Untitled Document
Sign Up | Login    
ಅಂಬಾಸಿಡರ್ ಕಾರು ಉತ್ಪಾದನೆ ಸ್ಥಗಿತ


ಕಾರು ಅಂದಾಕ್ಷಣ ಮನಸ್ಸಲ್ಲಿ ಮೂಡೋಡು ಅಂಬಾಸಿಡರ್ ಕಾರಿನ ಕಲ್ಪನೆ. ಅದೊಂದು ಕಾಲವಿತ್ತು ಅಂಬಾಸಿಡರ್ ಕಾರು ಭಾರತದ ರಸ್ತೆಗಳನ್ನಾಳಿದ ರಾಜ. ಹೌದು. 5 ದಶಕಗಳಿಗೂ ಹೆಚ್ಚುಕಾಲ ಅಂಬಾಸಿಡರ್ ಕಾರು ರಸ್ತೆಗಳನ್ನಾಳಿದ ರಾಜ ಎಂದರೆ ಖಂಡಿತಾ ತಪ್ಪಾಗಲ್ಲ.

ಕಾರು ಎಂಬ ಕಲ್ಪನೆಯೊಂದಿಗೆ ಜನರ ಮನದಲ್ಲಿ ಒಂದು ರೀತಿಯ ಭಾವನಾತ್ಮಕ ನಂಟನ್ನು ಹೊಂದಿತ್ತು ಅಂಬಾಸಿಡರ್. ಆದರೆ ಅಂತಹ ಅಂಬಾಸಿಡರ್ ಕಾರಿನ ಉತ್ಪಾದನೆ ಸ್ಥಗಿತಗೊಂಡಿದೆ. ಇನ್ನೇನಿದ್ದರು ಅಂಬಾಸಿಡರ್ ಕಾರು ರಸ್ತೆಗಳಲ್ಲಿ ಓಡುತ್ತಿದ್ದ ಕಾಲವೊಂದಿತ್ತು ಎಂದು ಕೇವಲ ನೆನಪಿಸಿಕೊಳ್ಳಬೇಕಷ್ಟೇ. ಹೌದು ಬೇಡಿಕೆ ಕುಸಿತ, ಹಣಕಾಸಿನ ಮುಗ್ಗಟ್ಟಿನಿಂದಾಗಿ ಅಂಬಾಸಿಡರ್ ಕಾರು ಉತ್ಪಾದನೆ ಅಧಿಕೃತವಾಗಿ ಸ್ಥಗಿತಗೊಂಡಿದೆ.

ಇಂಗ್ಲೆಂಡ್ ನ ಮೋರಿಸ್ ಆಕ್ಸ್ ಫೋಡ್ 3 ಮಾಡೆಲ್ ನ್ನು ಸ್ವಲ್ಪ ಬದಲಾವಣೆಮಾಡಿ 1958ರಲ್ಲಿ ಅಂಬಾಸಿಡರ್ ಕಾರನ್ನು ರೂಪಿಸಲಾಯಿತು. ಸಿ.ಕೆ.ಬಿರ್ಲಾ ಒಡೆತನದಲ್ಲಿ ಪಶ್ಚಿಮ ಬಂಗಾಳದ ಉತ್ತರಪಾರಾದಲ್ಲಿ ಅಂಬಾಸಿಡರ್ ಘಟಕ ಆರಂಭವಾಯಿತು. ಸ್ವಾತಂತ್ರ್ಯಕ್ಕೂ ಮೊದಲು ಇದು ಗುಜರಾತ್ ನಲ್ಲಿ ಮೋರಿಸ್ ಕಂಪನಿ ಕಾರುಗಳ ಜೋಡಣಾ ಘಟಕವನ್ನು ಹೊಂದಿತ್ತು. ನಂತರದ ದಿನಗಳಲ್ಲಿ ಅದೇ ಉದ್ದಿಮೆ ಹಿಂದೂಸ್ಥಾನ್ ಮೋಟಾರ್ಸ್ ಹೆಸರಿನಲ್ಲಿ ಅಂಬಾಸಿಡರ್ ಕಾರಿನ ಜನ್ಮಕ್ಕೆ ಕಾರಣವಾಯಿತು.

ಆರಂಭದಲ್ಲಿ 1,489 ಸಿಸಿಯ ಎಂಜಿನ್ ನ ಕಾರು ತಯಾರಿಕೆಯಾಗುತ್ತಿತ್ತು. ದಿನ ಕಳೆದಂತೆ 1,700 ಸಿಸಿಯ ಎಂಜಿನ್ ನಲ್ಲಿ ಕೂಡ ಅಂಬಾಸಿಡರ್ ಕಾರು ಬರತೊಡಗಿತ್ತು. ಆಂಬಿ ಎಂದೇ ಜನಪ್ರಿಯವಾಗಿದ್ದ ಅಂಬಾಸಿಡರ್, ಮಾರ್ಕ್ 1, ಮಾರ್ಕ್ 2, ಮಾರ್ಕ್, ಮಾರ್ಕ್ 3, ಮಾರ್ಕ್ 4 ಹೆಸರಲ್ಲಿ ಕಾರುಗಳಲ್ಲಿ ಸುಧಾರಣೆಯಾಗುತ್ತಾಹೋಯಿತು. ಆದಾಗ್ಯೂ ಅದರ ಮೂಲ ವಿನ್ಯಾಸ ಮಾತ್ರ ಬದಲಾಗಿರಲಿಲ್ಲ.

1983ರಲ್ಲಿ ಜಪಾನ್ ಸುಝುಕಿ ಜತೆಗೆ ಕೇಂದ್ರ ಸರ್ಕಾರ ಮಾರುತಿ ಉದ್ಯೋಗ್ ಲಿ. ಮೂಲಕ ಮಾರುತಿ 800 ಕಾರು ಉತ್ಪಾದನೆ ಆರಂಭಿಸಿತು. ಬಳಿಕ 90ರ ದಶಕದಿಂದೀಚೆಗೆ ಭಾರತಕ್ಕೆ ವಿದೇಶಿ ಕಾರುಗಳು ಬರತೊಡಗಿದವು. ಹಳೇ ವಿನ್ಯಾಸವನ್ನೇ ಹೊಂದಿದ್ದ ಅಂಬಾಸಿಡರ್ ಕಾರು ಬರಬರುತ್ತಾ ಆಕರ್ಷಣೆ ಕಳೆದುಕೊಂಡಿತ್ತು. ಹಣಕಾಸಿನ ಕೊರತೆ ಕೂಡ ಅಂಬಾಸಿಡರ್ ಕಾರು ಹಿಂದೆ ಉಳಿಯುವಂತೆ ಮಾಡಿತು.

2000ನೇ ಇಸವಿಯ ವೇಳೆಗೆ ಅಂಬಾಸಿಡರ್ ಕಾರಿನ ಬೇಡಿಕೆ ಕಡಿಮೆಯಾಗಿಹೋಗಿತ್ತು. ಆದರೆ ಒಂದು ಅಚ್ಚರಿಯ ಸಂಗತಿ ಎಂದರೆ 2013ರಲ್ಲಿ ಬ್ರಿಟನ್ ನಲ್ಲಿ ನಡೆದ ಬಿಬಿಸಿ ಟಾಪ್ ಗಿಯರ್ ಕಾರು ಪ್ರದರ್ಶನದಲ್ಲಿ ಅಂಬಾಸಿಡರ್ ಕಾರು ಪ್ರಶಸ್ತಿ ಬಾಚಿಕೊಂಡಿತ್ತು. ಆಧುನಿಕ ಶೈಲಿಯ ವಿನ್ಯಾಸದ ಕಾರುಗಳು ಸಾಲು ಸಾಲಾಗಿ ನಿಂತು ಪೈಪೋಟಿ ಇಟ್ಟರೂ ವಿಶ್ವದ ಅತಿ ಶ್ರೇಷ್ಠ ಟ್ಯಾಕ್ಸಿ ಎಂಬ ಹೆಗ್ಗಳಿಕೆ ಗಳಿಸಿದ್ದು ಅಂಬಾಸಿಡರ್ ಎಂಬುದು ಮರೆಯುವಂತಿಲ್ಲ. ಅದು ಭಾರತದ ಕಾರಿಗೆ ಸಿಕ್ಕ ಮೊದಲ ಹೆಮ್ಮೆ.

ಅಂಬಾಸಿಡರ್ ಕಾರಿನ ಇನ್ನೊಂದು ವಿಶೇಷತೆ ಎಂದರೆ ದೇಶಕ್ಕೆ ಮೊದಲ ಡೀಸೆಲ್ ಎಂಜಿನ್ ಕಾರನ್ನು ಪರಿಚಯಿಸಿದ್ದು ಅಂಬಾಸಿಡರ್. ಅಂಬಾಸಿಡರ್ ಮಾರ್ಕ್ 4ನೊಂದಿಗೆ 1489 ಸಿಸಿಯ, 37 ಬಿಹೆಚ್ ಪಿಯ ಎಂಜಿನ್ ಹೊಂದಿದ ಬಿಎಂ ಸಿ ಬಿ ಸೀರಿಸ್ ನ ಕಾರು ತಯಾರಿಸಲಾಯ್ತು. ಇದು ಭಾರತದ ಮೊದಲ ಡೀಸೆಲ್ ಕಾರು. ಸರ್ಕಾರಿ ಸೇವೆಯಲ್ಲಿಯೂ ಅಧಿಕೃತವಾಗಿ ಸೇವೆಯಲ್ಲಿಯೂ ಅಂಬಾಸಿಡರ್ ಕಾರಿತ್ತು. ಹೀಗೆ ಕಾರು ಎಂದರೆ ಅಂಬಾಸಿಡರ್ ಕಾರು ಎಂಬ ಕಲ್ಪನೆಯೊಂದಿಗೆ ಬೆಸೆದುಕೊಂಡಿದ್ದ ಅಂಬಾಸಿಡರ್ ಕಾರು ಉತ್ಪಾಧನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

 

Author : ಲೇಖಾ ರಾಕೇಶ್ .

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited