Untitled Document
Sign Up | Login    
ಬತ್ತುತ್ತಿದೆ ಅಂತರ್ಜಲ: ದೇಶದಲ್ಲಿ ಉಂಟಾಗಲಿದೆ ಜಲಕ್ಷಾಮ

ಬರಲಿದೆಯೆ ಜಲಕ್ಷಾಮ ?

ಒಂದೆಡೆ ಬಿಸಿಲಿನ ಝಳ, ಇನ್ನೊಂದೆಡೆ ಕುಡಿಯುವ ನೀರಿನ ಸಮಸ್ಯೆ.. ಇವುಗಳ ಮಧ್ಯೆ ಭಾರತದಲ್ಲಿ ನೀರಿನ ಪೂರೈಕೆ ಹಾಗೂ ಬೇಡಿಕೆ ನಡುವಣ ವ್ಯತ್ಯಾಸ ಮಿತಿ ಮೀರಿದ ಪ್ರಮಾಣದಲ್ಲಿ ಹೆಚ್ಚಾಗಲಿದ್ದು, 2025ರ ವೇಳೆಗೆ ದೇಶದಲ್ಲಿ ನೀರಿಗೆ ಕೊರತೆ ಉಂಟಾಗಲಿದೆ ಎಂದು ಅಧ್ಯಯನ ಸಂಸ್ಥೆ ಎಚ್ಚರಿಸಿದೆ.

ಜಲ ಕ್ಷೇತ್ರದ ಪ್ರಮುಖ ಅಧ್ಯಯನ ಸಂಸ್ಥೆ ಎವರಿಥಿಂಗ್ ಅಬೌಟ್ ವಾಟರ್ ಎಂಬ ಸಂಸ್ಥೆ ಜಲ ಕ್ಷಾಮದ ಕುರಿತು ಅಧ್ಯಯನ ನಡೆಸಿದ್ದು, ನೀರಾವರಿಗಾಗಿ ಶೇ.70 ಹಾಗೂ ಗೃಹೋಪಯೋಗಿ ಬಳಕೆಗಾಗಿ ಶೇ.80ರಷ್ಟು ಮಂದಿ ಅಂತರ್ಜಲವನ್ನು ಅವಲಂಬಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ ಎಂದು ತಿಳಿಸಿದೆ.

ಜನರ ಆದಾಯ ಹೆಚ್ಚಳ, ಸೇವಾ ಮತ್ತು ಕೈಗಾರಿಕಾ ವಲಯಗಳ ಕೊಡುಗೆ ಹೆಚ್ಚಿರುವ ಹಿನ್ನೆಲೆಯಲ್ಲಿ ಗೃಹೋಪಯೋಗಿ, ಕೈಗಾರಿಕಾ ವಲಯಕ್ಕೆ ಬೇಕಾದ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಿದೆ.

ಭಾರತದಲ್ಲಿ ನೀರಿನ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರೀ ವ್ಯತ್ಯಾಸವು ಅಂತಾರಾಷ್ಟ್ರೀಯ ಕಂಪನಿಗಳಿಗೆ ಬಂಡವಾಳ ಹೂಡಿಕೆಗೆ ದೊಡ್ಡ ಅವಕಾಶವನ್ನು ಒದಗಿಸಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಜಲ ಕ್ಷೇತ್ರದಲ್ಲಿ ಕೆನಡಾ, ಇಸ್ರೇಲ್‌, ಜರ್ಮನಿ, ಇಟಲಿ, ಅಮೆರಿಕ, ಚೀನಾ ಹಾಗೂ ಬೆಲ್ಜಿಯಂನಂತಹ ದೇಶಗಳಿಂದ 82 ಸಾವಿರ ಕೋಟಿ ರೂ. ಹೂಡಿಕೆಯಾಗುವ ನಿರೀಕ್ಷೆ ಇದೆ. ಅದರಲ್ಲೂ ಮುಂದಿನ ಮೂರು ವರ್ಷಗಳಲ್ಲಿ 18 ಸಾವಿರ ಕೋಟಿ ರೂ. ಹರಿದುಬರುವ ಸಂಭವ ಇದೆ.

2020ರ ವೇಳೆಗೆ ಭಾರತದಲ್ಲಿ ನೀರಿನ ಬೇಡಿಕೆ ತೀವ್ರಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಜಲನಿರ್ವಹಣೆ, ನೀರಿನ ಮರುಬಳಕೆ ಕ್ಷೇತ್ರದಲ್ಲಿ ಈ ಹಣ ಹೂಡಿಕೆಯಾಗುವ ನಿರೀಕ್ಷೆ ಇದೆ ಎಂದು ಅಧ್ಯಯನ ತಿಳಿಸಿದೆ.

ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಂಗಾ ನದಿ ಶುದ್ಧೀಕರಣ, ಸ್ಮಾರ್ಟ್‌ಸಿಟಿ ಮತ್ತು ಸ್ವತ್ಛ ಭಾರತದಂಥ ಯೋಜನೆಗಳಿಗೆ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಜಲ ಕ್ಷೇತ್ರ ವಿದೇಶಿ ಕಂಪನಿಗಳ ನೆಚ್ಚಿನ ಹೂಡಿಕೆಯ ತಾಣವಾಗಿ ತೆರೆದುಕೊಂಡಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಜಲ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯಲ್ಲಿ ಮಹಾರಾಷ್ಟ್ರ, ಇಡೀದೇಶದಲ್ಲಿಯೇ ಮುಂಚೂಣಿ ಪ್ರದೇಶವಾಗಿ ಹೊರಹೊಮ್ಮಲಿದೆ. ಈಗಾಗಲೇ 12 ಅಂತಾರಾಷ್ಟ್ರೀಯ ಕಂಪನಿಗಳು ಇಲ್ಲಿ ತಮ್ಮ ವಿನ್ಯಾಸ ಮತ್ತು ಎಂಜಿನಿಯರ್‌ ಕೇಂದ್ರಗಳನ್ನು ತೆರೆದಿವೆ ಎಂದು ವರದಿ ಹೇಳಿದೆ.

ಭಾರತದಲ್ಲಿ ನೀರಿಗಾಗಿ ತೀವ್ರ ಬೇಡಿಕೆ ಬರುವುದರಿಂದ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಅಂತಾರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಅವಕಾಶವನ್ನು ಒದಗಿಸಿದೆ. ನೀರಿನ ಮರು ಬಳಕೆ, ಶುದ್ಧೀಕರಣಕ್ಕಾಗಿ ಮುಂದಿನ ಕೆಲವು ವರ್ಷಗಳಲ್ಲಿ ಕೆನಡಾ, ಇಸ್ರೇಲ್‌, ಜರ್ಮನಿ, ಇಟಲಿ, ಅಮೆರಿಕ, ಚೀನಾ ಹಾಗೂ ಬೆಲ್ಜಿಯಂನಂತಹ ದೇಶಗಳಿಂದ 82 ಸಾವಿರ ಕೋಟಿ ರೂ. ಹೂಡಿಕೆಯಾಗುವ ನಿರೀಕ್ಷೆ ಇದೆ.

ಭಾರತದ ಕೈಗಾರಿಕೆಗಳು ವಾರ್ಷಿಕವಾಗಿ ಸುಮಾರು 40 ಶತಕೋಟಿ ಕ್ಯೂಬಿಕ್ ಮೀಟರ್ (40 ಲಕ್ಷ ಕೋಟಿ ಲೀಟರ್) ನೀರು ಬಳಕೆಮಾಡುತ್ತವೆ. ಅಂದರೆ ದೇಶದ ಒಟ್ಟು ಶುದ್ಧನೀರು ಬಳಕೆಯ ಶೇ.6ರಷ್ಟು ಉದ್ಯಮಕ್ಕೆ ವ್ಯಯವಾಗುತ್ತದೆ. ಇದೇ ಉದ್ದಿಮೆಗಳಿಂದ ವರ್ಷಕ್ಕೆ ಸುಮಾರು 30 ಶತಕೋಟಿ ಕ್ಯೂಬಿಕ್ ಮೀಟರ್ ನಷ್ಟು ತ್ಯಾಜ್ಯ ನೀರು ಉತ್ಪಾದನೆಯಾಗುತ್ತದೆ. ಈ ನೀರನ್ನು ಶುದ್ಧೀಕರಿಸಿ ಬಳಕೆ ಮಾಡಿದರೆ ಉದ್ಯಮದ ಮುಕ್ಕಾಲುಪಾಲು ಬೇಡಿಕೆಯನ್ನು ಪೂರೈಸಬಹುದು ಎಂಬುದು ತಜ್ನರ ಅಭಿಪ್ರಾಯವಾಗಿದೆ.

 

Author : ಸಂದೇಶ ಕೆ. 

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited