Untitled Document
Sign Up | Login    
ಇರಾಕ್ ನಲ್ಲಿ ಶಿಯಾ- ಸುನ್ನಿ ಸಂಘರ್ಷ ಐಎಸ್ಐಎಲ್ ಹೊಸ ಅಲ್ ಖೈದಾ !:

.

ಇರಾಕ್ ನಲ್ಲಿ ಶಿಯಾ- ಸುನ್ನಿ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರಿದೆ. ಅಲ್ ಖೈದಾದಿಂದ ಬೇರ್ಪಟ್ಟ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ದ ಲೆವೆಂಟ್ (ಐಎಸ್ಐಎಲ್) ಎಂಬ ಹೊಸ ಸುನ್ನಿ ಉಗ್ರ ಸಂಘಟನೆ ಹಲವು ಪಟ್ಟಣಗಳನ್ನು ವಶಪಡಿಸಿಕೊಂಡು ಕಳವಳಮೂಡಿಸಿದೆ.

ಇರಾಕ್ ರಾಜಧಾನಿ ಬಾಗ್ದಾದ್ ಸಮೀಪದಲ್ಲೇ ಸಂಘರ್ಷ ನಡೆಯುತ್ತಿದ್ದು, ಇದರಿಂದಾಗಿ ಅಲ್ಲಿ ಶುಶ್ರೂಷಕಿಯರಾಗಿ ಕೆಲಸ ಮಾಡುತ್ತಿದ್ದ 45ಕ್ಕೂ ಹೆಚ್ಚು ಭಾರತೀಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರುವ ಪ್ರಯತ್ನ ನಡೆದಿದೆ. ಈ ನಡುವೆ, ಬಾಗ್ದಾದಿಗೆ ಸಮೀಪದಲ್ಲಿ ಅಂದರೆ 60 ಕಿ.ಮೀ ದೂರದಲ್ಲಿ ಈ ಸಂಘರ್ಷ ನಡೆಯುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕೂಡಾ ಕಳವಳ ವ್ಯಕ್ತಪಡಿಸಿದೆ. ಬಾಗ್ದಾದಿನಲ್ಲಿ ಇರುವ ತನ್ನ ರಾಯಭಾರ ಕಚೇರಿ ರಕ್ಷಣೆಗಾಗಿ ಅಮೆರಿಕ ಕೂಡಾ ಸನ್ನದ್ಧವಾಗಿದೆ.

ಏನು ಈ ಹೊಸಬಿಕ್ಕಟ್ಟು ?: ಇರಾಕ್ ಹಾಗೂ ಸಿರಿಯಾವನ್ನು ವಿಭಜಿಸಿ ಹೊಸ ದೇಶದ ಆಡಳಿತಸೂತ್ರ ಹಿಡಿಯುವ ಕನಸು ಐಎಸ್ಐಎಲ್ ಉಗ್ರ ಸಂಘಟನೆಯದ್ದು. ಸುನ್ನಿ ಇಸ್ಲಾಮಿಕ್ ಆಡಳಿತ ಜಾರಿಗೆ ತರುವುದು ಇದರ ಮೂಲ ಉದ್ದೇಶ. ಇರಾಕ್ನಲ್ಲಿ ಬಹುತೇಕ ಮುಸ್ಲಿಮರೇ ಇದ್ದು, ಅವರಲ್ಲಿ ಶೇಕಡ 65 ಶಿಯಾ ಹಾಗೂ ಶೇಕಡ 35 ಸುನ್ನಿಗಳು. ಇರಾಕ್ನ ಪ್ರಧಾನಿ ನೌರಿ ಮಲಿಕಿ ಶಿಯಾ ಪಂಗಡಕ್ಕೆ ಸೇರಿದವರು. ಅವರು ಆಡಳಿತದಲ್ಲಿ ಏಕಸ್ವಾಮ್ಯ ಸಾಧಿಸುತ್ತಿದ್ದು, ಸುನ್ನಿಗಳಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂಬ ಆಕ್ರೋಶ ಇಂದಿನ ಬಿಕ್ಕಟ್ಟಿಗೆ ಕಾರಣ.

ಹಾಗೆ ನೋಡಿದರೆ, ಕಳೆದ ಆರೇಳು ತಿಂಗಳಿಂದ ಜಿಹಾದಿ ಉಗ್ರರಿಂದಾಗಿ ಇರಾಕ್ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವು ಪಟ್ಟಣಗಳನ್ನು ವಶಕ್ಕೆ ತೆಗೆದುಕೊಂಡಿರುವ ಉಗ್ರರು, ರಾಜಧಾನಿ ಬಾಗ್ದಾದ್ ಕಡೆಗೆ ನೋಟ ಬೀರಿದ್ದಾರೆ. ದಿಢೀರ್ ಇಂಥದ್ದೊಂದು
ಬೆಳವಣಿಗೆ ಹೇಗಾಯಿತು? ಎಂದು ಕೇಳಿದರೆ, ಇತಿಹಾಸ ಪುಟಗಳು ಆರು ತಿಂಗಳ ಹಿಂದಕ್ಕೆ ಹೋಗುತ್ತವೆ.

ಪ್ರಸಕ್ತ ಹಿಂಸಾಚಾರ ಆರಂಭವಾಗಿದ್ದು 2013ರ ಡಿಸೆಂಬರ್ ತಿಂಗಳಲ್ಲಿ ಸುನ್ನಿ ಜಿಹಾದಿ ಉಗ್ರರು ಫಲುಜಾ ಪಟ್ಟಣನಗರವನ್ನು ವಶಕ್ಕೆ ತೆಗೆದುಕೊಂಡರು. ಅಷ್ಟೇ ಅಲ್ಲ, ರಮದಿ ನಗರದ ಸುತ್ತಮುತ್ತಲಿನ ಪ್ರದೇಶ (ತಿಕ್ರಿತ್, ಕಿರ್ಕುಕ್, ಬೈಜಿ)ಗಳನ್ನೂ ಅತಿಕ್ರಮಿಸಿದರು.
ಕಳೆದ ವಾರ ಮತ್ತೆ ಈ ಉಗ್ರರ ಚಟುವಟಿಕೆ ಬಿರುಸಾಗಿದ್ದು, ಇರಾಕ್ನ ಎರಡನೇ ಅತಿದೊಡ್ಡ ನಗರ ಮೊಸೂಲನ್ನು ಕಳೆದ ಬುಧವಾರ ವಶಪಡಿಸಿಕೊಂಡಿದ್ದಾರೆ. ಸುಮಾರು 800 ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ನಗರಕ್ಕೆ ನುಗ್ಗುತ್ತಿದ್ದಾಗ ಅಲ್ಲಿದ್ದ 30 ಸಾವಿರ ಸೈನಿಕರು ಪಲಾಯನ ಮಾಡಿರುವುದಾಗಿ ವರದಿಯಾಗಿದೆ.

ಮೊಸೂಲ್ ವಶಪಡಿಸಲು ಕಾರಣವೇನು?: ಸಿರಿಯಾ ಮತ್ತು ಟರ್ಕಿ ಗಡಿ ಭಾಗಕ್ಕೆ ಸಮೀಪವಿರುವ ನಗರ ಮೊಸೂಲ್. ಇರಾಕ್ನ ಉತ್ತರದ ಪ್ರಮುಖ ನಗರ ಇದಾಗಿದ್ದು, ಆರ್ಥಿಕ ಹಾಗೂ ರಾಜಕೀಯ ಶಕ್ತಿಕೇಂದ್ರವೂ ಆಗಿದೆ. ಸಿರಿಯಾ ಹಾಗೂ ಟರ್ಕಿಗೆ ಹೋಗಬೇಕಾದರೆ ಮೊಸೂಲ್ ಮೂಲಕವೇ ಹಾದು ಹೋಗಬೇಕು. ಉಗ್ರರು ಈ ನಗರವನ್ನು ವಶಕ್ಕೆ ತೆಗೆದುಕೊಂಡಿರುವ ಕಾರಣ ಇರಾಕ್ ಸರ್ಕಾರಕ್ಕೆ ಉತ್ತರದ ಸಂಪರ್ಕವೇ ಕಡಿದು ಹೋದಂತಾಗಿದೆ.

ಯಾರು ಈ ಉಗ್ರರು?: ಇರಾಕ್ ಪಟ್ಟಣಗಳ ಮೇಲೆ ದಾಳಿ ನಡೆಸುತ್ತಿರುವ ಸುನ್ನಿ ಉಗ್ರರ ನಡುವೆಯೇ ಸಹಮತವಿಲ್ಲ. ಅಲ್ಖೈದಾದಲ್ಲಿದ್ದ ಉಗ್ರರ ಬಣಗಳು ಬೇರ್ಪಟ್ಟು ಇರಾಕ್ನಲ್ಲಿ ಅದರ ಪ್ರಭಾವ ಕುಗ್ಗಿದೆ. ಆದರೆ ಐಎಸ್ಐಎಲ್ ಪ್ರಭಾವ ಹೆಚ್ಚಾಗಿದೆ. ಈ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಅಲ್-ಶಾಮ್ ಎಂದೂ ಗುರುತಿಸಿಕೊಂಡಿದೆ. ಅಬು ಬಕರ್ ಅಲ್ ಬಘ್ದಾದಿ ನಾಯಕತ್ವದಲ್ಲಿ 2013ರ ಏಪ್ರಿಲ್ನಲ್ಲಿ ರಚನೆಯಾದ ಸಂಘಟನೆಯಿದು. ಬಘ್ದಾದಿ ನೇತೃತ್ವದಲ್ಲೇ ಈಗ ಇರಾಕ್ ಮೇಲಿನ ದಂಡಯಾತ್ರೆ ನಡೆಯುತ್ತಿದೆ. ಈತನಿಗೆ `ದ ಇನ್ವಿಸಿಬಲ್ ಶೇಖ್' ಎಂಬ ಅಡ್ಡ ಹೆಸರೂ ಇದೆ. ಉತ್ತರ ಬಾಗ್ದಾದ್ನ ಸಮರ್ರಾ ಈತನ ಜನ್ಮಸ್ಥಳ. 1971ರಲ್ಲಿ ಜನಿಸಿದ ಅಬು ಬಕರ್, 2003ರಲ್ಲಿ ಅಮೆರಿಕ ಮಿತ್ರಕೂಟ ಇರಾಕ್ ಮೇಲೆ ಯುದ್ಧ ಸಾರಿದಾಗ ಬಾಗ್ದಾದಿನ ಮಸೀದಿಯೊಂದರಲ್ಲಿ ಧರ್ಮಬೋಧಕನಾಗಿದ್ದ. ಆಗಲೇ ಆತ ಉಗ್ರವಾದಿಗಳ ಜತೆ ಸಂಪರ್ಕ ಸಾಧಿಸಿದ್ದ. 2005ರಲ್ಲಿ ಅಮೆರಿಕ ಸೇನೆ ಅಲ್ಖೈದಾ ಉಗ್ರರ ಜತೆಗೆ ಈತನನ್ನು ಬಂಧಿಸಿತ್ತು. ಅಲ್ಲಿಂದ ಹೊರಬಂದ ಬಳಿಕ ಅಲ್ಖೈದಾದಲ್ಲಿ ಪ್ರಭಾವಿಯಾಗಿ ಬೆಳೆದ. ಆದರೆ, ಆಂತರಿಕ ಭಿನ್ನಮತ ಕಾಣಿಸಿಕೊಂಡು ಐಎಸ್ಐಎಸ್ ಬಣದ ಜತೆ ಗುರುತಿಸಿಕೊಂಡ. ಅದರ ನಾಯಕತ್ವ ವಹಿಸಿಕೊಂಡ.

ಸರ್ಕಾರ ಮಾಡುತ್ತಿರುವುದೇನು?: ಉಗ್ರರ ಉಪಟಳ ಹೆಚ್ಚಾದಂತೆ ಉತ್ತರ ಇರಾಕ್ ಪ್ರಾಂತ್ಯದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿತು ಇರಾಕ್ ಸರ್ಕಾರ. ಅಂದಾಜು 10 ಲಕ್ಷದಷ್ಟು ಸೇನಾ ಸಿಬ್ಬಂದಿ ಇರುವ ಕಾರಣ ಉಗ್ರರನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಾಗುವುದು ಎಂದು ಪ್ರಧಾನಿ ನೌರಿ ಮಲ್ಲಿಕಿ ಘೋಷಿಸಿದ್ದಾರೆ. ಆದರೆ, ಡಿಸೆಂಬರ್ ತಿಂಗಳಿಂದೀಚೆಗೆ ಉಗ್ರರ ಪ್ರಾಬಲ್ಯ ಹೆಚ್ಚಾಗುತ್ತಿದ್ದು ಅವರು ರಾಜಧಾನಿ ಸಮೀಪದಲ್ಲೇ ಇದ್ದು, ಸರ್ಕಾರ ಕೈಗೊಂಡ ಕ್ರಮಗಳಾವುವೂ ಫಲನೀಡಿದಂತಿಲ್ಲ. ಅನ್ಬರ್ ಪ್ರಾಂತ್ಯದಲ್ಲಿ ನಡೆದ ಘರ್ಷಣೆಯ ಬಳಿಕ ಉಗ್ರರ ಪ್ರಾಬಲ್ಯ ಹೆಚ್ಚಾಗಿರುವುದು ಕಂಡುಬಂದಿದೆ.

2013ರ ಡಿಸೆಂಬರ್ 30ರಂದು ಇರಾಕ್ನ ಅನ್ಬರ್ ಪ್ರಾಂತ್ಯದ ಫಲುಜಾ ಮತ್ತು ರಮದಿ ಮೊದಲಾದ ನಗರಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಐಎಸ್ಐಎಸ್ ಉಗ್ರರು ಪ್ರಯತ್ನ ನಡೆಸಿದಾಗ ಇರಾಕ್ನ ಸೇನೆ ಜತೆಗೆ ಸಂಘರ್ಷ ಏರ್ಪಟ್ಟಿತ್ತು. ಕೆಲದಿನಗಳ ಸಂಘರ್ಷದ ಬಳಿಕ ಉಗ್ರರು ಫಲುಜಾ ಹಾಗೂ ರಮದಿ ಮೇಲೆ ಹಿಡಿತ ಸಾಧಿಸಿದರು. ಇದನ್ನು ಇರಾಕ್ ಸರ್ಕಾರ ಕಡೆಗಣಿಸಿದ್ದೇ ಈ ಬಿಕ್ಕಟ್ಟಿಗೆ ಕಾರಣವೆನ್ನಲಾಗುತ್ತಿದೆ.

 

Author : ಚಂದ್ರಶೇಖರ್ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited