Untitled Document
Sign Up | Login    
ಕಾರ್ಗಿಲ್ ಯುದ್ಧ ಕಲಿಗಳ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ, ಮರೆಯಲೂಬಾರದು

ಕಾರ್ಗಿಲ್ ಯುದ್ಧ ಹೀರೊಗಳು....

ಹಿಂದೂಸ್ತಾನಿ-ಪಾಕಿಸ್ತಾನಿ ಭಾಯಿ ಭಾಯಿ ಎಂದೇ ಬೆನ್ನಿಗೆ ಚೂರಿಹಾಕುವುದು ಪಾಕಿಸ್ತಾನದ ಹುಟ್ಟುಗುಣ. ಕ್ರಿಕೆಟ್ ಆಡಿದಾಗ ನಾವು ಸೌಜನ್ಯದಿಂದ ವರ್ತಿಸಿದರೂ, ವಿಕೆಟ್ ಗಳನ್ನು ಕೈಲಿ ಹಿಡಿದು ವಿಕಾರವಾಗಿ ಅರಚುವುದು, ನಾವು ಗೆದ್ದರೆ ಅಸಹನೆ ತೋರುವುದು ಪಾಕಿಸ್ತಾನಕ್ಕೆ ರಕ್ತಗತ. ಆದರೂ ನಾವು ಪಾಕಿಸ್ತಾನದ ಕೃತ್ರಿಮವನ್ನು ಲೆಕ್ಕಿಸದೇ ರೈಲು ಬಿಟ್ಟದ್ದಾಯಿತು. ಬಸ್ಸೂ ಓಡಿಸಿದ್ದಾಯಿತು, ಕೈಕುಲುಕಿದ್ದೂ ಆಯಿತು. ಆದರೆ ಪಾಕಿಸ್ತಾನ ಮಾತ್ರ ಬದಲಾಗಲಿಲ್ಲ.

ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದ ನವಾಜ಼್ ಷರೀಫ್ ಎದುರು ಕುಳಿತು ಕೈಕುಲುಕಿದರು, ನಮಸ್ಕರಿಸಿದರು, ಪರಸ್ಪರ ತಬ್ಬಿಕೊಂಡರು, ಕೊನೆಗೂ ಪಾಕಿಸ್ತಾನ-ಭಾರತದ ನಡುವಿದ್ದ ಹಳಸಿದ್ದ ಸಂಬಂಧ ಸರಿಹೋಯಿತೆಂಬ ಭ್ರಮೆಯಲ್ಲಿ ಮೆರೆಯುತ್ತಿದ್ದಾಗಲೇ ಮುಂಬಾಗಿಲಿನಿಂದ ವಾಜಪೇಯಿ ಅವರಿಗೆ ರಾಜೋಚಿತ ಮರ್ಯಾದೆಗಳಿಂದ ಬೀಳ್ಕೊಟ್ಟ ಪಾಕಿಸ್ತಾನ ಹಿಂಬಾಗಿಲಿನಿಂದ ಮೂಲ ಕಸುಬನ್ನು ಆರಂಭಿಸಿದ ಪಾಕಿಸ್ತಾನ 1977ರ ಒಪ್ಪಂದವನ್ನು ಮುರಿದಿತ್ತು. ವಾಜಪೇಯಿ ಭಾರತಕ್ಕೆ ತಲುಪುವುದರ ವೇಳೆಗೆ ಸ್ನೇಹ ಹಸ್ತ ಚಾಚಿದ್ದ ಭಾರತೀಯರನ್ನು ಮಟ್ಟಹಾಕುವ ತಂತ್ರ ರೆಡಿಯಾಗಿತ್ತು. ತನ್ನ ನರಿಬುದ್ಧಿಯನ್ನು ಪ್ರದರ್ಶಿಸುವುದಕ್ಕೆಪಾಕಿಸ್ತಾನ ತಡ ಮಾಡಲೇ ಇಲ್ಲ.

ಜೋಜಿ ಲಾ ಪಾಸ್, ಅತ್ಯಂತ ಕಡಿದಾದ, ಅಷ್ಟೇ ಕಠಿಣವಾದ ಕೊರಕಲುಗಳು ದಾರಿಯುದ್ದಕ್ಕೂ. ಸ್ವಲ್ಪ ಎಡವಿದರೂ ಪ್ರಪಾತವೇ ಗತಿ. ಇನ್ನು ಮಂಜು ಸುರಿಯುವಾಗಲಂತೂ ಆ ದಾರಿಯಲ್ಲಿ ವಾಹನಗಳಿರಲಿ, ನಡೆದುಕೊಂಡು ಹೋಗುವುದೂ ಕಷ್ಟ. ಮೇ ತಿಂಗಳ ಕೊನೆಯವರೆಗೆ ಮಂಜು ಬೆಟ್ಟ ಪೂರ್ತಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಆ ವೇಳೆಯಲ್ಲಿ ಸೈನಿಕರೂ ಇರುವುದಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ತಲುಪಿಸುವುದಕ್ಕೂ ಆಗೋದಿಲ್ಲ. ಈ ವಿಚಾರವನ್ನು ಚೆನ್ನಾಗಿ ಅರಿತ ಸೇನಾ ನಾಯಕ ಪರ್ವೇಜ್ ಮುಷರ್ರಫ್ ಏಪ್ರಿಲ್ ಆರಂಭದಲ್ಲೇ ತನ್ನ ಸೈನಿಕರಿಗೆ ಆದೇಶ ನೀಡತೊಡಗಿದ, 1977ರ ಒಪ್ಪಂದವನ್ನು ಮುಷರಫ್ ಗಾಳಿಗೆ ತೂರಿದ್ದ. ಮಂಜು ಕರಗುವುದನ್ನೆ ಕಾಯುತ್ತಿದ್ದ ಪಾಕಿಗಳು ಏಪ್ರಿಲ್ ಕೊನೆಕೊನೆಯಲ್ಲಿ ಕಾರ್ಗಿಲ್‌ನ, ಪೂರ್ವ ಬಟಾಲಿಕ್‌ನ ಮತ್ತು ದ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿಮುಟ್ಟಾದ ಬಂಕರ್‌ಗಳನ್ನು ಕಟ್ಟಿಕೊಂಡರು. ಮೇ ಆರಂಭದ ವೇಳೆಗೆ ಅವರ ತಯಾರಿ ಸಂಪೂರ್ಣಗೊಂಡಿತ್ತು. ಮೇ ಕೊನೆಯವರೆಗೂ ಮಂಜು ಕರಗದು, ಜೋಜಿ ಲಾ ತೆರೆದುಕೊಳ್ಳದು ಅಂದುಕೊಂಡಿದ್ದ ಪಾಕಿಗಳ ಲೆಕ್ಕಾಚಾರ ತಲೆಕೆಳಗಾಯಿತು. ಆ ವರ್ಷ ಮೇ ಆರಂಭದಲ್ಲಿಯೇ ಮಂಜು ಕರಗಿ ಜೋಜಿ ಲಾ ತೆರೆದುಕೊಂಡಿತ್ತು. ಆಗಲೇ ಕುಸಿಯಬೇಕಿದ್ದ ಪಾಕಿಗಳು ದೃತಿಗೆಡದೇ ತಮ್ಮ ಚಿಲ್ಲರೆ ಕೆಲಸಕ್ಕೆ ಬಂಡತನದಿಂದ ದೃತಿಗೆಡದೇ ಅಣಿಯಾದರು.

ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ವಿಷಯ ತಲುಪಿತ್ತು. ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು. ವರದಿ ತರಲೆಂದು ಹೋದವರು ಪುಂಡ ಪಾಕಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಅವರು ಭಾರತೀಯ ಸೇನೆಗೆ ಮರಳಿ ಬಂದಿದ್ದು ತುಂಡುತುಂಡಾದ ಶವದ ಸ್ಥಿತಿಯಲ್ಲಿ!
ನವಾಜ಼್ ಷರೀಫ್ ಅವರೊಂದಿಗೆ ಕೈಕುಲುಕಿದ್ದ ವಾಜಪೇಯಿ ಅವರ ಸರ್ಕಾರ ನಡುಗಿತ್ತು, ಉಕ್ಕಿನ ಮನುಷ್ಯ ಅಡ್ವಾಣಿ ತುಕ್ಕು ಹಿಡಿದ ಬೇಹುಗಾರ ವ್ಯವಸ್ಥೆಯ ಬಗ್ಗೆ ಗಾಬರಿಗೊಂಡರು. ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆ ಶುರುವಾಯ್ತು. ಆಪರೇಷನ್ ವಿಜಯ ಶುರುವಾಯ್ತು. ಸೈನ್ಯವೇನೋ ಚುರುಕಾಯಿತು ಸರಿ, ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ, ಬಾಂಧವರಿಗೇ ಬದುಕನ್ನು ಮುಡಿಪಾಗಿಟ್ಟು ಜಮ್ಮು-ಕಾಶ್ಮೀರವನ್ನು ಪಿತ್ರಾರ್ಜಿತ ಆಸ್ತಿ ಎಂದು ತಿಳಿದಿದ್ದ 'sick'ಯುಲರ್ ಜೀವಿಗಳ ಹೇಳಿಕೆಗಳು? ಆದರೆ ಇದ್ಯಾವುದೂ ತನಗೆ ಅರಿವೇ ಇಲ್ಲ, ರಾಷ್ಟ್ರ ರಕ್ಷಣೆ ಮಾತ್ರ ನಮ್ಮ ಕರ್ತವ್ಯ ಎನ್ನುತ್ತಿದ್ದ ಸೈನಿಕ ಮಾತ್ರ ಗಡಿಯಲ್ಲಿ ಚಡಪಡಿಸುತ್ತಿದ್ದ. ಏಕೆಂದರೆ ನಮ್ಮ ಸೈನಿಕರದ್ದು ಎಂದಿಗೂ ಅದೇ ದೈನೇಸಿ ಪರಿಸ್ಥಿತಿ. ಅವನ ಬಳಿ ಮಂಜಿನ ಬೂಟುಗಳಿರುವುದಿಲ್ಲ, ಬೆಚ್ಚನೆಯ ಬಟ್ಟೆಗಳೂ ಇರುವುದಿಲ್ಲ. ಪ್ರತಿ ಯುದ್ಧದಂತೆಯೇ ಈ ಬಾರಿಯ ಯುದ್ಧದಲ್ಲೂ ಇವ್ಯಾವುವೂ ಬೇಡ, ಒಂದಷ್ಟು ಮದ್ದು ಗುಂಡು, ಶಸ್ತ್ರಾಸ್ತ್ರ ಇದ್ದರೆ ಕೊಡಿ ಸಾಕು ಎಂದರು ಸೈನಿಕರು.
ತೋಲೋಲಿಂಗ್ ಬೆಟ್ಟ ಅದಾಗಲೇ ವೈರಿವಶವಾಗಿತ್ತು. ಅದನ್ನು ಮರಳಿ ಪಡೆಯಬೇಕಾದರೆ ಸೈನಿಕರು ಸಿಡಿದೆದ್ದರೂ ಅವರ ಕೈಲಿದ್ದ ಬಂದೂಕಿನೊಳಗಿದ್ದ ಅನೇಕ ಗುಂಡುಗಳು ಸಿಡಿಯಲೇ ಇಲ್ಲ. ಹಣದಾಸೆಗೆ ಭ್ರಷ್ಟಾಚಾರಕ್ಕೆ ಶರಣಾಗಿ ಅಧಿಕಾರಿಗಳು ರಾಜಕಾರಣಿಗಳೊಂದಿಗೆ ಶಾಮೀಲಾಗಿ ಉಪಯೋಗಕ್ಕೆ ಬಾರದ ಮದ್ದು ಗುಂಡುಗಳನ್ನು ಖರೀದಿಸಿದ್ದರು. ಮದ್ದು, ಗುಂಡುಗಳ ದಾಸ್ತಾನಿನ ಪರಿಸ್ಥಿತಿ ಹೀನಾಯವಾಗಿತ್ತು. ಇರುವ ಗುಂಡುಗಳನ್ನು ವರ್ಗೀಕರಿಸಿ, ಸಿಡಿಯುವ ಗುಂಡುಗಳನ್ನೇ ಹಂಚುವ ಕೆಲಸವೂ ಆಯ್ತು.

ಕಾರ್ಗಿಲ್ ಪಟ್ಟಣಕ್ಕೆ ಸುಮಾರು 20ಕಿ.ಮಿ ದೂರ, ದ್ರಾಸ್‌ನಿಂದ 6 ಕಿ.ಮಿ ಅಂತರದಲ್ಲಿರುವ ಬೆಟ್ಟ ತೋಲೋಲಿಂಗ್ ನ್ನು ಭಾರತೀಯರು ಮೊದಲು ವಶಪಡಿಸಿಕೊಳ್ಳಬೇಕಿತ್ತು. ಅದರ ಬುಡದಲ್ಲಿ ಸೈನಿಕರು ಸಿಡಿಯುವ ಬೋಫೋರ್ಸುಗಳನ್ನು ನಿಲ್ಲಿಸಿಕೊಂಡರು. ಗುಡ್ಡದ ಮೇಲೆ ಕುಳಿತ ಶತ್ರು ಸೈನಿಕರು ಇವನ್ನೆಲ್ಲ ನೋಡುತ್ತಲೇ ಇದ್ದರು. ಅವರು ಎಸೆಯುತ್ತಿದ್ದ ಶೆಲ್ ಸಿಡಿದಾಗ ಅದರಿಂದ ಹೊರಹೊಮ್ಮುವ ಸೀಸದ ಕಡ್ಡಿಗಳು ಭಾರತೀಯ ಸೈನಿಕರನ್ನು ಇರಿದು ಹತ್ಯೆ ಮಾಡುತ್ತವೆ. ಅಂತಹದರಲ್ಲೂ ನಮ್ಮ ಸೈನಿಕರು ದೃಢವಾಗಿ ನಿಂತರು. ಐದುನೂರು ಜನ ಪಾಕ್ ಸೈನಿಕರಿರಬಹುದೆಂದು ಅಂದಾಜಿಸಲಾಗಿತ್ತು. ಯುದ್ಧ ಕೊನೆಯಾಗುವ ವೇಳೆಗೆ ಈ ಸಂಖ್ಯೆ 5ಸಾವಿರವಾದರೂ ಇರಬಹುದು ಎಂದು ಗೊತ್ತಾಯಿತು. ಇಂಥಾ ಸನ್ನಿವೇಶದಲ್ಲಿಯೂ ನಮ್ಮ ಸೈನಿಕರು ಬೆಟ್ಟದ ಮೇಲೆ ಹತ್ತಲಾರಂಭಿಸಿದರು.
ಬೆಟ್ಟದ ಮೇಲೆ ಭಯಾನಕ ಯುದ್ಧ ನಡೆಯಿತು. ಅಂತೂ ಜುಲೈ 13ಕ್ಕೆ ತೋಲೋಲಿಂಗ್ ನಮ್ಮ ವಶವಾಯ್ತು. ಪಾಕಿಗಳ ಗುಂಡಿನ ದಾಳಿಗೆ ಜಗ್ಗದ ಭಾರತೀಯರ ಹೋರಾಟದ ಫಲವಾಗಿ ಜುಲೈ 15ಕ್ಕೆ ಟೈಗರ್ ಹಿಲ್ ಭಾರತದ ಕೈಲಿತ್ತು. ಒಂದೊಂದು ಬೆಟ್ಟ ವಶಪಡಿಸಿಕೊಳ್ಳುತ್ತ ನಡೆದಂತೆ ನಮ್ಮ ಶಕ್ತಿ ವೃದ್ಧಿಸಿತು, ಪಾಕಿಗಳದ್ದು ಕ್ಷೀಣ. ಒಂದು ಬೆಟ್ಟವನ್ನು ವಶಪಡಿಸಿಕೊಂಡು ಕೆಳಗಿಳಿದು ಬಂದ ವಿಕ್ರಮ್ ಬಾತ್ರಾ ಟೆಲಿವಿಷನ್ ಚಾನಲ್‌ಗಳಲ್ಲಿ ಕಾಣಿಸಿಕೊಂಡು, ಒಂದು ಬೆಟ್ಟ ಸಾಲದು, ಇನ್ನೂ ಬೇಕೆಂದರು, ಹೀಗೆಂದವರೇ 2ದಿನಗಲಲ್ಲಿ ಶತೃಗಳ ಗುಂಡಿಗೆ ಬಲಿಯಾದರು. ಕರ್ನಲ್ ವಿಶ್ವನಾಥನ್ ಕದನ ಭೂಮಿಯಲ್ಲಿ ದೇಶಕ್ಕಾಗಿ ದೇಹತ್ಯಾಗ ಮಾಡಿದ್ದರು. ತನ್ನ ರಕ್ತದ ಸಾಮರ್ಥ್ಯ ತೋರುವ ಮುನ್ನ ಮೃತ್ಯು ಬಂದರೆ ಆ ಮೃತ್ಯುವನ್ನೇ ಕೊಂದುಬಿಡುತ್ತೇನೆ ಎಂದು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ ಮನೋಜ್ ಕುಮಾರ್ ಪಾಂಡೆ ತನ್ನಾಸೆಯಂತೆಯೇ ಸಾಮರ್ಥ್ಯ ಸಾಬೀತುಪಡಿಸಿಯೇ ದೇಶಕ್ಕಾಗಿ ಪ್ರಾಣ ಸಮರ್ಪಿಸಿದರು. ಪರಮವೀರ ಚಕ್ರವನ್ನು ಮರಣೋತ್ತರವಾಗಿ ಕೊಡಲಾಯ್ತು. ಒಬ್ಬರು, ಇಬ್ಬರು....? ಊಹುಂ ದೇಹಕ್ಕಾದ ಗಾಯಗಳನ್ನೂ ಲೆಕ್ಕಿಸದೇ ರಾಷ್ಟ್ರದ ಗಾಯವನ್ನು ಸರಿಪಡಿಸಲು ನಿಂತ 524 ಕಲಿಗಳನ್ನು ನಾವು ಕಾರ್ಗಿಲ್ ಯುದ್ಧದಲ್ಲಿ ಕಳೆದುಕೊಂಡಿದ್ದೇವೆ.

ಸೋತು ಸುಣ್ಣವಾದ ಪಾಕಿಸ್ತಾನ ತನ್ನ ಸೈನಿಕರಿಗೆ ಎಷ್ಟು ಕೃತಘ್ನ ಎಂದರೆ, ಸತ್ತ ಸೈನಿಕರ ಶವ ಸ್ವೀಕಾರ ಮಾಡಲಿಲ್ಲ. ಏಕೆಂದರೆ ಒಪ್ಪಂದ ಮುರಿದು ದಾಳಿ ಮಾಡಿದ್ದು ತಾನೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಹೆದರಿಕೆ!. ಪಾಕ್ ಸೈನಿಕರ ಅನಾಥ ಶವಗಳಿಗೆ ಮುಕ್ತಿ ದೊರಕಿಸಲು ಬೇಕಾಗಿದ್ದೂ ಭಾರತದ ಪವಿತ್ರವಾದ ಸೈನಿಕರೇ....ನಾವಿಂದು ಉಸಿರಾಡುತ್ತಿದ್ದರೆ ಅದಕ್ಕೆ ಭಾರತೀಯ ಸೈನಿಕರೇ ಕಾರಣ.... ಪಾಕಿಸ್ತಾನ, ಚೀನಾದಂತಹ ಕಪಟಿಗಳ ಗುಂಡಿಗೆ ಎದೆಯೊಡ್ಡಿ ಎದೆಗುಂದದೇ ದೇಶ ರಕ್ಷಸಿದ ಅವರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ. ಮರೆಯಲೂ ಬಾರದು.... ಇಂದು ಕಾರ್ಗಿಲ್ ವಿಜಯ್ ದಿವಸ್ ನ 15ನೇ ವರ್ಷಾಚರಣೆ. ಪಾಕ್ ನಿಂದ ದೇಶವನ್ನು ರಕ್ಷಿಸಿ ಅಮರರಾದ ಸೈನಿಕರನ್ನು ನೆನೆಯೋಣ....

 

Author : ಶ್ರೀನಿವಾಸ್ ರಾವ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited