Untitled Document
Sign Up | Login    
ಅಭಿವೃದ್ಧಿ ಪಥಕ್ಕೆ ಮೋದಿ ಸರ್ಕಾರದ ಭರವಸೆಯ ಬಜೆಟ್

ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ

ವಿತ್ತ ಸಚಿವ ಅರುಣ್ ಜೇಟ್ಲಿ ಎನ್.ಡಿ.ಎ ಸರ್ಕಾರದ ಮೊದಲ ಬಜೆಟ್ ಮಂಡನೆ ಮಾಡಿದ್ದು, ಇದರಲ್ಲಿ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂಬ ಘೋಷ ವಾಕ್ಯದಂತೆಯೆ ಎಲ್ಲಾ ವರ್ಗ, ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.

ಭಾರತದ ಸಂಸದೀಯ ಇತಿಹಾಸದ ಬಹುತೇಕ ಭಾಗಗಳಲ್ಲಿ ಬಜೆಟ್ ಎಂದರೆ ಮತಕ್ಕಾಗಿ ನಿರ್ದಿಷ್ಠ ವರ್ಗಕ್ಕೆ ಬಕೆಟ್ ಹಿಡಿಯುವುದೆಂಬ ಭಾವನೆ ಮೂಡಿತ್ತು. ಅಥವಾ ಮಾಡಲೇ ಬೇಕಾದ ಕರ್ತವ್ಯವಾಗಿತ್ತು. ಅಲ್ಪಸಂಖ್ಯಾತರೆಂಬ ಒಂದೇ ಕಾರಣಕ್ಕೆ ಅಲ್ಪಸಂಖ್ಯಾತ ನಿಧಿಗೆ ಮನಸೋ ಇಚ್ಛೆ ಅನುದಾನ ನೀಡುವುದು, ಸಾಲ ಮನ್ನಾ ಮಾಡುವುದು, ಅಗ್ಗದ ಅಕ್ಕಿ ಯೋಜನೆ, ಇತರರಿಗಿಂತ ಆ ವರ್ಗವನ್ನು ಪ್ರತ್ಯೇಕವಾಗಿಯೇ ಇರಿಸಿಕೊಂಡು ಬರುವ ಪರಿಪಾಠದ ಎದುರು ಎನ್.ಡಿ.ಎ ಸರ್ಕಾರದ ಬಜೆಟ್ ಹೊಸ ನಿಜವಾದ ಅಭಿವೃದ್ಧಿ ಬಗ್ಗೆ ಭರವಸೆ ಮೂಡಿಸಿದೆ.

ಮುಂಗಡ ಪತ್ರದಲ್ಲಿ ಘೋಷಣೆಯಾಗಿರುವ ಯೋಜನೆಗಳಾದ ದೇಶಾದ್ಯಂತ 100 ಸ್ಮಾರ್ಟ್ ಸಿಟಿ ನಿರ್ಮಾಣ, ಡಿಜಿಟಲ್ ಇಂಡಿಯಾ, ಗ್ರಾಮ ಜ್ಯೋತಿ ಯೋಜನೆ, ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ ರಚನೆ, ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ನೂತನ ಯೋಜನೆ, ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಗಳು ಜನಪ್ರಿಯತೆಗಿಂತಲೂ ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಲಿವೆ.
ನೂತನ ಸರ್ಕಾರ ಬಂದ ತಕ್ಷಣ ತಮಗೆ ಮತ ನೀಡಿದ ವರ್ಗಕ್ಕೆ ಕೃತಜ್ನರಾಗಿದ್ದೇವೆ ಎಂದು ತೋರಿಸಿಕೊಳ್ಳಲು 'ಮನ್ನಾ' ಗಳ ಪಟ್ಟಿಯನ್ನೇ ಘೋಷಿಸುತ್ತಾರೆ. ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಸಾಲ ಮನ್ನ, ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುವವರು ಕೃಷಿಕರಿಗೆ ನೀಡಿದ್ದ ಸಾಲ ಮನ್ನಾ ಮಾಡುತ್ತಾರೆ. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, 2013ರಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸಚಿವ ಸಂಪುಟ ಸಭೆಯನ್ನೂ ನಡೆಸದೇ ತಮಗೆ ಮತ ನೀಡಿದವರಿಗೆ ಕೃತಜ್ನತೆ ತೋರಲು ಎಸ್.ಸಿ.ಎಸ್.ಟಿ ಅಭಿವೃದ್ಧಿ ನಿಗಮ, ಮಂಡಳಿಗಳ 349ಕೋಟಿ, ಎಸ್.ಸಿ.ಎಸ್.ಟಿ ಅಭಿವೃದ್ಧಿ ನಿಗಮ, ಮಂಡಳಿಗಳ 349ಕೋಟಿ ಸಾಲ ಮನ್ನಾ ಮಾಡಿದ್ದರು. ಇಂಥಹ ನಿರ್ಧಾರಗಳನ್ನು ಬಜೆಟ್ ಸಂದರ್ಭದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುವ ಸರ್ಕಾರಗಳು ತೆಗೆದುಕೊಂಡಿರುವ ಉದಾಹರಣೆಗಳಿವೆ. ತಕ್ಷಣಕ್ಕೆ ಸಾಲ ಮನ್ನಾ ಫಲಾನುಭವಿಗಳಾಗಿದ್ದ ರೈತರು ಆ ನಂತರದ ದಿನಗಳಲ್ಲಿ ಎದುರಿಸುವ ಸಮಸ್ಯೆಗಳನ್ನು ಸರ್ಕಾರ ಮರತೇ ಬಿಡುತ್ತದೆ.

ಎನ್.ಡಿ.ಎ ಸರ್ಕಾರದ ಬಜೆಟ್ ನಲ್ಲಿ ಉಚಿತವಾಗಿ ಸಾಲಾ ಮನ್ನಾದ ಸುಳಿವೂ ದೊರೆತಿಲ್ಲ. ಜನರನ್ನು ಸೋಮಾರಿಗಳನ್ನಾಗಿ ಮಾಡದೇ ಯಾವುದೇ ಕ್ಷೇತ್ರವಾದರೂ ಮೂಲಸೌಕರ್ಯ ನೀಡಿ ಉತ್ಪಾದನೆ ಹೆಚ್ಚಿಸುವ ಮೂಲಕ ದೇಶ ಹಾಗೂ ದುಡಿಯುವ ವರ್ಗದ ಉದ್ಧಾರಕ್ಕಾಗಿ ಕಠಿಣ ನಿರ್ಧಾರ ಕೈಗೊಂಡಿರುವುದು ಅಭಿವೃದ್ಧಿ ಪರ ಎನ್.ಡಿ.ಎ ಸರ್ಕಾರದ ದೂರದೃಷ್ಟಿಯನ್ನು ಸ್ಪಷ್ಟಪಡಿಸುತ್ತದೆ.
ತಂತ್ರಜ್ನಾನವನ್ನು ಗ್ರಾಮೀಣಭಾಗಗಳಿಗೂ ತಲುಪಿಸುವಲ್ಲಿ ಮೋದಿ ಮಾದರಿ ದೇಶಕ್ಕೇ ಅಳವಡಿಕೆಯಾಗುವುದು ಬಜೆಟ್ ಮೂಲಕ ಖಾತ್ರಿಯಾಗಿದೆ. ಗಂಗಾ ನದಿ ಪುನಶ್ಚೇತನ, ಪ್ರವಾಸೋದ್ಯಮ, ಕೈಗಾರಿಕೆ, ಕೃಷಿ, ಅರ್ಥ ವ್ಯವಸ್ಥೆ, ಸಬ್ಸಿಡಿ ಸೇರಿದಂತೆ ಪ್ರತಿಯೊಂದು ಕ್ಷೇತ್ರ, ವಿಷಯಗಳಲ್ಲೂ ಎನ್.ಡಿ.ಎ ಸರ್ಕಾರದ ಬಜೆಟ್ ನಲ್ಲಿ ವಿವೇಕರಹಿತ ಯೋಜನೆಗಳ ಘೋಷಣೆ ಇಲ್ಲ. ಯುಪಿಎ ಅಥವಾ ಇನ್ನಿತರ ಸರ್ಕಾರಗಳಲ್ಲಿ ಘೋಷಣೆಯಾಗುತ್ತಿದ್ದ 'ಕಲರ್ ಫುಲ್' ಯೋಜನೆಗಳಿಗಿಂತಲೂ ಪ್ರಸಕ್ತ ಬಜೆಟ್ ವಾಸ್ತವಕ್ಕೆ ಹತ್ತಿರವಾಗಿದೆ.

ಇನ್ನು ಸರ್ದಾರ್ ವಲ್ಲಭ ಭಾಯ್ ಪಟೇಲ್ ನಿರ್ಮಾಣಕ್ಕಾಗಿ 200ಕೋಟಿ ರೂ ಘೋಷಣೆ ಬಾಗೆ ತಗಾದೆ ಎತ್ತುತ್ತಿರುವುದು ವಿಷಾದದ ಸಂಗತಿ. ಅಮೆರಿಕಾಗೆ ಭೇಟಿ ನೀಡಿದವರು ಎಂದಿಗೂ ಸ್ಟಾಚ್ಯೂ ಆಫ್ ಲಿಬರ್ಟಿಯನ್ನು ನೋಡದೇ ವಾಪಸ್ಸಾಗುವುದಿಲ್ಲ. ಲಿಬರ್ಟಿ ಪ್ರತಿಮೆ ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಅಂತೆಯೇ ಇಂದು ಘೋಷಣೆಯಾಗಿರುವ 200ಕೋಟಿ ರೂ ಬಜೆಟ್ ನ ಪ್ರತಿಮೆ ಯೋಜನೆಯೂ ಮುಂದೊಂದು ದಿನ ಭಾರತಕ್ಕೆ ಭೇಟಿ ನೀಡಿದವರೆಲ್ಲರೂ ಗುಜರಾತ್ ನಲ್ಲಿರುವ ಪಟೇಲ್ ಅವರ ಪ್ರತಿಮೆಯನ್ನು ನೋಡದೇ ಹೋಗಲು ಸಾಧ್ಯವಿಲ್ಲ ಎಂಬ ಆಶಾಭಾವನೆ ಮೂಡಿಸುತ್ತದೆ. ಗುಜರಾತ್ ನಲ್ಲಿ ನರ್ಮದಾ ನದಿಯನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಿ ಹಣಗಳಿಕೆ ಸಾಧ್ಯ ಎಂಬುದನ್ನು ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ಘೋಷಣೆಯಾಗಿರುವ ಬಜೆಟನ್ನು ಕಾರ್ಯರೂಪಕ್ಕೆ ತರಲು ಮೋದಿ ಮಾದರಿ ಇದ್ದೇ ಇರುವುದರಿಂದ ಇತರ ಸರ್ಕಾರಗಳಿಗಿಂತ ಎನ್.ಡಿ.ಎ ಸರ್ಕಾರದ ಬಜೆಟ್ ಕಾರ್ಯರೂಪಕ್ಕೆ ಬರಲಿದೆ ಎಂದು ಆಶಿಸಬಹುದು.


 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited