Untitled Document
Sign Up | Login    
ವಿಶ್ವೇಶ್ವರಯ್ಯರಂಥ ಭಾಷಾಭಿಮಾನಿಗಳೂ ನಾವಲ್ಲ,ಅಂಥಹ ನಿಸ್ವಾರ್ಥಿ ಇಂಜಿನಿಯರ್ ಗಳೂ ನಮ್ಮಲ್ಲಿಲ್ಲ!

ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು

ಅವರನ್ನು ಓರ್ವ ಇಂಜಿನಿಯರ್ ಎನ್ನಬೇಕೋ ಅಥವಾ ಭಾಷೆಗೆ ಅಪಾರ ಕೊಡುಗೆ ನೀಡಿದ ಭಾಷಾಭಿಮಾನಿ ಎನ್ನಬೇಕೋ, ಓರ್ವ ದಕ್ಷ ಆಡಳಿತಗಾರ ಎನ್ನಬೇಕೋ, ಅವೆಲ್ಲವನ್ನೂ ಮೀರಿ ಮಹಾನ್ ದಾರ್ಶನಿಕ ಎನ್ನಬೇಕೋ ಇಲ್ಲವೇ ಮುಂದಿನ ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾದ, ಹಲವರಿಗೆ ತಮ್ಮ ಯೋಜನೆಗಳ ಮೂಲಕ ಇಂದಿಗೂ ಕಾಯಕ ಒದಗಿಸಿದ ಕರ್ಮಯೋಗಿ ಎನ್ನಬೇಕೋ, ದೂರದೃಷ್ಠಿ ಹೊಂದಿದ ಓರ್ವ ನಾಯಕ, ಯುವ ಪೀಳಿಗೆಯ ಚೈತನ್ಯ ಎನ್ನಬೇಕೋ.... ಇಂದಿಗೂ,ಬಹುಶಃ ಎಂದಿದೂ ಬಗೆಹರಿಯದ ಗೊಂದಲ.

“ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ವಿಧಿ ಮನುಷ್ಯನ ಕೈಯಲ್ಲಿರುವ ಸಾಧನ ಎಂದು ಹೇಳಿ ಸ್ವಾಮಿ ವಿವೇಕರಂತೆಯೇ ಯುವ ಪೀಳಿಗೆಗೆ ಮಾದರಿಯಾದವರು ಸರ್ ಎಂ.ವಿಶ್ವೇಶ್ವರಯ್ಯ.

ಸೆ.15 ಬಂತೆಂದರೆ ಇಂದು ನಾವು ಅದೆಷ್ಟು ಇಂಜಿನಿಯರ್ ಗಳನ್ನು ನೆನಪಿಸಿಕೊಳ್ಳುತ್ತೇವೆಯೋ ಇಲ್ಲವೋ ಆದರೆ ಇಡೀ ಭಾರತವನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಭಾರತ ರತ್ನ ಸರ್. ಮೋಕ್ಷಗೊಂಡಂ ವಿಶ್ವೇಶ್ವರಯ್ಯ ಅವರನ್ನು ಮಾತ್ರ ನೆನೆಯದೇ ಇರಲು ಸಾಧ್ಯವಿಲ್ಲ.

ಬುದ್ಧಿವಂತಿಕೆಗೆ ಮಾತ್ರವೇ ಸೀಮಿತವಾಗದೇ ನಿಸ್ಪೃಹತೆ, ನಿಸ್ಸ್ವಾರ್ಥತೆಗೂ ವಿಶ್ವೇಶ್ವರಯ್ಯ ಅವರು ಮಾದರಿ. ಅಂದಿನ ಕಾಲಘಟ್ಟದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತದ ಮಟ್ಟಿಗೆ ಏಕಮೇವಾದ್ವಿತೀಯರಾಗಿದ್ದ ಅವರು, ಸಾಮಾನ್ಯ ಇಂಜಿನಿಯರ್ ಗಳಂತೆ ಸ್ವಾರ್ಥಕ್ಕಾಗಿ ದುಡಿದವರಲ್ಲ. ತಮ್ಮ ಬುದ್ಧಿವಂತಿಕೆಯನ್ನು ದೇಶದ ಒಳಿತಿಗಾಗಿ,ಉದ್ಧಾರಕ್ಕಾಗಿ ವಿನಿಯೋಗಿಸಿದರು.
ವಿಶ್ವೇಶ್ವರಯ್ಯ ಅವರು ತಮ್ಮ ವೃತ್ತಿ ಜೀವನದಲ್ಲಿ ಅದಾಗಲೇ ಬಹಳಷ್ಟು ಹೆಸರು ಗಳಿಸಿದ್ದ ದಿನಗಳು.... ಮೈಸೂರು ಮಹಾರಾಜರ ಕಾರ್ಯದರ್ಶಿಗಳೊಮ್ಮೆ ಮಹಾರಾಜರಿಗೆ ಪತ್ರ ಬರೆದು ವಿಶ್ವೇಶ್ವರಯ್ಯ ಅವರಿಗೆ ನೀಡುತ್ತಿದ್ದ ವೇತನ ಹೆಚ್ಚಳ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ವಿಷಯ ವಿಶ್ವೇಶ್ವರಯ್ಯ ಅವರಿಗೆ ತಿಳಿದಿರಲಿಲ್ಲ, ವಿಷಯ ತಿಳಿದ ಕೂಡಲೇ ವೇತನ ಹೆಚ್ಚಳ ಮಾಡುವುದನ್ನು ವಿಶ್ವೇಶ್ವರಯ್ಯ ಅವರೇ ವಿರೋಧಿಸಿ ಮಹಾರಾಜರಿಗೆ ಪತ್ರ ಬರೆಯುತ್ತಾರೆ. ಒಬ್ಬ ಮೇಧಾವಿ, ಅತ್ಯಂತ ಬೇಡಿಕೆಯಲ್ಲಿದ್ದ ಇಂಜಿನಿಯರ್ ತನ್ನ ವೇತನವನ್ನು ಹೆಚ್ಚಳ ಮಾಡುವುದು ಬೇಡವೆಂದು ಹೇಳಿ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುರುವ ವ್ಯಕ್ತಿತ್ವ ಕರ್ನಾಟಕ ರಾಜ್ಯದವರೆಂಬುದೇ ನಮಗೆ ಹೆಮ್ಮೆಯ ಸಂಗತಿ. ಅಂತಹ ಮೇರು ವ್ಯಕ್ತಿತ್ವಕ್ಕೆ, ಅವರ ವಿದ್ವತ್ತಿಗೆ ಎಂದಾದರೂ ಬೆಲೆ ಕಟ್ಟುವುದೂ ಅಸಾಧ್ಯವೇ ಸರಿ.

ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ವಿಶ್ವೇಶ್ವರಯ್ಯ ಅವರಿಗೆ ಒಂದು ನೂರು ಸಾವಿರ ರೂಪಾಯಿಗಳ ವೇತನ ನಿಗದಿ ಮಾಡಲು ಸರ್ಕಾರ ನಿರ್ಧರಿಸುತ್ತದೆ. ಅದರೆ ಅದರಲ್ಲಿ ಒಂದು ರೂಪಾಯಿಯನ್ನೂ ಪಡೆಯದ ವಿಶ್ವೇಶ್ವರಯ್ಯನವರು, ಆ ಹಣದಿಂದ ವಿದ್ಯಾರ್ಥಿಗಳ ಕಲಿಕೆಗೆ ಉಪಯೋಗವಾಗುವ ವೃತ್ತಿಪರ ತರಬೇತಿ ಸಂಸ್ಥೆ ಸ್ಥಾಪಿಸಲು ಸಲಹೆ ನೀಡುತ್ತಾರೆ. ಆಗಲೇ ಉದ್ಭವಿಸಿದ್ದು ಬೆಂಗಳೂರಿನಲ್ಲಿ ಇಂದು ನಾವು ಕಾಣುತ್ತಿರುವ ಪ್ರತಿಷ್ಠಿತ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್(S.J.Polytechnic). ಇದರಿಂದ ವಿಶ್ವೇಶ್ವರಯ್ಯ ಅವರಿಗೆ ಮುಂದಿನ ಪೀಳಿಗೆಯ ಉನ್ನತಿ ಬಗ್ಗೆ ಇದ್ದ ಕಾಳಜಿ ಎಂಥದ್ದಿರಬಹುದು ಎಂದು ತಿಳಿಯುತ್ತದೆ.

ವಿಶ್ವೇಶ್ವರಯ್ಯ ಅವರ ಸಲಹೆಯಿಂದ ಆರಂಭವಾದ ಈ ವೃತ್ತಿಪರ ತರಬೇತಿ ಸಂಸ್ಥೆಗೆ ಮೈಸೂರು ಮಹಾರಾಜರು ವಿಶ್ವೇಶ್ವರಯ್ಯ ಅವರ ಹೆಸರಿಡಲು ಆಶಿಸುತ್ತಾರೆ. ಬದಲಾಗಿ ವಿಶ್ವೇಶ್ವರಯ್ಯ ಅವರು ಅದಕ್ಕೆ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರರ ಹೆಸರನ್ನು ನಾಮಕರಣ ಮಾಡಬೇಕೆಂದು ಹೇಳಿದ ಪರಿಣಾಮ ಅದು ಮೈಸೂರಿನ ಮಹಾರಾಜರ ಹೆಸರಿನಲ್ಲೇ ಇಂದಿಗೂ ಚಿರಸ್ಥಾಯಿಯಾಗಿದೆ. ವೃತ್ತಿ ರಂಗದಲ್ಲಿ, ಜನಪ್ರಿಯತೆಯಲ್ಲಿ ಎಷ್ಟೇ ಉತ್ತುಂಗಕ್ಕೇರಿದರೂ ತನ್ನ ಕೆಲಸವನ್ನು ಸರ್ಕಾರದ ಕೆಲಸ ಎಂದು ಭಾವಿಸಿದರು. ಪ್ರತಿಷ್ಟೆ ಮೆರೆಯದೇ ದೂರ ಉಳಿಯುವ ಸನ್ಯಸ್ಥ ಸ್ಥಿತಿ ಬೇರೆ ಯಾರಲ್ಲಿ ಕಾಣಲು ಸಾಧ್ಯ?
ಇಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪದವಿ ಪಡೆದವನಲ್ಲಿ ಉತ್ತಮವಾದ ಇಂಜಿನಿಯರ್ ನನ್ನು ಕಾಣುವುದೇ ಪ್ರಯಾಸ!. ಅಂತದ್ದರಲ್ಲಿ ಮೂಲತಃ ಓರ್ವ ಸಿವಿಲ್ ಇಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯನವರು, ಇಂಜಿನಿಯರಿಂಗ್ ನ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ವಿಶ್ವೇಶ್ವರಯ್ಯ ಅವರ ಕೊಡುಗೆ ಬರಿ ತಾಂತ್ರಿಕ, ಇಂಜಿನಿಯರಿಂಗ್ ಜಗತ್ತಿಗೆ ಮಾತ್ರ ಸೀಮಿತವಲ್ಲ. ಅವರಲ್ಲಿ ಒಬ್ಬ ಭಾಷಾಭಿಮಾನಿಯೂ ಇದ್ದರು ಎಂಬುದಕ್ಕೆ ಇಂದು ನಾವೆಲ್ಲರೂ ನೋಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಉತ್ತಮ ಉದಾಹರಣೆ. ಬಹುಶಃ ಅಂದಿನ ಕಾಲದಲ್ಲಿ ವಿಶ್ವೇಶ್ವರಯ್ಯ ಅವರು ಕನ್ನಡ ಭಾಷೆಯನ್ನು ಬೆಳೆಸುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸದೇ ಇದ್ದಿದ್ದರೆ ಇಂದು ನಾವು ಕನ್ನಡ ಸಾಹಿತ್ಯ ಪರಿಷತ್ ಎಂಬುದನ್ನು ನೋಡಲು ಕಷ್ಟಸಾಧ್ಯವಾಗಿತ್ತು ಎಂದರೆ ತಪ್ಪಿಲ್ಲ.

ಭಾರತದ ಆರ್ಥಿಕತೆಯ ಬಗ್ಗೆಯೂ ವಿಶ್ವೇಶ್ವರಯ್ಯ ಅವರ ಕೊಡುಗೆ ಮಹತ್ವದ್ದಾಗಿದ್ದು 1934ರಲ್ಲಿ ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ (Planned Economy for India) ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಅಲ್ಲದೇ 1920ರಲ್ಲಿ Reconstructing India ಎಂಬ ಪುಸ್ತಕವೂ ಪ್ರಕಟಗೊಂಡಿದೆ. ಒಬ್ಬ ಒಳ್ಳೆಯ ವಿಜ್ಞಾನಿ,ಎಂಜಿನಿಯರ್‌,ಸಾಫ್ಟ್‌ವೇರ್ ತಂತ್ರಜ್ಞ,ಎಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬ ಉತ್ತಮ ಆಡಳಿತಗಾರ ಒಬ್ಬನೇ ವ್ಯಕ್ತಿಯಲ್ಲಿ ಅಡಗಿರುವುದು ಸಾಧ್ಯವಾದರೆ ಅದು ಸರ್.ಎಂ ವಿಶ್ವೇಶ್ವರಯ್ಯ ಅವರಲ್ಲಿ ಮಾತ್ರ ಎಂದರೆ ತಪ್ಪಾಗದು!

ವಿಶ್ವಕ್ಕೇ ಮೊದಲ ಬಾರಿ ಜಲಾಶಯಕ್ಕೆ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸುವ ಆವಿಷ್ಕಾರವನ್ನು ಮಾಡಿದ ನಮ್ಮ ವಿಶ್ವೇಶ್ವರಯ್ಯನವರು ತಮ್ಮ ಆವಿಷ್ಕಾರಕ್ಕೆ ಪೇಟೆಂಟ್ ಪಡೆದರು. ಆದರೆ ಯಾವುದೇ ಸಂಭಾವನೆ ಪಡೆಯಲು ನಿರಾಕರಿಸಿದರು. ಸರ್ಕಾರದ ಕೆಲಸವನ್ನು ತಾವು ಮಾಡಿದ್ದಾಗಿ ಹೇಳಿದರು. ಇಂತಹ ನಿಸ್ಪೃಹತೆಯನ್ನು ಇಂದು ಯಾವ ಇಂಜಿನಿಯರ್ ನಿಂದ ನಿರೀಕ್ಷಿಸಲು ಸಾಧ್ಯ?
ಕನ್ನಡ ಸಾಹಿತ್ಯ ಪರಿಷತ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಂಬಾಡಿ ಕಟ್ಟೆ, ಎಚ್‌.ಎ.ಎಲ್, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ವಿಶ್ವವಿದ್ಯಾನಿಲಯ, ಜೋಗದ ಜಲವಿದ್ಯುತ್ ಯೋಜನೆ, ನೀರಾವರಿ ಯೋಜನೆ, ಮೈಸೂರು ಸಕ್ಕರೆ ಕಾರ್ಖಾನೆ, ಭಟ್ಕಳ ಬಂದರು, ಶ್ರೀಗಂಧ ಎಣ್ಣೆ ತಯಾರಿಕೆ, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು, ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ(S.J. polytechnic), ವಿಶ್ವದಲ್ಲಿಯೇ ಮೊದಲ ಸ್ವಯಂಚಾಲಿತ ಗೇಟ್‌ ಗಳ ಅಳವಡಿಕೆ, ಹೈದ್ರಾಬಾದ್ ನ ಪ್ರವಾಹ ನೀಯಂತ್ರಣ ಯೋಜನೆ ಸೆರಿದಂತೆ ತಂತ್ರಜ್ನಾನ ಕ್ಷೇತ್ರದಲ್ಲಿ ನಾವು ಇಂದು ನೋಡುತ್ತಿರುವುದು ಉಪಯೋಗಿಸುತ್ತಿರುವುದು ಕಲಿಯುತ್ತಿರುವುದು ಎಲ್ಲವೂ ಅಂದು ವಿಶ್ವೇಶ್ವರಯ್ಯ ಅವರು ಹೊಂದಿದ್ದ ದೂರ ದೃಷ್ಠಿಯ ಫಲ!

ಅದರಲ್ಲಿಯೂ ಕನ್ನಡ ಭಾಷೆ ಬೆಳೆಸಲು ಹೆಣಗುತ್ತಿರುವ ಈ ಕಾಲದಲ್ಲಿ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಕನ್ನಡ ಭಾಷೆಯ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಚೇತನ ವಿಶ್ವೇಶ್ವರಯ್ಯನವರನ್ನು ನಾವು ಎಂದೆಂದಿಗೂ ವಿಶೇಷವಾಗಿ ಸ್ಮರಿಸಬೇಕು. ಅವರನ್ನು ಓರ್ವ ಇಂಜಿನೀಯರನ್ನಾಗಿ ನೋಡುವುದಕ್ಕಿಂತ ಸಮಗ್ರ ಕೊಡುಗೆಯ ಕಲ್ಪವೃಕ್ಷ ಎನ್ನಲೂಬಹುದು!

ಭಾರತದ ಇತಿಹಾಸದಲ್ಲೇ ವಿಶ್ವೇಶ್ವರಯ್ಯ ಅವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಖಂಡಿತ ಸಿಗಲಾರರು. ಅದರಲ್ಲಿಯೂ ತಮ್ಮ ವೃತ್ತಿರಂಗದ ವ್ಯಾಪ್ತಿಯನ್ನೂ ಮೀರಿ ಕನ್ನಡ ಭಾಷೆ, ಸಲ್ಲಿಸಿರುವುದನ್ನು ಹೋಲಿಸಿದರೆ ಇಂದು ಕನ್ನಡದ ಬೆಳವಣಿಗೆ ಬಗ್ಗೆ, ಭಾಷಾಭಿಮಾನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ನಾವೆಲ್ಲರೂ ವಿಶ್ವೇಶ್ವರಯ್ಯನವರ ಕೊಡುಗೆ ಮುಂದೆ ಎಷ್ಟು ಚಿಕ್ಕವರೆಂಬ ಭಾವನೆ ಮೂಡದೇ ಇರದು. ಇಂದಿನ ಸ್ಥಿತಿಯಲ್ಲಿ ಸರ್.ಎಂ.ವಿ ಅವರಂತಹ ಮತ್ತೊಬ್ಬ ಭಾಷಾಭಿಮಾನಿಗಳನ್ನು ಗುರುತಿಸಲು ಸಾಧ್ಯವೇ? ಲಂಚ, ಭ್ರಷ್ಟಚಾರದಂತಹ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ವಿಶ್ವೇಶ್ವರಯ್ಯ ಅವರಂತೆ ದೇಶ,ರಾಜ್ಯಕ್ಕೆ ಪ್ರಾಮಾಣಿಕ, ನಿಸ್ಸ್ವಾರ್ಥ ಸೇವೆ ಸಲ್ಲಿಸುವ ಇಂಜಿನಿಯರ್ ಗಳು ನಮ್ಮಲ್ಲಿ ಇದ್ದಾರೆಯೇ ಎಂದು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಅದೇನೇ ಇರಲಿ ವಿಶ್ವೇಶ್ವರಯ್ಯನವರಿಗೆ ವಿಶ್ವೇಶ್ವರಯ್ಯ ಅವರೇ ಸಾಟಿ, ಅವರ ದುಡಿಮೆ, ಬದುಕು ನಮಗೆ ಅನುಕ್ಷಣವೂ ದಾರಿದೀಪ. ಇವತ್ತು ವಿಶ್ವೇಶ್ವರಯ್ಯನವರ 152ನೇ ಜನ್ಮದಿನ. ಭಾರತ ರತ್ನ ಪಡೆದ ಇಂತಹ ಅನರ್ಘ್ಯ ರತ್ನಕ್ಕೆ ನಮ್ಮ ಅನಂತ ವಂದನೆ ಸಲ್ಲಿಸೋಣ, ಅವರು ಹಾಕಿಕೊಟ್ಟಿರುವ "ಯೋಜನೆ"ಗಳಲ್ಲಿ ತಂತ್ರಜ್ನಾನ ಕ್ಷೇತ್ರದ ಉತ್ತಮ ನಾಳೆಗಳು, ಅಪ್ರತಿಮ ಇಂಜಿನಿಯರ್ ಗಳು ನಿರ್ಮಣವಾಗಲಿ ಎಂದು ನಿರೀಕ್ಷಿಸೋಣ.

ಹ್ಯಾಪಿ ಇಂಜಿನಿಯರ್ಸ್ ಡೇ....

 

Author : ಶ್ರೀನಿವಾಸ್ ರಾವ್

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited