Untitled Document
Sign Up | Login    
ಸಾಫ್ಟ್ ಡ್ರಿಂಕ್ಸ್ ಮೇಲೆ ಟ್ಯಾಕ್ಸ್ ಹಾಕಿ ಜನ ಮಧುಮೇಹಿಗಳಾಗೋದನ್ನು ತಪ್ಪಿಸಿ !

soft drink

ಸಾಫ್ಟ್ ಡ್ರಿಂಕ್ಸ್ (ಲಘುಪಾನೀಯ) ಮೇಲೆ ಕರಭಾರ ಹೇರಿದರೆ ಜನ ಮಧುಮೇಹ ರೋಗಕ್ಕೆ ತುತ್ತಾಗುವುದು ತಪ್ಪಿಸಬಹುದೇ? ಹೌದು ಎನ್ನುತ್ತಿದೆ ಅಧ್ಯಯನ ವರದಿಯೊಂದು. ಒಂದೊಮ್ಮೆ ಲಘುಪಾನೀಯಗಳ ಮೇಲೆ ಶೇಕಡ 20ರಷ್ಟು ಕರ ವಿಧಿಸಿದರೆ, ಅದರಿಂದಾಗಿ ಭಾರತದಲ್ಲಿ ಮುಂದಿನ ದಶಕದಲ್ಲಿ ಮಧುಮೇಹಿಗಳಾಗಬಹುದಾದ 4 ಲಕ್ಷ ಜನರನ್ನು ಬಚಾವ್ ಮಾಡಿದಂತಾಗುತ್ತದೆ ಎಂಬುದು ಆ ವರದಿಯಲ್ಲಿರುವ ಶಿಫಾರಸು!

ಜಾಗತಿಕ ಮಾರುಕಟ್ಟೆ ಅಂಕಿ ಅಂಶಗಳನ್ನು ಗಮನಿಸಿದರೆ, ಭಾರತದಲ್ಲಿ ಲಘುಪಾನೀಯಗಳ ಮಾರಾಟ 1998ರಿಂದೀಚೆಗೆ ಪ್ರತಿ ವರ್ಷ ಶೇಕಡ 13 ರಷ್ಟು ಏರಿಕೆ ಕಂಡಿದೆ ಮತ್ತು ಕಾಣುತ್ತಲೇ ಇದೆ. ಹೊಸ ಅಧ್ಯಯನ ವರದಿ ಪ್ರಕಾರ, 24-65 ವರ್ಷ ವಯಸ್ಸಿನವರ ಪೈಕಿ ಬೊಜ್ಜು ಹೊಂದಿರುವ ವ್ಯಕ್ತಿಗಳಲ್ಲಿ ಲಘುಪಾನೀಯ ಸೇವನೆ ಪ್ರಮಾಣ 39-49% ತನಕ ಹೆಚ್ಚಳವಾಗಿದೆ. ಹೀಗಾಗಿ 2014-2023ರ ನಡುವಿನ ಅವಧಿಯಲ್ಲಿ ಲಕ್ಷ ಜನರ ಪೈಕಿ 319-336 ಜನರಲ್ಲಿ ಟೈಪ್ 2 ಡಯಾಬಿಟಿಸ್ ಕಾಣುವ ಸಾಧ್ಯತೆ ಇದೆ.

ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಎಂಭ ಸಂಸ್ಥೆಯ ಸಂಶೋಧಕರ ತಂಡ ಈ ಅಧ್ಯಯನ ನಡೆಸಿ ಸಿದ್ಧಪಡಿಸಿದ ವರದಿ ಇದು. ಅಂದ ಹಾಗೆ ಈ ಅಧ್ಯಯನ ವರದಿಯನ್ನು ಪಿಎಲ್ಒಎಸ್ ಮೆಡಿಸಿನ್ ಎಂಬ ನಿಯತಕಾಲಿಕೆ ಇತ್ತೀಚೆಗೆ ಪ್ರಕಟಿಸಿತ್ತು. ಅಮೆರಿಕ ಮತ್ತು ಬ್ರಿಟನಿನಲ್ಲಿರುವ ಶೈಕ್ಷಣಿಕ/ಅಧ್ಯಯನ ಸಂಸ್ಥೆಗಳು ಕೂಡ ಇಂಥದ್ದೇ ಅಂಶಗಳನ್ನು ಅಲ್ಲಿನ ಸರ್ಕಾರಕ್ಕೆ ಮಂಡಿಸಿವೆ. ಇವುಗಳ ಪ್ರಕಾರ, ಅಧಿಕ ತೆರಿಗೆ ವಿಧಿಸುವುದರಿಂದಾಗಿ 2014-2023ರ ನಡುವೆ ಆ ದೇಶಗಳಲ್ಲಿ ಅಂದಾಜು 1.1 ಕೋಟಿ ಬೊಜ್ಜಿನ ಪ್ರಕರಣ ದಾಖಲಾಗುವುದನ್ನು ತಪ್ಪಿಸಬಹುದಾಗಿದೆ.

ದಿನೆದಿನೇ ಹೆಚ್ಚುತ್ತಿರುವ ಸ್ಥೂಲಕಾಯರ ಅಥವಾ ಮಧುಮೇಹಿಗಳ ಸಂಖ್ಯೆ ಮತ್ತು ಪ್ರಸ್ತುತ ಜಾರಿಯಲ್ಲಿರುವ ಸರ್ಕಾರದ ಆರೋಗ್ಯ ನೀತಿಗಳ ಪರಿಣಾಮಗಳೇ ಇಂಥದ್ದೊಂದು ಸಂಶೋಧನಾ ಅಧ್ಯಯನಕ್ಕೆ ಪ್ರೇರಣೆಯಾಯಿತು. ವಿಶೇಷ ತೆರಿಗೆ ಮೂಲಕ ಲಘುಪಾನೀಯ ಸೇವನೆಯನ್ನು ಕಡಿತಗೊಳಿಸಬಹುದೆಂಬ ವಿಚಾರ ಹೊಸದಾಗಿದ್ದು, ಇದೆಷ್ಟು ಪರಿಣಾಮಕಾರಿ ಎಂಬುದನ್ನು ಅಧ್ಯಯನದ ಮೂಲಕ ವಿವರಿಸಲಾಗಿದೆ ಎನ್ನುತ್ತಿದೆ ಪಬ್ಲಿಕ್ ಹೆಲ್ತ್ ಫೌಂಡೇಶನ್.

ಸಂಶೋಧಕರು 2009-10ರ ಅವಧಿಯಲ್ಲಿ ಭಾರತದ ಆಯ್ದ ಮತ್ತು ಗ್ರಾಮಗಳ ಒಂದು ಲಕ್ಷ ಮನೆಗಳಿಗೆ ಭೇಟಿ ನೀಡಿದ್ದರು. ಆ ಮನೆಗಳ ಸದಸ್ಯರಿಂದ ಕಲೆ ಹಾಕಿದ ಮಾಹಿತಿಗಳನ್ನು ಒಟ್ಟು ಸೇರಿಸಿ ವಿಶ್ಲೇಷಣೆ ನಡೆಸಿ ಅಧ್ಯಯನ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಅವರು ಪರಿಗಣಿಸಿದ ಅಂಶಗಳೆಂದರೆ, ಮನೆಯವರು ಬಳಸುತ್ತಿದ್ದ "ಲಘುಪಾನೀಯ"ಗಳ ಪ್ರಮಾಣ, ಅವರ ಆರೋಗ್ಯ ಸ್ಥಿತಿ ಮತ್ತು ಮಾರುಕಟ್ಟೆಯಲ್ಲಿ ಲಘುಪಾನೀಯಗಳ ದರದಲ್ಲಿ ಏರುಪೇರಾದಾಗ ಉಂಟಾಗುತ್ತಿದ್ದ ಪರಿಣಾಮಗಳನ್ನು ಅವರು ದಾಖಲಿಸಿಕೊಂಡಿದ್ದಾರೆ.

ಲಘುಪಾನೀಯಗಳ ದರ ಕಡಿಮೆ ಇದ್ದರೆ ಅದರ ಬಳಕೆಯೂ ಹೆಚ್ಚುತ್ತದೆ. ಲಘುಪಾನೀಯಗಳಲ್ಲಿ ಮಧುಮೇಹ, ಬೊಜ್ಜು ಹೆಚ್ಚಿಸುವ ಅಂಶಗಳು ಹೆಚ್ಚಿವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹೀಗಾಗಿ ಲಘುಪಾನೀಯಗಳಿಂದಾಗಿ ಆರೋಗ್ಯದ ಮೇಲಾಗುತ್ತಿರುವ ಕೆಟ್ಟ ಪರಿಣಾಮ ತಪ್ಪಿಸುವುದಕ್ಕೆ ತಿಳಿವಳಿಕೆ ನೀಡಿದರಷ್ಟೇ ಸಾಲದು. ಲಘುಪಾನೀಯಗಳ ಮೇಲೆ ಸುಂಕ ವಿಧಿಸಿದರೆ, ಅವುಗಳ ದರ ಹೆಚ್ಚಳವಾಗಿ ಗ್ರಾಮೀಣ ಪ್ರದೇಶದ ಜನರು ಲಘುಪಾನೀಯ ಖರೀದಿ ಕಡಿಮೆ ಮಾಡಬಹುದು ಎಂದು ಅಧ್ಯಯನಕ್ಕೆ ಮೊದಲೇ ಊಹಿಸಲಾಗಿತ್ತು. ಆದರೆ, ಅಧ್ಯಯನದ ಬಳಿಕ ಈ ಊಹೆ ತಪ್ಪೆಂಬುದು ಮನವರಿಕೆಯಾಗಿದೆ. ಗ್ರಾಮೀಣಪ್ರದೇಶಗಳಷ್ಟೇ ಅಲ್ಲ ನಗರ ಪ್ರದೇಶಗಳಲ್ಲೂ ಗ್ರಾಹಕರ ಮೇಲೆ ಲಘುಪಾನೀಯದ ದರ ಬದಲಾವಣೆ ಪರಿಣಾಮ ಬೀರಿದ್ದು ಕಂಡುಬಂದಿದೆ. ಇದು ಅವರ ಲಘುಪಾನೀಯ ಸೇವನೆಯನ್ನು ತಗ್ಗಿಸಿದೆ ಎಂಬ ಅಂಶ ಬಹಿರಂಗವಾಗಿದೆ.

ಪಿಎಚ್ಎಫ್ಐನ ಅಧ್ಯಕ್ಷ ಶ್ರೀನಾಥ ರೆಡ್ಡಿ ಅವರು ಹೇಳುವ ಪ್ರಕಾರ, "ಕೇವಲ ಅರಿವು ನೀಡುವ ಮೂಲಕ ಗ್ರಾಹಕರ ನಡವಳಿಕೆಯನ್ನು ತಿದ್ದಲಾಗದು. ಅದಕ್ಕೆ ಕಠಿಣ ಕಾನೂನು ನೆರವು ಕೂಡ ಬೇಕಾಗುತ್ತದೆ. ಒಂದೊಮ್ಮೆ ಲಘುಪಾನೀಯಗಳ ಮೇಲೆ ಶೇ.20ರಷ್ಟು ವಿಶೇಷ ತೆರಿಗೆ ವಿಧಿಸಿದರೆ, ಅದರಿಂದ ಖರೀದಿ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ಈಗಾಗಲೇ ದೃಢಪಟ್ಟಿದೆ".

ಕೊನೆ ಮಾತು: ಅಮೆರಿಕದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಲಘುಪಾನೀಯಗಳ ಮೇಲೆ ತೆರಿಗೆ ವಿಧಿಸಿದ್ದು, ಇನ್ನು ಹಲವೆಡೆ ಈ ಬಗ್ಗೆ ಚಿಂತನೆ ನಡೆದಿದೆ. ಅಲ್ಲಿನ ಸರ್ಕಾರ ತನ್ನ ಪ್ರಜೆಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ, ಭಾರತ ಸರ್ಕಾರ ಇಂಥ ಇಚ್ಛಾಶಕ್ತಿ ತೋರುವುದು ಸಾಧ್ಯವೇ?

 

Author : ನೆಟ್ ಸಂಚಾರಿ 

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited