Untitled Document
Sign Up | Login    
ಕನಸುಗಳು ಮಾರಾಟಕ್ಕಿವೆ

ಕನಸು.. ಸಾಂದರ್ಭಿಕ ಚಿತ್ರ

ಕನಸುಗಳು ಮಾರಾಟಕ್ಕಿವೆಕೊಳ್ಳುವಿರಾದರೆ ಬೇಗ ಬನ್ನಿ
ಸೀಮಿತ ಅವಧಿಯ ಆಫರ್‍ಗಳಿವೆ;ಒಂದರ ಜೊತೆ ಹಲವು ಉಚಿತ
ಕನಸುಗಳಿಗೆ ಮಾರುಕಟ್ಟೆ ಒದಗಿದೆ
ಜಾಗತೀಕರಣದ ಸಿಹಿ ಹೂರಣ ತುಂಬಿರುವ
ಹೋಳಿಗೆ ನೋಡಲಷ್ಟೆ ರುಚಿ; ತಿನ್ನಲು ಬಾರದು
ನಮ್ಮ ಕನಸುಗಳೆಲ್ಲಾ ನಿಮ್ಮದು, ನಿಮ್ಮದೇನಿದ್ದರೂ ನಮ್ಮದು
ಹಲವು ಮಾದರಿಯ ವರೈಟಿ ಕನಸುಗಳ ಸಾಲುಸಾಲು
ಶೆಟ್ಟರಂಗಡಿಯಲ್ಲಿ ಜೋಡಿಸಿಟ್ಟ ಪದಾರ್ಥಗಳಂತೆ
ಸೇಟು ಪೇಟಕಟ್ಟಿ ಗಲ್ಲಾದಲ್ಲಿ ಕೂತು ಮಾರುವ ಸವಿಯಂಗಡಿ ಖಾದ್ಯದಂತೆ
ನಮೂನೆಯ ಕನಸುಗಳು ವಿಭಿನ್ನ ಧರದಲ್ಲಿ
ಜಾಹಿರಾತು ನೀಡದೆಯೇ ಖಾಲಿಯಾಗುತ್ತವೆ;ಆದರೂ ಆಫರ್ ಇದೆ
ಕನಸುಗಳನ್ನು ಹಣೆಯುವ ಪುರುಷೋತ್ತಮರಿದ್ದಾರೆ
ಜಾಬ್ಸ್, ಬಿಲ್‍ಗೆಟ್ಸ್, ಮರ್ಡೋಕ್
ನಮ್ಮವರೇ ಕಲಾಂ ಒಂದಷ್ಟು ಕನಸುಗಳನ್ನು ತಯಾರಿಸಿದ್ದಾರೆ
ಸ್ವದೇಶಿ ನಿರ್ಮಿತ ಕನಸುಗಳು-ಮೇಡ್ ಇನ್ ಇಂಡಿಯಾ
ಮಾಹಿತಿ ಬಂದಿದೆ ಚೀನಿಯರು, ಫಾರ್ಮುಲಾ ಹ್ಯಾಕ್ ಮಾಡಿದ್ದಾರಂತೆ
ನಮ್ಮ ಕನಸುಗಳ ಭದ್ರತೆಯ ಚಿಂತೆಯೇ ಇಲ್ಲದ ಕೇಂದ್ರ ಸರ್ಕಾರ
ಎನ್‍ಕ್ರಿಪ್ಟೆಡ್ ವ್ಯವಸ್ಥೆ ಬಳಸಿ ಕನಸುಗಳ ಜೋಪಾನಕ್ಕೆ-
ಬಿಸಿನೆಸ್ ಮ್ಯಾನೇಜ್‍ಮೆಂಟಿನ ವಿದ್ಯಾರ್ಥಿನಿ ಸಲಹೆ ನೀಡಿದ್ದಾಳೆ
ಅತ್ತ ಅಮೇರಿಕಾ ನಮ್ಮ ಕನಸುಗಳ ಬಳಸಿ ಪೇಟೆಂಟ್ ಮಾಡಿಸಿಕೊಳ್ಳ ಹೊರಟಿದೆ
ಜಿ7 ಸಮ್ಮಿಟ್‍ನಲ್ಲಿ ಭಾರತ ಪ್ರತಿರೋಧಿಸುವುದಂತೆ
ಕೆಲವೆಡೆ ಕಡಿಮೆ ಧರಕ್ಕೆ ಕನಸುಗಳು ಭಿಕರಿಯಾಗುತ್ತಿವೆ
ಸಸ್ತಾ ಸ್ವಪ್ನ ಸಂತೆಯಲ್ಲಿ ಕಟ್ಟುಪಾಡಿವೆ, ಸಾಲುಗಟ್ಟಿ ಕೊಳ್ಳಬೇಕು ಕನಸುಗಳನ್ನು
ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ; ಆನಂತರದ ಕೊನೆಯ ಸಾಲು ಶೂದ್ರರದ್ದು
ಇದನ್ನು ವಿರೋಧಿಸಿ ದಲಿತ ಬಂಡಾಯಕ್ಕೆ ಬುದ್ದಿಜೀವಿಗಳು ಕರೆ ನೀಡಿದ್ದಾರೆ
24X7ರ ಮಾಧ್ಯಮಗಳಲ್ಲಿ ನಿತ್ಯ ಇದೇ ಚರ್ಚೆ
ಕನಸುಗಳೇ ಬಂಡವಾಳ ಮಾಡಿಕೊಂಡು ಬದುಕುವ
ಕಟ್ಟ ಕಡೆಯ ವರ್ಗವಿದೆ
ಆ ಕನಸುಗಳಿಗೆ ಕಿಂಚಿತ್ತು ಬೆಲೆಯಿಲ್ಲ;ಅವು ಮಧ್ಯಮ ವರ್ಗದ ಕನಸುಗಳು
ಹಳೆ ಶಿವಾಲಯದ ಕಟ್ಟೆ ಕಾಯುವ ತಿರುಕ ಕನಸುಗಳು
ನೈತಿಕ ಬದುಕುವ ಕೂಲಿಯ ಕನಸುಗಳು
ಇವುಗಳಿಗೆ ಎಲ್ಲಿಯ ಮಾರುಕಟ್ಟೆ?
ಎಲ್ಲಿಯ ಜಾಗತೀಕರಣ?
ಎಲ್ಲಿಯ ಸರತಿ ಸಾಲುಗಳು ಅನ್ವಯ?
ಇವರ ಕನಸುಗಳಿಗೆ ಬ್ಯಾಂಕಿನಲ್ಲಿ ಲೋನು ಸಿಗುವುದಿಲ್ಲ
ಹರಾಜಿಗಿಟ್ಟರೂ ನಯಾಪೈಸೆ ದಕ್ಕುವುದಿಲ್ಲ
ಕನಸುಗಳು ಕನಸಾಗಿಯೇ ಉಳಿಯುತ್ತವೆ; ಅಳಿಯುತ್ತವೆ

 

Author : ವಿಶ್ವಾಸ್ ಭಾರದ್ವಾಜ್ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited