Untitled Document
Sign Up | Login    
ಅನಾರೋಗ್ಯ ತರುವ ತೂಕನಷ್ಟ ಔಷಧಗಳು

ತೂಕನಷ್ಟಕ್ಕಾಗಿ ಮಾತ್ರೆ ಸೇವಿಸಬೇಡಿ

ಸ್ಥೂಲಕಾಯದವರಿಗೆ ತಮ್ಮ ದೇಹದ ಮೇಲೆ ಅದೇನೋ ಅಸಮಾಧಾನ. ತಾವು ತೆಳ್ಳಗಾಗಿ ಆಕರ್ಷಕವಾಗಿ ಕಾಣಬೇಕೆಂಬ ತುಡಿತ. ಅದಕ್ಕಾಗಿ ವ್ಯಾಯಾಮ, ಡಯಟ್‌ ಏನೆಲ್ಲಾ ಹರಸಾಹಸ ಮಾಡಲೂ ಸಿದ್ಧರಿರುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ತೆಳ್ಳಗಾಗದ ಶರೀರವನ್ನು ನೋಡಿ ಬೇಸತ್ತು. ಜಾಹಿರಾತುಗಳಲ್ಲಿ ಬರುವ ದೇಹದಲ್ಲಿ ಕೊಬ್ಬು ಕರಗಿಸುವ ಔಷಧಗಳನ್ನು ಸೇವಿಸಲು ಪ್ರಾರಂಭಿಸಿಬಿಡುತ್ತಾರೆ.

ಆದರೆ ಅಂತಹ ಔಷಧಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ವಿವಿಧ ಸಮಸ್ಯೆಗಳಿಗೆ ದಾರಿ ಮಾಡಿಕೊಡುವುದಲ್ಲದೆ, ಕೆಲವೊಮ್ಮೆ ಜೀವಕ್ಕೂ ಹಾನಿ ತರಬಲ್ಲವು. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಭಾರತೀಯ ಯುವಕನೊಬ್ಬ ತೂಕನಷ್ಟದ ಮಾತ್ರೆ ಸೇವಿಸಿ ಮೃತಪಟ್ಟಿರುವ ವಿಷಯವನ್ನು ಎಲ್ಲರೂ ಬಲ್ಲರು.

ಆಕರ್ಷಕ ಜಾಹಿರಾತುಗಳು ಯುವಕರನ್ನು ಬೇಗ ಸೆಳೆಯುತ್ತವೆ. ಈ ಔಷಧಿಯಿಂದ ಹದಿನೈದು ದಿನಗಳಲ್ಲಿ ಸ್ಥೂಲ ಕಾಯ ಮಾಯವಾಗಿ ಆಕರ್ಷಕ ದೇಹ ನಿಮ್ಮದಾಗುವುದು, ವೇಟ್‌ಲಾಸ್‌ ಮಾತ್ರೆಯಿಂದ 30 ದಿನಗಳಲ್ಲಿ ಸ್ಲಿಮ್ ಆಗಿ ಕಾಣಿರಿ ಎಂಬ ವಿವಿಧ ಜಾಹಿರಾತು ಪ್ರತಿನಿತ್ಯ ಸುದ್ದಿವಾಹಿನಿಗಳಲ್ಲಿ, ಸುದ್ದಿ ಪತ್ರಿಕೆಗಳಲ್ಲಿ, ಇಂಟರ್‌ನೆಟ್‌, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದನ್ನು ನೋಡಿ ಔಷಧ ಸೇವಿಸಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ವೈದ್ಯರು ಎಚ್ಚರಿಸುತ್ತಾರೆ.

ಸ್ಥೂಲ ಕಾಯ ನಿವಾರಣೆಗಾಗಿ ಔಷಧಿಯ ಮೊರೆಹೋಗಬೇಡಿ..
ಇಂಥ ಔಷಧಿಗಳನ್ನು ಸೇವಿಸಿದಾಗ, ದೇಹ ಸ್ವಲ್ಪ ಪ್ರಮಾಣದಲ್ಲಿ ಸಣ್ಣಗಾದರೂ, 6 ತಿಂಗಳ ನಂತರ ಸೈಡ್‌ ಎಫೆಕ್ಟ್‌ನ ಅನುಭವವಾಗಲು ಪ್ರಾರಂಭವಾಗುತ್ತದೆ. ನಿಮಗೆ ಆಹಾರ ಸೇವನೆಯಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು ಅಥವಾ ಶಕ್ತಿಹೀನತೆಯ ತೊಂದರೆ ಕಾಡಲೂಬಹುದು. ಸಮಸ್ಯೆಗೆ ಬೇಸತ್ತು ಔಷಧ ಸೇವನೆಯನ್ನು ಬಿಟ್ಟರೆ ಮತ್ತೆ ಸ್ಥೂಲಕಾಯ ಮರುಕಳಿಸುತ್ತದೆ.

ಎಲ್ಲಾ ಡಯಟ್‌ ಔಷಧ ಕಂಪನಿಗಳೂ ಕೂಡ ತಮ್ಮ ಲಾಭಕ್ಕಾಗಿ ಅತಿಶಯೋಕ್ತಿ ಹಾಹಿರಾತುಗಳನ್ನು ಪ್ರಸಾರ ಮಾಡುತ್ತವೆ. ಆದರೆ ಅವರ ಜಾಹಿರಾತಿನಂತೆ ಔಷಧ ಕೆಲಸ ಮಾಡಲಾರದು ಎಂದು ಅಮೆರಿಕದ ಫೆಡರಲ್‌ ಟ್ರೇಡ್‌ ಕಮೀಷನ್‌ ಎಚ್ಚರಿಸಿದೆ.

ಬೇರೆ ಬೇರೆ ವೈಟ್‌ಲಾಸ್‌ ಔಷಧ ಕಂಪನಿಗಳು ಬೇರೆ ಬೇರೆ ಪದಾರ್ಥಗಳನ್ನು ಬಳಸಿ ಔಷಧವನ್ನು ತಯಾರಿಸುವುದರಿಂದ, ಆರೋಗ್ಯದ ಮೇಲೆ ಅವು ಬೀರುವ ಪರಿಣಾಮಗಳಲ್ಲಿಯೂ ಕೂಡ ವ್ಯತ್ಯಾಸಗಳಿರುತ್ತವೆ.

ತೂಕನಷ್ಟಕ್ಕಾಗಿ ಬಳಸುವ ಮಾತ್ರೆ ಅಥವಾ ಔಷಧಗಳಿಂದ ಪ್ರಯೋಜನಕ್ಕಿಂತ ಜಾಸ್ತಿ ಅಡ್ಡಪರಿಣಾಮಗಳೇ ಜಾಸ್ತಿ. ಹೆಚ್ಚಿನ ವೈಟ್‌ಲಾಸ್‌ ಔಷಧಗಳು ಹಸಿವನ್ನು ದಮನ ಮಾಡಿಬಿಡುತ್ತವೆ. ಹಸಿವಿನ ಅನುಭವಾಗದಂತೆ ತಡೆಯುತ್ತವೆ. ಹೃದಯ ಬಡಿತ ಮತ್ತು ಜಠರ ಕರುಳಿನ ಆರೋಗ್ಯದ ಮೇಲೆ ನೇರವಾಗಿ ಪ್ರತಿಕೂಲ ಪರಿಣಾಮ ಬೀರುತ್ತವೆ. ಕೆಲವು ತೂಕನಷ್ಠದ ಔಷಧಗಳು ದೇಹದಲ್ಲಿರುವ ಕೊಬ್ಬಿನಾಂಶವನ್ನು ಹೀರುವುದರ ಜೊತೆಗೆ ದೇಹಕ್ಕೆ ಅವಶ್ಯವಾಗಿರುವ ಉತ್ತಮ ಪೋಷಕಾಂಶಗಳನ್ನೂ ಕೂಡ ಹೀರುತ್ತವೆ. ಇದರಿಂದ ದೇಹಕ್ಕೆ ಪೋಷಕಾಂಶಗಳ ಕೊರತೆ ಕಾಡುತ್ತದೆ.
ತೂಕನಷ್ಟದ ಮಾತ್ರೆಯಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ
ಕೆಲವು ಬ್ರಾಂಡ್‌ನ ವೇಟ್‌ಲಾಸ್‌ ಔಷಧಗಳು ನಿದ್ರೆಯ ಅಭಾವವನ್ನು ತರುತ್ತವೆ. ನಿದ್ರಾಹೀನತೆ ಕಾಡುತ್ತದೆ. ಇದರಿಂದಾಗಿ ಮುಂಗೋಪ ಅಥವಾ ತೀವ್ರ ಭಯ ಕಾಣಿಸಿಕೊಳ್ಳಬಹುದು.

ಹೊಟ್ಟೆಯ ಕರುಳಿನ ಮೇಲೆ ಈ ಔಷಧ ಪರಿಣಾಮ ಬೀರುವುದರಿಂದ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು, ಮಲಬದ್ಧತೆ ಕಾಡುವುದರಿಂದ ಇಡೀ ದಿನ ಕಿರಿಕಿರಿ ತರಬಹುದು. ಅತಿಸಾರ ಕಾಣಿಸಿಕೊಳ್ಳಲೂ ಬಹುದು.

ಹೃದಯ ಬಡಿತವನ್ನು ಹೆಚ್ಚಿಸಿ, ರಕ್ತದೊತ್ತಡಕ್ಕೆ ಕಾರಣವಾಗಬಲ್ಲದು. ಪ್ಯಾರಾಲಿಸೀಸ್‌ನಂತಹ ಗಂಭೀರ ರೋಗಗಳಿಗೂ ಎಡೆ ಮಾಡಿಕೊಡುವಂತಹ ಸಂಭವವೂ ಇದೆ. ತೂಕನಷ್ಟಕ್ಕಾಗಿ ಸೇವಿಸಿದ ಔಷಧದಿಂದಾಗಿ ಪ್ರಾಣಹಾನಿಯಾದ ಉದಾಹರಣೆಗಳೂ ಸಾಕಷ್ಟಿವೆ.
ಹೀಗಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಹಂಬಲವುಳ್ಳವರು, ಯಾವುದೇ ವೈಟ್‌ಲಾಸ್‌ ಔಷಧ ಸೇವಿಸದೇ, ನಿಯಮಿತ ವ್ಯಾಯಾಮ ಮತ್ತು ನಿಯಮಿತ ಆಹಾರ ಕ್ರಮವನ್ನು ಬಳಸುವುದು ಉತ್ತಮ. ಇರುವಷ್ಟೇ ಸಮಯದಲ್ಲಿ ಸಮರ್ಪಕ ವ್ಯಾಯಾಮದ ರೂಢಿಯನ್ನು ಬೆಳೆಸಿಕೊಂಡರೆ ತೂಕ ಕಡಿಮೆಯಾಗುವದರ ಜೊತೆಗೆ ಸುದೃಢ ಆರೋಗ್ಯವೂ ಸಾಧ್ಯ. ಹಲವು ರೋಗಗಳಿಗೆ , ಸಮಸ್ಯೆಗಳಿಗೆ ಆಹ್ವಾನವೀಯುವ ಔಷಧಗಳನ್ನು ಎಂದಿಗೂ ಸೇವಿಸಲೇಬೇಡಿ. ಔಷಧ ಸೇವಿಸುವುದಕ್ಕೂ ಮುಂಚೆ ವೈದ್ಯರನ್ನು ಸಂದರ್ಶಿಸಿ ಸಲಹೆ ಪಡೆದುಕೊಳ್ಳಿ.

 

Author : ಅಮೃತಾ ಹೆಗಡೆ

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited