Untitled Document
Sign Up | Login    
‘ಫಾಸ್ಟ್‌ಫುಡ್ ತಿನ್ನಬೇಡಿ’ ಸಿಬ್ಬಂದಿಗೆ ಮೆಕ್‌ಡೊನಾಲ್ಡ್ ಎಚ್ಚರಿಕೆ !

French fries

ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಸಂಬಂಧಿ ರೋಗಗಳನ್ನು ತಡೆಯಬೇಕೆ? ಹಾಗಾದ್ರೆ ಫಾಸ್ಟ್ ಫುಡ್‌ ತಿನ್ನುವುದನ್ನು ಬಿಟ್ಟುಬಡಿ.. ! ಆರೋಗ್ಯ ಪೂರ್ಣ ಆಹಾರ ಸೇವಿಸಿ.. ! ಹೀಗಂತ ಡಾಕ್ಟರ್ ಅಥವಾ ಯಾವುದೇ ಆರೋಗ್ಯ ಸಂಸ್ಥೆ ಹೇಳಿದ್ದರೆ ಅದರಲ್ಲೇನೂ ಅಚ್ಚರಿ ಇರಲಿಲ್ಲ. ಆದರೆ, ಇಂಥದ್ದೊಂದು ಮಾರ್ಗದರ್ಶನ ನೀಡಿದ್ದು ಫಾಸ್ಟ್ ಫುಡ್ ವಹಿವಾಟು ನಡೆಸುತ್ತಿರುವ ಮೆಕ್‌ಡೊನಾಲ್ಡ್ ಕಂಪನಿ !

ಹೌದು.. ಮೆಕ್‌ಡೊನಾಲ್ಡ್ ಕಂಪನಿ ಇಂಥದ್ದೊಂದು ಮಾರ್ಗದರ್ಶನವನ್ನು ತನ್ನ ಸಿಬ್ಬಂದಿಗೆ ನೀಡಿದೆ. ಈ ಮಾರ್ಗದರ್ಶನವನ್ನು ತನ್ನ ಸಿಬ್ಬಂದಿ ಸಂಪನ್ಮೂಲ ಅಂತರ್ಜಾಲ ತಾಣ(McResources Line)ದಲ್ಲಿ ಪ್ರಕಟಿಸಿದೆ. ಈ ವಿಷಯ ಈಗ ವಿವಾದಕ್ಕೆ ಈಡಾಗಿದೆ. ಈಗಾಗಲೇ ಹಲವು ಆರೋಗ್ಯ ಸಂಸ್ಥೆಗಳು, ಡಾಕ್ಟರ್‌ಗಳು ಎಲ್ಲರೂ ಫಾಸ್ಟ್‌ಫುಡ್ ಸೇವನೆ, ಅಂಥ ಆಹಾರ ಪದ್ಧತಿಯಿಂದ ಆಗುತ್ತಿರುವ ಅಡ್ಡಪರಿಣಾಮಗಳ ಬಗ್ಗೆ ಸಾಕಷ್ಟು ಸಲ ಎಚ್ಚರಿಸಿದ್ದಾರೆ. ಆಗೆಲ್ಲ ಫಾಸ್ಟ್‌ಫುಡ್ ಸೇವನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದ ಕಂಪನಿಗಳಲ್ಲಿ ಮೆಕ್‌ಡೊನಾಲ್ಡ್‌ ಕೂಡ ಒಂದು. ಮೆಕ್‌ಡೊನಾಲ್ಡ್‌ ಇದೀಗ ತನ್ನ ಸಿಬ್ಬಂದಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು, ಗ್ರಾಹಕರ ಆರೋಗ್ಯವನ್ನು ಕಡೆಗಣಿಸಿದೆ ಎಂಬ ಸಂದೇಶ ರವಾನೆಯಾಗಿದೆ.

ಏನಿತ್ತು ಮಾರ್ಗದರ್ಶನ?
ಎರಡು ಮೂರು ಹಂತಗಳಲ್ಲಾಗಿ ಇಂತಹ ಸೂಚನೆಗಳನ್ನು ಮೆಕ್‌ಡೊನಾಲ್ಡ್‌ ಪ್ರಕಟಿಸಿದೆ. ಅದರ ಪ್ರಕಾರ, ‘ಫಾಸ್ಟ್ ಫುಡ್‌’ಗಳು ಎಷ್ಟೆಂದರೂ ಅತ್ಯಧಿಕ ಕ್ಯಾಲೊರಿ ಹೊಂದಿರುವ ಆಹಾರ ಪದಾರ್ಥ. ಅದರಲ್ಲಿ ಕೊಬ್ಬು, ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಹೆಚ್ಚಿರುವುದು ಸಾಮಾನ್ಯ. ಕೆಲವು ಫಾಸ್ಟ್ ಫುಡ್‌ ರೆಸ್ಟೋರೆಂಟ್‌ಗಳು ಫ್ರೈ ಮಾಡುವುದಕ್ಕೆ ಹೈಡ್ರೋಜನೇಟೆಡ್‌ ಎಣ್ಣೆ ಬಳಸುತ್ತಿವೆ. ಈ ಎಣ್ಣೆ ಟ್ರಾನ್ಸ್ ಫ್ಯಾಟ್‌ ಹೊಂದಿದ್ದು, ಅದು ಹೃದಯ ಸಂಬಂಧಿ ರೋಗಗಳುಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕೆಲವು ನಗರಗಳಲ್ಲಿ ಇವುಗಳನ್ನು ನಿಷೇಧಿಸಿದ್ದು, ಇನ್ನು ಕೆಲವು ನಗರಗಳಲ್ಲಿ ಇವುಗಳ ನಿಷೇಧದ ಬಗ್ಗೆ ಚಿಂತನೆ ನಡೆದಿದೆ ಎಂದು ಒಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅದರಲ್ಲಿ ಮುಂದುವರಿದ ಭಾಗದಲ್ಲಿ ಮೆಕ್‌ಡೊನಾಲ್ಡ್‌ ತನ್ನ ಸಿಬ್ಬಂದಿಗೆ ಸಲಹೆ ನೀಡಿದ್ದು, ಸಿಬ್ಬಂದಿಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ರೋಗ ಇರುವಂಥವರು ಫಾಸ್ಟ್‌ಫುಡ್‌ ಸೇವನೆಯನ್ನು ಬಿಡಬೇಕು. ಯಾಕೆಂದರೆ ಫಾಸ್ಟ್‌ಫುಡ್‌ನಲ್ಲಿ "ಅಧಿಕ ಕೊಬ್ಬು, ಉಪ್ಪು ಮತ್ತು ಸಕ್ಕರೆ ಅಂಶಗಳ ಹೆಚ್ಚಿರುತ್ತದೆ".

ಎರಡನೇ ಹಂತದ ಪ್ರಕಟಣೆಯಲ್ಲಿ ಫ್ರೆಂಚ್‌ ಫ್ರೈಸ್ ಮತ್ತು ಹ್ಯಾಂಬರ್ಗರ್ ಫೋಟೋಗಳನ್ನು ಪ್ರಕಟಿಸಿದ್ದು, ಅದರ ಮೇಲೆ "unhealthy choice" ಎಂದು ಉಲ್ಲೇಖಿಸಲಾಗಿದೆ. ಇದೇ ವೇಳೆ, ಸಬ್‌ಮರೈನ್‌ ಸ್ಯಾಂಡ್‌ವಿಚ್‌ ಮತ್ತು ಸಲಾಡ್‌ "healthier choice" ಎಂದು ಹೇಳಲಾಗಿದೆ. ಅಲ್ಲದೆ, "ಫಾಸ್ಟ್‌ಫುಡ್ ಸ್ಥಳಗಳಿಗೆ ಹೋಗಿ ಆರೋಗ್ಯ ಪೂರ್ಣ ಆಹಾರ ಹುಡುಕುವುದು ಅತ್ಯಂತ ಸವಾಲಿನ ವಿಷಯವಾಗಿದೆ. ಒಟ್ಟಾರೆ ಹೇಳಬೇಕು ಅಂದರೆ, ನಿಮ್ಮ ಆರೋಗ್ಯದ ಬಗ್ಗೆ ನೀವೇ ಕಾಳಜಿವಹಿಸಬೇಕು. ಸಾಧ್ಯವಾದಷ್ಟರ ಮಟ್ಟಿಗೆ ಸ್ಯಾಂಡ್‌ವಿಚ್ ಸೇರಿದಂತೆ ತರಕಾರಿಗಳು ಹೆಚ್ಚಿರುವ ಆಹಾರಗಳನ್ನೇ ಸೇವಿಸುವುದು ಒಳಿತು. ಚೀಸ್‌, ಬಕಾನ್ ಮೊದಲಾದವುಗಳ ಬಳಕೆ ನಿಯಂತ್ರಿಸಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು ಎಂದು ಸಲಹೆ ನೀಡಿದೆ.

ಕೊನೆ ಮಾತು: ಮೆಕ್‌ಡೊನಾಲ್ಡ್‌ ತನ್ನ ಸಿಬ್ಬಂದಿಗೆ ನೀಡಿದ ಸಲಹೆಯನ್ನು ಗ್ರಾಹಕರೂ ಅನ್ವಯಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ ಅಂತ ಹೇಳತೊಡಗಿದೆಯಂತೆ. ಈ ಸುದ್ದಿಯನ್ನು ಮೊದಲು ಪ್ರಕಟಿಸಿದ ಸಿಎನ್‌ಬಿಸಿಗೆ ಕಳುಹಿಸಿದ ಸ್ಪಷ್ಟೀಕರಣದಲ್ಲಿ ಇದು ಸಿಬ್ಬಂದಿಗೆ ಮಾತ್ರ ನೀಡಿದ ಸಲಹೆ ಅಲ್ಲ. ಎಲ್ಲರಿಗೂ ನೀಡಿದ ಸಲಹೆ ಎಂದು ಹೇಳಿದೆಯಂತೆ..! ಹಾಗಾದ್ರೆ, ಬರ್ಗರ್‌ ತಿನ್ನಲು ಮೆಕ್‌ಡೊನಾಲ್ಡ್‌ಗೆ ಎಂಟ್ರಿ ಕೊಡುವ ಮೊದಲು "ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರಿ" ಎಂಬುದನ್ನು ನೆನಪಿಸಿಕೊಳ್ಳುವುದು ಒಳಿತು.

source: CNBC

 

Author : ನೆಟ್ ಸಂಚಾರಿ 

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited