Untitled Document
Sign Up | Login    
ಬ್ರಿಟಿಷರ ಪಿತೂರಿಗೆ ಬಲಿಯಾದರೇ ಭಗತ್ ?

.

ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು ಈ ಮೂವರನ್ನು ಭಾರತೀಯರೆಂದೂ ಮರೆಯಲಾರರು. ಭಾರತದ ಸ್ವಾತಂತ್ರ್ಯ ಸಮರದಲ್ಲಿ ಹುತಾತ್ಮರಾದ ಅಮರ ಸೇನಾನಿಗಳಿವರು. ಬ್ರಿಟಿಷ್ ಅಧಿಕಾರಿ ಜಾನ್ ಪಿ. ಸ್ಯಾಂಡರ್ಸ್ ಹತ್ಯೆ ಪ್ರಕರಣದ ಆರೋಪಿಗಳು ಇವರು ಎಂದೇ ಇದುವರೆಗೆ ತಿಳಿಯಲಾಗಿತ್ತು. ಈ ಬಿಸಿ ರಕ್ತದ ಹೋರಾಟಗಾರರನ್ನು ಗಲ್ಲಿಗೇರಿಸಿ ಬರೋಬ್ಬರಿ 83 ವರ್ಷಗಳ ಬಳಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿ ಆಘಾತ ಮೂಡಿಸುವಂಥದ್ದು..!

ಭಾರತದ ಸ್ವಾತಂತ್ರ್ಯ ಸಂಗ್ರಾಮ ತಾರಕಾವಸ್ಥೆಯಲ್ಲಿದ್ದ ಕಾಲವದು. 1928ರಲ್ಲಿ ಭಾರತದ ಸ್ವಾತಂತ್ರ್ಯ ಸೇನಾನಿ ಲಾಲಾ ಲಜಪತ್ ರಾಯ್ ಅವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈದ ಬ್ರಿಟಿಷ್ ಅಧಿಕಾರಿ ಜಾನ್ ಪಿ. ಸ್ಯಾಂಡರ್ಸ್. ತರುವಾಯ ಈ ಅಧಿಕಾರಿಯನ್ನು ಸ್ವಾತಂತ್ರ್ಯ ಹೋರಾಟಗಾರರು ಹತ್ಯೆ ಮಾಡಿದ್ದರು. ಈ ಅಪರಾಧ ಪ್ರಕರಣದಲ್ಲಿ ಯುವ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು ಅವರನ್ನು ಅಪರಾಧಿಗಳೆಂದು ಘೋಷಿಸಿದ ಲಾಹೋರ್ ಕೋರ್ಟ್ ಮರಣದಂಡನೆ ತೀರ್ಪು ನೀಡಿತ್ತು. ಇದರಂತೆ ಅವರನ್ನು ಗಲ್ಲಿಗೇರಿಸಿದ್ದು ಈಗ ಇತಿಹಾಸ..

ಲಾಹೋರಿನ ಭಗತ್ ಸಿಂಗ್ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಇಮ್ತಿಯಾಜ್ ರಶೀದ್ ಖುರೇಷಿ ಈ ಪ್ರಕರಣದ ಬೆನ್ನು ಬಿದ್ದು, ಮರುತನಿಖೆಗೆ ಆಗ್ರಹಿಸಿ ನಡೆಸಿದ ಹೋರಾಟ ಫಲಿಸಿದೆ. ಸ್ಯಾಂಡರ್ಸ್ ಹತ್ಯೆ ಪ್ರಕರಣದ ಎಫ್ಐಆರ್ ನಲ್ಲಿ ಏನಿತ್ತು ಎಂಬುದು ಅರಿವಿಲ್ಲದೇ ಹೋದರೂ, ಖುರೇಷಿ ಮರುತನಿಖೆಗೆ ಆಗ್ರಹಿಸುವಾಗ ಭಗತ್ ಸಿಂಗ್ ಅವರನ್ನು ಕುತಂತ್ರದಿಂದ ಗಲ್ಲಿಗೇರಿಸಲಾಗಿದೆ ಎಂದು ದೂರು ಅರ್ಜಿಯಲ್ಲಿ ಆರೋಪಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಲಾಹೋರಿನ ಸೆಷೆನ್ಸ್ ಕೋರ್ಟ್ ಸ್ಥಳೀಯ ಅನಾರ್ಕಲಿ ಪೊಲೀಸ್ ಠಾಣೆಯಲ್ಲಿರುವ ಎಫ್ ಐಆರ್ ಕಡತ ಒದಗಿಸುವಂತೆ ಸೂಚಿಸಿದೆ. ಇದರಂತೆ ಪೊಲೀಸರು ಆ ಕಡತವನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ. ಇದರ ದೃಢೀಕೃತ ಪ್ರತಿಯನ್ನು ಕೋರ್ಟ್ ರಶೀದ್ ಗೆ ನೀಡಿದೆ.

ಉರ್ದು ಭಾಷೆಯಲ್ಲಿರುವ ಈ ಎಫ್ಐಆರ್ ಪ್ರತಿಯಲ್ಲಿ ಹೇಳಿರುವ ಪ್ರಕಾರ, 1928ರ ಡಿ.17ರಂದು ಇಬ್ಬರು ಬಂದೂಕುಧಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 5 ಅಡಿ 5 ಇಂಚು ಎತ್ತರದ, ಹಿಂದು ಮುಖ ಚಹರೆ, ಕುಡಿ ಮೀಸೆ, ತೆಳ್ಳಗೆ ಕಟ್ಟು ಮಸ್ತಾದ ಶರೀರ ಹೊಂದಿದ ವ್ಯಕ್ತಿ ಬೂದು ಬಣ್ಣದ ಕುರ್ತಾ, ಸಣ್ಣ ಕಪ್ಪು ಹ್ಯಾಟ್ ಧರಿಸಿ ಬಂದು ಈ ಕೃತ್ಯವೆಸಗಿದ್ದಾನೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 1201 ಹಾಗೂ 109ರಡಿ ಪ್ರಕರಣ ದಾಖಲಾದ ಉಲ್ಲೇಖವಿದೆ.

ಗಮನಿಸಬೇಕಾದ ಅಂಶವೆಂದರೆ, ಸಾಂಡರ್ಸ್ ಹತ್ಯೆ ಪ್ರಕರಣದ ಎಫ್ಐ ಆರ್ ನಲ್ಲಿ ಭಗತ್ ಸಿಂಗ್ ಮತ್ತು ಸಹಚರರ ಹೆಸರೇ ಇರಲಿಲ್ಲ. 450 ಮಂದಿ ಸಾಕ್ಷಿಗಳಿದ್ದರು. ಅವರ ಹೇಳಿಕೆ ಪಡೆಯದೇ ಅಂದಿನ ನ್ಯಾಯಾಧೀಶರು ಇವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು. ಇದರಂತೆ 23 ವರ್ಷದ ಭಗತ್ ಸಿಂಗ್, ಸುಖ್ ದೇವ್ ಹಾಗೂ ರಾಜಗುರು ಅವರನ್ನು 1931ರ ಮಾರ್ಚ್ 23ರಂದು ಲಾಹೋರಿನ ಶಾದ್ಮನ್ ಚೌಕದಲ್ಲಿ ಗಲ್ಲಿಗೇರಿಸಲಾಗಿತ್ತು.

ಈಗ ಖುರೇಷಿ ಸಲ್ಲಿಸಿದ್ದ ದೂರು ಅರ್ಜಿಯನ್ನು ಲಾಹೋರ್ ಹೈಕೋರ್ಟ್ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಈ ಬೆಳವಣಿಗೆ ಪಾಕಿಸ್ತಾನದಲ್ಲಿ ನಡೆದರೂ ಭಾರತದಲ್ಲಿ ಬಹಳ ಕುತೂಹಲ ಕೆರಳಿಸಿದೆ.

 

Author : ಅರವಿಂದ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited