Untitled Document
Sign Up | Login    
ಸಿಂಗಪುರದಲ್ಲಿ ಸಿಂಗಾರ ಉತ್ಸವ-2013 : ಸಂಭ್ರಮದ ಆಚರಣೆ

ಹಾಸ್ಯ ಪ್ರಹಸನ

ಕನ್ನಡ ಸಂಘ (ಸಿಂಗಪುರ) ಮತ್ತು ಪ್ರಾಯೋಜಕರಾದ S. P. Jain School of Global Management, Ivans Chemistry, Mani Iyer Mess ಆಶ್ರಯದಲ್ಲಿ ಏಪ್ರಿಲ್ 27 ರಂದು 'ಸಿಂಗಾರ ಉತ್ಸವ - 2013' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಿಂಗಪುರದ ಕನ್ನಡಿಗರ ಪ್ರತಿಭೆಯನ್ನು ಹೊರಗೆಡಹುವ ನಿಟ್ಟಿನಲ್ಲಿ ಪ್ರತಿವರ್ಷವೂ ನಡೆಸಿಕೊಂಡು ಬರುತ್ತಿರುವ ಸಿಂಗಾರ ಉತ್ಸವವು ಈ ಬಾರಿ 250ಕ್ಕೂ ಹೆಚ್ಚು ಪ್ರತಿಭೆಗಳನ್ನು ಆಕರ್ಷಿಸಿ ಜಯಭೇರಿ ಬಾರಿಸಿದೆ. ಭಾಗವಹಿಸುವ ಪ್ರತಿಭೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತ ಪ್ರತಿವರ್ಷವೂ ಹೊಸ ದಾಖಲೆಯನ್ನು ಸ್ಥಾಪಿಸುತ್ತಿರುವುದು, ಕಾರ್ಯಕ್ರಮದ ಗುಣಮಟ್ಟ ವರ್ಧಿಸುತ್ತಿರುವುದು ಹೆಮ್ಮೆಯ ವಿಷಯ.

ಏಪ್ರಿಲ್ 27 ರಂದು ಸುಮಾರು 3 ಗಂಟೆಗೆ ಸಭಾಂಗಣವು ಪ್ರೇಕ್ಷಕರಿಂದ ತುಂಬಿತ್ತು. ಸ್ವಯಂಸೇವಕರು, ಕಾರ್ಯಕರ್ತರು ಮೈಕ್ ಮತ್ತಿತರ ರಂಗಸಜ್ಜಿಕೆಯಲ್ಲಿ ತೊಡಗಿದ್ದರೆ ಗ್ರೀನ್ ರೂಮ್‌ನಲ್ಲಿ ಮಕ್ಕಳ, ಪೋಷಕರ, ಪಾತ್ರವರ್ಗದವರ ವೇಷಭೂಷಣಗಳ ಸಿದ್ಧತೆ ಭರದಿಂದ ಸಾಗಿತ್ತು. ಎಲ್ಲರ ಹುರುಪು, ಸಂಭ್ರಮ ಸಡಗರ, ಉತ್ಸಾಹ ಉತ್ಸವದ ವಾತಾವರಣವನ್ನು ಮೂಡಿಸಿತ್ತು.

ಭಾಗವಹಿಸುವವರೆಲ್ಲರೂ ಒಟ್ಟಾಗಿ 'ಬಂದೇವು ನಾವು ನಿಮ್ಮ ಶರಣಕ್ಕೆ' ಎಂಬ ಗೀ ಗೀ ಪದಕ್ಕೆ ನರ್ತಿಸುತ್ತಾ ವೇದಿಕೆಗೆ ಬಂದು ಕಾರ್ಯಕ್ರಮಕ್ಕೆ ನಾಂದಿಹಾಡಿದರು. ಸಂಘದ ಅಧ್ಯಕ್ಷರಾದ ಡಾ.ವಿಜಯ್ ಕುಮಾರ್‌ರವರು ಸಭಿಕರೆಲ್ಲರಿಗೂ ಸ್ವಾಗತ ಕೋರಿದರು. ಭರತನಾಟ್ಯ, ಯುಗಳನೃತ್ಯ, ವೃಂದಗಾನ, ಜುಗಲ್ಬಂದಿ, ವೈಲಿನ್, ಕೀಬೋರ್ಡ್ ವಾದ್ಯಗಾನ, ಹಾಸ್ಯ ಪ್ರಹಸನ, ಕಿರುನಾಟಕ, ಕವನವಾಚನ, ಭಾವಲಹರಿ, ಫ್ಯಾಶನ್ ಶೋ ಹೀಗೆ ಸತತ ಆರು ಗಂಟೆಗಳ ಕಾಲ ಮೂಡಿಬಂದ ವೈವಿಧ್ಯಮಯ ಕಾರ್ಯಕ್ರಮ ಕಣ್ಣಿಗೆ ಹಬ್ಬವಾಗಿತ್ತು. ಪೌರಾಣಿಕ, ಐತಿಹಾಸಿಕ, ಕನ್ನಡ ಸಾಹಿತ್ಯ, ಕನ್ನಡ ಹಳೆಯ ಚಿತ್ರಗೀತೆಗಳನ್ನಾಧರಿಸಿದ ಪ್ರತಿಭಾ ಪ್ರದರ್ಶನದ ಪ್ರಸ್ತುತಿ ಪ್ರೇಕ್ಷಕರ ಮನಗೆದ್ದಿತು. ಪ್ರೇಕ್ಷಕರು ಜೈಕಾರವಿತ್ತು, ಚಪ್ಪಾಳೆತಟ್ಟಿ ಸಿಳ್ಳೆಹಾಕಿ, ಒನ್ಸ್ ಮೋರ್ ಕೂಗಿ ಭಾಗವಹಿಸಿದವರನ್ನು ಹುರಿದುಂಬಿಸಿದರು.

ಸಿಂಗಾರ ಉತ್ಸವ-2013 ರಲ್ಲಿ ಭಾಗವಹಿಸಿದ ಮಕ್ಕಳು
ದೊಡ್ಡವರೆಲ್ಲ ಜಾಣರಲ್ಲ, ಕುಳ್ಳನ ರಾಜಾ ಬಾರೋ, ಜೀವ ವೀಣೆ, ಕೋ ಕೋ ಕೋಳಿಕೆ ರಂಗ, ಎಲ್ಲೋ ಜೋಗಪ್ಪ, ತೈಯ್ಯ ತಕಾ ತಕ.. ಹೀಗೇ ನಾನಾ ಹಾಡುಗಳನ್ನು ಬಳಸಿ ನುಡಿಸಿದ ವಾದ್ಯ ಗಾನ, ಮಾಡಿದ ನೃತ್ಯ 'ಹಾಡು ಹಳೆಯದಾದರೇನು ಭಾವ ನವನವೀನ' ಎಂಬ ಕವಿವರೇಣ್ಯರ ಮಾತನ್ನು ಅಕ್ಷರಶಃ ನಿಜವಾಗಿಸಿತು. ಭಾವಲಹರಿ ತಂಡದವರು ತಾವೇ ಸ್ವತಃ ರಚಿಸಿ, ರಾಗಸಂಯೋಜಿಸಿ, ಸುಶ್ರಾವವಾಗಿ ಹಾಡಿದ ಸಂಗೀತ ಸುಧೆ ಕಾರ್ಯಕ್ರಮ ಸಿಂಗನ್ನಡಿಗರ ಅದ್ಭುತ ಪ್ರತಿಭೆಯ ಪ್ರತಿಬಿಂಬ.

ಕರ್ನಾಟಕ ಹಾಗೂ ಹಿಂದುಸ್ತಾನಿ ಶೈಲಿಯಲ್ಲಿ ನಡೆದ ಜುಗಲ್‌ಬಂದಿಗೆ; ತರವಲ್ಲ ತಗಿ, ಮಾಯದಂತ ಮಳೆ, ನಿಂಬೀಯ ಬನದ ಮ್ಯಾಗಳ ಸಮೂಹಗಾನಗಳಿಗೆ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿ ಒನ್ಸ್ ಮೋರ್ ಎಂದು ಕೂಗಿದರು. 'ಪಶು ಪಕ್ಷಿಗಳ ಪ್ರಪಂಚ' ನೃತ್ಯ ನಾಟಕದಲ್ಲಿ ಮಕ್ಕಳು ಮುದ್ದುಮುದ್ದಾಗಿ ನರ್ತಿಸಿ ಎಲ್ಲರ ಮನಸೆಳೆದರು.

ಅಮ್ಮ-ಮಗ ನಟಿಸಿದ ಕಿರು ಪ್ರಹಸನ ’ಅವರ ಬಿಟ್ ಇವರ್ಯಾರು’, ಒಂದೇ ಕೊಠಡಿ, ಒಂದೇ ಮಾಸ್ಟರ್ ಇರುವ ಹಳ್ಳಿಯ ಶಾಲೆ ಹಾಗೂ ಅಲ್ಲಿನ ಆಗುಹೋಗುಗಳನ್ನು ರಸವತ್ತಾಗಿ ಬಿಂಬಿಸುವ ಹಾಸ್ಯಪ್ರಹಸನ ’ನಮ್ಮ ಇಸ್ಕೂಲು’ ಮತ್ತು ಬಹಳ ಜನರಿಗೆ ಮೋಸ ಮಾಡಿ, ತಲೆಮರೆಸಿ ಓಡಾಡುತ್ತಿದ್ದ ಸ್ವಾಮಿಯೊಬ್ಬರು ಕೊನೆಗೂ ಪೋಲೀಸರ ಅತಿಥಿಗಳಾಗುವುದನ್ನು ಸೊಗಸಾಗಿ ಬಿಂಬಿಸುವ ಇನ್ನೋಂದು ಕಿರುಪ್ರಹಸನ ’ಶ್ರೀ ಕಮಲಾನಂದ ಸ್ವಾಮಿ ಮಹಾತ್ಮೆ’ ಪ್ರೇಕ್ಷಕರನ್ನು ನಗಿಸಿ ರಂಜಿಸಿತು.
ಸಾಗರದಿಂದಾಚೆಗೆ ಸಂಸ್ಕೃತಿಯ ಪ್ರಸರಣ - ಭರತನಾಟ್ಯ
ಏಪ್ರಿಲ್ 14 ರಂದು ನಿಧನರಾದ ಕನ್ನಡದ ಗಾನಗಂಧರ್ವ ಡಾ.ಪಿ.ಬಿ.ಶ್ರೀನಿವಾಸ್ ಅವರು ಹಾಡಿದ ಹಾಡುಗಳ ತುಣುಕುಗಳ ಕಿರುಚಿತ್ರದ ಪ್ರಸ್ತುತಿ ಎಲ್ಲರನ್ನೂ ಭಾವಲೋಕದಲ್ಲಿ ಮುಳುಗಿಸಿತು. 'ಆಡಿಸಿದಾತ ಬೇಸರಮೂಡಿ ಆಟ ಮುಗಿಸಿದ..' ಹಾಡಿಗೆ ಕಣ್ತುಂಬಿ ಗಂಟಲೊಣಗಿತು. ಸತತ ನಾಲ್ಕುದಶಕಗಳ ಕಾಲ ಕನ್ನಡ ಚಿತ್ರರಂಗದ ಕಂಠಸಿರಿಯಾಗಿ ಮೆರೆದ ಡಾ.ಪಿ.ಬಿ.ಎಸ್.ರವರಿಗೆ ಉಪಸ್ಥಿತರೆಲ್ಲರೂ ಭಾವಪೂರ್ಣ ನಮನ ಹಾಗೂ ಶ್ರದ್ಧಾಂಜಲಿ ಅರ್ಪಿಸಿದರು.

2013 ನೇ ಸಾಲಿನ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವಂದನಾರ್ಪಣೆಯ ಮೂಲಕ ಶ್ರೀ ವಿಜಯರಂಗ ಪ್ರಸಾದ್ ಅವರು ಸತತ ಆರುಗಂಟೆಗಳ ಕಾಲ ಎಲ್ಲರನ್ನೂ ಹಿಡಿದಿಟ್ಟಿದ್ದ ಸಮಾರಂಭಕ್ಕೆ ತೆರೆಹಿಡಿದರು.

ಸಿಂಗಾರೋತ್ಸವವು ಹೊಸ ಪ್ರತಿಭೆಗಳಿಗೂ,ಉದಯೋನ್ಮುಖ ಕಲಾವಿದರಿಗೂ ವಿಶಿಷ್ಟ ವೇದಿಕೆಯನ್ನು ನೀಡುವುದೊಂದೇ ಅಲ್ಲದೆ ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿ ಕಲೆಗಳನ್ನು, ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು.

 

Author : ಸಾಧ್ವಿ ಸಂಧ್ಯಾ, ಸಿಂಗಪುರ

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited