Untitled Document
Sign Up | Login    
ಸ್ವಾತಂತ್ರ್ಯ ಬಂದು 68 ವರ್ಷ ಆದರೂ ಇತಿಹಾಸದ ವಿಸ್ಮೃತಿ, ದಾಸ್ಯ ಮನಸ್ಸಿನಲ್ಲೇ ಉಳಿಯಿತು!


ಸ್ವಾತಂತ್ರ್ಯ ದಿನಾಚರಣೆ ಮುನ್ನಾದಿನ ಪ್ರತಿ ವರ್ಷ ರಾಷ್ಟ್ರಪತಿಗಳು ದೇಶದ ಜನತೆಯನ್ನುದ್ದೇಶಿಸಿ ಮಾತನಾಡುವುದು ಸಂಪ್ರದಾಯ. 68ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಂದು ಮಾತು ಹೇಳಿದರು. ಇದೇನು ಒಂದೇ ಅರ್ಥ ಬರುವ ಪದಗಳನ್ನು ಆಚರಣೆ ಮತ್ತು ಸವಾಲಿಗೆ ಹೋಲಿಸಿದ್ದಾರೆ? ಹಾಗಿದ್ದರೆ independence ಗೂ Freedom ಗೂ ವ್ಯತ್ಯಾಸವೇ ಇಲ್ಲವೇ? ಇಂದಿನ ಪರಿಸ್ಥಿತಿ ನೋಡಿದರೆ ಎರಡಕ್ಕೂ ವ್ಯತ್ಯಾಸವೇ ಇಲ್ಲದಂತಾಗಿದೆ.

freedom ಎಂಬುದನ್ನು ಆಚರಣೆಯಲ್ಲಿಟ್ಟುಕೊಂಡೇ,independence ನ್ನು ಉಳಿಸಿಕೊಳ್ಳುವುದು ಕಷ್ಟ ಸಾಧ್ಯದ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯ,(Freedom of expression) ವಾಕ್ ಸ್ವಾತಂತ್ರ್ಯ(Freedom of speech) ಇತ್ಯಾದಿ ಸ್ವಾತಂತ್ರ್ಯಗಳನ್ನು ಹೊಂದಿದ್ದರೂ ಸಮಾಜದ ಕೆಲವು "ಬುದ್ಧಿಜೀವಿಗಳು"ಇಂದಿಗೂ ಸಹ ಸ್ವಾವಲಂಭಿಗಳಾಗುವ ಬದಲು(independent) ಆಗುವಬದಲು ಪರಾವಲಂಬಿಗಳಾಗೆ(dependent) ಉಳಿದಿದ್ದಾರೆ.! ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮ್ಮ ಪಿತ್ರಾರ್ಜಿತ ಆಸ್ತಿ, ತಾವೊಬ್ಬರೇ ಅದಕ್ಕೆ ವಾರಸುದಾರರು ಎಂಬ ವರ್ತಿಸುವವರಿಗೆ independence ಎಂಬುದು ನಿಜವಾಗಿಯೂ ಸವಾಲೇ ಸರಿ!, ಏಕೆಂದರೆ ದೇಶ ನೀಡಿದ ಸ್ವಾತಂತ್ರ್ಯವನ್ನು ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಂಡು ಇಲ್ಲಿಯ ಸಂಸ್ಕೃತಿಯನ್ನು ನಿಂದಿಸಿ ಪ್ರಶಸ್ತಿ ಗಿಟ್ಟಿಸುತ್ತಾರೆ, ಸ್ವಾತಂತ್ರ್ಯ, ಸ್ವೇಚ್ಛಾಚಾರದ ನಡುವಿನ ತೆಳುಗೆರೆಯನ್ನು ಅಳಿಸಿಹಾಕಲು ಯತ್ನಿಸುವ ಮೂಲಕ ಮೆಕಾಲೆ ಸ್ಥಾನ ತುಂಬುತ್ತಿದ್ದಾರೆ.


ಯಾರಿಗೆ ಬಂತು 47 ಸ್ವಾತಂತ್ರ್ಯ: ಇಂದಿನ ಸ್ವಾತಂತ್ರ್ಯದ ಹಿಂದೆ ಸ್ವರಾಜ್ಯ ಸ್ಥಾಪನೆಯಾಗಬೇಕು, ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ಅಸಂಖ್ಯ ದೇಶಭಕ್ತರ ರಕ್ತದ ಕಲೆ ಇದೆ. ಸ್ವದೇಶ ಸ್ವಾವಲಂಬಿಯಾಗಬೇಕೆಂಬ ದೇಶಭಕ್ತರ ಕನಸು ಕಮರಿಹೋಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಿರಬಹುದು, ಆಡಳಿತ ವ್ಯವಸ್ಥೆಯಲ್ಲಿ ಸ್ವತಂತ್ರರಾಗಿರಬಹುದು, ಆದರೆ ಮಾನಸಿಕವಾಗಿ ಇನ್ನೂ ದಾಸ್ಯದಲ್ಲೇ ಒದ್ದಾಡುತ್ತಿದ್ದೇವಲ್ಲಾ ಅದು?. ಕಳೆದ 68 ವರ್ಷಗಳಲ್ಲಿ 60 ವರ್ಷ ಪ್ರಜಾಪ್ರಭುತ್ವ ಕಂಡಿದ್ದು ಅತ್ಯಂತ ಕೆಳಮಟ್ಟದ ರಾಜಕೀಯವನ್ನು ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ಸತ್ಯ. ದೇಶದ ಅಭಿವೃದ್ಧಿಯ ಬಗ್ಗೆ ಕಲ್ಪನೆಯೇ ಇಲ್ಲದೇ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವ ಜನರ ಹಿಂದೆ ಪ್ರಶಸ್ತಿಗಳಿಗಾಗಿಯೇ ಹೇಳಿಕೆ ನೀಡುವ ಒಂದಷ್ಟು ಗುಂಪು ತಯಾರಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಸೇರಿದಂತೆ ಧರ್ಮ,ಕಾನೂನು ಇಷ್ಟೇ ಏಕೆ ಕೊನೆಗೆ ಅನುಕೂಲ ಸಿಂಧು ಎಂಬಂತೆ ಓಟ್ ಪಡೆಯಲು ಸಂವಿಧಾನಕ್ಕೂ ಹೊಸ ಭಾಷ್ಯ ಬರೆಯಲು ಮುಂದಾದರು. ಅಸಲಿಗೆ ಸ್ವತಂತ್ರ ಭಾರತ ನಿರ್ಮಾಣಗೊಂಡಿದ್ದೇ ಇಂತಹ ಕಂಡು ಕೇಳರಿಯದ ಭಾಷ್ಯಗಳಿಂದ. ಬ್ರಿಟೀಷರು ನಮ್ಮನ್ನು ಗುಲಾಮರನ್ನಾಗಿ ನಡೆಸಿಕೊಂಡಿದ್ದರ ಎಫೆಕ್ಟ್ ಎಲ್ಲಿವರೆಗೆ ಮುಂದುವರೆದಿದೆ ಎಂದರೆ, ಭಾರತ ಸ್ವತಂತ್ರಗೊಳ್ಳುವುದಕ್ಕೂ ಮುನ್ನ ಇಲ್ಲಿ ನಡೆದ ವಿಸ್ಮೃತಿಗಳೆಲ್ಲದಕ್ಕೂ ಭಾರತೀಯರು ಇಂದಿಗೂ ದಾಸರಾಗಿಯೇ ಉಳಿಯಬೇಕಾಗಿದೆ.
ಭಾರತದ ಬುನಾದಿ ಹಿಂದೂ ಧರ್ಮ ಎಂಬುದು ಜಗತ್ತಿನಾದ್ಯಂತ ತಿಳಿದಿರುವ ವಿಷಯ, ಅನೇಕ ದೇಶಗಳು ಪರಕೀಯರ ಆಕ್ರಮಣಕ್ಕೆ ಒಳಗಾಗಿವೆ, ಹಾಗೆಂದು ಬಂದವರನ್ನೆಲ್ಲರನ್ನೂ ತನ್ನವರೇ ಎಂದು ಯಾವ ದೇಶವೂ ಅಪಾಯವನ್ನು ಬಗಲಲ್ಲೇ ಇಟ್ಟುಕೊಳ್ಳಲ್ಲ. ಆಕ್ರಮಣ ಎದುರಿಸಿ ಸ್ವತಂತ್ರವಾದ ಮೇಲೆ ಹಿಂದಿನ ಸಂಸ್ಕೃತಿಯನ್ನೇ ಅನುಸರಿಸಿದವು. ಸ್ಪೇನ್ ಮೇಲೆ ದಾಳಿ ನಡೆಸಿ ಕಟ್ಟಲಾಗಿದ್ದ ಮಸೀದಿಗಳನ್ನು ಒಡೆದು ಅಲ್ಲಿನ ಮೂಲ ಚರ್ಚ್ ಗಳನ್ನು ಮತ್ತೆ ನಿರ್ಮಿಸಲಾಯಿತು. ಭಾರತದ ಮೂಲ ಸಂಸ್ಕೃತಿಯಿಂದ ಕಂಗೊಳಿಸಬೇಕಿದ್ದ ರಾಮಮಂದಿರ ನಿರ್ಮಾಣದ ಸ್ಥಳ ಭಾರತಕ್ಕೆ ಸ್ವಾತಂತ್ರ್ಯ ದೊರೆತ 68 ಬಳಿಕವೂ ವಿಸ್ಮೃತಿಯಾಗಿಯೇ ಉಳಿದಿದೆ!. ಎಲ್ಲೋ ಸ್ಪೇನ್ ನಲ್ಲಿ ಕಟ್ಟಲಾಗಿದ್ದ ಮಸೀದಿಗಳನ್ನು ಧ್ವಂಸ ಮಾಡಿ ಅದೇ ಜಾಗದಲ್ಲಿ ಅಲ್ಲಿನ ಮೂಲ ಸಂಸ್ಕೃತಿಯ ಪ್ರತೀಕವಾಗಿರುವ ಚರ್ಚ್ ಗಳನ್ನು ನಿರ್ಮಿಸಬಹುದಾದರೆ, ನಮ್ಮದೇ ಸರ್ಕಾರ, ನಮ್ಮದೇ ದುಡ್ಡು, ನಮ್ಮವರೇ ಇರುವ ಭಾರತದಲ್ಲಿ ರಾಮಜನ್ಮಭೂಮಿ ಏಕೆ ಸಾಧ್ಯವಿಲ್ಲ? ಇದನ್ನು ಪ್ರಶ್ನಿಸಿದರೆ ಇರುವ freedom ಗಳೆಲ್ಲವನ್ನೂ ಉಪಯೋಗಿಸಿಕೊಂಡು ಪ್ರಶಸ್ತಿಗಳ ಮೇಲೆಯೇ dependent ಆಗಿರುವ ಮಹನೀಯರು ಕಿರುಚಾಡುತ್ತಾರೆ. ಸ್ವರಾಜ್ಯವೆಂದರೆ ತಮ್ಮನ್ನೇ ತಾವು ಆಳಿಕೊಳ್ಳುವುದು ಅಂತ ಹೇಳ್ತಾರಲ್ಲ ಗಾಂಧೀಜಿ, ನಿಜ ಹೇಳಿ… ಅಂತಹ ಸ್ವರಾಜ್ಯ ನಮಗೆ ಬಂದಿದೆಯಾ?

ಪ್ರಸಿದ್ಧ ಲೇಖಕ ಸರ್ ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ ಭಾರತದ ಬಗ್ಗೆ ಹೇಳುತ್ತಾ " ಅತ್ಯಂತ ಹೆಚ್ಚು ಪೆಟ್ಟು ಬಿದ್ದರೂ ಅತಿ ಕಡಿಮೆ ಕಲಿತಿರುವ ಏಕೈಕ ರಾಷ್ಟ್ರವೆಂದರೆ ಅದು ಭಾರತ ಎನ್ನುತ್ತಾರೆ. ಕಂಡಕಂಡಲ್ಲೆಲ್ಲಾ ಇತಿಹಾಸದ ವಿಸ್ಮೃತಿಗಳನ್ನು ಒಡಲಲ್ಲೇ ಉಳಿಸಿಕೊಂಡು, ಇತಿಹಾಸದುದ್ದಕ್ಕೂ ನಡೆದ ಅಸಹ್ಯಗಳನ್ನು 'ಜಾತ್ಯಾತೀತತೆ' ಎಂಬ ಪರದೆಯ ಹಿಂದೆ ಮುಚ್ಚಿಟ್ಟಿರುವುದನ್ನು ನೋಡಿದರೆ ನೈಪಾಲ್ ಹೇಳಿದ್ದು ನಿಜ ಅನಿಸುವುದಿಲ್ಲವೇ? ಕಂಡಕಂಡಲ್ಲಿ ದೇವಾಲಯಗಳನ್ನು ಒಡೆಯುವುದೂ ಸೇರಿದಂತೆ ಮತಾಂಧತೆಯಿಂದ ದೇಶ ಸಾಕಷ್ಟು ಅನುಭವಿಸಿಯಾಗಿದೆ. ದಾಸ್ಯಕ್ಕೆ ಸಿಲುಕಿ ಜನ್ಮ ಜನ್ಮಗಳಿಗಾಗುವಷ್ಟು ಪಾಠ ಕಲಿತಿದ್ದ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಜೊತೆಯಲ್ಲೇ ದೇಶ ವಿಭಜನೆಯ ಬಿಸಿ ತಟ್ಟಿತ್ತು. ದೇಶ ವಿಭಜನೆಯಾಗಿದ್ದರೆ ಕೆಲವರು ಶಪಿಸಿ ಸುಮ್ಮನಾಗುತ್ತಿದ್ದರೇನೋ ಆದರೆ ದೇಶ ವಿಭಜನೆಯ ಹೆಸರಿನಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸುತ್ತಿದ್ದ 20 ಲಕ್ಷ ಹಿಂದೂಗಳ ಕೊಲೆಯಾಯಿತಲ್ಲ ಆಗಲೂ ಈ ವಿಭಜನೆಯ ನೇತೃತ್ವ ವಹಿಸಿದ ಭಾರತದ ಮಹಾನ್ ನಾಯಕರ ರಕ್ತ ಕುದಿಯಲಿಲ್ಲ ಎಂದರೆ ದಾಸ್ಯ ಎಂಬುದು ಅದು ಇನ್ನೆಷ್ಟು ರಕ್ತಗತವಾಗಿತ್ತು ಯೋಚಿಸಿ....
ಸ್ವಾತಂತ್ರ್ಯ ಗಳಿಸುವುದಕ್ಕೆ ಲಕ್ಷಾಂತರ ಜನರು ರಕ್ತ ಹರಿಸಿದರು. ಆದರೆ ಸ್ವತಂತ್ರ ಭಾರತವನ್ನು ಸೇರುವ ತವಕದಲ್ಲಿ ಪಾಕಿಸ್ತಾನದಿಂದ ಹೊರಟು ನಿಂತಿದ್ದರಲ್ಲಾ ಅವರ ಹತ್ಯೆ ನಡೆದದ್ದು ಯಾವ ಪುರುಷಾರ್ಥಕ್ಕಾಗಿ? ಅಂದು 20 ಲಕ್ಷ ಹಿಂದೂಗಳ ಕೊಲೆಯನ್ನು ಸಹಿಸಿಕೊಂಡಿದ್ದಕ್ಕೆ ಇಂದು ಪಾಕಿಸ್ತಾನ ಭಾರತದ ಸೈನಿಕರ ರುಂಡ ಕತ್ತರಿಸಿದರೂ ಜಮ್ಮು-ಕಾಶ್ಮೀರವನ್ನು ಕೇಳುತ್ತಿದ್ದರೂ ನಾವು ಸಹಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರಪಿತ ಗಾಂಧಿ ಅವರಿಂದ ಒಂದು ಅವಘಡ ಜರುಗಿದರೆ ಹಠಕ್ಕೆ ಬಿದ್ದವರಂತೆ ಗಾಂಧಿ ಕುಟುಂಬದವರೆಲ್ಲರೂ ನಿರಂತರ 60 ವರ್ಷ ವಿಸ್ಮೃತಿಗಳನ್ನು ಪೋಷಿಸುತ್ತಿಲೇ ಇದ್ದರು, ಸೃಷ್ಠಿಸುತ್ತಲೇ ಇದ್ದರು. ನಕಲಿ ಗಾಂಧಿಗಳ ಪ್ರಭಾವಲಯದಲ್ಲಿಯೇ ತಮ್ಮ ಬೇಳೆಕಾಳು ಬೇಯಿಸಿಕೊಂಡು ರಾಷ್ಟ್ರವನ್ನು ಅಧೋಗತಿಗೆ ತಳ್ಳಿದವರ ಪಟ್ಟಿ ಬಹಳ ದೊಡ್ಡದು.

ಹಾಗಾದರೆ 47ರ ಸ್ವಾತಂತ್ರ್ಯ ಯಾರಿಗೆ ಬಂತು? ಹಿಂದೂ ಹಬ್ಬಗಳು ಮತ್ತೆ ಮತ್ತೆ ಬರುವಂತೆ ಸ್ವಾತಂತ್ರ್ಯ ದಿನಾಚರಣೆಯೂ ಬಂದಿದೆ. ಈದಿನವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಲು ಕೆಂಪುಕೋಟೆಯನ್ನು ಸಿಂಗರಿಸಲಾಗುತ್ತದೆ. ಬಾಂಧವರ ದಾಯಾದಿಗಳಾದ ಉಗ್ರರು ಬಾಂಬ್ ಇರಿಸಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಹೈಟೆಕ್ ತರಬೇತಿ ಪಡೆದ ಶ್ವಾನಗಳನ್ನು ಕರೆಸಿ ಪರೀಕ್ಷೆ ಮಾಡಲಾಗುತ್ತದೆ. ದೇಶದಲ್ಲಿ ತಿರಂಗಾ ಧ್ವಜ ಆರೋಹಣ ಮಾಡುವ ಕೆಂಪುಕೋಟೆ ಹಾಗೂ ಅದಕ್ಕೆ ಸಂಬಂಧಿಸಿದ ಆಯಕಟ್ಟಿನ ಪ್ರದೇಶಗಳಲ್ಲಿ ಭದ್ರತಾಪಡೆ ಸಿಬ್ಬಂಧಿ ಕಾವಲಿರುತ್ತಾರೆ. ನಿಗದಿತ ಸಮಯಕ್ಕೆ ಎಲ್ಲವೂ ನಡೆಯುತ್ತದೆ. ತಿರಂಗಾ ದಿಗಂತದಲ್ಲಿ ಹಾರಾಡುತ್ತದೆ. ಸಂಭ್ರಮ ಆಚರಿಸಲಾಗುತ್ತದೆ. "ಆ ಸ್ವಾತಂತ್ರೋತ್ಸವ ಆಚರಿಸುವ ಭಾರತದಲ್ಲಿ ವಂದೇ ಮಾತರಂ ಗೆ ಒಂದು ಪೈಸೆಯಷ್ಟೂ ಮನ್ನಣೆ ಇಲ್ಲ.
ವಂದೇ ಮಾತರಂ ಹಾಡುವುದಿಲ್ಲ ಎಂದು ಭಾರತದ ಸೆಕ್ಯುಲರ್ ದತ್ತುಪುತ್ರರಾದ ಬಾಂಧವರು ಸಂಸತ್ ನಲ್ಲೇ ಹುಕುಂ ಜಾರಿ ಮಾಡುತ್ತಾರೆ. "ಸಾರೆ ಜಹಾನ್ ಸೆ ಅಚ್ಛ " ಎಂದು ಬರೆದವರು ಪಾಕಿಸ್ತಾನಕ್ಕೆ ಪಲಾಯನ ಮಾಡಿದರೂ ಅವರು ಬರೆದಿದ್ದನ್ನು ಮಾತ್ರ ಭಾರತದಲ್ಲಿ ಸ್ವಚ್ಛವಾಗಿ ಹಾಡಲಾಗುತ್ತದೆ. ಏಕೆಂದರೆ ಇಲ್ಲಿ ಆಚರಣೆಯಲ್ಲಿರುವುದು ಶುದ್ಧ ಸೆಕ್ಯುಲರ್ ಸ್ವಾತಂತ್ರೋತ್ಸವ. ಈ ಸ್ವಾತಂತ್ರ್ಯೋತ್ಸವಕ್ಕೆ ಇತಿಹಾಸದ ಘೋರ ಸತ್ಯಗಳು ತಿಳಿದಿಲ್ಲ. ಭಾರತದ ಸಂಸ್ಕೃತಿಗಾಗಿರುವ ಅಪಚಾರದ ಬಗ್ಗೆ ಅರಿವೂ ಇಲ್ಲ! ದೇಶಕ್ಕಷ್ಟೇ ಸ್ವಾತಂತ್ರ್ಯ ದೊರೆತಿದೆ. ಆದರೆ ವಿಸ್ಮೃತಿಯ ಇತಿಹಾಸ ನೋಡುತ್ತಿರುವ ಮನಸ್ಸು ಮಾತ್ರ ಇನ್ನೂ ಪರಕೀಯರ ದಾಸ್ಯದಲ್ಲೇ ಮುಳುಗಿದೆ! ಇರಲಿ 68 ವರ್ಷಗಳ ಬಳಿಕ ಆಶಾಕಿರಣವೊಂದು ಹೊಮ್ಮಿದೆ, ವಿಸ್ಮೃತಿಗಳನ್ನೆಲ್ಲಾ ತೊಳೆದುಹಾಕುವ ನಾಯಕತ್ವದೊರೆತಿದೆ. ಇನ್ನಾದರೂ ದೇಶದಲ್ಲಿ ನಿಜವಾದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುವ ವಿಶ್ವಾಸ ಮೂಡಿದೆ. happy independence day

 

Author : ಶ್ರೀನಿವಾಸ್ ರಾವ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited