Untitled Document
Sign Up | Login    
ನ.1ರ ವಿಶೇಷ ಲೇಖನ: ಹೈದರಾಬಾದ್ ಕರ್ನಾಟಕ ಮಂದಿಯ ಮುಖದಲ್ಲಿ ಮಿನುಗಿದ ಮಂದಹಾಸ

ಕನ್ನಡ ರಾಜ್ಯೋತ್ಸವ

ಹೌದು, ಕರ್ನಾಟಕ ರಾಜ್ಯದ ಹೈದರಾಬಾದ್ ಕರ್ನಾಟಕ ಎಂದೇ ಹೆಸರಾದ ಆರು ಜಿಲ್ಲೆಗಳ ಜನತೆಯ ಬೇಡಿಕೆಯ ಕತ್ತಲು ಸರಿದು ಮುಂಬೆಳಕಿನ ಉದಯವಾಗಿದೆ.

ಪ್ರಖ್ಯಾತ ಅಕ್ಕಿಯ ತವರು, ದೇಶದಲ್ಲಿಯೇ ಸುಪ್ರಸಿದ್ಧ ಅದಿರು ನಿಕ್ಷೇಪ, ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಹೈದ್ರಾಬಾದ್ ಕರ್ನಾಟಕ ಅತ್ಯಂತ ಹಿಂದುಳಿದೇ ಇದೆ. ಹೈದ್ರಾಬಾದ್ ಕರ್ನಾಟಕದ ವ್ಯಾಪ್ತಿಯಲ್ಲಿ ಆರು ಜಿಲ್ಲೆಗಳು ಬರುತ್ತವೆ. ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಗುಲ್ಬರ್ಗ ಹಾಗೂ ಯಾದಗೀರ್ 2011ರ ಜನಗಣತಿ ರೀತ್ಯ ಈ ಆರೂ ಜಿಲ್ಲೆಗಳ ಒಟ್ಟು ಜನಸಂಖ್ಯೆ 11,12,15,223 ಅಂದರೆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 18.36 ಆಗಿದೆ. ನೈಸರ್ಗಿಕವಾಗಿ ಸಂಪದ್ಭರಿತವಾದ ಈ ಜಿಲ್ಲೆಗಳಲ್ಲಿ ಸಾಕ್ಷರತೆ ಪ್ರಮಾಣ ಶೇ. 77.03 ರಷ್ಟಿದೆ. ಆದರೆ ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಪ್ರಮಾಣ ಕಡಿಮೆ ಇದ್ದು, ಅಲ್ಲಿಯ ಮಂದಿಯ ಬದುಕು ದುಸ್ತರ. ಬಾಳು ಪವಾಡ ಸದೃಶ್ಯ.

ಏಕೀಕರಣದ ಹಿನ್ನೆಲೆಯಲ್ಲಿ ಕರ್ನಾಟಕದ ಏಕೀಕರಣದ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗ ಕರ್ನಾಟಕ್ಕೆ ಸೇರ್ಪಡೆಗೊಂಡ ಐತಿಹಾಸಿಕ ಸನ್ನಿವೇಶವೆಂದರೆ ಕೇಳ್ಕರ್ ಸಮಿತಿ ಹಾಗೂ 1928ರ ಮೇ19ರಂದು ಮೋತಿಲಾಲ್ ನೆಹರು ನೇತೃತ್ವದ ಸಮಿತಿ ಭಾಷಾವಾರು ಪ್ರಾಂತ್ಯ ರಚನೆಗೆ ನೇಮಕಗೊಂಡಂದಿನಿಂದ 1953 ರಲ್ಲಿ ರಚನೆಗೊಂಡ ಫಜಲ್ ಆಲಿ ಸಮಿತಿ ವರೆಗೆ ಹಲವಾರು ಸಮಿತಿಗಳ ವರದಿಗಳು ಪ್ರಾಮುಖ್ಯತೆ ಪಡೆದವು. ಕರ್ನಾಟಕದ ಏಕೀಕರಣಕ್ಕೆ ಕನ್ನಡ ಕುಪುರೋಹಿತ ಶ್ರೀ ಆಲೂರು ವೆಂಕಟರಾಯರಿಂದ ಹಿಡಿದು ಲಕ್ಷಾಂತರ ಕನ್ನಡಿಗರು ಹೋರಾಟ ನಡೆಸಿದರು. 1953ರ ಏಪ್ರಿಲ್ 19ರಂದು ಹುಬ್ಬಳ್ಳಿಯಲ್ಲಿ ಏಕೀಕರಣ ಹೋರಾಟಗಾರರು ರಾಜಕೀಯ ನಾಯಕರುಗಳಿಗೆ ಅರಿಶಿನ ಕುಂಕುಮ ಹಚ್ಚಿ, ಬಳೆ ತೊಡಿಸಿ ಪ್ರತಿಭಟಿಸಿದರು.
ನಂತರ ಪೊಲೀಸ್ ಲಾಠಿ ಚಾರ್ಜ್ ಗೋಲಿಬಾರ್‌ಗೂ ಎದೆಯೊಡ್ಡಿದರು. ರಾಜ್ಯ ಸರ್ಕಾರಗಳ ಒತ್ತಡ ಹೆಚ್ಚಿ, 1956ರ ಅಕ್ಟೊಬರ್ 10ರಂದು ರಾಜ್ಯ ಪುನರ್ ವಿಂಗಡಣಾ ಆಯೋಗ ಮಂಡಿಸಿದ ವರದಿ ಆಧರಿಸಿ, ಅಂದಿನ ಕೇಂದ್ರ ಗೃಹ ಸಚಿವ ಗೋವಿಂದ ವಲ್ಲಭ ಪಂತ್ ಲೋಕಸಭೆಯಲ್ಲಿ ರಾಜ್ಯಗಳ ಪುನರ್ ವಿಂಗಡಣೆಗೆ ವಿಧೇಯಕ ಮಂಡಿಸಿದರು.

ಅದೇ ವರ್ಷ ಆಗಸ್ಟ್ 10ರಂದು ಲೋಕಸಭೆಯಲ್ಲಿ ಹಾಗೂ ಆಗಸ್ಟ್ 23ರಂದು ರಾಜ್ಯಸಭೆಯಲ್ಲಿ ವಿಧೇಯಕ ಅಂಗೀಕಾರವಾಯಿತು. ಆಗಸ್ಟ್ 31ರಂದು ರಾಷ್ಟ್ರಪತಿಗಳ ಅಂಕಿತವೂ ಆಯಿತು.1956ರ ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಗಿ 1973ರ ನವೆಂಬರ್ 1 ರಂದು ಕರ್ನಾಟಕವೆಂದು ಪುನರ್ ನಾಮಕರಣವಾಯಿತು.
ಹೀಗೆ ಹೈದರಾಬಾದ್ ಪ್ರಾಂತ್ಯದ ಕನ್ನಡಿಗರ ನಾಲ್ಕು ಜಿಲ್ಲೆಗಳಾದ ಬೀದರ್, ರಾಯಚೂರು, ಬಳ್ಳಾರಿ ಮತ್ತು ಗುಲ್ಬರ್ಗಾ ಜಿಲ್ಲೆಗಳು ರಾಜ್ಯದಲ್ಲಿ ಒಂದಾದವು.

ನಂತರದ ದಿನಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶವು ಐತಿಹಾಸಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಕಾರಣದಿಂದ ಪ್ರಾದೇಶಿಕ ಅಸಮತೋಲನಗಳು ಕಂಡುಬಂದಿವೆ ಎಂಬ ದೂರು ಕೇಳಿ ಬಂತು. ರಾಜ್ಯ ಸರ್ಕಾರವು ಈ ಅಸಮತೋಲನವನ್ನು ಸರಿ ಪಡಿಸಲು ವಿವಿಧ ಯೋಜನೆ ರೂಪಿಸುವ ಅನೇಕ ಪ್ರಯತ್ನಗಳನ್ನು ಮಾಡಿತು. ಪ್ರಾದೇಶಿಕ ಅಸಮತೋಲನಗಳ ನಿವಾರಣೆಗೆ ಹಾಗೂ ಸಮಸ್ಯೆ ಅಧ್ಯಯನ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಡಾ. ಡಿ. ಎಂ. ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಯಿತು.
ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹಮ್ಮಿಕೊಳ್ಳಲಾದ ವಿಶೇಷ ಅಭಿವೃದ್ಧಿ ಯೋಜನೆಯ ಮೇಲ್ವಿಚಾರಣೆಗೆ ಸಮಿತಿಯೊಂದನ್ನು ಸಹ ರಚಿಸಲಾಯಿತು. ವಿಶೇಷ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಕ್ಕೆ ಕೆಳಹಂತದಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇರುವುದು ವಾಸ್ತವಾಂಶವಾಗಿ ಕಂಡುಬಂದಿತು.

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನವನ್ನು ನೀಡುವ ಅಗತ್ಯತೆ ಬಗ್ಗೆ 1998 ನೇ ಇಸವಿಯಿಂದೀಚೆಗೆ ರಾಜ್ಯ ಸರ್ಕಾರಗಳು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಗಲ್ಲಿ ಅಂಗೀಕೃತವಾದ ಠರಾವುಗಳು, ಜ್ಞಾಪನಾ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಕಾಲ ಕಾಲಕ್ಕೆ ಸಲ್ಲಿಸಿತು. ಇವುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2012 ರ ಚಳಿಗಾಲದ ಅಧಿವೇಶನದಲ್ಲಿ 317 (ಜೆ) ಅನುಚ್ಛೇದವನ್ನು ಸೇರಿಸುವುದರೊಂದಿಗೆ ಭಾರತದ ಸಂವಿಧಾನಕ್ಕೆ ತಿದ್ದುಪಡಿ ಮಾಡಿತು. ವಿಧೇಯಕವು ಲೋಕಸಭೆಯಲ್ಲಿ 2012ರ ಸೆಪ್ಟೆಂಬರ್ 7ರಂದು ಮಂಡನೆಯಾಗಿ, ಡಿಸೆಂಬರ್ 18ರಂದು ಲೋಕಸಭೆಯಲ್ಲಿ ಮತ್ತು ಡಿಸೆಂಬರ್ 19ರಂದು ರಾಜ್ಯಸಭೆಯಲ್ಲಿ ಅನುಮೋದನೆಗೊಂಡು 2013ರ ಜನವರಿ 1ರಂದು ಭಾರತ ಸರ್ಕಾರದ ಗಜೆಟ್‌ನಲ್ಲಿ ಪ್ರಕಟವಾಯಿತು.

ಸಂವಿಧಾನದ ಅನುಚ್ಛೇದ 317 (ಜೆ)(1) (ಎ) ನಲ್ಲಿ ದತ್ತಕವಾಗಿರುವ ಅಧಿಕಾರದಂತೆ ರಾಜ್ಯದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಮಂಡಳಿಯ ಸೂಚಿತ ಪ್ರಕಾರ್ಯಗಳು ಈ ಕೆಳಕಂಡಂತಿವೆ:

*ಸಲಹಾ ಪರಿಷತ್ತು ಶಿಫಾರಸು ಮಾಡುವ ಅಭಿವೃದ್ಧಿ ಯೋಜನೆ ಹಾಗೂ ನೀತಿ ನಿಯಮಗಳನ್ನು ಪರಿಗಣಿಸುವುದು.

*ವಿವಿಧ ವಲಯಗಳ ಸಾಂದರ್ಭಿಕ ಮಟ್ಟವನ್ನು ತಿಳಿದುಕೊಳ್ಳುವುದು ಹಾಗೂ ಅಭಿವೃದ್ಧಿ ವೆಚ್ಚದ ಮಟ್ಟದ ಬಗ್ಗೆ ಸಲಹೆ ನೀಡುವುದು

*ರಾಜ್ಯಪಾಲರಿಗೆ ಆ ಪ್ರದೇಶಕ್ಕೆ ಅಗತ್ಯವಿರುವ ನೀತಿ ನಿಯಮಗಳ ಬಗ್ಗೆ ಸಲಹೆ ನೀಡುವುದು ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹಣ ಒದಗಿಸುವುದು.

*ಹುದ್ದೆಗಳ ಸೃಜನೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ಬಗ್ಗೆ ಸಲಹೆ ನೀಡುವುದು.

*ಉದ್ಯೋಗ ಮತ್ತು ಶಿಕ್ಷಣದಲ್ಲಿ ಈ ಪ್ರದೇಶದ ಜನರಿಗೆ ಮೀಸಲಾತಿ ಒದಗಿಸುವುದು.
ಸಂವಿಧಾನದ ಅನುಚ್ಛೇದ 317 (ಜೆ) (1)ರ ಅನ್ವಯ ರಾಷ್ಟ್ರಪತಿಗಳಿಗೆ ಪ್ರದತ್ತವಾದ ಅಧಿಕಾರದಂತೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚನೆ, ಅಭಿವೃದ್ಧಿಗೆ ಅನುದಾನ ಹಂಚಿಕೆ ಹಾಗೂ ಉದ್ಯೋಗ, ಶಿಕ್ಷಣ, ವೃತ್ತಿಕೌಶಲ ತರಬೇತಿಗಳಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ರಾಜ್ಯಪಾಲರಿಗೆ ಅಧಿಕಾರ ನೀಡುವ ಅಧಿಸೂಚನೆಗೆ 2013ರ ಅಕ್ಟೋಬರ್ ೮ರಂದು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಇದಕ್ಕೆ 2013ರ ಅಕ್ಟೋಬರ್ 24ರಂದು ರಾಷ್ಟ್ರಪತಿಗಳ ಅಂಕಿತ ದೊರೆಯಿತು.

 

Author : ಎಂ ಸಹನಾ ಟಿ.ಸಿ ಮಂಜುನಾಥಬಾಬು

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited