Untitled Document
Sign Up | Login    
ಬರವಣಿಗೆ ಮರೆತು ಬಿಟ್ಟೆವಾ ನಾವು..!

ಸಾಂದರ್ಭಿಕ ಚಿತ್ರ

ಗ್ರಾಮೀಣ ಜನರನ್ನು ಬಿಟ್ಟರೆ ಪಟ್ಟಣದ‌ಲ್ಲಿ ಜನ ಪತ್ರ ಬರೆಯೋದನ್ನು ಮರೆತೇ ಬಿಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಪೋಸ್ಟ್ ಎಂಬ ಧ್ವನಿ ಪ್ರತಿಧ್ವನಿಸುತ್ತಿದೆ. ಮಹಾನಗರ, ಜಿಲ್ಲಾ ಕೇಂದ್ರದಲ್ಲಿ ಪೋಸ್ಟ್ ಎಂಬ ಅಂಚೆ ಅಣ್ಣನ ಧ್ವನಿ ಬಹುತೇಕ ಅಡಗಿದೆ.
ಕಾರಣ ಇಷ್ಟೇ.. ಕಾಲಚಕ್ರ ಉರುಳುತ್ತಿದೆ. ಬದಲಾವಣೆ ಗಾಳಿ ಬೀಸುತ್ತಲೇ ಇದೆ. ಸಂವಹನ ಮಾಧ್ಯಮದಲ್ಲೂ ಪರಿವರ್ತನೆ ಆಗುತ್ತಿದೆ. ಪೋಸ್ಟ್ ಕಾರ್ಡ್, ಇನ್‌ಲ್ಯಾಂಡ್ ಲೆಟರ್ ಹೋಗಿ ಈ ಮೇಲ್ ಚಾಲ್ತಿಯಲ್ಲಿದೆ. ಖಾಸಗಿ ಕ್ಷೇತ್ರದಲ್ಲಿ ಅಧಿಕೃತ ಸಂವಹನಕ್ಕಾಗಿ ಈಗ ಈ ಮೇಲ್ ಬಳಕೆಯಲ್ಲಿದೆ. ತುರ್ತು ಸಂದೇಶಗಳನ್ನು ರವಾನಿಸಲು ಎಸ್‌ಎಂಎಸ್ ಜಾರಿಯಲ್ಲಿದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪತ್ರ ಬರೆಯುವ ತಾಳ್ಮೆ ಇಲ್ಲದಾಗಿದೆ. ಸರಕಾರಿ ಕಚೇರಿಗಳಲ್ಲೂ ಗಣಕ ಯಂತ್ರಗಳು ಬಂದಿವೆ. ಅಧಿಕಾರಿಗಳು ಈ ಬದಲಾವಣೆಗೆ ಹೊಂದಿಕೊಳ್ಳುತ್ತಿದ್ದಾರೆ. ಆದ್ರೂ, ಪತ್ರ ಬಟವಾಡೆ ಕೆಲಸ ಪೂರ್ತಿಯಾಗಿ ನಿಂತುಹೋಗಿಲ್ಲ. ಗಣಕೀಕರಣದ ನೆಪದಲ್ಲಿ ಕಡತಗಳು ಇನ್ನು ಕೂಡಾ ಅಧಿಕಾರಿಗಳ ಟೇಬಲ್ ಮೇಲೆ ದೂಳು ಹಿಡಿದು ಕುಳಿತಿವೆ.
ಇನ್ನು ಖಾಸಗಿ ಕಂಪೆನಿಗಳ ವಿಚಾರಕ್ಕೆ ಬಂದರೆ, ಬಹುತೇಕ ಕಂಪೆನಿಗಳಲ್ಲಿ ಕಂಪ್ಯೂಟರ್‌ಗಳದ್ದೇ ಕಾರುಬಾರು. ಪೇಪರ್ ಲೆಸ್ ಆಫೀಸ್ ಎಂಬುದೇ ಧ್ಯೇಯ. ಈ ಮೇಲ್, ಮೆಸ್ಸೆಂಜರ್, ಇಂಟರ್‌ನಲ್ ಕಮ್ಯುನಿಕೇಟರ್ ಇವೇ ಮೊದಲಾದವು ಸಂವಹನದ ಪ್ರಮುಖ ಮಾಧ್ಯಮಗಳು. ಬಹುತೇಕ ಎಲ್ಲವೂ ಆಂಗ್ಲಮಯ. ಲಿಖಿತ ಸಂವಹನಗಳು ಆರಂಭವಾಗುವುದೇ ಡಿಯರ್ ಅಥವಾ ರೆಸ್ಪೆಕ್ಟೆಡ್ ಎಂಬ ಶಬ್ದದೊಂದಿಗೆ. ಅಂತ್ಯವಾಗುವುದು ಥ್ಯಾಂಕ್ಯು ಮತ್ತು ವಿತ್ ರಿಗಾರ್ಡ್ಸ್ ಕೆಳಗೆ ಬರೆದವನ ಹೆಸರಿನೊಂದಿಗೆ.

ಸಾಂದರ್ಭಿಕ ಚಿತ್ರ
ಹೀಗಾಗಿ ಇಂದಿನ ಪೀಳಿಗೆ ಬಹುತೇಕ ಕನ್ನಡದಲ್ಲಿ ಪತ್ರ ಬರೆಯೋದನ್ನು ಮರೆತು ಹೋಗಿದೆ. ತಂದೆಗೆ ಪತ್ರ ಬರೆಯುವ ವಿಧಾನ, ತಾಯಿಗೆ ಪತ್ರ ಬರೆಯುವ ವಿಧಾನ, ಸರಕಾರಿ ಅಧಿಕಾರಿಗಳಿಗೆ ಪತ್ರ ಬರೆಯುವ ವಿಧಾನ ಎಲ್ಲವೂ ಮರೆತು ಹೋಗುತ್ತಿದೆ.
ಸುಲಭವಾಗಿ ಬೆರಳಚ್ಚು ಮಾಡಲು ಗಣಕಯಂತ್ರ ಸಹಕರಿಸುವಾಗ ಪತ್ರ ಬರೆದು ಕೈ ನೋವು ಮಾಡಿಕೊಳ್ಳುವ ಪ್ರಮೇಯವೇ ಬೇಡ. ಮೊಬೈಲ್ ಫೋನ್ ಅನೇಕ ಬಾರಿ ಕೆಲಸವನ್ನು ಇನ್ನೂ ಸುಲಭವಾಗಿಸುತ್ತದೆ. ಸುದೀರ್ಘ ಮೇಲ್ ಕಳುಹಿಸುವ ಬದಲು ಚುಟುಕಾಗಿ ಸಂದೇಶ ರವಾನಿಸಿದರೆ ಮುಗಿಯಿತು.
ಕಚೇರಿ ಕೆಲಸಗಳಲ್ಲೂ ಎಸ್‌ಎಂಎಸ್ ಸುಲಭ ವಿಧಾನವಾಗುತ್ತಿದೆ. ತುರ್ತು ಸಂದರ್ಭದಲ್ಲಿ ಎಸ್‌ಎಂಎಸ್ ಕಳುಹಿಸಿದರೆ ಸಂದೇಶ ರವಾನಿಸಿದಂತೆಯೂ ಆಗತ್ತೆ. ದಾಖಲೆ ಉಳಿಸಿಕೊಂಡಂತೆಯೂ ಆಗತ್ತೆ.
ಆದರೆ, ಆರಂಭದಲ್ಲಿ ಎಸ್‌ಎಂಎಸ್‌ಗೆ ದರ ವಿಧಿಸಲಾಗುತ್ತಿತ್ತು. ಈಗಲೂ ಕೆಲವು ಕಂಪೆನಿಗಳ ಮೊಬೈಲ್ ಸೇವೆಯಲ್ಲಿ ಎಸ್‌ಎಂಎಸ್‌ಗೆ ನಿಗದಿತ ದರ ವಿಧಿಸಲಾಗುತ್ತಿದೆ. ಈ ನಡುವೆ ಟ್ರಾಯ್ ಸೂಚನೆ ಪ್ರಕಾರ, ಪ್ರತಿ ಚಂದಾದಾರನಿಗೂ ದಿನಕ್ಕೆ ೧೦೦ ಎಸ್‌ಎಂಎಸ್ ಉಚಿತವಾಗಿ ಕಳುಹಿಸಲು ಅವಕಾಶ ನೀಡಲಾಗುತ್ತಿದೆ. ೧೦೦ಕ್ಕಿಂತ ಹೆಚ್ಚು ಎಸ್‌ಎಂಎಸ್ ಕಳುಹಿಸಿದ್ರೆ ಕಂಪೆನಿಗಳು ದರ ವಿಧಿಸುತ್ತಿವೆ.
ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇದೆ. ಅಂತರ್ಜಾಲ ತಾಣದ ಮೂಲಕ ಎಸ್‌ಎಂಎಸ್ ಕಳುಹಿಸೋದಕ್ಕೂ ಆರಂಭಿಸಲಾಯ್ತು. ಕೆಲವು ಅಂತರ್ಜಾಲ ತಾಣಗಳು ಈ ಸೇವೆಗೂ ದರ ವಿಧಿಸಿದ್ರೆ, ಬಹಳಷ್ಟು ತಾಣಗಳು ಉಚಿತ ಸೇವೆ ನೀಡುತ್ತಿವೆ. ಆದ್ರೆ, ಎಸ್‌ಎಂಎಸ್ ಜೊತೆಗೆ ಒಂದಿಷ್ಟು ಜಾಹೀರಾತಿನ ಶಬ್ದಗಳೂ ಇರುತ್ತವೆ ಅನ್ನೋದಷ್ಟೇ ಕಿರಿಕಿರಿ. ಕಳುಹಿಸಿದವರಿಗೆ ಯಾವ ನಷ್ಟವೂ ಇಲ್ಲದೇ ಸ್ಪಷ್ಟ ಸಂದೇಶ ರವಾನಿಸಿದಂತಾಗುತ್ತದೆ. 160by2, way2sms ಮೊದಲಾದ ಅಂತರ್ಜಾಲ ತಾಣಗಳಲ್ಲಿ ನೋಂದಣಿ ಮಾಡಿಕೊಂಡರೆ ಉಚಿತ ಎಸ್‌ಎಂಎಸ್ ಕಳುಹಿಸಬಹುದು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡಾ ತನ್ನದೇ ಆದ ಕೌಟುಂಬಿಕ, ಸ್ನೇಹಿತರ ಮತ್ತು ವ್ಯಾವಹಾರಿಕ ಜಾಲ ಹೊಂದಿರುತ್ತಾರೆ. ಈ ಎಲ್ಲರ ಮೊಬೈಲ್ ಸಂಖ್ಯೆಯನ್ನು ಈ ತಾಣದಲ್ಲಿ ಶೇಖರಿಸಿಟ್ಟು ಗ್ರೂಪ್ ಎಸ್‌ಎಂಎಸ್ ಕಳುಹಿಸುವ ಮೂಲಕ ಎಲ್ಲ ರೀತಿಯ ವ್ಯವಹಾರಗಳನ್ನು ನಿಭಾಯಿಸುತ್ತಾರೆ. ಈ ತಾಣಗಳ ಮೂಲಕ ಎಸ್‌ಎಂಎಸ್ ಕಳುಹಿಸಿದ್ರೆ, ಎಷ್ಟು ಜನರಿಗೆ ಎಸ್‌ಎಂಎಸ್ ಹೋಗತ್ತೋ ಅಷ್ಟು ಜನಕ್ಕೂ ಜಾಹೀರಾತು ಸಂದೇಶ ಹೋಗತ್ತೆ.. ಅದೂ ಒಂದೇ ಎಸ್‌ಎಂಎಸ್‌ನಲ್ಲಿ! ಒಟ್ಟಿನಲ್ಲಿ ಬದಲಾಗುತ್ತಿರುವ ವ್ಯಾವಹಾರಿಕ ರೀತಿ ನೋಡಿದರೆ, ಕಾಲಾಯ ತಸ್ಮೈ ನಮಃ ಎನ್ನಬೇಕು ಅಷ್ಟೇ…

 

Author : umesh 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited