Untitled Document
Sign Up | Login    
ಭಾರತಕ್ಕೆ 2ನೇ ಪ್ರಧಾನಿಯಾದರೂ, ದೇಶದ ಸ್ವಾಭಿಮಾನ ಎತ್ತಿ ಹಿಡಿದ ಮೊದಲ ಪ್ರಧಾನಿ ಇವರು!

ಭಾರತದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ

ಅವರು ಸ್ವತಂತ್ರ ಭಾರತದ 2ನೇ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ ಶತೃಗಳಿಗೆ ಸವಾಲು ಹಾಕಿ, ಪಾಕ್ ವಿರುದ್ಧ ಹೋರಾಡಿ ದೇಶಕ್ಕೆ ಮತ್ತೊಮ್ಮೆ ಸ್ವಾತಂತ್ರ್ಯ ತಂದುಕೊಟ್ಟರು, ದೇಶ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದರೂ ದೇಶದ ಸ್ವಾಭಿಮಾನವನ್ನು ಮೆರೆಸಿದರು. ಭಾರತವನ್ನು ಸ್ವಾಭಿಮಾನಿ ದೇಶವನ್ನಾಗಿ ಮಾಡುವಲ್ಲಿ ಶ್ರಮಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದಾಗ ಅವರೆಂದಿಗೂ ನಮಗೆ 2ನೇಯ ಪ್ರಧಾನಿಯಾಗಿದ್ದರೆಂಬ ಭಾವನೆಯೇ ಮೂಡುವುದಿಲ್ಲ.

ದೇಶ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಒಬ್ಬ ಮಾದರಿ ಪ್ರಧಾನಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಶಾಸ್ತ್ರಿ ಅವರು ದೇಶ ಮೊದಲೆಂಬ ಪ್ರತಿಯೊಬ್ಬ ದೇಶಾಭಿಮಾನಿಗಳಿಗೆ ದೇಶದ ಮೊದಲ ಜವಾಬ್ದಾರಿಯುತ ಪ್ರಧಾನಮಂತ್ರಿಯಾಗಿಯೇ ಕಾಣುತ್ತಾರೆ. ಅವರ ಹೃದಯದಲ್ಲಿ ಮೇರು ವ್ಯಕ್ತಿತ್ವದ ಸ್ಥಾನದಲ್ಲಿ ವಿಜೃಂಭಿಸುತ್ತಾರೆ.

ಲಾಲ್ ಬಹದ್ದೂರ್ ಶಾಸ್ತ್ರಿ, ಉತ್ತರ ಪ್ರದೇಶದ ಬನಾರಸ್‍ನಿಂದ 11 ಕಿ.ಮೀ. ದೂರದಲ್ಲಿರುವ ಮೊಗಲ್ ಸರಾಯಿ ಎಂಬ ಹಳ್ಳಿಯ ಶ್ರೀವಾಸ್ತವ ಕಾಯಸ್ಥ ಎಂಬ ಕುಟುಂಬದಲ್ಲಿ 1904ನೇ ಅಕ್ಟೋಬರ್ 2ರಂದು ಜನಿಸಿದರು. ಶಾಸ್ತ್ರಿಯವರ ತಂದೆ ಶಾರದಾ ಪ್ರಸಾದ್ ಶಾಲೆಯ ಅಧ್ಯಾಪಕರಾಗಿದ್ದರು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರಿಗೆ ತಾಯಿಯಿಂದ ರಾಮಾಯಣ ಮಹಾಕಾವ್ಯಗಳ ಬಗೆಗಿನ ಶಿಕ್ಷಣ ಧಾರಾಳವಾಗಿ ಲಭಿಸಿತ್ತು.

ತಮ್ಮ ತಾಯಿಯ ಜೊತೆ ತಾಯಿಯ ಅಣ್ಣನ ಮನೆಯಲ್ಲಿ ಬೆಳೆದ ಲಾಲ್ ಬಹದ್ದೂರ್ ಅವರಿಗೆ ಶಾಸ್ತ್ರಿ ಎಂಬುದು ಹುಟ್ಟಿನಿಂದ ಬಂದ ಹೆಸರಲ್ಲ. ಕಾಶಿ ವಿಶ್ವವಿದ್ಯಾನಿಲಯದಲ್ಲಿ "ಶಾಸ್ತ್ರಿ" ಎಂಬ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಇವರಿಗೆ ಶಾಸ್ತ್ರಿ ಎಂಬ ಹೆಸರು ನೀಡಲಾಯಿತು.
ಲಾಲ್ ಬಹದ್ದೂರರು ವಿದ್ಯಾರ್ಥಿಯಾಗಿದ್ದ ಸಂದರ್ಭವದು, ಜಾತ್ರೆ ನೋಡಲು ಪಕ್ಕದೂರಿಗೆ ಗೆಳೆಯರೊಂದಿಗೆ ಹೋದರು. ನಡುವೆ ಕಾಲುವೆ ದಾಟಬೇಕಾಗಿತ್ತಾದ್ದರಿಂದ ತಮ್ಮ ಬಳಿಯಿದ್ದ ಒಂದು ಕಾಸನ್ನು ಕೊಟ್ಟು ದೋಣಿಯ ಮೂಲಕ ಗೆಳೆಯರೊಂದಿಗೆ ಪ್ರಯಾಣ ಬೆಳೆಸಿದರು. ಆದರೆ ವಾಪಸಾಗಬೇಕಾದರೆ ಜಾತ್ರೆಯಲ್ಲಿ ಏನನ್ನು ಖರೀದಿಸದೇ ಇದ್ದರೂ ಜೇಬಲ್ಲಿ ಕಾಸಿರಲಿಲ್ಲ. ಸ್ನೇಹಿತರು ವಾಪಸ್ ಹೋಗುವುದಕ್ಕೆ ಕರೆದರೂ ಜಾತ್ರೆ ಇನ್ನೂ ನೋಡುವದಿದೆ ಎಂದು ಸುಳ್ಳು ಹೇಳಿದ ಲಾಲ್ ಬಹದ್ದೂರರು ಸಂಜೆಯಾದ ನಂತರ ಕಾಲುವೆ ಈಜಿ ದಡ ಸೇರಿದರು.

ಕಾಲುವೆ ದಾಟಲು ಸ್ನೇಹಿತರ ಬಳಿ ದುಡ್ಡು ಕೇಳಿದರೆ ಕೊಡುತ್ತಿದ್ದರು.ಆದರೆ ಹಾಗೆ ಮಾಡಲಿಲ್ಲ. ಇದರಿಂದ ಶಾಸ್ತ್ರಿ ಅವರು ಜನ್ಮತಃ ಸ್ವಾಭಿಮಾನಿಗಳೆಂಬುದು ತಿಳಿಯುತ್ತದೆ. ಶಾಸ್ತ್ರಿ ಅವರಿಗೆ ಬಾಲ್ಯದಿಂದಲೇ ಇದ್ದ ಸ್ವಾಭಿಮಾನದ ರಕ್ಷಣೆ, ಅವರಲ್ಲಿದ್ದ ಧೈರ್ಯ-ಸ್ಥೈರ್ಯದ್ ಗುಣ ಮುಂದೊಮ್ಮೆ ಭಾರತದ ಪ್ರಧಾನಿಯಾಗಿ ದೇಶದ ಸ್ವಾಭಿಮಾನವನ್ನು ರಕ್ಷಣೆ ಮಾಡುವುದಕ್ಕೆ ಸಾರ್ಥಕವಾಯಿತು!. ಸಂಕಷ್ಟದ ಸ್ಥಿತಿಯಲ್ಲಿ ಕಾಲುವೆ ಈಜಿ ಪಾರಾಗಿದ್ದ ಧೈರ್ಯವಂತ, ಮುಂದೊಮ್ಮೆ ಶತೃಗಳ ಕೈಗೆ ಸಿಲುಕಿ ಮುಳುಗಬೇಕಿದ್ದ ಮಾತೃಭೂಮಿಯನ್ನೂ ಪಾರುಮಾಡಿದರು!

ಸ್ವಾತಂತ್ರ್ಯ ಬಂದ 10 ವರ್ಷ ಕ್ಕೂ ಹೆಚ್ಚು ನೆಹರೂ ಆಳ್ವಿಕೆ ನಡೆಸಿದರು, ಚೀನಾ ವಿರುದ್ಧ ರಣ ಹೇಡಿಯಾದರು. ಆದರೆ ಶಾಸ್ತ್ರಿ ಅವರು ಒಂದು ಅವಧಿಯನ್ನೂ ಪೂರೈಸದೇ ಇದ್ದರೂ ದೇಶದ ಮಾನ ಉಳಿಸುವಂತಹ ನಿರ್ಧಾರಗಳನ್ನು ಕೈಗೊಂಡರು. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಇದರೊಂದಿಗೆ ಸ್ವಾತಂತ್ರ ಗಳಿಸಿದ ನಂತರ ಪಾಕಿಸ್ತಾನಕ್ಕೂ ಕಾಶ್ಮೀರದ ’ಬರ’ ಕಾಡತೊಡಗಿತ್ತು. ಭಾರತದ ಮೇಲೆ ಬಹಿರಂಗವಾಗಿಯೇ ಸಮರ ಸಾರಿದ ಪಾಕಿಸ್ತಾನ ಗಡಿಭಾಗದಲ್ಲಿ ದಾಳಿ ನಡೆಸಿದ್ದರ ಪರಿಣಾಮ ಸೆ.1965 ರಲ್ಲಿ ಭಾರತ-ಪಾಕ್ ನಡುವೆ ಸಮರ ಆರಂಭವಾಯಿತು. ಕೊನೆಗೆ ಶತೃಗಳನ್ನೂ ಹಿಮ್ಮೆಟ್ಟಿಸಿದರು.

ಇದೇ ವೇಳೆ ಚೀನಾ ಗಡಿ ಪ್ರದೇಶದಲ್ಲಿ ಭಾರತ ಸೇನಾ ನೆಲೆಯನ್ನು ಸ್ಥಾಪಿಸಿದೆ ಎಂದು ಚೀನಾ ಕೂಡ ಭಾರತದ ಮೇಲೆ ಆಕ್ರಮ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾಗಲೂ ಚೀನಾ ಆರೋಪವನ್ನು ತಳ್ಳಿ ಹಾಕಿ ಅಗತ್ಯಬಿದ್ದರೆ ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಿದ್ಧ ಎಂದು ಎಚ್ಚರಿಸಿದ್ದರು.
ತಾಷ್ಕೆಂಟ್ ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ
ಭಾರತದ ಗಡಿಯಲ್ಲಿ ಭಾರತೀಯ ಸೇನಾ ನೆಲೆಯನ್ನು ಸ್ಥಾಪಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾ, ಅಂದೇ ಭಾರತದ ಭೂಭಾಗವನ್ನು ಅತಿಕ್ರಮಣ ಮಾಡುವ ಉದ್ದೇಶಹೊಂದಿತ್ತೆಂದು ತೋರುತ್ತದೆ. ಆದರೆ ಅಂದು ಚೀನಾಗೆ ತಕ್ಕ ಉತ್ತರ ನೀಡದೇ ಇದ್ದಿದ್ದರೆ, ಇಂದಿಗೆ ಭಾರತದ ಗಡಿ ಭಾಗದ ಅದೆಷ್ಟು ಭೂಮಿ ಚೀನಾ ಭೂಪಟದಲ್ಲಿರಬೇಕಿತ್ತೋ? ಹಾಗೆಯೇ ಅಂದು ಪಾಕಿಸ್ತಾನದ ವಿರುದ್ಧ ನಡೆದಿದ್ದ ಯುದ್ಧದ ನಂತರ ಮಾತನಾಡಿದ್ದ ಶಾಸ್ತ್ರಿ ಅವರು ಭಾರತ ಎಂದಿಗೂ ಶಾಂತಿಯನ್ನೇ ಪ್ರತಿಪಾದಿಸುತ್ತದೆ ಎಂದು ಹೇಳಿದ್ದರು. ಆದರೆ ಕಾರ್ಯವೈಖರಿಯಲ್ಲಿ ಮಾತ್ರ ಭಾರತವನ್ನು ಮುಟ್ಟಿದರೆ ತಟ್ಟದೇ ಬಿಡುವುದಿಲ್ಲ ಎಂಬ ಸಂದೇಶವನ್ನು ವಿರೋಧಿಗಳಿಗೆ ಮುಟ್ಟಿಸಿ ಶಾಂತಿ ಸೌಹಾರ್ದತೆ ಬಗ್ಗೆ ಬಗ್ಗೆ ಪ್ರಸ್ತಾಪಿಸಿದ್ದರು. ಈ ಮೂಲಕ ಭಾರತದ ಶಾಂತಿ ಪ್ರತಿಪಾದನೆಗೂ ಒಂದು ಅರ್ಥ ನೀಡಿದ್ದರು.

ಅದು 1965. ಆದರೆ 2013ರಲ್ಲಿ ದೇಶದ ಗಡಿಭಾಗದಲ್ಲಿ ಚೀನಾ ಹಾಗೂ ಪಾಕಿಸ್ತಾನ ಏಕಕಾಲಕ್ಕೆ ಸವಾಲೆಸೆಯುತ್ತಿದ್ದರೂ ಕೃತಿಯಲ್ಲಿ ಕೆಲಸಕ್ಕೆ ಬಾರದ ಹೇಳಿಕೆಗಳನ್ನು ನೀಡುತ್ತಾ, ಉತ್ತರಕುಮಾರರಂತೆ ಶಾಂತಿ ಮಂತ್ರ ಜಪಿಸುತ್ತಾರೆ! ಅದಕ್ಕೇ ಶಾಸ್ತ್ರಿ ಅವರು ದೇಶದ 2ನೇ ಪ್ರಧಾನಿಯಾದರೂ ನಿಜರೂಪದಲ್ಲಿ ಜವಾಬ್ದಾರಿಯುತ ಮೊದಲನೇ ಪ್ರಧಾನಿಯಾಗಿ ಕಾಣುತ್ತಾರೆ!.
ತಂದೆ ಸಾವಿನ ಬಗ್ಗೆ ರಹಸ್ಯ ಬಯಲು ಮಾಡಲು ಒತ್ತಾಯಿಸುತ್ತಿರುವ ಸುನಿಲ್ ಶಾಸ್ತ್ರಿ
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಂಗ್ರೆಸ್ ಸರ್ಕಾರವೆಂದರೆ ನೆನಪಿಗೆ ಬರುವುದು ದೇಶಕ್ಕಾಗಿ ಪ್ರಾಣಕೊಡುವ ಯೋಧರಿಗೆ, ದೇಶಕ್ಕೆ ಅನ್ನ ನೀಡುವ ರೈತರಿಗೆ ಮನ್ನಣೆ ನೀಡುವ ಸರ್ಕಾರ! ದೇಶ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಹೊರದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲದ ಭಾರ ಅಧಿಕವಾಯಿತು. ಅದನ್ನರಿತ ಶಾಸ್ತ್ರಿಜಿ, ವಾರದಲ್ಲಿ ಒಂದು ಹೊತ್ತಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹವಾಗುವುದೆಂದು ಲೆಕ್ಕಾಚಾರ ಹಾಕಿ ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ.

ದೇಶ ಬಡತನ ಎದುರಿಸಿದರೂ ಚಿಂತೆಯಿಲ್ಲ ಆದರೆ ಸ್ವಾಭಿಮಾನಕ್ಕೆ ಧಕ್ಕೆಯಾಗಬಾರದೆಂದು ಪಣತೊಟ್ಟಿದ್ದರು. ಒಂದು ಹೊತ್ತಿನ ಊಟ ಬಿಡುವ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟಪ್ರಾಯದಂತಾಯಿತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕೆ, ಸ್ವಾಭಿಮಾನವನ್ನೇ ಪಣಕಿಟ್ಟು ತಾನೊಬ್ಬ ಬಡರಾಷ್ಟ್ರದ ಪ್ರಧಾನಿ ಎಂದು ತನ್ನ ರಾಷ್ಟ್ರದ ಬಗ್ಗೆ ಹೀನಾಯವಾಗಿ ಹೇಳಿಕೊಳ್ಳುವ ಪ್ರಧಾನಿಯನ್ನು ಕಾಣುತ್ತಿರುವುದು ಭಾರತೀಯರ ದೌರ್ಭಾಗ್ಯ!.

ಅಂದು ಶಾಸ್ತ್ರಿ ಅವರು, ಜೈ ಜವಾನ್ ಜೈ ಕಿಸಾನ್ ಎಂದು ಘೋಷಣೆ ಮಾಡಿದ್ದರು, ಯಾವ ಸೈನಿಕರ ಬಗ್ಗೆ ಜೈ ಜವಾನ್ ಎಂದು ಹೇಳಿದ್ದರೋ ಅದೇ ಸೈನಿಕರನ್ನು ಪಾಕಿಸ್ತಾನ ನಿರಂತರವಾಗಿ ಕೊಲ್ಲುತ್ತಿದ್ದರೂ ಅದೇ ಕಾಂಗ್ರೆಸ್ಸಿನ ಪ್ರಧಾನಿ, ಸೈನಿಕರು ಮಾಜಿ ಸೈನಿಕರ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದಾರೆ?. ಶಾಸ್ತ್ರಿ ಅವರು ದೇಶ ಸಂಕಷ್ಟದಲ್ಲಿದ್ದಾಗ ಅನಿವಾರ್ಯವಾಗಿ, ಒಂದು ಹೊತ್ತಿನ ಊಟ ಬಿಡಲು ದೇಶದ ಜನತೆಗೆ ಕರೆ ನೀಡಿದ್ದರು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯಾದರೂ ಹೇಗಿದೆ? ಒಂದು ರೂಪಾಯಿ, 5 ರೂಪಾಯಿಗೆಲ್ಲಾ ಹೊಟ್ಟೆ ಬಿರಿಯುವ ಹಾಗೆ ಊಟ ಮಾಡಬಹುದೆಂದು ಹುಂಬತನದ ಹೇಳಿಕೆ ನೀಡುತ್ತಿದ್ದು ದೇಶನ್ನು ಸಂಕಷ್ಟದ ಸ್ಥಿತಿಗೆ ತರುತ್ತಿದ್ದಾರೆ!

ಇವೆಲ್ಲವನ್ನೂ ಬಿಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತೋರಿದ ಹಾದಿಯಲ್ಲಿ ನಡೆಯುವುದಿರಲಿ, ಈ ಕೃತಘ್ನ ಪಕ್ಷದವರು ಪ್ರಧಾನಿ ಹುದ್ದೆಗೋಸ್ಕರ, ಶಾಸ್ತ್ರಿ ಅವರನ್ನು, ತಾಷ್ಕೆಂಟ್ ಒಪ್ಪಂದಕ್ಕೆ ರಷ್ಯಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಷಪ್ರಾಶನ ಮಾಡಿಸಿ ಕೊಂದರೆಂದೂ ಹೇಳಲಾಗಿದೆ. ಅದಕ್ಕೆ ತಕ್ಕಂತೆ ಮೃತ ದೇಹದ ಉದರ ಭಾಗದಲ್ಲಿ ಅನುಮಾನಾಸ್ಪದ ಕಲೆಗಳಿದ್ದವು, ಶಾಸ್ತ್ರಿ ಅವರ ಸಾವು ಅಸಹಜ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಕುಲದೀಪ್ ನಾಯರ್ ಅವರು ಬರೆದಿರುವ The night Shastri died and other stories ಎಂಬಲ್ಲಿ ಶಾಸ್ತ್ರಿ ಅವರದ್ದು ಅಸಹಜ ಸಾವು ಎಂಬುದಕ್ಕೆ ಸ್ಪಷ್ಟ ಉದಾಹರಣೆ ದೊರೆಯುತ್ತದೆ.(http://www.outlookindia.com/article.aspx?281456).
ದುರ್ದೈವವೆಂದರೆ, ಶಾಸ್ತ್ರಿ ಅವರ ಸಾವಿನ ರಹಸ್ಯ ಇಂದಿಗೂ ರಹಸ್ಯವಾಗಿಯೇ ಉಳಿದಿದೆ! ಇಂದಿಗೂ ಶಾಸ್ತ್ರಿ ಅವರ ಮಗ ಸುನಿಲ್ ಶಾಸ್ತ್ರಿ, ತಂದೆಯ ಸಾವಿನ ರಹಸ್ಯವನ್ನು ಬಯಲು ಮಾಡಲು ನಿರ್ಲಜ್ಜ ಸರ್ಕಾರವನ್ನು ಬೇಡುತ್ತಲೇ ಇದ್ದಾರೆ ಎಂದರೆ ಶಾಸ್ತ್ರಿ ಜನ್ಮದಿನದಂದೂ, ಶಾಸ್ತ್ರಿ ಅವರ ಸಾವಿನ ರಹಸ್ಯ ಕಾಡದೇ ಇರುವುದಿಲ್ಲ.

ಅಕ್ಟೋಬರ್ 2ರಂದು ನಾವು ಗಾಂಧಿ ಅವರ ಜನ್ಮದಿನವನ್ನು ಮಾತ್ರವೇ ನೆನೆಯುತ್ತೇವೆ ಆದರೆ ಒಬ್ಬ ಪ್ರಧಾನಿ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಶಾಸ್ತ್ರಿ ಅವರನ್ನು ಮರೆಯುತ್ತೇವೆ! ಗಾಂಧಿಯನ್ನು ಕೊಂದವರಿಗೆ ಮರಣದಂಡನೆ ವಿಧಿಸುತ್ತಾರೆ. ಭಾರತದ ಸ್ವಾಭಿಮಾನವನ್ನು ಎತ್ತಿಹಿಡಿದ ಶಾಸ್ತ್ರಿ ಅವರ ಅಸಹಜ ಸಾವನ್ನು ರಹಸ್ಯವಾಗಿಡುತ್ತಾರೆ. ಇಷ್ಟಕ್ಕೂ ಶಾಸ್ತ್ರಿ ಅವರನ್ನು ಕೊಂದಿರುವ ಸಾಧ್ಯತೆಗಳಿಗೆ ಉದ್ದೇಶ ಕಂಡುಕೊಳ್ಳಲು ಹೋದರೆ ಸುಭಾಷ್ ಚಂದ್ರ ಬೋಸರ ಸಾವಿನ ರಹಸ್ಯ ತೆರೆದುಕೊಳ್ಳುತ್ತದೆ!. ತಮ್ಮ ಸ್ವಾರ್ಥಕ್ಕೋಸ್ಕರ ತಮ್ಮ ಪಕ್ಷದ ನಾಯಕ, ಒಬ್ಬ ಪ್ರಧಾನಿಯ ಸಾವಿನ ರಹಸ್ಯವನ್ನು ಜಾಗರೂಕತೆಯಿಂದ ಕಾಪಾಡಿಕೊಂಡು ಬರುವ ಕಾಂಗ್ರೆಸ್ ಎಂಬ ಕೃತಘ್ನ ಪಕ್ಷದಿಂದ ದೇಶದ ಜನತೆ ಒಳ್ಳೆಯದನ್ನು ಹೇಗೆ ತಾನೇ ನಿರೀಕ್ಷಿಸಲು ಸಾಧ್ಯ?.

ಇಂದು ಅಕ್ಟೋಬರ್ 2, "ಜೈ ಜವಾನ್ ಜೈ ಕಿಸಾನ್" ಎಂಬ ಧ್ಯೇಯ ವಾಕ್ಯ ದೇಶಾದ್ಯಂತ ಪಸರಿಸುವ ಮೂಲಕ, ಸೈನಿಕ ಹಾಗೂ ರೈತರಲ್ಲಿ ಹೊಸ ಚೈತನ್ಯ ಮೂಡಿಸಿ "ದೇಶದ ಏಳಿಗೆಗೆ ದುಡಿದ ಮೊದಲ ಪ್ರಧಾನಿ" ಹಾಗೂ ದೇಶದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 109ನೇ ಜನ್ಮದಿನಾಚರಣೆ. ಈಗಿರುವ ಕಾಂಗ್ರೆಸ್ ಸರ್ಕಾರದಿಂದ ಶಾಸ್ತ್ರಿ ಅವರ ಸಾವಿನ ರಹಸ್ಯ ಬಯಲು ಮಾಡುವುದಂತೂ ಅಸಾಧ್ಯದ ಮಾತು. ಮುಂದಿನ ಸರ್ಕಾರವಾದರೂ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ನೆಚ್ಚಿನ ಮಾಜಿ ಪ್ರಧಾನಿ ದಿ.ಶಾಸ್ತ್ರಿಜಿ ಅವರ ಸಾವಿನ ಬಗ್ಗೆ ದೇಶದ ಜನತೆಗೆ ತಿಳಿಸುವಂತಾಗಲಿ. ದೇಶಧ್ರೋಹಿಗಳ ಬಣ್ಣ ಬಯಲಾಗಲಿ....

ಜೈ ಜವಾನ್, ಜೈ ಕಿಸಾನ್, ಜೈ ಲಾಲ್ ಬಹದ್ದೂರ್ ಶಾಸ್ತ್ರಿಜಿ...

 

Author : ಶ್ರೀನಿವಾಸ್ ರಾವ್

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited