Untitled Document
Sign Up | Login    
ಉದುರುತ್ತಿದೆ ಸ್ಟ್ರಿಂಗ್ ಆಫ್ ಪರ್ಲ್ ನ ಒಂದೊಂದೇ ಮುತ್ತು: ಇಳಿಯುತ್ತಿದೆ ಚೀನಾದ ಗತ್ತು!

ಚೀನಾದ ಭೂಪಟ

ಸ್ಟ್ರಿಂಗ್ ಆಫ್ ಪರ್ಲ್ಸ್!

ದಕ್ಷಿಣ ಏಷ್ಯಾದಲ್ಲಿ ಏಕಚಕ್ರಾಧಿಪತ್ಯ ಮೆರೆಯಲು ಸಹಾಯಕಾರಿಯಾಗುವುದಕ್ಕೆ ಹಿಂದೂ ಮಹಾಸಾಗರದಲ್ಲಿ ಶಾಶ್ವತ ಅಸ್ತಿತ್ವವನ್ನು ಸ್ಥಾಪಿವುದಕ್ಕೆ ಚೀನಾ ರೂಪಿಸಿದ್ದ ಕಾನ್ಸೆಪ್ಟ್..

ಹಿಂದೂ ಮಹಾಸಾಗರದ ಜಲಪ್ರದೇಶದಲ್ಲಿ ಬೃಹತ್ ಪ್ರಮಾಣದ ನೌಕಾ ನೆಲೆಯನ್ನು ಸ್ಥಾಪಿಸಿ, ದಕ್ಷಿಣ ಏಷ್ಯಾದ ಶ್ರೀಲಂಕಾ, ಥೈಲ್ಯಾಂಡ್, ಬರ್ಮಾ, ಬಾಂಗ್ಲಾದೇಶ, ಪಾಕಿಸ್ತಾನ ಮಾಲ್ಡೀವ್ಸ್, ಮಾಯನ್ಮಾರ್, ವಿಯೆಟ್ನಾಮ್, ತೈವಾನ್ ರಾಷ್ಟ್ರಗಳನ್ನು ಹಿಡಿತದಲ್ಲಿಟ್ಟುಕೊಂಡು ಭಾರತವನ್ನು ನಿಯಂತ್ರಿಸುವುದು ಚೀನಾದ ಸ್ಟ್ರಿಂಗ್ ಆಫ್ ಪರ್ಲ್ಸ್ (ಮುತ್ತುಗಳ ಮಾಲೆ) ನ ಉದ್ದೇಶ. ಜಾಗತಿಕ ವ್ಯಾಪಾರ-ವಹಿವಾಟಿನಲ್ಲಿ ಹಿಂದೂ ಮಹಾಸಾಗರಕ್ಕೆ ತನ್ನದೇ ಮಹತ್ವವಿದ್ದು ಜಗತ್ತಿನ ಶೇ.80ರಷ್ಟು ತೈಲ ವಹಿವಾಟು ಹಿಂದೂ ಮಹಾಸಾಗರವನ್ನು ದಾಟಿಯೇ ಮುಂದೆ ಸಾಗುತ್ತದೆ. ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿ 35 ದೇಶಗಳು, 6 ದ್ವೀಪಗಳಿದ್ದು ಭಾರತವೇ ಇವುಗಳ ಪೈಕಿ ದೊಡ್ಡ ದೇಶ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿದ್ದ ರಾಜಕೀಯ ಸ್ಥಿತಿಗಳಿಂದ ಭಾರತ ಈ ಜಲಪ್ರದೇಶದ ಮೇಲಿದ್ದ ಹಿಡಿತ ಕಳೆದುಕೊಳ್ಳಬೇಕಾಗಿ ಬಂತು!

ಭಾರತದ ಗೊಂದಲಮಯ ಮತ್ತು ಕ್ಷೀಣ ವಿದೇಶಾಂಗ ನೀತಿಯ ಲಾಭ ಪಡೆದ ಚೀನಾ, ಹಿಂದೂ ಮಹಾಸಾಗರದ ವ್ಯಾಪ್ತಿಗೆ ಬರುವ ದೇಶಗಳ ಮೇಲೆ ಒಂದೊಂದಾಗಿಯೇ ತನ್ನ ಹಿಡಿತ ಸಾಧಿಸಿತ್ತು. ಶ್ರೀಲಂಕಾ, ಪಾಕಿಸ್ತಾನ, ಮಾಯನ್ಮಾರ್, ಬಾಂಗ್ಲಾ, ಕಾಂಬೋಡಿಯಾದ ಸಹಾಯದಿಂದ ಚೀನಾ ನೌಕಾ ನೆಲೆಗಳನ್ನು ಸ್ಥಾಪಿಸಿದ್ದೇ ಆದರೆ ತೈಲ ವಹಿವಾಟು, ವ್ಯಾಪಾರ-ವಹಿವಾಟು ತನ್ನಿಚ್ಚಿಗೆ ತಕ್ಕಂತೆ ನಡೆಯುತ್ತದೆ. ಭಾರತ ತಾನು ಹೇಳಿದಂತೆ ಕೇಳಿದರೆ ಸರಿ ಇಲ್ಲದೇ ಇದ್ದಲ್ಲಿ ತೈಲೋತ್ಪನ್ನಗಳು ಮತ್ತು ಇತರ ವಾಣಿಜ್ಯ ಸಾಮಾಗ್ರಿಗಳು ಹಿಂದೂ ಮಹಾಸಾಗರದಿಂದ ಭಾರತ ತಲುಪದಂತೆ ನೋಡಿಕೊಂಡರಾಯಿತು. ಹೇಗಿದ್ದರೂ ಹಿಂದೂ ಮಹಾಸಾಗರದಲ್ಲಿ ತನ್ನದೇ ಆಧಿಪತ್ಯವಿರಲಿದೆ, ಭಾರತದ ನೆರೆ ರಾಷ್ಟ್ರಗಳು ತಾನು ಹೇಳಿದಂತೆಯೇ ಕೇಳುತ್ತದೆ ಎಂಬುದು ಚೀನಾ ನಿಲುವಾಗಿತ್ತು. ಭಾರತ ಸರ್ಕಾರದ ಬೇಜವಾಬ್ದಾರಿತನವೂ ಚೀನಾದ ನಿಲುವಿಗೆ ಪೂರಕವಾಗಿತ್ತು. ಆದರೆ ಈಗ ಭಾರತದ ನಾಯಕತ್ವ ಹಾಗೂ ರಾಜಕೀಯ ಸ್ಥಿತಿ ಎರಡೂ ಬದಲಾಗಿದೆ. ಚೀನಾ ಎಂತಹ ಕೃತ್ರಿಮ ರಾಷ್ಟ್ರ ಎಂಬುದು ಎಲ್ಲರಿಗೂ ತಿಳಿದಿದೆ. ಅವಕಾಶವಾದಿ ಅಮೆರಿಕಾಗೆ ಚೀನಾವನ್ನು ಬಗ್ಗುಬಡಿಯುವ ಅನಿವಾರ್ಯತೆ ಇದೆ. ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರೇ ಬಂದು ಭಾರತದ ಪ್ರಧಾನಿಯೊಂದಿಗೆ ಚೀನಾ ನೌಕಾ ನೆಲೆ ಸ್ಥಾಪಿಸುತ್ತಿರುವ ಬಗ್ಗೆ ಚರ್ಚೆ ನಡೆಸುತ್ತಾರೆ. ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಭಾರತದೊಂದಿಗೆ ಅಮೆರಿಕಾ ಮಾತನಾಡಿದ ನಂತರವಂತೂ ಸ್ಟ್ರಿಂಗ್ ಆಫ್ ಪರ್ಲ್ಸ್ ಬಿಡಿ, ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವುದಕ್ಕೂ ಅಡ್ಡಿ ಉಂಟಾಗಿದೆ.

ಭಾರತದ ನೆರೆ ರಾಷ್ಟ್ರಗಳಲ್ಲಿ ನೌಕಾ ನೆಲೆ ಸ್ಥಾಪಿಸಿ ಏಷ್ಯಾ ಭಾಗದ ಭದ್ರತೆಗೇ ಕುತ್ತು ತರುವ ಚೀನಾದ ಕುತಂತ್ರ ಗೊತ್ತಿದ್ದರಿಂದಲೇ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮೊದಲ ವಿದೇಶ ಪ್ರವಾಸ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಭೂತಾನ್, ನೇಪಾಳ, ಫಿಜಿ, ಜಪಾನ್, ಮಾಯನ್ಮಾರ್ ನೊಂದಿಗೆ. ಓರ್ವ ಭಾರತದ ಪ್ರಧಾನಿ ಈ ಎಲ್ಲಾ ರಾಷ್ಟ್ರಗಳಿಗೂ ಭೇಟಿ ನೀಡಿ ಹಲವು ದಶಕಗಳೇ ಕಳೆದುಹೋಗಿದ್ದರೂ ಈ ಎಲ್ಲಾ ದೇಶಗಳಲ್ಲೂ ಅತ್ಯಾದರ ಸ್ವಾಗತ, ಯಶಸ್ಸು ಸಿಕ್ಕಿತು. . ಭಾರತ ಹಾಗೂ ಈ ನೆರೆ ರಾಷ್ಟ್ರಗಳ ಸಂಬಂಧ ಹೀಗಿರಬೇಕಾದರೆ ಮಧ್ಯದಲ್ಲಿ ಚೀನಾವೂ ತಲೆ ಹಾಕುತ್ತದೆ. ಅವಕಾಶ ಸಿಕ್ಕರೆ ಅದರ 'ಪರಮಮಿತ್ರ' ಪಾಕಿಸ್ತಾನವೂ ಈ ನೆರೆ ರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತದೆ.

ಹಾಗೆ ನೋಡಿದರೆ ದ್ವಿಪಕ್ಷೀಯ ಮಾತುಕತೆಗಿಂತ ಮೋದಿ ಚೀನಾಕ್ಕೆ ನೀಡಿದ ಮೊದಲ ಬಹುದೊಡ್ಡ ಹೊಡೆತವೆಂದರೆ ನೇಪಾಳ ಹಾಗೂ ಜಪಾನ್ ಗೆ ತೆರಳಿ ಯಶಸ್ವಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು. ನೇಪಾಳ ಮೋದಿ ಭೇಟಿಗೂ ಮುನ್ನವೇ ಚೀನಾದ ಪರವಾಗಿ ವಾಲುತ್ತಿದ್ದ ದೇಶ. ನೇಪಾಳದಲ್ಲಿ ತನ್ನ ಅಧಿಪತ್ಯ ಸಾಧಿಸಲು ಚೀನಾ ಆ ದೇಶಕ್ಕೆ ಸಾಕಷ್ಟು ಆರ್ಥಿಕ ನೆರವು ನೀಡುತ್ತಾ ಬಂದಿದೆ ಹಾಗೂ ಮಾವೋವಾದಿಗಳನ್ನು ತನ್ನತ್ತ ಸೆಳೆದು ಮಾವೋ ಸರಕಾರ ಸ್ಥಾಪಿಸುವ ಹುನ್ನಾರವೂ ನಡೆಸಿತ್ತು. ಮೋದಿ ಭೇಟಿ ಬಳಿಕ ನೇಪಾಳ ಚೀನಾಕ್ಕಿಂತಲೂ ಭಾರತಕ್ಕೆ ಹತ್ತಿರವಾಗತೊಡಗಿದೆ. ಮೋದಿಯವರ ಜಪಾನ್ ಭೇಟಿ ಸಂದರ್ಭದಲ್ಲಂತೂ ಚೀನಾಕ್ಕೆ ದಿಕ್ಕೇ ತೋಚಿದಂತಾಗಿತ್ತು. ಮಯಾನ್ಮಾರ್, ಭೂತಾನ್, ಭೇಟಿಗಳಿಂದಲೂ ಚೀನಾಕ್ಕೆ ಆತಂತವಾಗಿತ್ತು. ನಿಮಗೆಲ್ಲಾ ನೆನಪಿರಬಹುದು, ಮೋದಿ ನೆರೆ ರಾಷ್ಟ್ರಗಳೊಂದಿಗೆ ಬೆಸೆಯುತ್ತಿದ್ದ ಸಂಬಂಧಗಳಿಂದ ತನ್ನ ಬಗ್ಗೆ ಆತಂತಗೊಂಡಿದ್ದ ಚೀನಾ ಡಿ.21ರಂದು ನಡೆದ ಜಿಎಂಎಸ್ ಸಮಿತ್ ಶೃಂಗಸಭೆಯಲ್ಲಿ ಕಾಂಬೋಡಿಯಾ, ವಿಯಾಟ್ನಾಂ, ಮ್ಯಾನ್ಮಾರ್, ಥಾಯ್‌ಲ್ಯಾಂಡ್ ಮತ್ತು ಲಾವೋಸ್‌ನಲ್ಲಿ ಮೂಲ ಸೌಲಭ್ಯ, ಉತ್ಪಾದನೆ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಹೆಸರಿನಲ್ಲಿ 18 ಸಾವಿರ ಕೋಟಿ ನೆರವು ನೀಡುವುದಾಗಿ ಆಮಿಷವೊಡ್ಡಿತ್ತು.

ಇವೆಲ್ಲವೂ ಸಾಮಾನ್ಯ ಸಂಗತಿ. ವಾಸ್ತವವಾಗಿ ಚೀನಾಗೆ ತಡೆಯಲಾರದ ಪೆಟ್ಟು ಬಿದ್ದದ್ದು ತನ್ನ ಪರಮಾಪ್ತನಾಗಿದ್ದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಸೋಲಿನಿಂದ. ರಾಜಪಕ್ಸೆ ಅಧಿಕಾರದಲ್ಲಿದ್ದಾಗಿನಿಂದ, ಸೋಲುವವರೆಗೂ ಚೀನಾದ ಹಿತಾಸಕ್ತಿಗೆ ತಕ್ಕಂತೆಯೇ ನಡೆಯುತ್ತಾ, ಪಾಕಿಸ್ತಾನವನ್ನೂ ಮಿತ್ರನಾಗಿಸಿಕೊಂಡು ಭಾರತಕ್ಕೆ ಈ ಎರಡೂ ರಾಷ್ಟ್ರಗಳಿಂದಾಗಬೇಕಿದ್ದ ಸಮಸ್ಯೆಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೀಗೇ ಬಿಟ್ಟರೆ ಭಾರತದ ಹಿತಾಸಕ್ತಿಗೇ ಧಕ್ಕೆಯುಂಟಾಗುತ್ತದೆ ಎಂಬುದನ್ನು ತಿಳಿದಿದ್ದ ಮೋದಿ ಸರ್ಕಾರ, ತನ್ನನ್ನು ಹಾಗೂ ಶ್ರೀಲಂಕಾವನ್ನು ಚೀನಾದ ಕೃತ್ರಿಮತೆಯಿಂದ ರಕ್ಷಿಸಿಕೊಳ್ಳಲು ರಾಜಪಕ್ಷೆಯನ್ನು ಸೋಲಿಸಲು ಅಗತ್ಯವಿದ್ದ ಕೆಲಸವನ್ನು ಸದ್ದಿಲ್ಲದೇ ಮಾಡಿ ಮುಗಿಸಿತ್ತು. ಸಧ್ಯಕ್ಕೆ ಶ್ರೀಲಂಕಾ ಚೀನಾದ ವಸಾಹತುಶಾಹಿಗೆ ವಿರುದ್ಧವಾಗಿರುವ ದೇಶವಾಗಿ ತಿರುಗಿಬಿದ್ದಿದೆ. ಬಾಂಗ್ಲಾದೇಶ ಭಾರತದ ದ್ವೇಷ ಕಟ್ಟಿಕೊಳ್ಳುವ ಸ್ಥಿತಿಯಲ್ಲಿಲ್ಲ. ನೇಪಾಳ ಹಾಗೂ ಶ್ರೀಲಂಕಾ ಭಾರತದ ಪರ ತಿರುಗಿರುವುದೇ ಈಗ ಚೀನಾಕ್ಕೆ ಎದುರಾಗಿರುವ ಬಹುದೊಡ್ಡ ಸವಾಲಾಗಿದೆ.

ಹೀಗೆ ಸ್ಟ್ರಿಂಗ್ ಆಫ್ ಪರ್ಲ್ಸ್ ಹೆಸರಿನಲ್ಲಿ ಒಂದೊಂದೇ ದೇಶಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದು ಭಾರತವನ್ನು ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂಬ ಚೀನಾದ ಕನಸು ಕಮರುತ್ತಿದೆ. ಸ್ಟ್ರಿಂಗ್ ಆಫ್ ಪರ್ಲ್ಸ್ ಗೆ ಪೋಣಿಸಿದ್ದ ಒಂದೊಂದೆ ಮುತ್ತುಗಳು ಈಗ ಚೀನಾದ ಹಿಡಿತದಿಂದ ಉದುರುತ್ತಿವೆ. ಸಧ್ಯಕ್ಕೆ ಚೀನಾಗೆ ಹೇಳಿಕೊಳ್ಳಬಹುದಾದ ಆಪ್ತ ರಾಷ್ಟ್ರವೆಂದು ಉಳಿದಿರುವುದು ಕೇವಲ ಪಾಕಿಸ್ತಾನ ಮಾತ್ರ. ಅಂದಹಾಗೆ ನೆರೆ ರಾಷ್ಟ್ರಗಳನ್ನು ದುಡ್ಡಿನಿಂದ ಕೊಂಡುಕೊಳ್ಳಬಹುದು ಎನ್ನುವುದಕ್ಕೆ ಚೀನಾದ ಆರ್ಥಿಕತೆಯೂ ಕುಸಿಯುತ್ತಿದೆ. ಆಂತರಿಕ ಭಯೋತ್ಪಾದನೆ ಹತ್ತಿಕ್ಕುವ ಕಾರಣ ಮುಂದಿಟ್ಟುಕೊಂಡು ಪಾಕಿಸ್ತಾನ ಕೇಳಿದಾಗಲೆಲ್ಲಾ ದುಡ್ದು ಸುರಿಯುವಷ್ಟು ಮೂರ್ಖತನ ಚೀನಾ ತೋರಲಾರದು. ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಐಎಂಎಫ್ ವರದಿ ಪ್ರಕಾರ 2016ನೇ ಸಾಲಿನಲ್ಲಿ ಭಾರತದ ಆರ್ಥಿಕತೆ ಚೀನಾದ ಆರ್ಥಿಕತೆಯನ್ನು ಮೀರಿ ಬೆಳೆಯುತ್ತದೆ ಎಂದು ಹೇಳಿದೆ. ಇನ್ನು ಪಾಕಿಸ್ತಾನ ಹೊರತುಪಡಿಸಿ ಉಳಿದ ನೆರೆರಾಷ್ಟ್ರಗಳೇಕೆ ಆರ್ಥಿಕ ಸಹಾಯಕ್ಕಾಗಿ ಚೀನಾದತ್ತ ಮುಖಮಾಡುವ ಸ್ಥಿತಿ ಎದುರಾಗುತ್ತದೆ? ಇಷ್ಟೆಲ್ಲಾ ಒಂದೆಡೆ ಅಮೆರಿಕಾ ಭಾರತ ತನಗೆ ಬೆಸ್ಟ್ ಫ್ರೆಂಡ್ ಎಂದು ಹೆಮ್ಮೆಯಿಂದ ಹೇಳುತ್ತಿದ್ದರೆ, ಚೀನಾದ ಸ್ಥಿತಿ ಚೋರ ಗುರುವಿಗೆ ಚಂಡಾಲ ಶಿಷ್ಯ ಎಂಬಂತಾಗಿದೆ. ಅದಕ್ಕಾಗಿಯೇ ಚೀನಾ ಪಾಕಿಸ್ತಾನವನ್ನು ತನ್ನ ಸಾರ್ವಕಾಲಿಕ ಆಪ್ತಮಿತ್ರ ಎಂದು ಬಣ್ಣಿಸುತ್ತಿದೆ.

 

Author : ಶ್ರೀನಿವಾಸ್ ರಾವ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited