್ಲಿ ಮೊದಲನೆ ವಿತರಣಾ ತೊಟ್ಟಿ-1 ಅನ್ನು ’ಟರ್ನ್‌ಕೀ’ ಆಧಾರದಲ್ಲಿ ಸುಮಾರು 692 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೆ ಜೋಡಿ ಏರು ಕೊಳವೆಗಳ ಜೋಡಣಾ ಕಾರ್ಯ ಪ್ರಾರಂಭಗೊಂಡಿದೆ. ಎರಡನೆ ಹಂತದಲ್ಲಿ ವಿತರಣಾ ತೊಟ್ಟಿ-1 ರಿಂದ ಹುನಗುಂದ ತಾಲೂಕಿನ ಬಲಕುಂದಿ ತಾಂಡಾ ಹತ್ತಿರದ ಜಾಕ್‌ವೆಲ್-2 ವರೆಗೆ ಕಾಲುವೆ ನಿರ್ಮಾಣ ಮಾಡುವುದರ ಜೊತೆಗೆ ಜಾಕ್‌ವೆಲ್-2 ರಿಂದ ಆರ್.ಎಲ್. 660 ಮೀ. ಸ್ಥಳದಲ್ಲಿ ವಿತರಣಾ ತೊಟ್ಟಿ-2 ಅನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದ ಬಳಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೂ ಸಹ 3 ಮೀ. ವ್ಯಾಸದ ಕಬ್ಬಿಣದ ಜೋಡಿ ಏರು ಕೊಳವೆಗಳನ್ನು ಜೋಡಿಸಲಾಗುತ್ತಿದೆ. ಈ ಕಾಮಗಾರಿಯ ಮೊತ್ತ 386. 45 ಕೋಟಿ ರೂ. ಅಂದಾಜು ಮಾಡಲಾಗಿದೆ. ಮೊದಲನೆ ಹಂತ ಹಾಗೂ ಎರಡನೆ ಹಂತದ ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಕಾಮಗಾರಿ ಭರದಿಂದ ಸಾಗಿದೆ. ನೀರಿನ ಲಿಫ್ಟ್ ಕಾರ್ಯಕ್ಕಾಗಿ 9269 ಹೆಚ್.ಪಿ. ಸಾಮರ್ಥ್ಯದ 5 ಪಂಪಿಂಗ್ ಮೋಟಾರ್‍ಸ್ ಹಾಗೂ 7865 ಹೆಚ್.ಪಿ. ಸಾಮರ್ಥ್ಯದ 7 ಪಂಪಿಂಗ್ ಮೋಟಾರ್‍ಸ್ ಅಳವಡಿಕೆಗೆ ಸಿದ್ಧತೆಗಳು ನಡೆದಿವೆ.

ಉಪಗ್ರಹ ತಂತ್ರಜ್ಞಾನದಲ್ಲಿ ಸಮೀಕ್ಷೆ :
ಈ ಯೋಜನೆಯಡಿ ಸೂಕ್ಷ್ಮ ನೀರಾವರಿ ವ್ಯವಸ್ಥೆ (ಮೈಕ್ರೋ ಇರಿಗೇಷನ್) ಅಳವಡಿಕೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿ, ನೀರಾವರಿಗೆ ಒಳಪಡುವ ಕ್ಷೇತ್ರವನ್ನು ಗುರುತಿಸಿ ವಿತರಣಾ ಜಾಲದ ಸಮೀಕ್ಷೆಗಾಗಿ ಉಪಗ್ರಹದ ನೆರವು ಪಡೆಯಲಾಗುತ್ತಿದೆ. ಉಪಗ್ರಹವು ಡಿಸೆಂಬರ್-2014 ರ ಹೊತ್ತಿಗೆ ಈ ಪ್ರದೇಶಗಳ ಮೂಲಕ ಹಾದು ಹೋಗಲಿದ್ದು, ಅದೇ ಸಮಯದಲ್ಲಿ ಸೂಕ್ಷ್ಮ ನೀರಾವರಿ ವಿತರಣಾ ಜಾಲದ ಸಮೀಕ್ಷೆ ಕೈಗೊಳ್ಳಲು ಯೋಜಿಸಲಾಗಿದೆ. ಈಗಾಗಲೆ ಉನ್ನತ ಮಟ್ಟದ ಅಧಿಕಾರಿಗಳು ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಸಮೀಕ್ಷೆ ಕಾಲಕ್ಕೆ ವಿತರಣಾ ಜಾಲದ ಕಾರ್ಯ, ವಿನ್ಯಾಸ, ನಕ್ಷೆ ಇತ್ಯಾದಿಗಳ ತಯಾರಿಕೆಗೆ ಬೆಂಗಳೂರಿನ ಇ.ಐ. ಟೆಕ್ನಾಲಜೀಸ್ ಸಂಸ್ಥೆಗೆ ಹೊಣೆಗಾರಿಕೆ ನೀಡಲಾಗಿದೆ. ಮಹತ್ವದ ವಿಷಯವೆಂದರೆ, ಹುನಗುಂದಾದಿಂದ ಬಲಕುಂದಿ ತಾಂಡಾ ವರೆಗೆ ಸುಮಾರು 10 ಕಿ.ಮೀ. ಇನ್‌ಟೇಕ್ ಪೀಡರ್ ಕಾಲುವೆ ನಿರ್ಮಾಣವಾಗುತ್ತಿದ್ದು, ಈ 10 ಕಿ.ಮೀ. ಕಾಲುವೆಯ ಮೇಲ್ಭಾಗದಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸುವ ಯೋಜನೆ ಮೂಲಕ ಸುಮಾರು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವಂತಹ 115 ಕೋಟಿ ರೂ. ವೆಚ್ಚದ ಮಹತ್ವದ ಯೋಜನೆ ರೂಪಿಸಲಾಗಿದೆ.

ಅಂದುಕೊಂಡಂತೆ ಎಲ್ಲವೂ ನಡೆದರೆ, ನಾಲ್ಕು ವರ್ಷದೊಳಗೆ ಯೋಜನೆಯ ಎಲ್ಲ ಕಾಮಗಾರಿ ಪೂರ್ಣಗೊಂಡು, ತ್ರಿವಳಿ ಜಿಲ್ಲೆಯ ರೈತರ ಜಮೀನಿಗೆ ಕೃಷ್ಣೆ ಹರಿಯಲಿದ್ದು, ಬರಪೀಡಿತ ಪ್ರದೇಶಗಳ ರೈತರ ಸಮೃದ್ಧ ಫಸಲಿನ ಕನಸು ನನಸಾಗಲಿದೆ.

 

Author : ಲೇಖಾ ರಾಕೇಶ್ .

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited