Untitled Document
Sign Up | Login    
ಬಿಸಿ-ಗಾಳಿ ಬೆಲೂನು ಹಾರಾಟಕ್ಕೆ ಸುವರ್ಣ ಸಂಭ್ರಮ! ದೇಶದ ಮೊದಲ ಬೆಲೂನು ಹಾರಾಟ ಬೆಂಗಳೂರಿನಲ್ಲೇ


ಮಕ್ಕಳ ದಿನಾಚರಣೆಗೆ ಇನ್ನು ಕೆಲವೇ ದಿನ ಬಾಕಿ. ಈ ಸಲದ ಮಕ್ಕಳ ದಿನಾಚರಣೆಗೆ ವಿಶೇಷ ಪ್ರಾಮುಖ್ಯತೆ ಇದೆ. ಇದು ದೇಶದ ಮಟ್ಟಿಗಷ್ಟೇ ಅಲ್ಲ, ಬೆಂಗಳೂರಿನ ಮಟ್ಟಿಗಂತೂ ಅತ್ಯಂತ ಸಂತಸ ಸಂಭ್ರಮ ಪಡುವ ದಿನ. ಬರೋಬ್ಬರಿ 5೦ ವರ್ಷದ ಹಿಂದೆ ದೇಶದಲ್ಲಿ ಮೊದಲ ಬಾರಿಗೆ ಬಿಸಿ ಗಾಳಿ ಬೆಲೂನು(hot-air balloon) ಹಾರಿಬಿಟ್ಟ ದಿನ ಇದು. ಅದು ಕೂಡಾ ಬೆಂಗಳೂರಿನಲ್ಲೇ ಎಂಬುದು ವಿಶೇಷ.

ಅಂದು 1963 ನವೆಂಬರ್ 14. ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ರೇಸ್ ಕೋರ್ಸ್‌ನಿಂದ ಬಿಸಿ ಗಾಳಿ ಬೆಲೂನು ಹಾರಾಟಕ್ಕೆ ಹಸಿರು ನಿಶಾನೆ ತೋರಿದ್ದರು. ಅದು ಕೂಡಾ ಮಕ್ಕಳ ದಿನಾಚರಣೆ ಪ್ರಯುಕ್ತವೇ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮವಾಗಿತ್ತು. ಸ್ವಿಸ್ ಮೂಲದ ಜೊಹಾನ್ ಹೆನ್ರಿಚ್ ಪೆಸ್ಟಲೋಝಿ ಅವರ ಸಿದ್ಧಾಂತಗಳನ್ನು ಆಧರಿಸಿದ ಪೆಸ್ಟಲೋಝಿ ಚಿಲ್ಡ್ರನ್’ಸ್ ವಿಲೇಜ್ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಇದಕ್ಕಾಗಿ ಜರ್ಮನಿಯಿಂದ ಒಂದು ಬಿಸಿ ಗಾಳಿ ಬೆಲೂನನ್ನು ಬೆಂಗಳೂರಿಗೆ ತರಿಸಲಾಗಿತ್ತು.

ಇದನ್ನು ಮುನ್ನಡೆಸುವುದಕ್ಕೆ ಪರವಾನಗಿ ಹೊಂದಿದ ಇಬ್ಬರು ಪೈಲಟ್‌ಗಳಿದ್ದರು. ಒಬ್ಬರು ಜರ್ಮನಿಯಲ್ಲಿರುವ ಪೆಸ್ಟಲೋಝಿ ಕಿಂಡರ್‌ಡೋಫ್‌ನ ನಿರ್ದೇಶಕ ಹರ್ಮನ್ ಜೋಹಾನ್ಸ್, ಇನ್ನೊಬ್ಬರು ಅಲ್ಫ್ರೆಡ್ ಶೂಝ್. ಇವರಿಬ್ಬರೂ ಬೆಲೂನಿನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ಇವರ ಜತೆಗೆ ಬೆಲೂನಿನಲ್ಲಿ ಹಾರಿದವರಲ್ಲಿ ಒಬ್ಬ ಪುಟಾಣಿ ಬಾಲಕನಿದ್ದ. 14 ವರ್ಷದ ಆ ಹುಡುಗನ ಹೆಸರು ಅನಿಲ್ ಕುಮಾರ್. ಈಗ ಅನಿಲ್‌ಕುಮಾರ್ ಅವರಿಗೆ 64ವರ್ಷ.

ಈ ಐತಿಹಾಸಿಕ ಘಟನೆಯ ಸುವರ್ಣ ಸಂಭ್ರಮದ ವೇಳೆ ಅನಿಲ್ ಕುಮಾರ್ ನೆನಪಿನಂಗಳಕ್ಕೆ ಜಾರುತ್ತಾರೆ. ಅಂದು ಬೆಲೂನು ಹಾರಾಟಕ್ಕೆ ಎರಡು ದಿನ ಮೊದಲು ಪತ್ರಿಕಾಗೋಷ್ಠಿ ನಡೆದಿತ್ತು. ಬೆಲೂನಿನಲ್ಲಿ ಹಾರಾಡುವವರು ಇಬ್ಬರು ಕೂಡಾ ಜರ್ಮನಿಯವರಾದ ಕಾರಣ, ಮಕ್ಕಳ ದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿಸಬೇಕಾದರೆ ಭಾರತದವರು ಇರಬೇಕು ಎಂಬ ಅಭಿಪ್ರಾಯ ಅಲ್ಲಿ ವ್ಯಕ್ತವಾಯಿತು. ಮಕ್ಕಳಾದರೆ ಇನ್ನೂ ಚೆನ್ನ ಎಂದರು. ಹೀಗೆ ಹುಡುಕಾಡಿದಾಗ ಅಲ್ಲಿದ್ದ ಒಬ್ಬನೇ ಬಾಲಕ ಈ ಅನಿಲ್ ಕುಮಾರ್. ಅಲ್ಲಿಗೆ ಅಪ್ಪನ ಜತೆ ಹೋಗಿದ್ದೆ. ಅಪ್ಪ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಪತ್ರಿಕೆಯೊಂದನ್ನು ನಡೆಸುತ್ತಿದ್ದರು. ಬೆಲೂನಿನಲ್ಲಿ ಕೂರಲು ಬರುವೆಯಾ ಎಂದು ಅವರು ಕೇಳಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ್ದಾಗಿ ಅವರು ನೆನಪಿಸಿಕೊಳ್ಳುತ್ತಾರೆ.

ಅಂದು ಬೆಲೂನು 18ಸಾವಿರ ಅಡಿ ಎತ್ತರದಲ್ಲಿ ಹಾರಾಡಿತ್ತು. ಆಗ ನಾನು ಆಗಸದಿಂದ ಕಂಡ ಬೆಂಗಳೂರಿನ ರೈಲ್ವೆ ಹಳಿಗಳು ಅದರ ಜಾಲವನ್ನು ಮರೆಯಲಾಗುತ್ತಿಲ್ಲ. ಸುಮಾರು 32 ಕಿ.ಮೀ.(2೦ ಮೈಲಿ) ದೂರ ಪ್ರಯಾಣಿಸಿದ ಬಳಿಕ ಈ ಬೆಲೂನು ಮಾಗಡಿ ರಸ್ತೆಯ ಚೋಳನಾಯಕನ ಹಳ್ಳಿಯಲ್ಲಿ ಇಳಿಯಿತು. ಅಂದು ವಯರ್‌ಲೆಸ್ ಸೆಟ್ ಬಳಕೆ ಮಾಡುವುದಕ್ಕೆ ಬೆಂಗಳೂರು ನಗರ ಪೊಲೀಸರು ತರಬೇತಿ ನೀಡಿದ್ದರು. ಅಂದು ಈ ಸಾಧನೆ ಮಾಡಿದಾಗ ಎಲ್ಲರೂ ನನ್ನ ಭಾರತದ ಯೂರಿ ಗಗಾರಿನ್ ಎಂದು ಕರೆದಿದ್ದರು ಎಂಬುದನ್ನೂ ಅವರು ಸ್ಮರಿಸುತ್ತಾರೆ.

ಈ ಐತಿಹಾಸಿಕ ಘಟನೆಯ ಸ್ಮರಣೆಗಾಗಿ ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿಯನ್ನೂ ಹೊರತಂದಿದೆ. ಅಂದ ಹಾಗೆ ಈಗ ಈ ಅನಿಲ್ ಕುಮಾರ್ ಬೆಂಗಳೂರಿನಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಪ್ಲೇಸ್ಮೆಂಟ್ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.

 

Author : ಚಂದ್ರಲೇಖಾ ರಾಕೇಶ್

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited