Untitled Document
Sign Up | Login    
ಮಾಜಿ ಪ್ರಧಾನಿಗೆ ಗೆಲುವು ಸುಲಭದ ತುತ್ತಲ್ಲ...

ದೇವೇಗೌಡ, ಮಂಜು

ಲೋಕಸಭಾ ಚುನಾವಣೆಯ ಆರಂಭಿಕ ಹಂತದಲ್ಲಿದ್ದ ವಾತಾವರಣ ಮತದಾನ ದಿನಾಂಕ ಸಮೀಪಿಸುತ್ತಿರುವಂತೆ ಬದಲಾಗತೊಡಗಿದೆ. ಇದು ಹಾಸನ ಲೋಕಸಭಾ ಕ್ಷೇತ್ರಕ್ಕೂ ಅನ್ವಯ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಗೆಲುವು ಖಾತ್ರಿ ಎನ್ನುತ್ತಿದ್ದವರೀಗ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪ್ರಚಾರದ ಭರಾಟೆ ಕಂಡು ದಂಗಾಗಿದ್ದಾರೆ.
ಅರಕಲಗೂಡು ಶಾಸಕ ಎ.ಮಂಜು ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಮಾಜಿ ಪ್ರಧಾನಿಗೆ ತುಸು ಹೆಚ್ಚಿನ ಸ್ಪರ್ಧೆಯನ್ನೇ ಒಡ್ಡಿದೆ. ಇನ್ನು ಬಿಜೆಪಿಯ ಅಭ್ಯರ್ಥಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರನ್ನೂ ಕಡೆಗಣಿಸುವಂತಿಲ್ಲ. ಕ್ಷೇತ್ರದಲ್ಲಿ ನಮೋ ಅಲೆ ಇದೆಯಾದರೂ, ಅದರಿಂದ ವಿಜಯಶಂಕರ್ ಗೆಲುವು ನಿರೀಕ್ಷಿಸಲು ಸಾಧ್ಯವಿಲ್ಲ. ಹೊರಗಿನವರನ್ನು ಇಲ್ಲಿ ನಿಲ್ಲಿಸಲಾಗಿದೆ ಎಂಬ ಅಸಮಾಧಾನವೇ ಇದಕ್ಕೆ ಕಾರಣ.
ಹೀಗಾಗಿ ಕಾಂಗ್ರೆಸ್ - ಜೆಡಿಎಸ್ ನಡುವೆ ನೇರ ಹಣಾಹಣಿ ಎಂಬ ಮಾತು ವ್ಯಾಪಕವಾಗಿದೆ. ಹಾಸನ ಜಿಲ್ಲೆಯ 7 ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿವೆ.
2013ರ ವಿಧಾನಸಭಾ ಹಾಗೂ 2009ರ ಲೋಕಸಭಾ ಚುನಾವಣಾ ಫಲಿತಾಂಶ ಗಮನಿಸಿದರೆ, ಜೆಡಿಎಸ್ ಭಾರಿ ಪ್ರಾಬಲ್ಯ ಹೊಂದಿರುವುದು ಮನದಟ್ಟಾಗುತ್ತದೆ. ದೇವೇಗೌಡರ ತವರು ಜಿಲ್ಲೆ ಇದಾಗಿದ್ದು, ಇಲ್ಲಿನ ಗೆಲುವು ಅವರ ಪ್ರತಿಷ್ಠೆಯ ವಿಚಾರವೂ ಹೌದು. ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ 6 ಜೆಡಿಎಸ್ ವಶದಲ್ಲಿವೆ. ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಒಟ್ಟು 4,81,311 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ 3,95,195 ಮತಗಳನ್ನು ಪಡೆದಿತ್ತು.
ಇನ್ನು ಬಿಜೆಪಿ ವಿಚಾರಕ್ಕೆ ಬಂದರೆ, ಕುರುಬ ಸಮುದಾಯಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಅವರಿಗೆ ಕ್ಷೇತ್ರ ಹೊಸತು. ಈಗಾಗಲೆ ಬಿ.ಬಿ.ಶಿವಪ್ಪ ಅವರಂತಹ ಹಿರಿಯ ನಾಯಕರು ಬೆಂಬಲ ನೀಡಲು ನಿರಾಕರಿಸಿದ್ದಾರೆ. ಇನ್ನು ಜೆಡಿಎಸ್, ಕಾಂಗ್ರೆಸ್ ಬಲಪ್ರದರ್ಶನದ ನಡುವೆ ಬಿಜೆಪಿ ಏನೂ ಅಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 8 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 40,529 ಮತಗಳನ್ನಷ್ಟೇ ಪಡೆದಿತ್ತು. ಕೆಜೆಪಿ 1,15,191 ಮತಗಳನ್ನು ಪಡೆದು ಗಮನ ಸೆಳೆದಿತ್ತಾದರೂ, ಅದನ್ನೆಲ್ಲ ಬಿಜೆಪಿ ಲೆಕ್ಕಕ್ಕೆ ಹಾಕುವಂತಿಲ್ಲ.
ಜಾತಿ ಲೆಕ್ಕಾಚಾರದಡಿ ನೋಡಿದರೆ, ಒಕ್ಕಲಿಗರು ಜೆಡಿಎಸ್ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್. ಕಾಂಗ್ರೆಸ್ ಅಹಿಂದ ಸಮುದಾಯದ ಕಡೆಗೆ ಒಲವು ತೋರಿದೆ. ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್ ಆಗಿದ್ದ ವೀರಶೈವ ಸಮುದಾಯದ ಮತಗಳು ಕಳೆದ ಬಾರಿ ಹರಿದು ಹಂಚಿಹೋಗಿದ್ದವು. ಈ ಬಾರಿ ಹೋರಾಟ ಮಾಜಿ ಪ್ರಧಾನಿ ಮತ್ತು ಎ.ಮಂಜು ನಡುವಿನದ್ದು ಎಂದೇ ಬಣ್ಣಿಸಲಾಗುತ್ತಿದ್ದು, ಮತದಾರ ಒಲವು ಯಾರೆಡೆ ಎಂಬುದು ಇನ್ನೆರಡು ದಿನದಲ್ಲಿ ನಿರ್ಧಾರವಾಗಲಿದೆ.

2009ರ ಲೋಕಸಭಾ ಚುನಾವಣೆ ಹೀಗಿತ್ತು..
ಎಚ್.ಡಿ.ದೇವೇಗೌಡ ಜೆಡಿಎಸ್ 4,96,429
ಕೆ.ಎಚ್.ಹನುಮೇಗೌಡ ಬಿಜೆಪಿ 2,05,316
ಬಿ.ಶಿವರಾಂ ಕಾಂಗ್ರೆಸ್ 2,01,147

 

Author : ಸುಭಾಷ್ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited