Untitled Document
Sign Up | Login    
ದಾಳಿಂಬೆ ಬೆಳೆಗೆ ದಾಳಿಯಿಡುವ ಹಣ್ಣು ಕೊಳೆ ರೋಗ ನಿವಾರಣಾ ಕ್ರಮ


ಚರ್ಮವ್ಯಾದಿ, ಶೂಲಬಾಧೆ, ಮತ್ತಿತರ ರೋಗಗಳಿಗೆ ರಾಮಬಾಣದಂತಿರುವ ದಾಳಿಂಬೆ ಹಣ್ಣಿಗೆ ಕೊಳೆ ರೋಗ/ ಕಜ್ಜಿರೋಗ ದಾಳಿಯಿಟ್ಟಾಗ ರೈತ ಕಂಗಾಲಾಗುವುದು ಸಹಜ. ಸಾಮಾನ್ಯವಾಗಿ ಬೇಸಿಗೆ ನಂತರ ಆರಂಭವಾಗುವ ಮಳೆಗಾಲದಲ್ಲಿ ದಾಳಿಂಬೆಹಣ್ಣಿನಲ್ಲಿ ಕಂಡುಬರುವ ರೋಗವೇ ಈ ಹಣ್ಣು ಕೊಳೆ ರೋಗ ಅಥವಾ ಅಂಥ್ರಾಕ್ನೋಸ್. ಈ ರೋಗ ಲಕ್ಷಣಗಳು ಹಾಗೂ ರೋಗನಿವಾರಣಾ ಕ್ರಮಗಳ ಪರಿಚಯವೇ ಈ ಲೇಖನ.

ರೋಗಲಕ್ಷಣಗಳು :- ದಾಳಿಂಬೆ ಹಣ್ಣಿನ ಮೇಲೆ ಬೇಸಿಗೆ ನಂತರದ ಮೊದಲ ಮಳೆ ಹನಿಗಳು ಬಿದ್ದ ಕೂಡಲೇ ಕಪ್ಪು ಮಚ್ಚೆಗಳು ಕಾಣಲು ಶುರುವಾಗುತ್ತದೆ. ಇದೊಂದು ಶಿಲೀಂಧ್ರದಿಂದ ಬರುವ ರೋಗವಾಗಿದ್ದು, ಕಾಯಿ, ಎಲೆ, ಹಣ್ಣುಗಳ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ಸಣ್ಣ ಮಚ್ಚೆಗಳು ಕಂಡು ಬರುತ್ತವೆ. ಈ ಮಚ್ಚೆಗಳು ಬರು ಬರುತ್ತಾ ದೊಡ್ಡದಾಗುತ್ತಾ ಇಡೀ ಹಣ್ಣು ಕೊಳೆಯಲು ಪ್ರಾರಂಭವಾಗುತ್ತದೆ.

ಹಣ್ಣಿನ ಮೇಲೆ ಈ ಕಪ್ಪು ಮಚ್ಚೆಗಳಿದ್ದರೆ ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ದೊರೆಯದೆ 1 ಕೆ.ಜಿ. ಹಣ್ಣಿಗೆ 80 ರೂ. ನಿಂದ 100 ರೂ.ಗೆ ಮಾರಬೇಕಾದ ಹಣ್ಣನ್ನು 20ರಿಂದ 30 ರೂ.ಗೆ ಮಾರುವ ಪರಿಸ್ಥಿತಿ ಬರುತ್ತದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆಸಿದವರು ಇದರಿಂದ ಹತಾಶರಾಗುವ ಸಂಭವ ಬರುತ್ತದೆ. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ರೋಗ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಅಂಥ್ರಾಕ್ನೋಸ್ ರೋಗ ತಡೆಗಟ್ಟಬಹುದಾಗಿದೆ.

ರೋಗ ನಿರ್ವಹಣಾ ಕ್ರಮ :- ದಾಳಿಂಬೆ ಹಣ್ಣಿನಲ್ಲಿ ಈ ರೋಗ ಕಂಡು ಬಂದ ಕೂಡಲೇ ತೋಟದಲ್ಲಿ ಕಳೆಯನ್ನು ಸ್ವಚ್ಚಗೊಳಿಸಿ ನೆಲಕ್ಕೆ ತಾಗಿರುವ ಕೊಂಬೆಗಳನ್ನು ಕತ್ತರಿಸಬೇಕು ಅಥವಾ ಮೇಲಕ್ಕೆ ಎತ್ತಿ ಕಟ್ಟಬೇಕು.

ರೋಗ ತಗಲಿದ ಕಾಯಿಗಳನ್ನು ಕಿತ್ತು ಸುಟ್ಟು, ಪ್ರತಿ ಲೀಟರ್ ನೀರಿಗೆ 1 ಗ್ರಾಂ ಥಯೋಫಿನೇಟ್ ಮಿಥೈನ್ ಅಥವಾ 2 ಗ್ರಾಂ ಕ್ಲೋರೊಥಲೋನಿಲ್ ಅಥವಾ 2 ಗ್ರಾಂ ಮ್ಯಾಂಕೊಜೆಬ್ ಬೆರೆಸಿ ಸಿಂಪಡಿಸುವ ಮೂಲಕ ರೋಗ ನಿವಾರಣೆಗೆ ಮಾರ್ಗೋಪಾಯ ಕಂಡುಕೊಳ್ಳಬಹುದು.

ಜಿಲ್ಲೆಯ ನಿಟ್ಟೂರು ಹೋಬಳಿ ಕಳ್ಳೇನಹಳ್ಳಿ ಗ್ರಾಮದ ಗಂಗಾಧರಯ್ಯ ಅವರು ಈ ರೋಗ ನಿರ್ವಹಣಾ ವಿಧಾನವನ್ನು ಅನುಸರಿಸಿದವರಲ್ಲೊಬ್ಬರು. ಇವರು ತಮ್ಮ 5 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದಿದ್ದು, ಸಸಿಗೆ ಆಧಾರ ಕಡ್ಡಿ ಕೊಡುತ್ತಿದ್ದಾಗ ಮಳೆ ಪ್ರಾರಂಭವಾಯಿತು. ಮಳೆ ಆರಂಭವಾದ 4 ದಿನಗಳ ನಂತರ ದಾಳಿಂಬೆ ಹಣ್ಣುಗಳಿಗೆ ಕಪ್ಪು ಚುಕ್ಕೆ ಆವರಿಸಿರುವುದು ಕಂಡು ಬಂದಿದ್ದರಿಂದ ಕಪ್ಪು ಚುಕ್ಕೆ ಆವರಿಸಿದ ಸುಮಾರು 2,000 ಕೆ.ಜಿ. ಹಣ್ಣುಗಳನ್ನು ಕಿತ್ತು ಸುಟ್ಟು ಹಾಕಬೇಕಾಯಿತು. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ರೋಗದ ಬಗ್ಗೆ ಸುಳಿವು ಸಿಕ್ಕ ಕೂಡಲೇ ಮುಂಜಾಗ್ರತೆ ಕ್ರಮ ಕೈಗೊಂಡು ರೋಗ ನಿವಾರಣಾ ಕ್ರಮ ಅನುಸರಿಸಿ ಉತ್ತಮ ದಾಳಿಂಬೆ ಬೆಳೆ ಬೆಳೆಯುವುದು ಸೂಕ್ತ.

ದಾಳಿಂಬೆ ಹಣ್ಣಿಗೆ ತಗಲುವ ಕಜ್ಜಿ ರೋಗದ ಗುಣಲಕ್ಷಣಗಳು ಮತ್ತು ರೋಗ ನಿರ್ವಹಣಾ ಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ತುಮಕೂರು ತೋಟಗಾರಿಕಾ ಉಪನಿರ್ದೇಶಕರ ಕಛೇರಿ ಆವರಣದಲ್ಲಿರುವ ಹಾರ್ಟಿ ಕ್ಲಿನಿಕ್‌ನ ವಿಷಯತಜ್ಞ ರಾಮಚಂದ್ರ ಹೆಗಡೆ (ಮೊ. 9980290951) ಅವರನ್ನು ಸಂಪರ್ಕಿಸಬಹುದಾಗಿದೆ.

ವರದಿ :- ಆರ್. ರೂಪಕಲಾ.
ವಾರ್ತಾ ಇಲಾಖೆ, ತುಮಕೂರು

 

Author : ಆರ್. ರೂಪಕಲಾ. .

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited