Untitled Document
Sign Up | Login    
ಹೈನುಗಾರಿಕೆಗೆ ಮುಳುವಾದ ಕಾಲು ಬಾಯಿ ರೋಗ


ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದರಿಂದಾಗಿ ಹೈನುಗಾರಿಕೆ ಸಂಕಷ್ಟಕ್ಕೀಡಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಾಲು ಬಾಯಿ ರೋಗದ ಬಗ್ಗೆ ಸಂಕ್ಷಿಪ್ತ ಮಾಹಿತಿ ಸಂಗ್ರಹ ಇಲ್ಲಿದೆ.

ಪಶುಗಳಿಗೆ ವೈರಸ್ ತಗುಲಿದ 2ರಿಂದ 12ದಿನಗಳಲ್ಲಿ ಅತಿಯಾದ ಜ್ವರ, ಬಾಯಲ್ಲಿ ನೀರ್ಗುಳ್ಳೆ, ವಿಪರೀತ ಜೊಲ್ಲು ಸುರಿಸುವುದು, ಕಾಲುಗಳನ್ನು ಕುಂಟುತ್ತ ನಡೆಯುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು, ತೂಕ ಕುಸಿತ, ಆಹಾರ ತಿನ್ನದೇ ಇರುವುದು, ಹಾಲುಕೊಡುವ ಪ್ರಮಾಣ ಕಡಿಮೆಯಾಗುವುದು ಮೊದಲಾದವು ಕಂಡುಬರುತ್ತದೆ. ಹತೋಟಿ ಕಳೆದುಕೊಂಡರೆ ಹೃದಯದ ಸ್ನಾಯುಗಳ ಉರಿಯೂತದಿಂದ ಸಾವೂ ಸಂಭವಿಸುತ್ತದೆ.

ಕಾಲು ಬಾಯಿ ರೋಗ ವಾತಾವರಣದ ಮೂಲಕ, ರೋಗವಿದ್ದ ಪ್ರಾಣಿಯೊಂದಿಗೆ ಸಂಪರ್ಕ, ಸಾಮೀಪ್ಯ, ಮೇವಿನ ಮೂಲಕ, ಕೊಟ್ಟಿಗೆಗಳಲ್ಲಿ ಬಳಸುವ ಉಪಕರಣಗಳು, ವಾಹನಗಳು, ನಿಂತ ನೀರು, ವಿದೇಶದಿಂದ ತಂದ ಪಶು ಆಹಾರಗಳ ಮೂಲಕವೂ ರೋಗ ಹರಡಬಹುದಾಗಿದೆ. ರೋಗಪೀಡಿತ ಪ್ರಾಣಿಯೊಂದಿಗೆ ಆರೋಗ್ಯವಂತ ಪ್ರಾಣಿಯನ್ನು ಕಟ್ಟುವುದೂ ರೋಗ ಹರಡಲು ಕಾರಣವಾಗಬಹುದು.
ಕಾಲುಬಾಯಿ ರೋಗಕ್ಕೆ ತುತ್ತಾದ ಪ್ರಾಣಿಗಳಿಗೆ ಚೆನ್ನಾಗಿ ಆರೈಕೆ ಅಗತ್ಯವಿದೆ. ಪ್ರಾಣಿಯ ಸುತ್ತ ಶುಚಿತ್ವವನ್ನು ಕಾಪಾಡುವುದು, ಕಾಯಿಲೆ ತಗುಲಿದ ಪ್ರಾಣಿಯನ್ನು ಪ್ರತ್ಯೇಕವಾಗಿ ಕಟ್ಟುವುದರ ಜೊತೆಗೆ ಮೃದು ಆಹಾರ ನೀಡಬೇಕು. ಅಲ್ಲದೇ ಆಂಟಿ ಬಯೋಟಿಕ್ಸ್ ಮತ್ತು ವಿಟಮಿನ್ ಇಂಜಕ್ಷನ್ ಅಗತ್ಯವಿದೆ. ಅದಕ್ಕೂ ಮೊದಲು ವರ್ಷದಲ್ಲಿ 2 ಬಾರಿ ಲಸಿಕೆಯನ್ನು ತಪ್ಪಿಸದೇ ಹಾಕಿಸಿಕೊಳ್ಳಬೇಕು. ರೋಗ ಲಕ್ಷಣ ಕಾಣುತ್ತಿದ್ದಂತೆ ಪಶುವೈದ್ಯರನ್ನು ಕಾಣುವುದು ಅಗತ್ಯ.

2001ರಲ್ಲಿ ಯುರೋಪ್ ನಲ್ಲಿ ಕಾಣಿಸಿಕೊಂಡ ಕಾಲು ಬಾಯಿ ರೋಗ ಬ್ರಿಟನ್ ನಲ್ಲಿ ವ್ಯಾಪಕವಾಗಿತ್ತು. ಪರಿಸ್ಥಿತಿ ಹತೋಟಿ ಕಳೆದುಕೊಂಡಾಗ ಬ್ರಿಟನ್ ಸರ್ಕಾರ ಕಂಡುಕೊಂಡಿದ್ದು ಪಶುಗಳ ಮಾರಣಹೋಮ. ಈ ವೇಳೆ ಸುಮಾರು 1ಕೋಟಿ ಜಾನುವಾರು, ಕುರಿಗಳ ಹತ್ಯೆ ಮಾಡಲಾಯಿತು. ಪಶುಸಂಗೋಪನೆ ಪ್ರದೇಶಗಳಲ್ಲಿ ಲಸಿಕೆ, ರಾಸಾಯನಿಕ ಸಿಂಪಡಣೆ ಕ್ರಮ ಕೈಗೊಳ್ಲಲಾಗಿತ್ತು. 2004ರ ವೇಳೆ ಸೋಂಕಿನ ಪ್ರಮಾಣ ಕಡಿಮೆಯಾಯಿತು.

ಕಾಲು ಬಾಯಿ ರೋಗ ಶತಮಾನಗಳಷ್ಟು ಹಳೆಯದಾದದ್ದು. 1514ರಲ್ಲಿ ಈ ರೋಗ ಮೊದಲು ಕಾಣಿಸಿಕೊಂಡಿತ್ತು. ಇದಕ್ಕೆ ಸಾಮ್ಯವಿರುವ ಕಾಯಿಲೆ ಇಟಲಿಯಲ್ಲಿ 1590ರಲ್ಲಿ ಕಾಣಿಸಿಕೊಂಡಿತ್ತು. ಬಳಿಕ 1897ರಲ್ಲಿ ಫ್ರಾನ್ಸ್ ನಲ್ಲಿ ಕಾಣಿಸಿಕೊಂಡಿತ್ತು. 2ನೇ ಮಹಾಯುದ್ಧದ ವೇಳೆಗೆ ಜಗತ್ತಿನಾದ್ಯಂತ ಕಾಲು ಬಾಯಿ ರೋಗ ವ್ಯಾಪಿಸಿತ್ತು. 1996ರ ವೇಳೆಗೆ ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕದ ಹಲವು ಭಾಗಗಳಲ್ಲಿ ವ್ಯಾಪಿಸಿತು. 2001ರಲ್ಲಿ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತ್ತು.

ಕರ್ನಾಟಕದಲ್ಲಿ ಈ ರೋಗ ಇತ್ತೀಚೆಗೆ ಅಧಿಕವಾಗಿ ಕಾಣಿಸಿಕೊಂಡಿದ್ದು, ಇದು ನೂರಾರು ಜಾನುವಾರುಗಳ ಸಾವಿಗೆ ಕಾರಣವಾಗಿದೆ. ಸರಕಾರದ ಜೊತೆಗೆ ರೈತರೂ ಮುನ್ನೆಚ್ಚರಿಕೆ ಕೈಗೊಂಡು ಈ ರೋಗ ಹರಡದಂತೆ ಹಾಗೂ ರೋಗಪೀಡಿತ ಜಾನುವಾರುಗಳಿಗೆ ಸರಿಯಾದ ಚಿಕಿತ್ಸೆ ಕೊಡಿಸುವಲ್ಲಿ ಮುತುವರ್ಜಿವಹಿಸಬೇಕು.

 

Author : ಸಂಗ್ರಹ ವರದಿ

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited