Untitled Document
Sign Up | Login    
ಭಾರತದ ಸ್ವಾತಂತ್ರ್ಯ,ಸೆಕ್ಯುಲರಿಸಂ ಹಾಗೂ ವಂಶಾಡಳಿತ


ನಮಗೆ ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದಿದ್ದರೂ ಈ ದೇಶದಲ್ಲಿ ನಿಜವಾಗಿಯೂ ಸ್ವಾತಂತ್ರ್ಯದಿಂದ ಬದುಕಿತ್ತಿದ್ದೇವೆಯೇ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಕ್ಷಣ ದೂರ ದೃಷ್ಠಿಯಿಲ್ಲದ ವ್ಯಕ್ತಿಗಳ ಕೈಗೆ ಅಧಿಕಾರ ಹಸ್ತಾಂತರವಾದ ಪರಿಣಾಮ ಇಂದಿಗೂ ನಮ್ಮ ಜುಟ್ಟು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವಿದೇಶಿಗರ ಕೈಯಲ್ಲಿಯೇ ಇದೆ ಎಂಬ ಸತ್ಯ ಸ್ವಾತಂತ್ರ್ಯ ದಿನದಂದೂ ನಮ್ಮನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ.

ಆಗಸ್ಟ್ 15 ಬಂತೆಂದರೆ ನಮ್ಮಲ್ಲಿ ದೇಶಾಭಿಮಾನ ಉಕ್ಕಿ ಹರಿಯುತ್ತದೆ, ನಮ್ಮ ತನಕ್ಕೆ, ನಮ್ಮ ನಾಡಿಗೆ ಪರಿಪೂರ್ಣ ಅರ್ಥ ದೊರೆತ ಮಹತ್ವವಾದ ದಿನ ಎಂದು ಹಿಗ್ಗುತ್ತೇವೆ, ವಂದೇ ಮಾತರಂ, ಜನ ಗಣ ಮನ ಗೀತೆಗಳು ಮೊಳಗುತ್ತದೆ. ಇದರೊಂದಿಗೆ ಭಾರತಕ್ಕಾಗಿ ಬಲಿದಾನ ಮಾಡಿದವರನ್ನೂ ನೆನೆಯುತ್ತೇವೆ. ನಿಜ ದೇಶಾಭಿಮಾನದ ಸಂಕೇತವಾಗಿ ಇವೆಲ್ಲವೂ ಸಹಜವೇ ಒಬ್ಬ ದೇಶಪ್ರೇಮಿ ಮಾಡಬೇಕಾದ್ದೆ.

ಆದರೆ ನಮಗೆ ಸ್ವಾತಂತ್ರ್ಯ ದೊರೆತ ತಕ್ಷಣವೇ ನಮ್ಮಿಂದಲೇ ಬೇರ್ಪಟ್ಟ ಭಾರತದ ಅವಿಭಾಜ್ಯ ಅಂಗವಾಗಿದ್ದ ಪಾಕಿಸ್ತಾನದ ಉಪಟಳ, ಯೋಧರ ಹತ್ಯೆ, ಜಮ್ಮು ಕಾಶ್ಮೀರದಲ್ಲಿ ಕೋಮುಗಲಭೆ, ಎಲ್ಲಕ್ಕಿಂತ ಹೆಚ್ಚಾಗಿ ರಕ್ತವನ್ನು ಕೊತಕೊತ ಕುದಿಯುವಂತೆ ಮಾಡಿರುವ ನಮ್ಮ ನಾಯಕರ ನಿರ್ಲಜ್ಜ ನಿಷ್ಕ್ರಿಯತೆಗಳ ನಡುವೆ ಸ್ವಾತಂತ್ರ್ಯ ದಿನಾಚರಣೆ ಹೇಗೆತಾನೆ ಪೂರ್ಣವಾದೀತು....?

ಖಂಡಿತವಾಗಿಯೂ ಪ್ರತಿಯೊಬ್ಬ ಭಾರತೀಯನೂ ಆಗಸ್ಟ್ 15, ಸಂಭ್ರಮಿಸಲೇ ಬೇಕಾದ ದಿನ, ಹಾಗೆಯೇ ಪ್ರಸ್ತುತ ಸ್ವಾತಂತ್ರ್ಯ ಸ್ವೇಚ್ಛೆಗೆ ತಿರುಗಿ ಸ್ವಾತಂತ್ರ್ಯದ ಹೆಸರಿನಲ್ಲಿ ಮೀರುತ್ತಿರುವ ಎಲ್ಲೆಗಳ ಬಗ್ಗೆಯೂ ನಾವು ಯೋಚಿಸಬೇಕಲ್ಲವೇ?
ಇತ್ತೀಚೆಗಷ್ಟೇ ನಮ್ಮ ದೇಶದ ಯೋಧರ ಶಿರಚ್ಛೇಧನ ಮಾಡಿ ರವಾನೆ ಮಾಡಿದಾಗಲೂ, ಮುಂದಿನ ಬಾರಿ ಈ ರೀತಿಯಾದರೆ ಕ್ರಮ ಕೈಗೊಳ್ಳುತ್ತೇವೆ ಎಂಬ ಸರ್ಕಾರದ ಎಚ್ಚರಿಕೆ 5 ಭಾರತೀಯ ಯೋಧರನ್ನು ಹತ್ಯೆ ಮಾಡಿದ ನಂತರವೂ ಮುಂದುವರೆದಿದೆ!. ನಮ್ಮದೇನೂ ತಪ್ಪೇ ಇಲ್ಲ ಎಂದು ಹೇಳಿರುವ ಪಾಕಿಸ್ತಾನ, ಭಾರತ ಸರ್ಕಾರದ ವಿರುದ್ಧ ನಿರ್ಣಯವನ್ನು ಮಂಡಿಸುವವರೆಗೂ ನಿಷ್ಕ್ರೀಯ ಧೋರಣೆ ವಿಜೃಂಭಿಸುತ್ತಿರುವುದು ನಮ್ಮ ಸ್ವಾತಂತ್ರ್ಯದ ಅಸ್ಥಿತ್ವವನ್ನೇ ಪಣಕ್ಕಿಟ್ಟಂತಾಗಿದೆ.

ಮತ್ತೊಂದೆಡೆ ಸ್ವಾತಂತ್ರ್ಯವೆಂಬುದು ಸ್ವೇಚ್ಛಾಚಾರಕ್ಕೆ ತಿರುಗಿ ಮನಸೋ ಇಚ್ಛೆ ಗಲಭೆ ನಡೆಯುತ್ತಿದ್ದರೂ ಸೆಕ್ಯೂಲರ್ ಎಂಬ ಧ್ಯೇಯ ಸಿದ್ಧಾಂತಗಳು ನಮ್ಮ ನೇತಾಗಳ ಕೈಗಳನ್ನು ಕಟ್ಟಿ ಹಾಕಿ ದೇಶದ ಸಾರ್ವಭೌಮತೆಯ ಅರ್ಥವನ್ನೇ ಬದಲಿಸಿಬಿಟ್ಟಿವೆ ಅಂದರೆ ಸ್ವಾತಂತ್ರ್ಯ ಹಾಗೂ ಸಾರ್ವಭೌಮತೆಗಳೆರಡು ಅವಕಾಶವಾದದ ಕೈಗೆ ಸಿಲುಕಿ ನಲುಗುತ್ತಿರಬೇಕಾದರೆ ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥವೆಲ್ಲಿದೆ?

ಸ್ವಾತಂತ್ರ್ಯ ಮತ್ತು ಸೆಕ್ಯುಲರಿಸಂ :1947 ರಲ್ಲಿ ನಮ್ಮನ್ನು ಬ್ರಿಟೀಷರಿಂದ ಮುಕ್ತಗೊಳಿಸಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ದೇಶ ಸ್ವತಂತ್ರವಾಗಲು ಪ್ರಮುಖ ಪಾತ್ರ ವಹಿಸಿದರು. ಎಲ್ಲರಿಗೂ ಸಮಾನತೆ ಸಾರಿದ್ದ ಗಾಂಧೀಜಿ, ಸ್ವಾತಂತ್ರ್ಯ ದೊರೆತ ನಂತರ ಮಾಡಿದ್ದು ಏನು? ದೇಶದ ಅಭಿವೃದ್ಧಿ ಹಾಗೂ ಭಾರತ ರಾಷ್ಟ್ರದ ಬಗ್ಗೆ ಉತ್ತಮ ಚಿಂತನೆಗಳನ್ನು, ದೂರ ದೃಷ್ಠಿಯನ್ನು ಹೊಂದಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಂತಹ ಅರ್ಹ ನಾಯಕರನ್ನು ಬಿಟ್ಟು ತಮಗೆ ಆಪ್ಯಾಯಮಾನವಾಗಿದ್ದ, ದೇಶದ ಬಗ್ಗೆ ಪರಿಕಲ್ಪನೆಯನ್ನೇ ಹೊಂದದ ಪಂಡಿತ್ ಜವಹರಲಾಲ್ ನೆಹರೂ ಅವರನ್ನು ಪ್ರಧಾನಿ ಪಟ್ಟಕ್ಕೇರಿಸಿದರು.
ವಂಶಾಡಳಿತ ನಡೆಸುತ್ತಿದ್ದ ರಾಜರುಗಳಿಂದ ರಾಜ್ಯಗಳನ್ನು ವಶಪಡಿಸಿಕೊಂಡು ನೆಹರೂ ಎಂಬ ಏಕಚಕ್ರಾಧಿಪತಿ ವಂಶಕ್ಕೆ ಸಮಸ್ತ ದೇಶವನ್ನು ಸಮರ್ಪಿಸಿದ್ದಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಆಡಳಿತ ಬೇರೆ ಬೇರೆ ರಾಜ ಮನೆತನಗಳದ್ದಾಗಿತ್ತು. ಸ್ವಾತಂತ್ರ್ಯಾನಂತರ ಆಡಳಿತ ಒಂದೇ ರಾಜಮನೆತದ್ದಾಗಿದೆ. ಸ್ವಾತಂತ್ರ್ಯದ ಬದಲಾವಣೆ ಅಷ್ಟಕ್ಕೆ ಮಾತ್ರ ಸೀಮಿತವಾಯಿತು.! ಸೆಕ್ಯುಲರ್ ಎನ್ನುವ ಹೆಸರಿನಲ್ಲಿ ಗಾಂಧೀಜಿ ನಮಗೆ ಕೊಟ್ಟಿದ್ದು ಒಂದು ಸಾರ್ವಕಾಲಿಕ ವಂಶಾಡಳಿತವನ್ನು ಎನಿಸುವುದಿಲ್ಲವೇ...?

ಈ ಮಧ್ಯೆ ಭಾರತದ ಅವಿಭಾಜ್ಯ ಅಂಗವಾಗಿದ್ದ ಪಾಕಿಸ್ತಾನವನ್ನು ಪ್ರತ್ಯೇಕಗೊಳಿಸಿದರು. (ಅಂದಿನ ಸಂದರ್ಭಕ್ಕೆ ಅದು ಅನಿವಾರ್ಯವಾಗಿತ್ತೇನೋ ಗೊತ್ತಿಲ್ಲ) ಆದರೆ ಪಾಕಿಸ್ತಾನ ಪ್ರತ್ಯೇಕ ಅಸ್ಥಿತ್ವ ಪಡೆದ ಕೆಲವೇ ದಿನಗಳಲ್ಲಿ ತನ್ನ ಕಿಡಿಗೇಡಿ ಬುದ್ದಿ ಪ್ರದರ್ಶಿಸಿತ್ತು. ಆದರೆ ಅಂದು ಮುಂಚೂಣಿಯಲ್ಲಿದ್ದ ಸಖಲವನ್ನೂ ನಿರ್ಧರಿಸುತ್ತಿದ್ದ ಭಾರತದ ನಾಯಕರು ಕೆಟ್ಟದ್ದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಲಿಲ್ಲ. ಪರಿಣಾಮ ಪಾಕಿಸ್ತಾನ ಇಂದಿಗೂ ತನ್ನ ದೂರ್ತ ಬುದ್ಧಿ ಪ್ರದರ್ಶಿಸುವುದನ್ನು ಬಿಟ್ಟಿಲ್ಲ! ಹಾಗೆಯೇ ಅಂದಿನ ನೆಹರು ಕುಡಿಗಳೂ ತಮ್ಮ ದುರಾಡಳಿತ ಬಿಟ್ಟಿಲ್ಲ!. ಎಷ್ಟು ಸಾಮ್ಯತೆ ಅಲ್ಲವೇ?

ಕಾಲ ಬದಲಾದರೇನು ಸೆಕ್ಯೂಲರಿಸಂ ಹೆಸರಿನಲ್ಲಿ ಅಧಿಕಾರಕ್ಕೆ ಅಂಟಿಕೊಂಡು ಕೊಳ್ಳೆಹೊಡೆಯುವುದು ಬದಲಾಗಿಲ್ಲವಲ್ಲ! ಸೆಕ್ಯುಲರ್ ವಾದ ಮಂಡಿಸುತ್ತಿದ್ದ ಮಹಾತ್ಮ ಗಾಂಧೀ ಹಾಗೂ ನೆಹರು ಅವರಿಗೆ ಪಾಕಿಸ್ತಾನವನ್ನು ಬೇರ್ಪಡಿಸುವ ಅನಿವಾರ್ಯತೆ ಏನಿತ್ತು? ಸ್ಯೆಕ್ಯುಲರ್ ಎಂದರೆ ಸಮಾನವಾಗಿ ಕಾಣುವುದೋ ಅಥವಾ ಪ್ರತ್ಯೇಕಗೊಳಿಸುವುದೋ? ಅದೇನು ಜಾತ್ಯಾತೀತತೆ ಅಡಿಯಲ್ಲಿ ಮನ್ನಣೆ ಪಡೆಯುವವರು( ಅಲ್ಪಸಂಖ್ಯಾತರು) ದೇವಲೋಕದಿಂದ ಇಳಿದಿದ್ದಾರೆಯೇ ವಿಶೇಷ ಸ್ಥಾನಮಾನ ನೀಡಲು?

ಸ್ವಾತಂತ್ರ್ಯದ ಬಗ್ಗೆ ಪ್ರತಿಬಾರಿ ಯೋಚಿಸಿದಾಗಲೂ ಪಾಕಿಸ್ತಾನ ತನ್ನ ಮೊದಲ ದಿನದ(1947 ರಲ್ಲಿ ನಡೆದ ಕೋಮು ಗಲಭೆ, ಕಾಶ್ಮೀರ ಸ್ವಾಧೀನ ಪಡಿಸಿಕೊಳ್ಳಲು ನಡೆಸಿದ ಕುತಂತ್ರ ಸೇರಿದಂತೆ) ಸಂಘರ್ಷದಿಂದ ಹಿಡಿದು, ಯೋಧರ ಶಿರಚ್ಛೇಧನ, ಮೋದಿಗೆ ವೀಸಾ ನಿರಾಕರಣೆ, ಕೆಲ ದಿನಗಳ ಹಿಂದಷ್ಟೇ ನಡೆದಿರುವ ಯೋಧರ ಹತ್ಯೆ ಸೇರಿದಂತೆ ನಮ್ಮ ದೇಶಕ್ಕೇ ಆಪತ್ತು ತರುವ ಯಾವುದೇ ಸಂಗತಿಗಳು ನಡೆದರೂ ಸೆಕ್ಯುಲರ್ ಎಂಬ ಶ್ರೀರಕ್ಷೆ ಕಾವಲಿಗಿರುತ್ತದೆ. ಪಾಕ್ ಸರ್ಕಾರದ ಕೃತ್ಯಗಳ ಬಗ್ಗೆ ನಮ್ಮ ದೇಶದ ರಕ್ಷಣಾ ಮಂತ್ರಿ ಬಿಡಿ, ಅಂತಹ ರಾಜಕಾರಣಿಗಳನ್ನು ಆರಿಸಿರುವ ಜನತೆಯೇ ಸೆಕ್ಯುಲರ್ ಹೆಸರಿನಲ್ಲಿ ಪಾಕಿಸ್ತಾನವನ್ನು ವಹಿಸಿಕೊಂಡು ಮಾತನಾಡುತ್ತಾರಲ್ಲ ಇದಕ್ಕೆ ಏನನ್ನಬೇಕು?
ಮೊನ್ನೆ ಪಾಕಿಸ್ತಾನ ಯೋಧರು ಭಾರತದ ಯೋಧರನ್ನು ಹತ್ಯೆ ಮಾಡಿರುವುದರ ಬಗ್ಗೆ ಖಾಸಗಿ ನ್ಯೂಸ್ ಚಾನೆಲ್ ನಲ್ಲಿ ಚರ್ಚೆ ಯಲ್ಲಿ ಪಾಲ್ಗೊಂಡಿದ್ದ ಹೈದ್ರಾಬಾದ್ ನ ಮುಸ್ಲಿಂ ಸಮುದಾಯದವರೊಬ್ಬರು ಪಾಕಿಸ್ತಾನ ಎಷ್ಟೇ ತಪ್ಪು ಮಾಡಿದರೂ ನಮ್ಮ ನೆರೆ ರಾಷ್ಟ್ರ, ಅವರಿಗೆ ತಪ್ಪು ಮಾಡದಂತೆ 50 ಬಾರಿ ಅಲ್ಲ 500 ಬಾರಿ ಮನವಿ ಮಾಡಿದರೂ ತಪ್ಪಿಲ್ಲ ಎಂದು ಭಾರತ ಸರ್ಕಾರಕ್ಕೆ ಸಲಹೆ ಬೇರೆ ನೀಡುತ್ತಾರೆ.! ಭಲೆ! ಅಲ್ಪಸಂಖ್ಯಾತರನ್ನು ಓಲೈಸಲು ಸೆಕ್ಯುಲರಿಸಂ ಹೆಸರಿನಲ್ಲಿ ಒಂದು ಧರ್ಮದವರು ತಪ್ಪು ಮಾಡಿದರೂ ಕ್ಷಮಿಸುವ ಔದಾರ್ಯ 66 ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಿಣಾಮವಾಗಿ ನಾವು ಈ ಮಾತುನ್ನು ಕೇಳಬೇಕಾಗಿದೆ.

ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಮಾರ್ಪಾಡಾಗಿರುವುದರ ಪರಿಣಾಮ ಈ ಸೆಕ್ಯುಲರ್ ಅಡಿಯಲ್ಲಿ ಗುರುತಿಸಿಕೊಳ್ಳುವವರು ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ. ಜಾತ್ಯಾತೀತತೆ ಎಂಬುದು ಸಾರ್ವಭೌಮತೆಗೆ ಪೂರಕವಾಗಿರುವ ಬದಲು ಹಿಂದೂಗಳನ್ನು ಗುಲಾಮರನ್ನಾಗಿಸಿಕೊಂಡಿವೆ. ಜಾತ್ಯಾತೀತತೆಯಿಂದ ಓಟ್ ಬ್ಯಾಂಕ್ ರಾಜಕೀಯ ಅದರಿಂದ ವಂಶಾಡಳಿತಕ್ಕೆ ಕುಮ್ಮಕ್ಕು, ನಂತರ ಭ್ರಷ್ಟಾಚಾರ, ದೌರ್ಜನ್ಯ, ಮುಂದೊಂದು ದಿನ ಪರದೇಶಿಯರ ಆಡಳಿತ.... ಒಬ್ಬ ರಾಜಕಾರಣಿ ಹಿಂದೂ ರಾಷ್ಟ್ರೀಯವಾದಿ ಎಂದು ಹೇಳಿದರೆ ಸ್ವತಃ ಹಿಂದೂ ರಾಜಕಾರಣಿಗಳು ತಮಗೆ ಆಪ್ಯಾಯಮಾನವಾಗಿರುವ ಅಲ್ಪಸಂಖ್ಯಾತರ ಮನಸ್ಸಿಗೆ ನೋವುಂಟಾಗುತ್ತದೆ ಎಂದು ಬೊಬ್ಬೆ ಹಾಕುತ್ತಾರೆ. ಸುಳ್ಳು ಸೆಕ್ಯುಲರಿಸಂ ಅಡಿಯಲ್ಲಿ ಇಂತಹ ಮನಸ್ಥಿತಿಯನ್ನು ಹುಟ್ಟಿ ಹಾಕಿದ್ದು ನಮ್ಮ ಸ್ವತಂತ್ರ್ಯ ಭಾರತದ ಮೊಟ್ಟಮೊದಲ ನಾಯಕರಾದ ಗಾಂಧಿ ಮತ್ತು ನೆಹರೂ ಅಲ್ಲವೇ?

ಒಬ್ಬ ಜನಪ್ರಿಯ ರಾಜಕಾರಣಿ, ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಟೋಪಿ ಧರಿಸಿಲ್ಲ ಎಂದಾಗ ಜಾತ್ಯಾತೀತತೆಗೆ ಧಕ್ಕೆಯಾಗಿದೆ ಎಂದು ಜಾತ್ಯಾತೀತ ಮನಸ್ಥಿತಿ ಹೊಂದಿರುವವರು ಬಾಯಿಬೊಡೆದುಕೊಳ್ಳುತ್ತಾರೆ. ಅದೇ ಒಬ್ಬ ಮುಸ್ಲಿಂ ನಟ ಹಿಂದೂಗಳು ಆಚರಿಸುವ ಗಣೇಶ ಹಬ್ಬದಲ್ಲಿ ಹಿಂದೂ ದೇವರ ವಿಗ್ರಹವಿಟ್ಟು ಪೂಜೆ ಸಲ್ಲಿಸಿದಾಗ ಮುಸ್ಲಿಂ ಸಮುದಾಯದ ಗಣ್ಯರು ಆತನಿಗೆ ಫತ್ವಾ ಹೊರಡಿಸುತ್ತಾರೆ. ಅದನ್ನು ಪ್ರಶ್ನಿಸಲು ಸೆಕ್ಯುಲರ್ ಮನಸ್ಥಿತಿ ಹೊಂದಿರುವವರು ಗರಬಡಿದಂತೆ ವರ್ತಿಸುತ್ತಾರೆ. ಇದೇನಾ ಸ್ವತಂತ್ರ ಪ್ರಜಾಪ್ರಭುತ್ವ ಭಾರತದ ಜಾತ್ಯಾತೀತತೆ. ಇದ್ಯಾವ ಸೀಮೆ ಸೆಕ್ಯುಲರಿಸಂ ಸ್ವಾಮೀ....?!
ಬರೀ ರಾಜಕಾರಣದಲ್ಲೇ ಅಲ್ಲ ಕಲೆಯಲ್ಲಿಯೂ ಅಭಿವ್ಯಕ್ತಿಸ್ವಾತಂತ್ರ ಸೆಕ್ಯುಲರಿಸಂ ಎನ್ನುವುದು ಕೇವಲ ಒಬ್ಬರಿಗೇ ಸೇರಿದಂತೆ ಬಿಂಬಿತವಾಗಿರುವುದೂ ಆಶ್ಚರ್ಯದ ಸಂಗತಿ.! ಕಲೆಯಲ್ಲಿ ,ಕೊಲೆಯಲ್ಲಿ ತಾವು ವಾಸಿಸುತ್ತಿರುವ ದೇಶದ ರಾಜಕಾರಣಿಯ ಬಗ್ಗೆ ಅನ್ಯ ದೇಶದವರಿಗೆ ಪತ್ರ ಬರೆಯುವವರೆಗೆ ಅಲ್ಪಸಂಖ್ಯಾತರು ಏನೇ ಮಾಡಿದರೂ ಅದು ಸರಿ ಎನ್ನುವ ಮನಸ್ಥಿತಿ ಇರುವವರೆಗೂ ನಮ್ಮ ದೇಶ ಎಂಬ ಅಭಿಮಾನ ಮೂಡಲು ಹೇಗೆ ಸಾಧ್ಯ? ನಮ್ಮ ದೇಶವೆಂಬ ಅಭಿಮಾನವೇ ಇರದಿದ್ದ ಮೇಲೆ ಅಲ್ಲಿನ ಸ್ವಾತಂತ್ರ್ಯಕ್ಕೇನು ಬೆಲೆ?

ಯಾವುದೋ ಮತ ಬ್ಯಾಂಕ್ ರಾಜಕಾರಣಕ್ಕೆ ಒಂದು ಸಮುದಾಯ ಮಾಡುವ ಎಲ್ಲಕ್ಕೂ ಸೆಕ್ಯುಲರ್ ಹಣೆ ಪಟ್ಟಿ ತೊಡಿಸಿ ಓಲೈಸುವ ಮೂಲಕ ಧರ್ಮಗಳ ಬಗ್ಗೆ ಅಭಿಮಾನ ಬೆಳೆಸುವುದಕ್ಕಿಂತಲೂ ದೇಶಾಭಿಮಾನ ಬೆಳೆಸುವುದರಿಂದ ನಿಜವಾದ ಸ್ವಾತಂತ್ರ್ಯಕ್ಕೆ ಬೆಲೆ ಅಲ್ಲವೇ? ಇಷ್ಟಕ್ಕೂ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಒಂದು ಮಾತನಾಡುವುದಕ್ಕೂ ಅಧಿನಾಯಕರ ಕಟ್ಟಪ್ಪಣೆಗೆ ಕಾಯುವ ಮಹಾನುಭಾವರ ಆಡಳಿತದಲ್ಲಿ ಈ ರೀತಿಯ ಬದಲಾವಣೆ ನಿರೀಕ್ಷಿಸಲು ಸಾಧ್ಯವೆ?

 

Author : ಶ್ರೀನಿವಾಸ್ ರಾವ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited