Untitled Document
Sign Up | Login    
ಜೀವನವನ್ನೇ ನರಕ ಮಾಡುವ ಮದ್ಯವ್ಯಸನ

ಜೀವನವನ್ನೇ ನರಕ ಮಾಡುವ ಮದ್ಯವ್ಯಸನ

ಮದ್ಯವ್ಯಸನಕ್ಕಾಗಿ ಅದೆಷ್ಟೋ ಜನರು ತಮ್ಮ ಆರೋಗ್ಯವನ್ನೇ ಬಲಿಕೊಟ್ಟಿದ್ದಾರೆ. ಅತಿಯಾದ ಮದ್ಯಪಾನದಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮಿತಿಮೀರಿದ ಕುಡಿತದ ಚಟ ಪ್ರಾಣಕ್ಕೇ ಕುತ್ತು ತಂದ ಉದಾಹರಣೆಗಳೂ ಇವೆ. ಒಂದು ಅಂದಾಜಿನ ಪ್ರಕಾರ ಇಡೀ ಜಗತ್ತಿನಲ್ಲಿ 140 ದಶಲಕ್ಷ ಮಂದಿ ಮದ್ಯವ್ಯಸನಿಗಳಿದ್ದಾರೆ.

ಕುಡಿತ ಕೆಟ್ಟದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಕುಡಿತ ಯಾವ ರೀತಿಯಲ್ಲಿ ಆರೋಗ್ಯವಂತ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳುಮಾಡಬಲ್ಲದು ಎಂಬುದು ಅನೇಕರಿಗೆ ಗೊತ್ತಿರುವುದಿಲ್ಲ.

ಮದ್ಯವ್ಯಸನಿಗಳಿಗೆ ಕಾಡುವ ಮಾನಸಿಕ ತೊಂದರೆಗಳು:

ದೀರ್ಘಕಾಲದ ಮದ್ಯವ್ಯಸನ ಮಾನಸಿಕ ಕಾಯಿಲೆಗಳಿಗೂ ದಾರಿ ಮಾಡಿಕೊಡಬಲ್ಲದು. ಮದ್ಯವನ್ನು ಸೇವಿಸದೇ ಇರಲಾರದಂತಹ ಸ್ಥಿತಿಗೆ ವ್ಯಕ್ತಿ ತಲುಪುವುದು. ಅಮಲಿನಲ್ಲಿಯೇ ಇರಲು ಬಯಸುವ ಮನಸ್ಥಿತಿಗೆ ದಾಸನಾಗುವುದು.

ಗೀಳು ಮನೋರೋಗ ಅಥವಾ ಕಿನ್ನತೆ ಕಾಣಿಸಿಕೊಳ್ಳಬಹುದು.

ಮರೆವು ಕಾಡಬಹುದು. ಅತ್ಯಂತ ಬೇಗ ವರ್ತಮಾನವನ್ನೂ ಮರೆತುಬಿಡುವ ಸ್ಥಿತಿ.

ವರ್ತನೆಯಲ್ಲಿ ಬದಲಾವಣೆ. ಮೃಗೀಯ ರೀತಿಯಲ್ಲಿ ವರ್ತಿಸುವುದು. ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದು.
ಯಾವುದಕ್ಕೂ ಸ್ಪಂದನೆಯನ್ನೇ ವ್ಯಕ್ತಪಡಿಸದೇ ಇರುವುದು.

ನಿಯಂತ್ರಣ ಕಳೆದುಕೊಳ್ಳುವುದು. ಖಿನ್ನತೆ,ಆತಂಕಕ್ಕೆ ಒಳಗಾಗುವುದು


ಮದ್ಯವ್ಯಸನದಿಂದ ದೈಹಕ ಆರೋಗ್ಯದ ಮೇಲಾಗುವ ಪರಿಣಾಮ:

ಮದ್ಯ ಪಿತ್ತಜನಕಾಂಗದ ಆರೋಗ್ಯವನ್ನು ಹಾಳುಮಾಡುತ್ತದೆ. ಮಿತಿಮೀರಿ ಮದ್ಯ ಸೇವಿಸುವ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಪಿತ್ತಜನಕಾಂಗದ ಸಮಸ್ಯೆ ಕಂಡುಬರುತ್ತದೆ. ಪಿತ್ತಜನಕಾಂಗ ಕೊಳೆಯುವ ಈ ಕಾಯಿಲೆಯ ಹೆಸರು ಸಿರೋಸಿಸ್‌. ಪಿತ್ತಜನಕಾಂಗ ಕೊಳೆಯುತ್ತಾ ಬರುವ ಸಿರೋಸಿಸ್‌ ಕಾಯಿಲೆಯಿಂದಾಗಿ ವ್ಯಕ್ತಿ ಮೃತನಾಗುವ ಸಾಧ್ಯತೆ ಹೆಚ್ಚು.

ಮದ್ಯದಲ್ಲಿರುವ ವಿಷಕಾರಿ ರಾಸಾಯನಿಕ ಜಠರ ಮತ್ತು ಪಚನಾಂಗಗಳನ್ನು ಸುಡುತ್ತದೆ. ಹೀಗಾಗಿ ಜಠರದಲ್ಲಿ ಹುಣ್ಣು ಮತ್ತು ಪಚನಾಂಗಗಳ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ.
ಜಠರದ ಪ್ಲೀಹ ಗ್ರಂಥಿಗೆ ಸಂಬಂಧಿಸಿದ ರೋಗಗಳೂ ಬರುವ ಸಾಧ್ಯತೆ ಹೆಚ್ಚು. ಪದೇ ಪದೇ ಅಜೀರ್ಣ ಮತ್ತು ವಿಟಮಿನ್‌ಗಳ ಕೊರತೆ ಕಾಣಿಸಿಕೊಳ್ಳುವುದೇ ಈ ರೋಗದ ಲಕ್ಷಣ.

ರಕ್ತದೊಂದಿಗೆ ಸೇರುವ ಅಪಾಯಕಾರಿ ಮದ್ಯದ ರಾಸಾಯನಿಕಳು ಹೃದಯದ ಕವಾಟಗಳ ಮೇಲೆಯೂ ಪ್ರಭಾವ ಬೀರುತ್ತವೆ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆಗಳೂ ಕೂಡ ಮದ್ಯಪಾನಿಗಳನ್ನು ಕಾಡುವುದು ಜಾಸ್ತಿ. ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವವರೂ ಕೂಡ ಮದ್ಯದಿಂದ ದೂರವಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಕುಡಿತದ ಗೀಳು ಅತ್ಯಂತ ಅಪಾಯಕಾರಿ..
ಕಣ್ಣು ಅತೀ ಸೂಕ್ಷ್ಮ ಅಂಗ. ಮದ್ಯವ್ಯಸದಿಂದಾಗಿ ಕಣ್ಣಿಗೆ ಹಾನಿಯುಂಟಾಗುವ ಸಾಧ್ಯತೆಯೂ ಇದೆ.
ಕಣ್ಣಿನ ಮಾಂಸ ಖಂಡಗಳು ದುರ್ಬಲಗೊಂಡು ದೃಷ್ಟಿ ಸಮಸ್ಯೆ ಉಲ್ಬಣವಾಗಲೂ ಬಹುದು.

ನರ ಸಂಬಂಧಿ ಕಾಯಿಲೆಗಳಿಗೂ ಮದ್ಯ ಕಾರಣವಾಗಬಲ್ಲದು. ನರದೌರ್ಬಲ್ಯ, ಕೈ- ಕಾಲುಗಳು ಶಕ್ತಿಹೀನವಾಗುವುದು, ಮರಗಟ್ಟುವಂತಹ ಅನುಭವವಾಗುವ ತೊಂದರೆ ಕಾಣಿಸಿಕೊಳ್ಳುತ್ತದೆ.

ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಯೂ ಕೂಡ ಕುಡಿತದಿಂದಾಗಿ ಬರುವ ಸಾಧ್ಯತೆ ಹೆಚ್ಚು. ಕರುಳಿನ ಕ್ಯಾನ್ಸರ್, ಜಠರ ಮತ್ತು ಪಿತ್ತ ಜನಕಾಂಗದ ಕ್ಯಾನ್ಸರ್, ಬಾಯಿ- ಗಂಟಲು ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯೂ ಇದೆ.

ನಿರಂತರವಾದ ಮದ್ಯವ್ಯಸನದಿಂದ ಎಲುಬು ದುರ್ಬಲಗೊಳ್ಳುತ್ತದೆ. ಎಲುಬಿನ ಕಾಯಿಲೆಗಳಿಗೆ ದಾರಿಮಾಡಿಕೊಡುತ್ತದೆ. ಮದ್ಯವ್ಯಸನಿಗಳ ಎಲುಬಿನಲ್ಲಿ ರುವ ಖನಿಜ ಸಾಂದ್ರತೆ ಕಡಿಮೆಯಾಗಿ, ಆಸ್ಟಿಯೊಪೊರೋಸಿಸ್‌ ಎಂಬ ಕಾಯಿಲೆ ಬರಬಹುದು. ಈ ಕಾಯಿಲೆಯ ಮುಖ್ಯ ಲಕ್ಷಣಗಳೆಂದರೆ ಕೀಲು ನೋವು, ಬೆನ್ನು ನೋವು ಮತ್ತು ಎಲುಬುಗಳು ಕಾರಣವಿಲ್ಲದೇ ಪದೇ ಪದೇ ಮುರಿತಕ್ಕೊಳಗಾಗುವುದು.
ಗರ್ಭಿಣಿ ಸ್ತ್ರೀಯರು ಮಾತ್ರ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಲೇ ಬಾರದು. ನೇರ ಗರ್ಭಕೋಶಕ್ಕೆ ಪ್ರಭಾವ ಬೀರುವ ಮದ್ಯ, ಮಗುವಿಗೆ ನರದೌರ್ಬಲ್ಯ ಹಾಗೂ ಎಲುಬು ರೋಗಗಳು ಬರುವ ಸಾಧ್ಯತೆ ಇರುತ್ತದೆ.

ಮಧ್ಯವ್ಯಸನದ ನಿವಾರಣೆಗಾಗಿ ಹಲವು ಚಿಕಿತ್ಸೆಗಳೂ ಲಭ್ಯವಿವೆ. ವೈದ್ಯಕೀಯ ಪದ್ಧತಿಯಲ್ಲಿಯೂ ಅನೇಕ ಕ್ರಮಗಳಿವೆ. ಮಾದಕ ದೃವ್ಯಗಳ ವ್ಯಸನವನ್ನು ಬಿಡಿಸಲು ಬೆಂಜೊಡೈಜೆಪಿನೆಸ್ ನಂತಹ ಔಷಧಿಗಳನ್ನು ಉಪಯೋಗಿಸಲಾಗುತ್ತದೆ. ನಿರ್ವಿಷೀಕರಣದಂತಹ ಹಲವಾರು ವಿಭಿನ್ನ ಸಮೂಹ ಚಿಕಿತ್ಸೆ ಅಥವಾ ಮಾನಸಿಕ ನೆರವಿನ ಸಹಾಯಹಸ್ತ ಪದ್ದತಿಗಳನ್ನು ಬಳಸಿ ಮದ್ಯದ ಗೀಳನ್ನು ಬಿಡಿಸಲು ಪ್ರಯತ್ನ ಮಾಡಲಾಗುತ್ತದೆ.

ಕುಡಿತದ ದುರಭ್ಯಾಸ ಕಡಿಮೆಗೊಳಿಸಲು ಅಂಟ್ ಅಬ್ಯುಸ್ ದಿಸಲ್ಫಿರ್ಮ್ ಔಷಧಿಗಳನ್ನು, ಎಸೆಟಾಲೈಹೈಡ್ ನ್ನು ಕುಡಿತದ ಅಮಲು ಅಥವಾ ಹ್ಯಾಂಗೊವರ್ ನ್ನು ಕಡಿಮೆ ಮಾಡಲು ಬಳಸುತ್ತಾರೆ.
ಕುಡಿತದಂತಹ ಕೆಟ್ಟ ಚಟಗಳು ಕಡಿಮೆಗೊಳಿಸುವುದಕ್ಕಾಗಿ ಕೌನ್ಸೆಲಿಂಗ್‌ ಚಿಕಿತ್ಸೆಯನ್ನೂ ನೀಡಲಾಗುತ್ತದೆ.

ದೀರ್ಘ ಕಾಲದಿಂದ ಮದ್ಯವ್ಯಸನಿಯಾಗಿರುವ ವ್ಯಕ್ತಿಗಳು ಮದ್ಯ ತ್ಯಜಿಸಿದ ನಂತರ ಹಲವಾರು ದುಷ್ಪರಿಣಾಮಗಳು ಕಂಡುಬರುತ್ತವೆ. ಮದ್ಯ ತ್ಯಜಿಸಿ ಒಂದರಿಂದ ಮೂರು ವಾರಗಳ ಅವಧಿಯಲ್ಲಿ ತನ್ನ ಲಕ್ಷಣಗಳನ್ನು ತೋರುತ್ತದೆ. ಕಡಿಮೆ ಪ್ರಮಾಣದ ತೀವ್ರತೆಯುಳ್ಳವೆಂದರೆ ಮತಿ ಭ್ರಮಣೆ, ವ್ಯಾಕುಲತೆ, ಮತ್ತು ನರಗಳ ದೌರ್ಬಲ್ಯಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಅತಿ ಎಚ್ಚರಿಕೆಯಿಂದ ಮಿತವಾಗಿ ಮದ್ಯವನ್ನು ತ್ಯಜಿಸುತ್ತಾ ಸಂಪೂರ್ಣ ತ್ಯಜಿಸಲು ಅವರು ಪ್ರಯತ್ನಿಸಬೇಕು.

ಅಪಾಯಕಾರಿ ಮದ್ಯದ ಚಟದಿಂದ ಹೊರಬರಲು ಸಾಕಷ್ಟು ಉಪಾಯಗಳೇನೋ ಇದೆ ಆದರೆ, ವ್ಯಸನಿಗಳ ದೃಢ ನಿರ್ಧಾರದಿಂದ ಮಾತ್ರ ಮದ್ಯದ ಗೀಳನ್ನು ಬಿಡಲು ಸಾಧ್ಯ. ಗಟ್ಟಿ ಮನಸ್ಸು ಮಾಡಿ ಮದ್ಯವ್ಯಸನದಿಂದ ಹೊರಬರಲು ಪ್ರಯತ್ನಿಸಿದರೆ ಉತ್ತಮ ಆರೋಗ್ಯ ಹೊಂದಿ ಬಹುಕಾಲ ಬಾಳಲು ಸಾಧ್ಯ.

 

Author : ಅಮೃತಾ ಹೆಗಡೆ

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited