Untitled Document
Sign Up | Login    
ಹಣ್ಣುಗಳು ಮತ್ತು ಆರೋಗ್ಯ

ಆರೋಗ್ಯ ವೃದ್ಧಿಸುವ ಹಣ್ಣುಗಳು

ಹಣ್ಣುಗಳು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ.. ರುಚಿ ರುಚಿಯಾದ ರಸಭರಿತ ಹಣ್ಣುಗಳನ್ನು ಮೆಲ್ಲುವುದೇ ಒಂದು ಸುಖ. ಆದರೆ, ಯಾವ ಯಾವ ಹಣ್ಣುಗಳು ಯಾವ ಯಾವ ಅಂಶಗಳನ್ನು ಒಳಗೊಂಡಿರುತ್ತವೆ, ಅವು ನಮ್ಮ ಆರೋಗ್ಯವೃದ್ಧಿಗೆ ಹೇಗೆ ಸಹಕರಿಸುತ್ತವೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ.

ಹಣ್ಣುಗಳನ್ನು ತಿನ್ನಲೂ ಕ್ರಮವಿದೆ. ಊಟ ಅಥವಾ ತಿಂಡಿ ತಿನ್ನಲು ಅರ್ಧಗಂಟೆಯ ಮೊದಲು ಹಣ್ಣು ತಿನ್ನಬೇಕು. ಊಟವಾದ ತಕ್ಷಣವೇ ಹಣ್ಣುಗಳನ್ನು ತಿನ್ನಬಾರದು. ಊಟವಾದ ಬಳಿಕ ಸುಮಾರು 3 ಗಂಟೆಯ ನಂತರ ಹಣ್ಣನ್ನು ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಏಕೆಂದರೆ, ನಾವು ತಿಂದ ಆಹಾರ ಜಠರಕ್ಕೆ ಹೋದ ನಂತರ ಅದು ಕಿಣ್ವವಾಗಿ ಬದಲಾಗುತ್ತದೆ. ನಂತರ ಅದು ಆಮ್ಲವಾಗಿ ಬದಲಾಗಿ ಪಚನವಾಗಲು ಪ್ರಾರಂಭವಾಗುತ್ತದೆ. ಆದರೆ ಹಣ್ಣು ಹಾಗಲ್ಲ. ಅದು ಜಠರಕ್ಕೆ ಸೇರಿದ ತಕ್ಷಣವೇ ಪಚನವಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ನಾವು ಆಹಾರ ಮತ್ತು ಹಣ್ಣನ್ನು ಒಟ್ಟಿಗೇ ತಿಂದರೆ, ತಿಂದ ಆಹಾರ ಹಣ್ಣಿನ ಜೊತೆಗೆ ಪಚನವಾಗಲು ಪ್ರಾರಂಭವಾಗುತ್ತದೆ. ಕಿಣ್ವವಾಗದೆ, ಆಮ್ಲವಾಗಿ ಪರಿವರ್ತನೆ ಹೊಂದಲು ಹಣ್ಣು ಆಹಾರಕ್ಕೆ ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕಾಗಿಯೇ ಎಸಿಡಿಟಿಯಂತಹ ತೊಂದರೆಯೂ ಕಾಣಿಸಿಕೊಳ್ಳಬಹುದು.
ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ಸೇವಿಸುವುದರಿಂದ, ಕೂದಲು ಹಣ್ಣಾಗುವುದು, ಬಕ್ಕತಲೆ, ವಿಪರೀತವಾಗಿ ಕೈ-ಕಾಲು ನಡುಗುವುದು ಮತ್ತು ಕಣ್ಣಿನ ಸುತ್ತ ಕಂಡುಬರುವ ಕಪ್ಪು ವರ್ತುಲಗಳು ಮುಂತಾದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಒಂದು ವೇಳೆ ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮವನ್ನು ಅನುಸರಿಸಿದಲ್ಲಿ, ದೀರ್ಘಾಯುಷ್ಯ, ಚೈತನ್ಯ, ಆರೋಗ್ಯ, ಸಂತೋಷ ಮತ್ತು ಸಾಮಾನ್ಯ ತೂಕವನ್ನು ಕಾಯ್ದುಕೊಳ್ಳಬಹುದು. ಹಣ್ಣಿನ ರಸವನ್ನು ಕುಡಿಯುವುದಕ್ಕಿಂತಲೂ ಹಣ್ಣನ್ನೇ ತಿನ್ನುವುದು ಉತ್ತಮ ಎಂಬುದು ವೈದ್ಯರ ಅಭಿಪ್ರಾಯ.

ಹಣ್ಣುಗಳು ವಿಟಮಿನ್‌, ಖನಿಜಾಂಶ, ಪೋಷಕಾಂಶಗಳನ್ನು ಹೊಂದಿರುವ ಉತ್ತಮ ಆಹಾರ. ಹೀಗಾಗಿ ಗರ್ಭಿಣಿ ಸ್ತ್ರೀಯರಿಗೂ ಕೂಡ ಹಣ್ಣುಗಳನ್ನು ನಿಯಮಿತವಾಗಿ ತಿನ್ನಲು ಸಲಹೆ ನೀಡುತ್ತಾರೆ. ಹೊಟ್ಟೆಯಲ್ಲಿರುವ ಮಗುವಿಗೆ ಬೆಳವಣಿಗೆಗೆ ಬೇಕಾದ ಜೀವಸತ್ವಗಳು ನೈಸರ್ಗಿಕವಾಗಿ ಸಿಗಬೇಕೆಂದರೆ ಹಣ್ಣುಗಳನ್ನು ಸೇವಿಸಲೇ ಬೇಕು. ಮಗುವಿನ ಮೂಳೆ ಹಾಗೂ ಹಲ್ಲುಗಳು ಆರೋಗ್ಯಕರವಾಗಿ ರೂಪುಗೊಳ್ಳಲು, ದೃಷ್ಟಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನರವ್ಯೂಹದ ನಳಿಕೆಗಳ ನ್ಯೂನತೆಗಳಿಂದ ಮಗುವನ್ನು ತಡೆಯಲು ಮತ್ತು ಆರೋಗ್ಯಕರ ತೂಕ ಹೊಂದಲು ಸಹಕಾರಿಯಾಗುವಂತಹ ಗುಣಗಳು ಹಣ್ಣುಗಳಿಂದ ಮಗುವಿಗೆ ಸಿಗಲು ಸಾಧ್ಯ. ಗರ್ಭಿಣಿಯರಿಗೆ ಸಾಮಾನ್ಯವಾಗಿ ಕಾಡುವ ಮಲಬದ್ಧತೆ ಮತ್ತು ಮೂಲವ್ಯಾಧಿಯಂತಹ ತೊಂದರೆಗಳಿಗೆ ಹಣ್ಣುಗಳೇ ಔಷಧಿಯಾಗಿವೆ.
ಆರೋಗ್ಯ ನೀಡುವ ವಿವಿಧ ಹಣ್ಣುಗಳು

ಹಿಪ್ಪುನೇರಳೆ ಹಣ್ಣು ಮತ್ತು ಸ್ಟ್ರಾಬೆರಿ : ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ. ವಯಸ್ಸಾಗುತ್ತಾ ಹೋದಂತೆ ನೆನಪಿನ ಶಕ್ತಿಯ ಕೊರತೆಯಿಂದ, ಮರೆಗುಳಿಗಳಾಗುವ ಹಿರಿಯರಿಗೆ ಈ ಹಣ್ಣುಗಳು ಒಳ್ಳೆಯದು.

ಕಿತ್ತಳೆ, ಮೋಸಂಬಿ ಹಣ್ಣುಗಳು : ಮೂಳೆಯ ಕೀಲುಗಳಿಗೆ ಶಕ್ತಿತುಂಬಲು ಸಹಕಾರಿ

ಒಣ ಹಣ್ಣುಗಳು (ಡ್ರೈ ಫ್ರುಟ್ಸ್‌): ಇವು ಹಲವು ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯದ ಆಹಾರ. ಬಹಳ ಪ್ರಮಾಣದಲ್ಲಿ ಖನಿಜಾಂಶ, ವಿಟಮಿನ್‌ಗಳನ್ನು ಹೊಂದಿರುವ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಅತೀ ಉತ್ತಮ

ಸೇಬು : ದೊಡ್ಡಕರುಳಿನ ಕಾನ್ಸರ್‌ ತಡೆಯಲು ಸಹಕಾರಿ. ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ನ್ಯೂಟ್ರಿಶನ್‌ ಹಣ್ಣು ಸೇಬು. ದೇಹಕ್ಕೆ ಬೇಕಾಗಿರುವ ಉತ್ತಮ ಕೊಬ್ಬನ್ನು ಒದಗಿಸುತ್ತದೆ.

ದ್ರಾಕ್ಷಿ ಹಣ್ಣು : ರಕ್ತದೊತ್ತಡವನ್ನು ಹತೋಟಿಗೆ ತರಲು ಸಹಕಾರಿ

ಬಾಳೆಹಣ್ಣು : ಬಾಳೆಹಣ್ಣು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಕಿಡ್ನಿಯ ತೊಂದರೆ ಇದ್ದವರು ಮತ್ತು ಮಲಬದ್ಧತೆಯ ತೊಂದರೆಯುಳ್ಳವರು ಬಾಳೆಹಣ್ಣನ್ನು ದಿನವೂ ಉಪಯೋಗಿಸಬೇಕು.

ಕಲ್ಲಂಗಡಿ ಹಣ್ಣು : ರಕ್ತವೃದ್ಧಿಗೆ ಸಹಕಾರಿ, ಕಜ್ಜಿ ತುರಿಕೆಯಂತಹ ಸಮಸ್ಯೆಗಳಿಗೆ ಕಲ್ಲಂಗಡಿ ಪರಿಹಾರ ನೀಡುತ್ತದೆ.

ಮಾವಿನ ಹಣ್ಣು : ನಿದ್ರಾಹೀನತೆಗೆ ಪರಿಹಾರ ನೀಡಬಲ್ಲದು, ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ ಸಮಸ್ಯೆಗಳಿಗೆ ರಾಮಬಾಣ

ದಾಳಿಂಬೆ ಹಣ್ಣು : ಹಲ್ಲುಗಳ ಸುರಕ್ಷತೆಗೆ ಬೇಕಾದ ವಿಟಾಮಿನ್‌ಗಳನ್ನು ಒದಗಿಸುತ್ತದೆ, ಖನಿಜಾಂಶಗಳನ್ನು ಹೊಂದಿರುವ ಹಣ್ಣು

ಹಲಸಿನ ಹಣ್ಣು : ಪಿತ್ತವಿಕಾರಗಳನ್ನು ದೂರಮಾಡಬಲ್ಲದು, ಪೌಷ್ಠಿಕಾಂಶಯುಕ್ತ ಹಣ್ಣು, ನರಗಳ ದೌರ್ಬಲ್ಯಕ್ಕೆ ಪರಿಹಾರ ನೀಡಬಲ್ಲದು

ಮುರುಗಲು ಹಣ್ಣು (ಪುನರ್ಪುಳಿ): ಪಿತ್ತ ಸಮಸ್ಯೆಗೆ ರಾಮಬಾಣವಾಗಿರುವ ಹಣ್ಣು.

ಪಪ್ಪಾಯ : ವಿಟಮಿನ್‌ ಎ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಅಂಜೂರದ ಹಣ್ಣು : ಒತ್ತಡ, ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗಳನ್ನು ಶಮನ ಮಾಡಬಲ್ಲ ಶಕ್ತಿ ಅಂಜೂರದ ಹಣ್ಣಿಗೆ ಇದೆ.

ಖರ್ಜೂರ : ಜಂತುಹುಳು ಸಮಸ್ಯೆ ಹಾಗೂ ಬೇದಿ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಹಣ್ಣು, ಪೌಷ್ಠಿಕ ಆಹಾರಗಳಲ್ಲೊಂದು

ಅನಾನಾಸು : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ

 

Author : ಅಮೃತಾ ಹೆಗಡೆ

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited