Untitled Document
Sign Up | Login    
ಜಾಗತೀಕರಣದ ಒಡಲಲ್ಲಿ ಬಡವಾಯ್ತು ಕನ್ನಡ


ಈಗ ಜನರ ಬದುಕು ಜಾಗತೀಕರಣದ ಧಾವಂತದಲ್ಲಿದೆ. ಅಭಿವೃದ್ಧಿ ಎಂಬ ಮರೀಚಿಕೆ ಸೆಳೆಯುತ್ತಿದೆ. ಶಿಕ್ಷಣದಿಂದ ಅಭಿವೃದ್ಧಿ ಎಂಬುದು ನಿಜ. ಆದರೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ. ಹಿಂದೆ 200- 300 ವಿದ್ಯಾರ್ಥಿಗಳಿದ್ದಲ್ಲಿ ಈಗ 20-30 ಮಂದಿ ಇದ್ದಾರೆ. ವಿದ್ಯಾರ್ಥಿ-ಶಿಕ್ಷಕರ ಅನುಪಾತ ಕಡಿಮೆ ಇದೆಯೆಂದು ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಯೂ ಕಡಿಮೆ ಇದೆ. ಇದರಿಂದ ಗುಣಮಟ್ಟದ ಕೊರತೆ ಕಾಡುತ್ತದೆ. ಪರಿಣಾಮ ಮಕ್ಕಳನ್ನು ಸೇರಿಸಲು ಬಡ ಹೆತ್ತವರೂ ಹಿಂದೆ ಮುಂದೆ ನೋಡುತ್ತಾರೆ.

ಇದರಿಂದಾಗಿ ಸರಕಾರಿ ಶಾಲೆಗಳಲ್ಲಿ ತರಗತಿಗೆ ಒಬ್ಬ ವಿದ್ಯಾರ್ಥಿ ಇರುವುದು, ಕೆಲವು ತರಗತಿಗಳಲ್ಲಿ ವಿದ್ಯಾರ್ಥಿಯೇ ಇಲ್ಲದೆ ಹೋಗುವುದು ಎಂಬಂತಹ ಪರಿಸ್ಥಿತಿ ಉಂಟಾಗಿದೆ. ಈ ವಿಷಚಕ್ರಕ್ಕೆ ಬಲಿಯಾದದ್ದು ಕನ್ನಡ ಭಾಷೆ. ಅಂದರೆ ದೇಶ ಅಭಿವೃದ್ಧಿಯಾದಂತೆ ದೇಸಿಭಾಷೆಗಳು ಏಕೆ ಸಾಯಬೇಕು? ಇದರಿಂದಾಗಿ ಕನ್ನಡ ಶಾಲೆಗಳ ಪೂರ್ಣಾಹುತಿಯ ಕ್ಷಣಗಣನೆ ಆರಂಭವಾಗಿದೆ. ಇದನ್ನು ಪ್ರತಿಬಂಧಿಸುವ ಕೆಲಸ ಆಗಲೇ ಬೇಕಾಗಿದೆ ಎಂಬುದಾಗಿ ಸುಳ್ಯದ ಶಿಕ್ಷಣ ತಜ್ಞ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.

ದೆಹಲಿಯಲ್ಲಿ ಕರ್ನಾಟಕ ಸಂಘವು ಏರ್ಪಡಿಸಿದ ಶಿಕ್ಷಣ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ ದಾಮ್ಲೆಯವರು ಮಾತಾಡುತ್ತಿದ್ದರು.

ಕನ್ನಡದ ಕಲಿಕೆ ಬದುಕು ಕೊಡುತ್ತದೆಯೇ? ಮಕ್ಕಳ ಉತ್ತಮ ಬದುಕಿಗಾಗಿ ಇಂಗ್ಲಿಷ್ ಮಾಧ್ಯಮದ ಕಲಿಕೆ ಅನಿವಾರ್ಯ ಎಂಬ ತರ್ಕವನ್ನು ಜನ ಮುಂದಿಡುತ್ತಾರೆ. ಇದೊಂದು ಅಸಂಬದ್ಧ ತರ್ಕ. ಕನ್ನಡವಷ್ಟೇ ಗೊತ್ತಿರುವವರು ಚೆನ್ನಾಗಿ ಬದುಕುತ್ತಿಲ್ಲವೇ? ಶಿಕ್ಷಣವೇ ಇಲ್ಲದೆ ದಿನಕ್ಕೆ ರೂಪಾಯಿ 500 ಸಂಪಾದಿಸುವವರಿಲ್ಲವೇ? ಕಂಪ್ಯೂಟರ್ ಕೂಲಿಗಳಾಗಿ ತಿನ್ನುವುದಷ್ಟೇ ಅನ್ನವೇ? ಭಾಷೆ ಸಂಸ್ಕೃತಿಯ ವಾಹಕ ಅಂತ ಗೊತ್ತಿದ್ದೂ ಅದನ್ನು ಕಾಪಾಡಿಕೊಳ್ಳಲಾಗದ ಸ್ಥಿತಿಗೆ ನಾವು ತಲುಪಿರುವುದು ನಿಜಕ್ಕೂ ಆತಂಕಕಾರಿ ಎಂದರು.

ಇದೇ ಸಂದರ್ಭದಲ್ಲಿ ಸೌದಿ ಅರೇಬಿಯಾ ಸರಕಾರದ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಪ್ರಾಧ್ಯಾಪಕರಾಗಿರುವ ಕನ್ನಡದ ಲೇಖಕಿ ಡಾ.ವಾಣಿ ಸಂದೀಪ್ ಭಾಗವತ್ ಮಾತಾಡಿ ಕನ್ನಡವನ್ನು ಪ್ರೀತಿಸುವ ಗುಣ ನಮ್ಮಲ್ಲಿರಬೇಕು. ನಾವು ಎಷ್ಟೇ ದೊಡ್ಡವಿದ್ಯಾವಂತರಾದರೂ ಯಾವುದೇ ಊರಿನಲ್ಲಿದ್ದರೂ ಕನ್ನಡಿಗರು ಭೇಟಿಯಾದಾಗ ಕನ್ನಡವನ್ನು ಮಾತಾಡುವಲ್ಲಿ ಹಿಂಜರಿಕೆ ಇರಬಾರದು. ಪರವೂರುಗಳಲ್ಲಿರುವ ಕನ್ನಡಿಗರು ಮನೆಯಲ್ಲಿ ಕನ್ನಡವನ್ನೆ ಮಾತಾಡಿ ಮಕ್ಕಳಿಗೂ ಕನ್ನಡ ಕಲಿಸಬೇಕು. ತಾನು ಅದನ್ನೇ ಮಾಡುತ್ತಿರುವುದಾಗಿ ಹೇಳಿದ ಅವರು ಹೀಗೆ ಮಾಡದಿದ್ದರೆ ಕನ್ನಡಕ್ಕೂ ಸಂಸ್ಕೃತಕ್ಕಾದಂತೆ ಯಾರಿಗೂ ಬೇಡವಾದ ಸ್ಥಿತಿಯಾಗುವುದನ್ನು ನಾವು ಕಾಣಬೇಕಾಗುತ್ತದೆ. ಹೀಗಾಗಿ ಕನ್ನಡ ಮಾತಾಡುವುದರಲ್ಲಿ ಹಿಂಜರಿಕೆ ಇರಬಾರದು ಎಂದು ಹೇಳಿದರು.

ಸಂವಾದದ ಆರಂಭದಲ್ಲಿ ಡಾ. ಅವನೀಂದ್ರನಾಥ್ ರವರು ಎಲ್ಲರನ್ನೂ ಸ್ವಾಗತಿಸಿದರು. ಡಾ. ಪುರುಶೊತ್ತಮ ಬಿಳಿಮಲೆಯವರು ಸಭೆಗೆ ಡಾ. ಚಂದ್ರಶೇಖರ ದಾಮ್ಲೆಯವರ ಪರಿಚಯ ನೀಡಿದರು. ಚರ್ಚೆಯಲ್ಲಿ ಡಾ. ಅಹಲ್ಯಾ ಚಿಂತಾಮಣಿ, ಡಾ. ರವಿಶಂಕರ್ ಎಸ್., ಡಾ. ಸಖಾರಾಮ ಉಪ್ಪೂರು, ಎಸ್. ನರಸಿಂಹ ಮೂರ್ತಿ, ಸಾಹಿತಿ ರೇಣುಕಾ ನಿಡಗುಂದಿ, ಡಾ. ಸಂದೀಪ್ ಭಾಗವತ್ ಹಾಗೂ ಇನ್ನೂ ಹಲವರು ಭಾಗವಹಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತಶೆಟ್ಟಿ ಬೆಳ್ಳಾರೆ ಇವರು ಮಾತಾಡಿ ಕನ್ನಡದ ಉಳಿವಿಗಾಗಿ ಕನ್ನಡಶಾಲೆಗಳ ಸಬಲೀಕರಣದ ಅಗತ್ಯವನ್ನು ಪ್ರತಿಪಾದಿಸಿದರು. ಕೊನೆಯಲ್ಲಿ ಉಷಾ ಶ್ಯಾಮಸುಂದರ್ ರವರು ವಂದನಾರ್ಪಣೆ ಮಾಡಿದರು.

 

Author : .. ..

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited