Untitled Document
Sign Up | Login    
ಸಾಹಿತಿ ಅನಂತ ಮೂರ್ತಿ ಅವರಿಗೆ ನುಡಿ ನಮನ

ಯು.ಆರ್ ಅನಂತ ಮೂರ್ತಿ

ಕುರುಚಲು ಗಡ್ಡ, ಸಮಾಜವಾದಿ ಸಿದ್ಧಾಂತ ಪ್ರತಿಪಾದನೆ, ನವಿರಾದ ಮಾತುಗಾರಿಕೆ, ಸಮಾಜ ಎದುರಿಸುತ್ತಿದ್ದ ಮೌಢ್ಯಕ್ಕೆ ಅವರದ್ದೇ ರೀತಿಯಲ್ಲಿ ಪ್ರತಿರೋಧ, ತಮ್ಮ ಅಭಿಪ್ರಾಯಗಳಿಗೆ ಎಷ್ಟೇ ಟೀಕೆ ವ್ಯಕ್ತವಾದರೂ ರಾಜೀ ಮಾಡಿಕೊಳ್ಳದ ಕಠಿಣ ಸ್ವಭಾವವುಳ್ಳ ವ್ಯಕ್ತಿಯನ್ನು ಸ್ಮರಿಸಿಕೊಂಡರೆ ಕಣ್ಣೆದುರಿಗೆ ಬಂದು ನಿಲ್ಲುವ ಚಿತ್ರ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಅನಂತ ಮೂರ್ತಿ ಅವರದ್ದು.

ಸಾಮಾನ್ಯವಾಗಿ ಎಲ್ಲಾ ಸಾಹಿತಿಗಳು ಚಿಂತಕರಲ್ಲ, ಆದರೆ ಅನಂತ ಮೂರ್ತಿ ಅವರು ಸಾಹಿತಿಯಾಗಿದ್ದರೂ ಚಿಂತಕರಾಗಿದ್ದರು.ಯಾವುದೇ ವಿಷಯವಾಗಲಿ ತಾನು ಪಡೆದ ಜ್ನಾನದಿಂದ ಸರಿಯಾಗಿ ವಿಶ್ಲೇಷಿಸಿ ಅದರ ಬಗ್ಗೆ ಮಾತಾನಾಡುತ್ತಿದ್ದರು. ಎದುರಾಳಿಯೂ ಒಪ್ಪುವಂತೆ ಅನಂತ ಮೂರ್ತಿ ತಮ್ಮ ಅಭಿಪ್ರಾಯಗಳನ್ನು ನವಿರಾಗಿ ಮಂಡಿಸುತ್ತಿದ್ದರು. ಯಾವುದೇ ವಿಷಯವಾದರೂ ತಮಗನಿಸಿದ್ದನ್ನು ಯಥಾವತ್ ಹೇಳಿ ವಿವಾದಕ್ಕೆ ಕಾರಣವಾಗಿದ್ದೂ ಇದೆ. ಅನಂತ ಮೂರ್ತಿ ಅವರ ಅದೆಷ್ಟೋ ಹೇಳಿಕೆಗಳು ವಿವಾದಕ್ಕೆ ತಿರುಗಿದರೂ ನಿಲುವು ಬದಲಾಯಿಸುತ್ತಿರಲಿಲ್ಲ. ಒಂದು ರೀತಿಯಲ್ಲಿ ಅನಂತ ಮೂರ್ತಿ ಅವರದ್ದು ವಿವಾದಾಸ್ಪದ ವ್ಯಕ್ತಿತ್ವ ಎಂದರೂ ತಪ್ಪಾಗಲಾರದು. ಇದಕ್ಕೆ ಸ್ಪಷ್ಟ ಉದಾಹರಣೆ ಮೋದಿ ಕುರಿತ ಅವರ ಇತ್ತೀಚಿನ ಹೇಳಿಕೆ. ಅನಂತ ಮೂರ್ತಿ, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ಘಟನೆಗಳೇ ಇಲ್ಲವೆಂದು ತೋರುತ್ತದೆ. ಗೋಕಾಕ್ ಚಳುವಳಿಯ ನಿರ್ಣಯದಿಂದ ಹಿಡಿದು ಮೋದಿ ಬಗೆಗಿನ ಅಭಿಪ್ರಾಯದ ವರೆಗೂ ಬರೆದಂತೆಯೇ ಬದುಕಿದ ಅನಂತ ಮೂರ್ತಿ ಅವರದ್ದು ಖಂಡತುಂಡ ಅಭಿಪ್ರಾಯ. ಕನ್ನಡ ಸಾಹಿತಿಯೂ ಮತ್ತು ಭಾರತೀಯ ಸಾಹಿತ್ಯದ ವಿಮರ್ಶಕರೂ ಆದ ಅನಂತಮೂರ್ತಿ ತಮ್ಮನ್ನು ಕನ್ನಡ ಸಂಸ್ಕೃತಿಯ Critical Insider ಎಂದು ಕರೆದುಕೊಳ್ಳುವುದಕ್ಕೆ ಬಹುಶಃ ಇಂತಹ ವ್ಯಕ್ತಿತ್ವವೇ ಕಾರಣ ಇರಬೇಕು.
ಅನಂತ ಮೂರ್ತಿ ಅವರ ಮತ್ತೊಂದು ವೈಶಿಷ್ಟ್ಯವೆಂದರೆ ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತಿದ್ದ ಅಭಿಪ್ರಾಯ. ಗೋಕಾಕ್ ಚಳುವಳಿ ಇದಕ್ಕೆ ಉತ್ತಮ ಉದಾಹರಣೆ ಕನ್ನಡ ಭಾಷೆಗಾಗಿ ನಡೆದ ಗೋಕಾಕ್ ಚಳುವಳಿಗೆ ಬೆಂಬಲ ವ್ಯಕ್ತಪಡಿಸದೇ ಸಮೂಹ ಸನ್ನಿ ಎಂದು ಜರೆದಿದ್ದರು ಅನಂತಮೂರ್ತಿ. ಆನಂತರದ ದಿನಗಳಲ್ಲಿ ಕೊನೆಯುಸಿರೆಳೆಯುವವರೆಗೂ ಸಹ ಭಾಗವಹಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಬೇಕೆಂಬ ಸಲಹೆ ನೀಡುತ್ತಿದ್ದರು. ಗೋಕಾಕ್ ಚಳುವಳಿಗೆ ಬೆಂಬಲಿಸದೇ ಇದ್ದರೂ ಸಹ ಅವರಿಗೆ ಕನ್ನಡದ ಬಗ್ಗೆ ಇತರ ಸಾಹಿತಿಗಳಷ್ಟೇ ಅಭಿಮಾನವಿತ್ತು, ಅಥವಾ ಇಂಗ್ಲಿಷ್ ಭಾಷೆ ಮೇಲೆ ಹಿಡಿತವಿದ್ದರೂ ಅವರೆಂದಿಗೂ ಕನ್ನಡ ಭಾಷೆಯ ಬಗ್ಗೆ ತಾತ್ಸಾರ ತೋರಿರಲಿಲ್ಲ. ಜಗತ್ತಿನ ಬೇರೆ ಬೇರೆ ಭಾಷೆಗಳ ಹಲವು ಮಹತ್ವದ ಕೃತಿಗಳು ಇಂಗ್ಲೀಷಿಗೆ ಸಮರ್ಥವಾಗಿ ಅನುವಾದಗೊಳ್ಳಲು ಸಾಧ್ಯವಿಲ್ಲ ಎನ್ನುವುದ ಅವರ ಅಭಿಪ್ರಾಯ.

ಅಭಿಪ್ರಾಯ ಬದಲಾವಣೆಗೆ ಮತ್ತೊಂದು ಉತ್ತಮ ಉದಾಹರಣೆಯೆಂದರೆ ದಸರಾ ಮೆರವಣಿಗೆ ಸಲ್ಲದು ಎಂದು ಹೋರಾಟ ಮಾಡಿದ ಅನಂತ ಮೂರ್ತಿ ಮುಂದೊಮ್ಮೆ ತಾವೇ ದಸರಾ ಮಹೋತ್ಸವವನ್ನು ಉಧ್ಘಾಟಿಸಿದ್ದರು.

ಗೋಕಾಕ್ ಚಳುವಳಿ ಸಂದರ್ಭದಲ್ಲೇ ಚಳುವಳಿಗೆ ಬೆಂಬಲಿಸದೇ ಕನ್ನಡದ ಜ್ನಾನಪೀಠಿ ಕನ್ನಡ ವಿರೋಧಿಯೆಂದೇ ಹಲವರಿಂದ ಗುರುತಿಸಿಕೊಳ್ಳಬೇಕಾಯಿತು. ಅನಂತ ಮೂರ್ತಿ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಸಂದರ್ಭದಲ್ಲಿಯೂ ಇದೇ ವಿಷಯ ಅವರ ಆಯ್ಕೆಗೆ ಮುಳುವಾಗಿ ಪರಿಣಮಿಸಿತ್ತು. ತಾವು ನಂಬಿದ್ದ ಸಿದ್ಧಾಂತದ ಚೌಕಟ್ಟಿನಲ್ಲೇ ಪದೇ ಪದೇ ಅಭಿಪ್ರಾಯಗಳನ್ನು ಬದಲಿಸುತ್ತಿದ್ದರು. ರಾಜಕೀಯ ವಲಯದಲ್ಲಂತೂ ಅನಂತ ಮೂರ್ತಿ ಅವರ ಹೇಳಿಕೆ ಅವಕಾಶವಾದಿ ಎಂಬ ಹಣೆಪಟ್ಟಿಯೂ ಅಂಟಿದೆ. ಅನಂತ ಮೂರ್ತಿ ಅವರು ಆಳುವ ಸರ್ಕಾರಕ್ಕೆ ಸಮೀಪದಲ್ಲಿರುತ್ತಾರೆ ಎಂಬ ಕಾರಣಕ್ಕೆ ಅವರನ್ನೋರ್ವ ರಾಜಕವಿ ಎಂದು ಅಣಕಿಸಲಾಗುತ್ತಿತ್ತು. ಲೋಹಿಯಾ ಗೋಪಾಲಗೌಡ, ಜೆ.ಹೆಚ್ ಪಟೇಲ್ ಅವರ ಜತೆ ಗುರುತಿಸಿಕೊಂಡಿದ್ದ ಅನಂತ ಮೂರ್ತಿ ಅವರನ್ನು ರಾಜಕೀಯ ಬಹುಮಟ್ಟಿಗೆ ಆಕರ್ಷಿಸಿತ್ತು. ಆ.22ರಂದು ದಿನಪತ್ರಿಕೆಯೊಂದರಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರು ಹೇಗಿರಬೇಕೆಂಬ ಬಗ್ಗೆ ಪತ್ರಕರ್ತ ಭರತಾದ್ರಿ ಅವರು ಲೇಖನವೊಂದನ್ನು ಬರೆದಿದ್ದರು. ಅನಂತ ಮೂರ್ತಿಗಳು ತಮಗೆ ನೀಡಿದ್ದ ಸಲಹೆಗಳನ್ನೂ ಉಲ್ಲೇಖಿಸಿದ್ದರು. ಅನಂತ ಮೂರ್ತಿ ಅವರಿಗಿದ್ದ ರಾಜಕೀಯ ಒಡನಾಟ, ವಿವಿಧ ಸ್ಥರಗಳಲ್ಲಿ ಅನಂತಮೂರ್ತಿ ಅವರು ನೀಡುತ್ತಿದ್ದ ಸಲಹೆಗಳು ಉಪಯುಕ್ತವಾಗುತ್ತಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ 'ಅನಂತ' ಸಲಹೆಗಳನ್ನು ನೀಡಿದ್ದಾರೆ.
ವಿವಾದಗಳು, ವಿಚಾರಗಳೇನೇ ಇರಲಿ ಅನಂತ ಮೂರ್ತಿ ಹೇಗೆ ಪ್ರತಿಕ್ರಿಯಿಸುತ್ತಾರೆಂಬ ಕುತೂಹಲ ಇದ್ದೇ ಇರುತ್ತಿತ್ತು. ಅನಂತ ಮೂರ್ತಿ ಒಂದೇ ಬಾರಿಗೆ ವಿಭಿನ್ನ ಸ್ವಭಾವಗಳನ್ನು ಪ್ರದರ್ಶಿಸುವ ವ್ಯಕ್ತಿಯಾಗಿದ್ದರು. ಅವರ ಚಿಂತನೆಗಳು ಒಪ್ಪುತ್ತಲೇ ವಿರೋಧಿಸುವಂಥದ್ದಾಗಿರುತ್ತಿದ್ದವು. ಈ ವೈಶಿಷ್ಟ್ಯದಿಂದಲೇ ಅವರ ಚಿಂತನೆಗಳು ಖ್ಯಾತ ಬರಹಗಾರ ರಾಮಚಂದ್ರ ಗುಹಾ ಅವರಿಗೆ ಸಾರ್ವಜನಿಕ ಬುದ್ಧಿಜೀವಿಯ ('public intellectual') ಪ್ರಕಾರವಾಗಿ, ವೈಜ್ಞಾನಿಕ ಪಾರಿಭಾಷೆಯಲ್ಲಿ ಹೇಳುವುದಾದರೆ ಸುಧೀಂದ್ರ ಹಾಲ್ದೊಡ್ಡೇರಿ ಅವರ ಪ್ರಕಾರ ಕ್ವಾಂಟಮ್ ಕಣಗಳಂತೆಯೇ ಗೋಚರಿಸುತ್ತವೆ. ಈ ಕಾರಣಗಳಿಂದಲೇ ಅನಂತ ಮೂರ್ತಿ ಅವರಿಗೆ ಓದುಗರ ಸಮಾನವಾಗಿ ಅವರ ಸಿದ್ಧಾಂತವನ್ನು ಒಪ್ಪದವರೂ ಇದ್ದರೆನಿಸುತ್ತದೆ.

ಭಾಷಣದ ವಿಚಾರದಲ್ಲಿ ಅವರು ಎಂದಿಗೂ ತಾಜಾ ವಿಚಾರಗಳನ್ನು ಪ್ರಸ್ತುತಪಡಿಸುತ್ತಿದ್ದರು. ಟೀಕೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದ ನಿರಾಶಾವಾದಿಗಳಾಗದೆ, ಪ್ರತಿ ಬಾರಿಯೂ ತಮ್ಮನ್ನು ಆತ್ಮವಿಮರ್ಶೆಗೊಳಪಡಿಸಿಕೊಳ್ಳುತ್ತಿದ್ದರು. ಅನಂತ ಮೂರ್ತಿ ನವ್ಯ ಸಾಹಿತ್ಯದ ಮಹತ್ವದ ಲೇಖಕ. ಎಲಿಯಟ್ಸ್, ಮತ್ತು ಏಟ್ಸ್ ನಿಂದ ಪ್ರಭಾವಿತನಾಗಿ ಸಾಹಿತ್ಯ ಕೃಷಿ ನಡೆಸಿದರು. ಸವಾಲುಗಳನ್ನು ಹಾಕಲು ಅವರು ಹಿಂದೇಟು ಹಾಕುತ್ತಿರಲಿಲ್ಲ, ಸವಾಲುಗಳನ್ನು ಸ್ವೀಕರಿಸಲು ಅನಂತ ಮೂರ್ತಿ ಎಂದಿಗೂ ಸಿದ್ಧರಾಗೇ ಇರುತ್ತಿದ್ದರು. ಸವಾಲುಗಳೊಂದಿಗೇ ಜೀವನ ನಡೆಸಿದ ಬುದ್ಧಿ ಜೀವಿ ಇಂದು ನಮ್ಮೊಂದಿಗಿಲ್ಲ, ಅವರು ಕೃತಿಗಳು ಮಾತ್ರ ಅಮರವಾಗಿರುತ್ತವೆ.

 

Author : ಬೆಂಗಳೂರು ವೇವ್ಸ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited