Untitled Document
Sign Up | Login    
ಕೈ ಪಾಳಯದಲ್ಲಿ ತಪ್ಪಿದೆ 'ರಾಗಾ'; ಕೇಳುತಿದೆ ನಾಯಕರ ಅಪಸ್ವರ !

.

ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದೊಳಗೆ ರಾಹುಲ್ ಗಾಂಧಿ (ರಾಗಾ) ನಾಯಕತ್ವಕ್ಕೆ ಎದುರಾಗಿದ್ದ ಸವಾಲಾಗಿತ್ತು. ಸ್ವಕ್ಷೇತ್ರದಲ್ಲೂ ಪೈಪೋಟಿ ಎದುರಿಸಿದ್ದ ರಾಗಾ ನಾಯಕತ್ವದ ಕುರಿತ 'ಅಪಸ್ವರ' ಗಟ್ಟಿದನಿಯಲ್ಲಿ ಕೇಳಿಸತೊಡಗಿದೆ. ಎಲ್ಲರೂ ಈಗ ಪ್ರಿಯಾಂಕಾ ಗಾಂಧಿ ಎಂಟ್ರಿ ಬಯಸುತ್ತಿದ್ದಾರೆ!.

ಪಕ್ಷವನ್ನು ಮೂರನೇ ಅವಧಿಗೆ ಅಧಿಕಾರಕ್ಕೇರಿಸುವ ಪ್ರಯತ್ನದಲ್ಲಿ ರಾಗಾ ಆಂಡ್ ಟೀಮ್ ವಿಫಲವಾಗಿರುವುದು ಇತಿಹಾಸ. ಆದರೆ ಅದರ ಪರಿಣಾಮ ಪ್ರಸ್ತುತ. ಶನಿವಾರ ಕೂಡಾ ರಾಜಸ್ಥಾನದ ಕಾಂಗ್ರೆಸ್ ನಾಯಕರೊಬ್ಬರು ರಾಹುಲ್ ಗಾಂಧಿಯನ್ನು "ಜೋಕರ್ ಗಳ ತಂಡದ ಮ್ಯಾನೇಜಿಂಗ್ ಡೈರೆಕ್ಟರ್' ಎಂದು ಲೇವಡಿ ಮಾಡಿದ್ದು, ಪಕ್ಷದೊಳಗಿನ "ಅಪಸ್ವರ''ದ ಒಂದು ಮುಖ.

ರಾಜಸ್ಥಾನದ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ಬಹಳ ಕಟುವಾಗಿ ಗಾಂಧಿ ಕುಟುಂಬದ ಕುಡಿಯ ನಾಯಕತ್ವವನ್ನು ಟೀಕಿಸಿದ್ದು, "ಪಕ್ಷವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕೆಂಬ ದಿಸೆಯ ಅರಿವೇ ರಾಹುಲ್ ಗಾಂಧಿಗಿಲ್ಲ. ಅಲ್ಲದೇ ಯಾವುದೇ ನೀತಿ ಕೂಡಾ ಇಲ್ಲ. ರಾಗಾ ಮತ್ತು ಅವರ ಸಲಹೆಗಾರರೇ ಪಕ್ಷದ ಹೀನಾಯ ಸೋಲಿಗೆ ಕಾರಣ'' ಎಂದು ಹರಿಹಾಯ್ದಿದ್ದಾರೆ.

ಮಗನ ಮೇಲೆ ಮಮಕಾರ ತೋರುವ ಬದಲು ಸೋನಿಯಾ ಗಾಂಧಿ ಅವರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಗಮನಹರಿಸಿದ್ದರೆ ಹೀಗಾಗುತ್ತಿರಲಿಲ್ಲ. ರಾಜಸ್ಥಾನದಲ್ಲಿ ಒಂದು ಸ್ಥಾನವನ್ನೂ ಗೆಲ್ಲುವುದು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಾಗಿಲ್ಲ. ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲೂ ಪಕ್ಷದ ಪ್ರದರ್ಶನ ತೀರಾ ಕಳಪೆಯಾಗಿತ್ತು ಎಂದು ಶರ್ಮಾ ಟೀಕಿಸಿದ್ದಾರೆ.

ಕೆಲದಿನಗಳ ಹಿಂದಷ್ಟೇ ಕೇರಳದ ಕಾಂಗ್ರೆಸ್ ನಾಯಕ ಟಿ.ಎಚ್. ಮುಸ್ತಾಫ ಅವರು ರಾಹುಲ್ ಗಾಂಧಿಯನ್ನು "ಜೋಕರ್'' ಎಂದಿದ್ದರು. ಇದಕ್ಕಾಗಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಿದ ಘಟನೆಯೂ ನಡೆದಿದೆ. ಇದರ ಬೆನ್ನಲ್ಲೇ ರಾಜಸ್ಥಾನದಲ್ಲಿ ಶರ್ಮಾ "ಅಪಸ್ವರ'' ಜೋರಾಗಿ ಕೇಳಿಸಿದೆ. ಸೋಲಿನ ಕಹಿ ಜತೆಗೆ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ಗಂಭೀರ ಸ್ವರೂಪ ತಾಳಿದೆ. ಇತ್ತೀಚೆಗೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಹೋಗದಂತೆ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಆಳ್ವಿಕೆಯಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿತ್ತು ಎಂದು ಮಿಜೋರಂ ಮುಖ್ಯಮಂತ್ರಿ ಲಾಲ್ ತನ್ ಹವ್ಲ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಪುಷ್ಟಿ ನೀಡುವಂತೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕಾಂಗ್ರೆಸ್ ಆಳ್ವಿಕೆ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭಕ್ಕೆ ಹಾಜರಿರಲಿಲ್ಲ.

ಲಾಲ್ ತನ್ ಹವ್ಲ ಅಷ್ಟಕ್ಕೇ ಸುಮ್ಮನಾಗಿಲ್ಲ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವೇಳೆ, ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕ್ಕೆ ತಕ್ಕ ಪ್ರತಿಫಲ ಪಡೆದುಕೊಂಡಿದೆ. ಈಗ ಸೋಲನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದೆ ಎಂದು ಹೇಳಿದ್ದಾರೆ. ನೇರವಾಗಿ ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡದೇ ಹೋದರೂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಿರಿಯ ನಾಯಕರಾದ ಮಣಿಶಂಕರ ಅಯ್ಯರ್ ಮೊದಲಾದವರ ಬಗ್ಗೆ ಕಿಡಿಕಾರಿದ್ದಾರೆ. ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದರಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಈ ಗತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆ ಸ್ವೀಕರಿಸದೇ ಹೋದರೂ, ಮಾಜಿ ಸಚಿವ ಕೆ.ವಿ.ಥಾಮಸ್, ಎಂ.ಎಂ. ಪಲ್ಲಂರಾಜು ಸೇರಿದಂತೆ ಬಹುತೇಕ ನಾಯಕರು ಪ್ರಿಯಾಂಕಾ ಗಾಂಧಿ ಪಕ್ಷದಲ್ಲಿ ಸಕ್ರಿಯರಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಗ್ರಾದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಪ್ರಿಯಾಂಕಾರ ಪರವಾಗಿರುವ ಘೋಷಣೆಯ ಬ್ಯಾನರ್ ಕಾಣಿಸಿಕೊಂಡಿದೆ. ಇದರಲ್ಲಿ, ಚಲೋ ಕಾಂಗ್ರೆಸ್ ಕಿ ಓರ್.. ಪ್ರಿಯಾಂಕಾ ಗಾಂಧಿ ಕೇ ಸಾಥ್ ಎಂಬ ಘೋಷಣೆಯೂ ಇದೆ. ಈ ಎಲ್ಲ ಬೆಳವಣಿಗೆಯೊಂದಿಗೆ ರಾಹುಲ್ ಗಾಂಧಿ ವರ್ಚಸ್ಸು ಪಕ್ಷದೊಳಗೂ ಕುಸಿದಿರುವುದು ಸ್ಪಷ್ಟವಾಗಿದೆ.

 

Author : ಹನುಮೇಶ್ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited