Untitled Document
Sign Up | Login    
ಮನಸೂರೆಗೊಂಡ 'ನಾಟ್ಯ ಚಿಂತನ' ನಾಟ್ಯಶಾಸ್ತ್ರದ ಪ್ರಾಯೋಗಿಕ ಶಿಬಿರ


ನೂಪುರ ಭ್ರಮರಿ ಮತ್ತು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ಸಹಯೋಗದಲ್ಲಿ ಏ.20-26ರ ತನಕ ನಡೆದ "ನಾಟ್ಯಚಿಂತನ'' ಎಂಬ ನಾಟ್ಯ ಶಾಸ್ತ್ರದ ಪ್ರಾಯೋಗಿಕ ಶಿಬಿರ ಎಲ್ಲರ ಮನಸೂರೆಗೊಂಡಿತು.

ಸಾಮಾನ್ಯವಾಗಿ ನೃತ್ಯಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ನೃತ್ಯವನ್ನೋ/ನೃತ್ಯಬಂಧಗಳನ್ನೋ ಪಾಠ ಮಾಡಿ ತಾವು ಕಲಿತ/ನಿರ್ದೇಶಿಸಿದ ವಿಷಯಗಳನ್ನೇ ಅಭ್ಯರ್ಥಿಗಳಿಂದ ಮಾಡಿಸುತ್ತಾರೆ. ಆದರೆ ಈ ಕಾರ್ಯಾಗಾರದ ಸ್ವರೂಪ ವಿಶೇಷವಾಗಿದೆ. ಇಲ್ಲಿ ನಿತ್ಯವೂ 1 ಗಂಟೆಯ ಉಪನ್ಯಾಸ ತರಗತಿಯ ನಂತರ ನಡೆಯುವ ಪ್ರಾಯೋಗಿಕ ತರಗತಿಯಲ್ಲಿ ನಾಟ್ಯಶಾಸ್ತ್ರದ ಅಂಶಗಳನ್ನು ಬಳಸಿ ಭಾಗವಹಿಸಿದ ಅಭ್ಯರ್ಥಿ/ವಿದ್ಯಾರ್ಥಿಗಳಿಂದಲೇ ಕೊರಿಯೋಗ್ರಫಿ ಮಾಡಿಸಲಾಗಿದೆ. ಇದು ನೃತ್ಯಕ್ಷೇತ್ರದಲ್ಲಿ ವಿಶಿಷ್ಟ ಅಪರೂಪದ ಪ್ರಯತ್ನ. ಈ ಸಂಬಂಧವಾಗಿ ಅಭ್ಯರ್ಥಿಗಳಿಗೆ ನಿತ್ಯವೂ ಬೇರೆ ಬೇರೆ ಬಗೆಯ ಕೊರಿಯೋಗ್ರಫಿ ವಿಧಾನಗಳ ಬಗ್ಗೆ, ಅದಕ್ಕೆ ಪೂರಕವಾದ ಕಥೆ ಇತ್ಯಾದಿ ಅಂಶಗಳ ಬಗ್ಗೆ ನಿರ್ದೇಶನ ನೀಡಲಾಗಿದೆ. ಅಭ್ಯರ್ಥಿಗಳನ್ನು ವಯೋಮಾನ, ಕಾರ್ಯಕ್ಷಮತೆ, ಆಸಕ್ತಿಯ ಮತ್ತು ಕಲಿಕೆಯ ಮಟ್ಟದ ಆಧಾರದ ಮೇಲೆ ವಿಭಾಗ ಮಾಡಿ ಹೊಸ ಹೊಸ ಅಂಶಗಳತ್ತ ಅವರಿಂದಲೇ ನೃತ್ಯ/ನೃತ್ತವನ್ನು ಸಂಯೋಜಿಸಲಾಗಿದೆ. ಇವು ಎಲ್ಲಾ ಬಗೆಯಲ್ಲೂ ಅಭ್ಯರ್ಥಿಗಳ ಅರಿವನ್ನು ಹೆಚ್ಚಿಸುವಲ್ಲಿ ಕೈಗೊಳ್ಳುವಲ್ಲಿ ವಿನೂತನ ಪ್ರಯತ್ನವಾಗಿದೆ.

ಭರತನ ನಾಟ್ಯಶಾಸ್ತ್ರ- ಎಲ್ಲ ಕಲೆಗಳ ತಾಯಿಬೇರು. ಆದರೆ ಭರತನ ನಾಟ್ಯಶಾಸ್ತ್ರದ ಅರಿವನ್ನು ಹೆಚ್ಚಿಸುವ ತರಗತಿಗಳು, ಕಾರ್ಯಾಗಾರಗಳ ಸಂಖ್ಯೆ ಇಂದಿಗೆ ನೃತ್ಯಕ್ಷೇತ್ರದಲ್ಲಿ ಬಹಳಷ್ಟು ವಿರಳ. ಭರತನಾಟ್ಯಾದಿ ನೃತ್ಯತರಗತಿಗಳಲ್ಲೂ ನಾಟ್ಯಶಾಸ್ತ್ರದ ಪರಿಚಯ ಅಷ್ಟಾಗಿ ಇರುವುದಿಲ್ಲ. ಕಾರಣ ಇಂದು ನಾವು ಕಾಣುತ್ತಿರುವ ಶಾಸ್ತ್ರೀಯನೃತ್ಯಗಳೆನಿಸಿಕೊಂಡ ದೇಶೀ ಸಾಂಪ್ರದಾಯಿಕ ನೃತ್ಯಗಳು (ಭರತನಾಟ್ಯ, ಕೂಚಿಪುಡಿ ಇತ್ಯಾದಿ) ಮೂಲತಃ ನಾಟ್ಯಶಾಸ್ತ್ರದ ಮೂಲಾಂಶಗಳತ್ತ ಯೋಚಿಸದೆ ಬೇರೆ ಶಾಸ್ತ್ರಗ್ರಂಥಗಳನ್ನು ತನ್ನ ಆಕರವಾಗಿಸಿದೆ. ಆದ್ದರಿಂದ ಭರತನಾಟ್ಯ ಯತಾರ್ಥದಲ್ಲಿ ನಾಟ್ಯಶಾಸ್ತ್ರದ ಪ್ರತಿಯಲ್ಲ. ಹೀಗಿರುವಾಗ ನಾಟ್ಯಶಾಸ್ತ್ರದಲ್ಲಿ ಹೇಳಲಾದ ಅಂಶಗಳ ಥಿಯರಿಯನ್ನೂ ಕಲಿತು ಪ್ರಾಯೋಗಿಕ ನೆಲೆಗಟ್ಟಿನಿಂದ ಅದನ್ನು ನರ್ತನಕ್ಕೆ ಬಳಸಿಕೊಳ್ಳುವ ದೃಷ್ಟಿಯುಳ್ಳ ಪ್ರದರ್ಶನ/ಕಾರ್ಯಾಗಾರಗಳು ನೃತ್ಯಕ್ಷೇತ್ರದಲ್ಲಿ ನಡೆಯುವುದು ಎಲ್ಲಿಂದ? ಅದೂ ಚಿಣ್ಣರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಏಕಕಾಲಕ್ಕೇ ಹೊಂದುವಂತೆ ಉಪಯೋಗವಾಗುವ ಅನುಕೂಲವಿರುವಂತದ್ದು ಎಲ್ಲಿದೆ? ಆದ್ದರಿಂದಲೇ ಇಂತಹ ಸಮಗ್ರತೆಯನ್ನು, ವಿವಿಧ ಮನೋಧರ್ಮದವರನ್ನು ಏಕಕಾಲಕ್ಕೇ ಒಟ್ಟಿಗೆ ಬೆಸೆಯುವ ಮತ್ತು ಪರಸ್ಪರ ಅರಿತು ಬೆರೆತು ನಡೆಯುವ ಕಾರ್ಯಾಗಾರ ನಡೆದಿದೆ.

ಕಾರ್ಯಾಗಾರದಲ್ಲಿ ದಿನಕ್ಕೊಂದು ನಾಟ್ಯಶಾಸ್ತ್ರದ ಕಥಾಮಾಲಿಕೆಯ ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ, ಸಂವಾದ, ಪ್ರಶ್ನೋತ್ತರಗಳು ಮುಕ್ತವಾಗಿ ನಡೆದಿದ್ದು; ಭಾಗವಹಿಸಿದ 26 ವಿದ್ಯಾರ್ಥಿಗಳು 16 ವಿವಿಧ ಬಗೆಯ ನೃತ್ಯಸಂದರ್ಭಗಳನ್ನು ಕರಗತ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ನೃತ್ಯಗಳನ್ನು ಆಯ್ದು
ಪುತ್ತೂರಿನ ಕೋರ್ಟ್ ರಸ್ತೆಯ ಮುಳಿಯ ಜುವೆಲ್ಸ್ ಹಾಲ್ ನಲ್ಲಿ ಸಮಾರೋಪದ ದಿನದ ಸಂಜೆಯ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು. ಸಂಶೋಧಕಿ, ಕಲಾವಿದೆ ಮನೋರಮಾ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರೆ, ವಿದುಷಿ ಪ್ರೀತಿಕಲಾ ದೀಪಕ್ ಕುಮಾರ್ ಗಾಯನ ನಡೆಸಿಕೊಟ್ಟರು. ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದ್ವಾನ್ ಗಿರೀಶ್ ಕುಮಾರ್ ಸಹಕರಿಸಿದರು.

ರಾಮಕಥಾ ರೂಪಕ ನಿರ್ದೇಶಕ, ಕವಿ, ಯಕ್ಷಗಾನ ರಚನೆಕಾರ, ರಂಗಕರ್ಮಿ, ನಟ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು 'ಅಭಿನಯ'ದ ಕುರಿತಾಗಿ ಉಪನ್ಯಾಸ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ಮುಳಿಯ ಜ್ಯುವೆಲ್ಸ್ ಪುತ್ತೂರು ಮತ್ತು ಹಿಂದೂಸ್ಥಾನ್ ಪ್ರೊಮೋಟರ್ಸ್ ಮತ್ತು ಡೆವಲಪ್ಪರ್ಸ್ ಪುತ್ತೂರು ಇವರ ಸಹಪ್ರಾಯೋಜಕತ್ವವಿತ್ತು.
ಈ ಒಂದು ವಾರದ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ಹೆಸರಾಂತ ಕಲಾವಿದೆ, ಸಂಶೋಧಕಿ, ಗುರು ಡಾ.ಶೋಭಾ ಶಶಿಕುಮಾರ್ ಅವರ ನೇತೃತ್ವದಲ್ಲಿ ಉಪನ್ಯಾಸ ಕಾರ್ಯಾಗಾರ ಮತ್ತು ವಿಶೇಷವಾದ ಭರತನೃತ್ಯ ಕಾರ್ಯಕ್ರiವು ಉದ್ಘಾಟನಾದಿನದಂದು ಜರುಗಿತ್ತು. ಆರತಿ ವೇಲನ್, ಮತ್ತು ಮೇಘಾಕೃಷ್ಣ ಅವರು ಶೋಭಾ ಅವರು ನೀಡಿದ ಪ್ರಾತ್ಯಕ್ಷಿಕೆಯಲ್ಲಿ ಸಹವರ್ತಿಗಳಾಗಿ ಸಹಕರಿಸಿದ್ದರು. ಮತ್ತು ಇದೇ ಸಂದರ್ಭ ಭಾರತದಲ್ಲೇ ಏಕೈಕ ಮತ್ತು ಪ್ರಪ್ರಥಮ ಸಂಶೋಧನಾ ಸಂಚಿಕೆಯೆಂಬ ಮನ್ನಣೆ ಗಳಿಸಿರುವ ನೂಪುರ ಭ್ರಮರಿಯ ವಾರ್ಷಿಕ ವಿಶೇಷಾಂಕ-ಸಂಶೋಧನ ಸ್ಮರಣಸಂಚಿಕೆಯು ಅನಾವರಣಗೊಂಡದ್ದನ್ನು ನೆನಪಿಸಿಕೊಳ್ಳಬಹುದು.

 

Author : ಬೆಂಗಳೂರು ವೇವ್ಸ್ .

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited