Untitled Document
Sign Up | Login    
ದೇಶ ಮುನ್ನಡೆಸ ಬಯಸುವ "ಒಂಟಿ''ಗಳಿವರು!

.

ದೇಶಾದ್ಯಂತ ಲೋಕಸಭಾ ಚುನಾವಣೆಯದ್ದೇ ಹವಾ.. ಗಾಳಿ ಬೀಸಿದರೂ, ಮಳೆ ಬಂದರೂ ಸುತ್ತ ಪಸರಿಸುವಂಥದ್ದು ಅದೇ ರಾಜಕೀಯದ ಘಮಲು.. ಇತ್ತೀಚೆಗೆ ಮೋದಿ ವಿವಾಹ, ಪತ್ನಿ ವಿಚಾರ ಭಾರಿ ಪ್ರಚಾರ ಪಡೆಯಿತು. ಇದೇ ವೇಳೆ ಗಮನಸೆಳೆದ ಇತರೆ "ಒಂಟಿ'' ರಾಜಕಾರಣಿಗಳತ್ತ ಒಂದು ಇಣುಕು ನೋಟ..

"ಒಂಟಿ" ರಾಜಕಾರಣಿಗಳ ಪಟ್ಟಿ ನೋಡಿದರೆ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಬೆನ್ನಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ಭಾವಿ ಪ್ರಧಾನಿ ಎಂದೇ ಬಿಂಬಿಸಲ್ಪಡುತ್ತಿರುವ ರಾಹುಲ್ ಗಾಂಧಿ ಕೂಡಾ ಇದ್ದಾರೆ. ಇವರಿಬ್ಬರ ಬಳಿಕ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರಪ್ರದೇಶದ ಮಾಯಾವತಿ, ತಮಿಳುನಾಡಿನ ಜಯಲಲಿತಾ, ಒಡಿಶಾದ ನವೀನ್ ಪಟ್ನಾಯಕ್ ಪ್ರಮುಖರು.

ನರೇಂದ್ರ ಮೋದಿ: ಸತತ ಮೂರನೇ ಅವಧಿಗೆ ಗುಜರಾತನ್ನು ಆಳುತ್ತಿರುವ ಮುಖ್ಯಮಂತ್ರಿ. ಹಾಲಿ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ. ವಯಸ್ಸು 60+. ಇದುವರೆಗೆ ಅವಿವಾಹಿತರು ಎಂದೇ ಬಿಂಬಿಸಲ್ಪಡುತ್ತಿದ್ದ ನರೇಂದ್ರ ಮೋದಿ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಮದುವೆ ವಿಚಾರ ಬಹಿರಂಗಗೊಳಿಸಿದ್ದಾರೆ. ಪತ್ನಿ ಹೆಸರು ಜಶೋದಾ ಬೆನ್ ಎಂಬುದಾಗಿ ನಮೂದಿಸಿದ್ದು ರಾಜಕೀಯ ವಲಯದಲ್ಲಿ ಕೊಂಚ ಸಂಚಲನ ಮೂಡಿಸಿತ್ತು. ಈ ವಿಷಯ ಮುಂದಿಟ್ಟು ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಯಿತಾದರೂ, ಅದರಿಂದ ರಾಜಕೀಯ ವಿರೋಧಿಗಳಿಗೆ ಹೆಚ್ಚೇನೂ ಗಿಟ್ಟಲಿಲ್ಲ. ಮೋದಿ ಈ ರೀತಿ ವೈವಾಹಿಕ ವಿಚಾರ ಬಹಿರಂಗಗೊಳಿಸಿದ್ದರಿಂದಾಗಿ ಅವರನ್ನು ಇನ್ನು ಅವಿವಾಹಿತರ ಪಟ್ಟಿಯಲ್ಲಿ ಸೇರಿಸಲಾಗದು. ಆದರೆ, ಮದುವೆಯಾಗಿದ್ದರೂ ಇವರು "ಒಂಟಿ'' ಎಂಬುದನ್ನು ಅಲ್ಲಗಳೆಯಲಾಗದು.

ರಾಹುಲ್ ಗಾಂಧಿ: ಕಾಂಗ್ರೆಸ್ ಪಕ್ಷದ ನಂ.2 ಸ್ಥಾನ ಉಪಾಧ್ಯಕ್ಷ ಪಟ್ಟ ಅಲಂಕರಿಸಿದವರು. ಭಾವಿ ಪ್ರಧಾನಿ ಎಂದೇ ಬಿಂಬಿಸಲ್ಪಡುತ್ತಿರುವ ಇವರು ಅಮೇಠಿಯ ಸಂಸದ. ನೆಹರೂ-ಗಾಂಧಿ ಕುಟುಂಬ ಭರವಸೆಯ ಕುಡಿ. ಅಮ್ಮ ಸೋನಿಯಾ ಗಾಂಧಿ "ಸೂಪರ್ ಪಿಎಂ'', ಕಾಂಗ್ರೆಸ್ ಹಾಗೂ ಯುಪಿಎ ಮೈತ್ರಿಕೂಟದ ಅಧ್ಯಕ್ಷೆ. ಅಪ್ಪ ರಾಜೀವ್ ಗಾಂಧಿ ಹಿಂದೆ ಪ್ರಧಾನಿಯಾಗಿದ್ದವರು. ಅಜ್ಜಿ ಇಂದಿರಾ, ಮುತ್ತಜ್ಜ ಜವಾಹರಲಾಲ್ ನೆಹರೂ ಕೂಡಾ ಪ್ರಧಾನಿಯಾಗಿದ್ದವರೇ. ಇವರ ಮದುವೆ ವಿಚಾರ ಒಂದಿಲ್ಲೊಂದು ಸಂದರ್ಭದಲ್ಲಿ ಪ್ರಸ್ತಾಪವಾಗುತ್ತಲೇ ಇದೆ. ಇತ್ತೀಚೆಗೆ ಸಂದರ್ಶನವೊಂದರಲ್ಲೂ ಈ ಬಗ್ಗೆ ಮಾತನಾಡಿರುವ ರಾಹುಲ್, ಮನಮೆಚ್ಚಿದ ಹುಡುಗಿ ಸಿಕ್ಕರೆ ಮದುವೆಯಾಗುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ, ಮದುವೆ- ಮಕ್ಕಳು ಎಂದು ಹೋದರೆ ಕುಟುಂಬ ರಾಜಕಾರಣ ಮುಂದುವರಿಯುತ್ತದೆ. ಮಕ್ಕಳಿಗೆ ಸಿಂಹಾಸನ ಬಿಟ್ಟುಕೊಡಬೇಕಾಗುತ್ತದೆ ಎಂದೂ ಹೇಳಿಕೊಂಡ ಬಗ್ಗೆ ವರದಿಯಾಗಿತ್ತು. ಸದ್ಯಕ್ಕೀಗ ಅವರು "ಒಂಟಿ''..

ಜಯಲಲಿತಾ: ಒಂದು ಕಾಲದ ಚತುರ್ಭಾಷಾ ತಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರದಲ್ಲಿ ಮಿಂಚಿದ ಜಯಲಲಿತಾ ಅಂದಿನ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಎಂಜಿಆರ್ ಮೂಲಕ ರಾಜಕೀಯ ರಂಗ ಪ್ರವೇಶಿಸಿದವರು. ಕೌಟುಂಬಿಕ ಹಿನ್ನೆಲೆಯಲ್ಲಿ ರಾಜಕಾರಣದ ಯಾವುದೇ ಕುರುಹು ಇಲ್ಲದೇ ಹೋದರೂ ಸ್ವ ಪ್ರಯತ್ನ ಬಲದಿಂದ
ಎಂಜಿಆರ್ ಅವರ ಎಐಎಡಿಎಂಕೆ ಪಕ್ಷಕ್ಕೆ ಸಲ್ಲಿಸಿದವರು. ಎಂಜಿಆರ್ ನಂತರ ಪಕ್ಷದ ಚುಕ್ಕಾಣಿ ಹಿಡಿದ ಜಯಾ ಮತ್ತೆ ಎಂದಿಗೂ ಹಿಂತಿರುಗಿ ನೋಡಲಿಲ್ಲ. ತಮಿಳುನಾಡಿನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು. ಜಯಲಲಿತಾರನ್ನು ಇಂದಿಗೂ ಅಲ್ಲಿನ ಜನ ಮತ್ತು ಬೆಂಬಲಿಗರು "ಅಮ್ಮಾ'' ಎಂದೂ, "ಪುರುಚ್ಚಿ ತಲೈವಿ'' ಎಂದೂ ಬಣ್ಣಿಸುತ್ತಾರೆ. ಜಯಾ ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದರಿಂದ ಜನಸಾಮಾನ್ಯರಿಗೆ ಪ್ರಯೋಜನ ಇದ್ದೇ ಇರುತ್ತದೆ. ಹಾಗೆ ಅಂಥ ನಿರ್ಧಾರದ ವಿರುದ್ಧ ಎಷ್ಟು ದೊಡ್ಡವರ ವಿರೋಧ ಎದುರಾದರೂ ಅದನ್ನು ಅನುಷ್ಠಾನಗೊಳಿಸುವ ಛಾತಿ ಇರುವ ಕಾರಣವೇ ಅವರನ್ನು ಪುರುಚ್ಚಿ ತಲೈವಿ ಎಂದರೆ ಕ್ರಾಂತಿಕಾರಿ ನಾಯಕಿ ಎನ್ನುತ್ತಾರೆ. ಸ್ನೇಹಿತೆ ಶಶಿಕಲಾ
ಜತೆಗಿನ ಸಂಬಂಧದ ಬಗ್ಗೆ ಅನೇಕ ಪುಕಾರುಗಳಿದ್ದರೂ, ಈಗ ಅವರು ಜತೆಗಿಲ್ಲ.

ಮಾಯಾವತಿ: ಉತ್ತರಪ್ರದೇಶದ ಅತಿಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಾತ್ರರಾದವರು. ಬಹುಜನ ಸಮಾಜ ಪಕ್ಷವನ್ನು ಸೇರಿದ ಮಾಯಾವತಿ ಪಕ್ಷದ ಮುಖ್ಯಸ್ಥ ಕಾನ್ಶೀರಾಂ ಗರಡಿಯಲ್ಲಿ ರಾಜಕಾರಣ ಮಾಡಿದವರು. ಕಾನ್ಶೀರಾಂ ಕಾಲಾನಂತರ ಪಕ್ಷವನ್ನು ತನ್ನ ತೆಕ್ಕೆಗೆ ಎಳೆದುಕೊಂಡ ಮಾಯಾವತಿ ನಾಲ್ಕು ಅವಧಿಗೆ ಉತ್ತರಪ್ರದೇಶದ ಮುಖ್ಯಮಂತ್ರಿಯಾದವರು. ದೇಶದ ಮೊಟ್ಟಮೊದಲ ದಲಿತ ಮಹಿಳಾ ಮುಖ್ಯಮಂತ್ರಿ ಎಂಬ ಕೀರ್ತಿಗೂ ಅವರು ಭಾಜನರು. ಬೆಂಬಲಿಗರ ಪಾಲಿಗೆ "ಬೆಹನ್ ಜೀ'' ಆಗಿರುವ ಮಾಯಾ ಅವಿವಾಹಿತೆ. ಹಲವು ವಿವಾದಗಳು ಇದ್ದರೂ ದಿಟ್ಟ ನಿಲುವಿನಿಂದಲೇ ರಾಷ್ಟ್ರ ರಾಜಕಾರಣದಲ್ಲೂ ಗಮನ ಸೆಳೆದವರು.

ಮಮತಾ ಬ್ಯಾನರ್ಜಿ: ಬೆಂಬಲಿಗರ ಪಾಲಿನ "ದೀದಿ". ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯಮಂತ್ರಿ. ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸಿದ ಮಮತಾ ಪಶ್ಚಮ ಬಂಗಾಳದಲ್ಲಿ ಕಮ್ಯೂನಿಷ್ಟರ ಆಳ್ವಿಕೆಗೆ ಆಘಾತ ನೀಡಿದವರು. ಸೀದಾ ಸಾದಾ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆವ ಮಮತಾ, ಭಾಷಣಕ್ಕೆ ನಿಂತರೆ "ಬೆಂಕಿ'' ಉಗುಳುತ್ತಾರೆ ಎಂಬ ಮಾತಿದೆ. ಕೇಂದ್ರ ರೈಲ್ವೆ, ಕಲ್ಲಿದ್ದಲು, ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ಖಾತೆಗಳ ಜವಾಬ್ಧಾರಿ ನಿಭಾಯಿಸಿದವರು. ಇವರು ಕೂಡಾ ಅವಿವಾಹಿತರಾಗಿದ್ದು, ಸಂಪೂರ್ಣ ಜೀವನವನ್ನೇ ರಾಜಕಾರಣಕ್ಕೆ, ಜನಸೇವೆಗೆ ಮೀಸಲಿಟ್ಟವರು.

ನವೀನ್ ಪಟ್ನಾಯಕ್: ಒಡಿಶಾ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಪುತ್ರ. ತಾರುಣ್ಯದಲ್ಲಿ ರಾಜಕಾರಣದಿಂದ ಅಷ್ಟೇಕೆ ಒಡಿಶಾದಿಂದಲೇ ದೂರ ಇದ್ದವರು. 1996ರಲ್ಲಿ ಬಿಜು ಪಟ್ನಾಯಕ್ ನಿಧನಾನಂತರ ರಾಜಕೀಯ ಪ್ರವೇಶಿಸಿದ ನವೀನ್, ಕೇಂದ್ರದಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿದ್ದವರು. ಬಿಜು ಜನತಾದಳ ಪಕ್ಷ ಸ್ಥಾಪಿಸಿ ಒಡಿಶಾದ ಅಧಿಕಾರ ಚುಕ್ಕಾಣಿ ಹಿಡಿದವರು. 2002ರಿಂದೀಚೆಗೆ ಒಡಿಶಾದ ಮುಖ್ಯಮಂತ್ರಿಯಾಗಿಯೇ ಮುಂದುವರಿದಿದ್ದಾರೆ. ಅವಿವಾಹಿತರಾಗಿರುವ ನವೀನ್, ರಾಜಕೀಯ ಪ್ರವೇಶಕ್ಕೆ ಮೊದಲು ಬರಹಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

 

Author : ಗಣೇಶ್ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited