ವಿಕ್ರಂ ಆಸ್ಪತ್ರೆ ಮುಂದೆ ಸೇರಿದ ಅಂಬಿ ಅಭಿಮಾನಿಗಳು
ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ ಬೆಂಗಳೂರು ಸಂಚಾರಿ
ಶ್ವಾಸಕೋಶದ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಅವರನ್ನು ಮೂರು ದಿನ ಹಿಂದೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದೀಚೆಗೆ ಕನ್ನಡದ ಯಾವುದೇ ಟಿ.ವಿ.ಚಾನೆಲ್ ಹಾಕಿದರೂ ಕನ್ನಡ ಚಿತ್ರನಟ, ಸಚಿವ ಅಂಬರೀಷ್ ಅನಾರೋಗ್ಯದ್ದೇ ಸುದ್ದಿ. ಚಾನೆಲ್ ಗಳ ವಾರ್ತಾ ವಾಚಕರು ಲೈವ್ ಕವರೇಜ್ ಕೊಡುವ ಭರದಲ್ಲಿ ಆಡಿದ ಮಾತುಗಳೇನು? ಅಂಬಿ ಅಭಿಮಾನಿಗಳ ಜತೆ ನೇರ ಫೋನ್ ಇನ್ ಮಾಹಿತಿಗಳೇನು? ಇವೆಲ್ಲ ದಿನದ ಕೊನೆಗೆ ಅವರಿಗೆ ನೆನಪಿರತ್ತೋ ಇಲ್ಲವೋ ಗೊತ್ತಿಲ್ಲ. ಇದನ್ನೆಲ್ಲ ಗಮನಿಸಿದ ಬಳಿಕ ವಿಕ್ರಂ ಆಸ್ಪತ್ರೆ ಸಮೀಪ ಹೋದರೆ ಕಂಡು ಬಂದ ಸನ್ನಿವೇಶ ಇದು..
"ಹಲೋ ಸರ್.. ನಾನು ಸರ್ ... ---- ಚಾನೆಲ್ ನಿಂದ.. ನಿನ್ನೆ ರಾತ್ರಿ ನಿಮ್ಗೆ ಫೋನ್ ಮಾಡಿದ್ದೆನಲ್ಲ.. ಅಂಬರೀಷ್ ಅವರ ಆರೋಗ್ಯಸ್ಥಿತಿ ಹೇಗಿದೆ ಸರ್.. ಪ್ಲೀಸ್ ಹೇಳಿ ಸರ್.. ನೀವು ಒಳಗಿರುವವರಾದ್ದರಿಂದ ನಿಮ್ಗೆ ಚೆನ್ನಾಗಿ ಗೊತ್ತಿರುತ್ತದೆ. ಬೇರೆ ಚಾನೆಲ್ ಗಳ ವರದಿಗಾರರೆಲ್ಲ ಏನೇನೋ ಹೇಳುತ್ತಿದ್ದಾರೆ. ನೈಜ ಸ್ಥಿತಿ ಏನು ? ಅನ್ನೋದೇ ಗೊತ್ತಾಗುತ್ತಿಲ್ಲ. ನಮ್ಮ ಮೇಲಿನವರು (ಇನ್ ಪುಟ್ ಚೀಫ್) ನಿಮಗೆ ಯಾಕೆ ಆ ಮಾಹಿತಿ ಎಲ್ಲ ಸಿಗೋದಿಲ್ಲ. ಕೇಳಿದ್ರೆ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದಷ್ಟೇ ಹೇಳುತ್ತೀರಾ.. ನಿಮ್ಗೆ ನೇರ ಮಾಹಿತಿ ಸಿಗದೇ ಇದ್ದರೆ ಬೇರೆ ಚಾನೆಲ್ ಗಳ ವರದಿಗಾರರನ್ನು ಕೇಳಿ, ಅದನ್ನೇ ವರದಿ ಮಾಡಿ ಎಂದು ಕಿರಿ ಕಿರಿ ಮಾಡ್ತಿದ್ದಾರೆ. ಸಾಕಾಗಿ ಹೋಯಿತು ಸಾರ್ ಮೂರು ದಿವಸದಿಂದ.. ಊಟ, ನಿದ್ದೆ ಇಲ್ಲ.. ಕೇವಲ ಟೆನ್ಶನ್.. ಯಾರಿಗೆ ಬೇಕು ಸರ್ ?'' ಎಂದು ಒಬ್ಬ ಟಿ.ವಿ. ಚಾನೆಲ್ ವರದಿಗಾರ ಮೊಬೈಲ್ ನಲ್ಲಿ ಯಾರೊಂದಿಗೋ ಹೇಳುತ್ತಿದ್ದ.
ಪಕ್ಕದಲ್ಲೇ ಇದ್ದ ಇನ್ನಿಬ್ಬರು ವರದಿಗಾರರು ಪರಸ್ಪರ ಮಾತನಾಡುತ್ತಿದ್ದುದೂ ಇದೇ ವಿಚಾರ. "ಟಿಆರ್ ಪಿ ಹೆಚ್ಚಿಸುವ ಭರದಲ್ಲಿರುವ ಚಾನೆಲ್ ಮುಖ್ಯಸ್ಥರಿಗೆ ಮತ್ತು ಮೇಲ್ ಸ್ತರದಲ್ಲಿರುವವರ ಬಳಿ ಸತ್ಯ ಹೇಳಿದರೂ ಅದಕ್ಕೆ ಬೆಲೆ ಇಲ್ಲ. ಇನ್ನೇನು ಮಾಡುವುದು ಕಥೆ ಕಟ್ಟುವುದು ಇದ್ದೇ ಇದೆಯಲ್ಲ.. ಹೊಟ್ಟೆ ಪಾಡು.. ಇಷ್ಟ ಇಲ್ಲದೇ ಹೋದರೂ ಕೆಲವೊಮ್ಮೆ ಇಂತಹ ಕೆಲಸಗಳನ್ನು ಮಾಡಬೇಕಾಗುತ್ತದೆ'' ಎಂಬ ವಿಷಾದದ ನುಡಿ.
ವಿಕ್ರಂ ಆಸ್ಪತ್ರೆಯ ಮುಖ್ಯದ್ವಾರ ದಾಟಿ ಒಳಗೆ ಹೋದೆ. ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಕೇಳಿದ. ಸರ್ ಈ ಟಿ.ವಿ. ಮಾಧ್ಯಮದವರಿಗೆ ಎಷ್ಟು ಕಷ್ಟ ಅಲ್ಲ. ಮೂರು ದಿನದಿಂದ ಅವರ ಪಾಡು ನೋಡೋದಕ್ಕೆ ಆಗ್ತಾ ಇಲ್ಲ. ಸರ್ ಅಲ್ಲಿ ನಿಂತಿದ್ದಾರಲ್ಲ.. ಡಾರ್ಕ್ ಕಲರ್ ಶರ್ಟ್ ಹಾಕಿಕೊಂಡು.. ಅವರು ನಿನ್ನೆ ಬೆಳಗ್ಗೆಯಿಂದ ಇಲ್ಲೇ ಇದ್ದಾರೆ. ಅವರ ಮುಖ ನೋಡಿ ಸರ್. ಪಾಪ.. ಎಂದು ಅನುಕಂಪ ವ್ಯಕ್ತಪಡಿಸಿದ.
ಅಲ್ಲಿಂದ ಮುಂದೆ ಹೋಗಿ ಆಸ್ಪತ್ರೆ ಒಳ ಪ್ರವೇಶಿಸುತ್ತಿದ್ದಂತೆ, ರಿಸೆಪ್ಶನ್ ಎದುರು ಹಾಕಲಾಗಿದ್ದ ಆಸನದಲ್ಲಿ ಕುಳಿತಿದ್ದರು ಇಬ್ಬರು. ಅವರಾಡುತ್ತಿದ್ದ ಮಾತುಗಳೂ ಕಿವಿಗೆ ಬಿದ್ದವು. "ಯಾಕ್ಲಾ ಈ ಟಿವಿಯವರು ಅಂಬಿಯಣ್ಣನ್ ಅನಾರೋಗ್ಯದ ಬಗ್ಗೆ ಹಿಂಗೊಂದು ಪ್ರಚಾರ ಕೊಡ್ತಾ ಅವ್ರೆ''? ಎಂದ ಒಬ್ಬ. "ಅವ್ರು ಹಿಂಗ್ ಬಾಯ್ ಬಡ್ಕೊಂಡಿದ್ರಿಂದ್ಲೇ ನಮ್ಮಂಥ ಅಭಿಮಾನಿಗಳು ಇಲ್ಲಿ ಜಮಾಯಿಸಿದ್ದು ಬುಡಣ್ಣಾ..'' ಎಂದ ಮತ್ತೊಬ್ಬ. "ಅದೇನೋ ನಿಜ.. ಆದರೆ ನಿಜ ಹೇಳೋದನ್ನು ಬುಟ್ಟು.. ಅದ್ಯಾರೋ ಏನೋ ಅಂದ್ರು.. ವದಂತಿ ಹುಟ್ಟು ಹಾಕ್ತಾರಲ್ಲಣ್ಣ..'' ಹೀಗೆ ಸಾಗಿತ್ತು ಅವರ ಮಾತುಕತೆ..
ಹಾಗೇ ಮುಂದೆ ಸಾಗಿ ಮೊದಲ ಮಹಡಿ ಮೆಟ್ಟಿಲೇರತೊಡಗಿದೆ. ಅವರ ಮಾತುಗಳು ಕೇಳದಾಯಿತು. ಮೊದಲ ಮಹಡಿಯಲ್ಲಿ ಔಟ್ ಪೇಷೆಂಟ್ ನೋಡ್ಕೋತ್ತಾರೆ. ಹಾಗೇ ಎರಡನೇ ಮಹಡಿಗೆ ಹೋದೆ. ಅದೂ ಔಟ್ ಪೇಷೆಂಟ್ ವಿಭಾಗ. ಮೂರನೇ ಮಹಡಿಯಿಂದ ಆರನೇ ಮಹಡಿಯವರೆಗೂ ಐಸಿಯು, ಸಿಸಿಯು ಮತ್ತು ಸ್ಪೆಷಲ್ ವಾರ್ಡ್ ಗಳಿವೆ. 150 ಬೆಡ್ ಗಳಿರುವ ಆಸ್ಪತ್ರೆ. ಮೂರನೇ ಮಹಡಿ ಏರುತ್ತಿದ್ದಂತೆ ಸಿಸಿಯು ಕಡೆಗೆ ಹೆಜ್ಜೆ ಹಾಕಿದೆ. ಅಲ್ಲಿ ಅಂಬರೀಷ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡದಲ್ಲೊಬ್ಬರಾದ ಡಾ.ರವೀಶ್ ಸಿಕ್ಕಿದರು.
ಅವರು ಹೇಳಿದ್ದಿಷ್ಟೆ; "ನೋಡಪ್ಪ. ಅಂಬರೀಷ್ ಅವರ ಆರೋಗ್ಯ ಸೂಪರ್. ಇನ್ನೆರಡು ದಿನ ವೆಂಟಿಲೇಟರ್ ನಲ್ಲಿ ಇರಿಸಬೇಕಾಗುತ್ತದೆ. ಶ್ವಾಸಕೋಶದ ಸೋಂಕು ತಗುಲಿದ ಕಾರಣ ಉಸಿರಾಟಕ್ಕೆ ತೊಂದರೆಯಾಗಿದೆ. ಕಿಡ್ನಿ ಕೂಡಾ ಈಗ ಸರಿಯಾಗಿ ಕೆಲಸ ಮಾಡುತ್ತಿದೆ. ಅದರಲ್ಲಿ ಕ್ರಿಯೇಟಿನ್ ಅಂಶ ಹೆಚ್ಚಾಗಿದ್ದ ಕಾರಣ ಸ್ವಲ್ಪ ತೊಂದರೆಯಾಗಿತ್ತು ನಿಜ. ಆದರೆ ಈಗ ಆ ಸಮಸ್ಯೆ ಏನಿಲ್ಲ. ಶ್ವಾಸಕೋಶದ ಸೋಂಕು ಕಡಿಮೆಯಾದರೆ ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡುತ್ತೇವೆ. ಸದ್ಯ ದ್ರವಾಹಾರವನ್ನು ಟ್ಯೂಬ್ ಮೂಲಕ ಕೊಡಲಾಗುತ್ತಿದೆ. ಆತಂಕ ಪಡುವ ಅಗತ್ಯವೇನಿಲ್ಲ" ಎಂದು ಬೆನ್ನು ತಟ್ಟಿ ಹೋದರು.