Untitled Document
Sign Up | Login    
ಅಡಿಕೆ, ದಾಳಿಂಬೆ ಬೆಳೆಗಾರರಿಗೆ ಹೊಸ ಸಾಲಕ್ಕೆ ಸಮ್ಮತಿ


ಸಂಕಷ್ಟದಲ್ಲಿರುವ ಅಡಿಕೆ, ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರರಿಗೆ ಹೊಸದಾಗಿ ಸಾಲ ಕೊಡಲು ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಒಪ್ಪಿಗೆ ನೀಡಿದೆ.

ಬ್ಯಾಂಕುರುಗಳ ಸಮಿತಿ ಸಭೆಯಲ್ಲಿ ಸರ್ಕಾರದ ಪರವಾಗಿ ಭಾಗವಹಿಸಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಬ್ಯಾಂಕ್‌ ಮುಖ್ಯಸ್ಥರ ಜತೆ ಚರ್ಚಿಸಿ ರೈತರ ಸಮಸ್ಯೆ ಮನದಟ್ಟು ಮಾಡಿಕೊಟ್ಟು ಹೊಸ ಸಾಲ ಕೊಡಲು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೀಟ ಬಾಧೆ, ಬರ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಅಡಿಕೆ, ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ತೀರಿಸಲು ಕಷ್ಟವಾಗಿದೆ. ಅಡಿಕೆ ಬೆಳೆಗಾರರ ಸಾಲ ಮನ್ನಾಗೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗಿದೆ. ಹೀಗಾಗಿ, ತಕ್ಷಣಕ್ಕೆ ಸಾಲ ವಸೂಲಾತಿಗೆ ಒತ್ತಡ ಹೇರದ ಹೊಸದಾಗಿ ಸಾಲ ಕೊಡಬೇಕು ಎಂಬ ಮನವಿಗೆ ಬ್ಯಾಂಕರುಗಳ ಸಮಿತಿ ಒಪ್ಪಿದೆ.

ಅಡಿಕೆ ಬೆಳೆಗಾರರು 186 ಕೋಟಿ ರೂ., ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಾರರು 194 ಕೋಟಿ ರೂ. ಸೇರಿದಂತೆ 1 ಸಾವಿರ ಕೋಟಿ ರೂ. ಸಾಲ ನೀಡಬೇಕಿದೆ. ಆದರೆ, ಬೆಳೆಗಾರರ ಸಂಕಷ್ಟ ಹಿನ್ನೆಲೆಯಲ್ಲಿ ವಿಶೇಷ ಸಂದರ್ಭ ಎಂದು ಪರಿಗಣಿಸಿ ಬಲವಂತವಾಗಿ ಸಾಲ ವಸೂಲಿಗೆ ಮುಂದಾಗದೆ ಹೊಸ ಸಾಲ ಕೊಡುವುದು, ಹಿಂದಿನ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸಿ ಪಾವತಿಗೆ ಕಾಲಾವಕಾಶ ಕೊಡುವುದು ಸೇರಿದಂತೆ ರೈತರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಲಾಗಿದೆ.

ಸಿಂಡಿಕೇಟ್‌ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಆಂಜನೇಯ ಪ್ರಸಾದ್‌ ತಿಳುಸುವ ಪ್ರಕಾರ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸಂಪೂರ್ಣ ವಿತ್ತೀಯ ಸೇರ್ಪಡೆ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಆದಾಯವುಳ್ಳ ಜನರನ್ನು ಬ್ಯಾಂಕಿನ ವ್ಯಾಪ್ತಿಗೆ ತರುವ ಉದ್ದೇಶದಿಂದ ಆಗಸ್ಟ್‌ 15 ರಿಂದ ಹೊಸ ಅಭಿಯಾನ ನಡೆಸಿ ಪ್ರತಿ ಕುಟುಂಬಕ್ಕೆ ಒಂದು ಬ್ಯಾಂಕ್‌ ಖಾತೆಯಂತೆ 7.50 ಕೋಟಿ ಖಾತೆಗಳನ್ನು ತೆರೆಯುವ ಗುರಿ ಹೊಂದಾಗಿದೆ.

ನಗರ ಪ್ರದೇಶದಲ್ಲಿ 1.50 ಕೋಟಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 6 ಕೋಟಿ ಖಾತೆ ತೆರೆಯಲಾಗುವುದು. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಟಾನಗೊಳಿಸಲು ನಿರ್ಧರಿಸಲಾಗಿದೆ.

2014-15 ನೇ ಸಾಲಿನಲ್ಲಿ ಬ್ಯಾಂಕುಗಳು 21663 ಕೋಟಿ ರೂ. ಸಾಲ ಆದ್ಯತಾ ಕ್ಷೇತ್ರಗಳಿಗೆ ವಿತರಿಸಿದ್ದು, ಕೃಷಿ ಕ್ಷೇತ್ರಕ್ಕೆ 14277 ಕೋಟಿ ರೂ. ವಿತರಿಸಿದ್ದು ಆ ಪೈಕಿ , ಬೆಳೆ ಸಾಲ 10847 ಕೋಟಿ ರೂ. ಸೇರಿದೆ.

ಭೂಮಿ-ಬ್ಯಾಂಕ್‌ ವಿಲೀನ ರಾಜ್ಯಾದ್ಯಂತ ಜಾರಿಯಾಗಿದ್ದು, ಜುಲೈ 22 ರವರಗೆ ಬ್ಯಾಂಕುಗಳ ಆನ್‌ಲೈನ್‌ ಮೂಲಕವೇ 148064 ವ್ಯವಹಾರಗಳನ್ನು ಕೈಗೊಂಡಿವೆ. ಎಸ್‌ಎಲ್‌ಬಿಸಿ ಆಗ್ರಹದಮತೆ ಕಂದಾಯ ಇಲಾಖೆಯು 'ನಮ್ಮ ಭೂಮಿ' ಹೊಸ ಭೂಮಿ ಯೋಜನೆಯಡಿ ಏಕ ಕಾಲಕಕ್ಕೆ ಭೂ ದಾಖಲೆ ಮತ್ತು ಋಣಭಾರ ಪ್ರಮಾಣ ಪತ್ರಗಳಲ್ಲಿ ಬ್ಯಾಂಕುಗಳ ಸಾಲ ನೋಂದಣಿ ಮಾಡುವ ಪ್ರಯತ್ನದಲ್ಲಿದೆ.

ರಾಜ್ಯ ಸರ್ಕಾರದ ಜತೆಗಿನ ಒಪ್ಪಂದಂತೆ ವಿದ್ಯುನ್ಮಾನ ನಗದು ವರ್ಗಾವಣೆ (ಇಬಿಟಿ) ಯೋಜನೆಯು ಪ್ರಾಯೋಗಿಕವಾಗಿ 7 ಜಿಲ್ಲೆಗಳಲ್ಲಿ ಅನುಷ್ಟಾನಗೊಳ್ಳುತ್ತಿದೆ. ಬ್ಯಾಂಕುಗಳು ಫ‌ಲಾನುಭವಿಗಳ ಖಾತೆ ತೆರೆದು ಸ್ಮಾರ್ಟ್‌ ಕಾರ್ಡ್‌ಗಳ ವಿತರಣೆ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು.

ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸಾಲ ನೀಡಿಕೆ ಮತ್ತು ಬಡತನ ನಿರ್ಮೂಲನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಬ್ಯಾಂಕರುಗಳಿಗೆ ಮನವಿ ಮಾಡಿಲಾಗಿದೆ.

 

Author : ಬೆಂಗಳೂರ್ ವೇವ್ಸ್

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited