Untitled Document
Sign Up | Login    
ಪಾರ್ಶ್ವವಾಯು

ಮೆದುಳಿನಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವ

ಮಾನವನ ಜೀವನಕ್ಕೆ ಸಂಚಕಾರ ತರುವ ಕಾಯಿಲೆ ಇದು. ದೇಹದ ಭಾಗಗಳನ್ನು ನಿತ್ರಾಣಗೊಳಿಸಿ, ನಿರ್ದಿಷ್ಟ ಭಾಗಕ್ಕೆ ಜೀವವೇ ಇಲ್ಲದಂತೆ ಮಾಡಿಬಿಡುವ ಕಾಯಿಲೆ ಪಾರ್ಶ್ವವಾಯು.

ಮೆದುಳಿಗೆ ಆಗುವ ಆಘಾತವೇ ಪಾಶ್ವವಾಯು ಆಕ್ರಮಿಸಲು ಕಾರಣ. ರಕ್ತಪರಿಚಲನೆಯ ಕೊರತೆಯಿಂದ ಅಥವಾ ಮೆದುಳಿನಲ್ಲಿ ಆಗುವ ರಕ್ತಸ್ರಾವದಿಂದ ಪಾಶ್ವವಾತ ಕಾಣಿಸಿಕೊಳ್ಳುತ್ತದೆ.

ಮೆದುಳಿಗೆ ಸಾಗುವ ರಕ್ತದ ಪರಿಚಲನೆಯಲ್ಲಿ ಹಠಾತ್‌ ಆಗಿ ಕೊರತೆಯುಂಟಾದಾಗ ಈ ರೀತಿಯ ದಾಳಿ ಉಂಟಾಗುತ್ತದೆ. ಅಪಧಮನಿ ಅಥವಾ ಶುದ್ಧ ರಕ್ತನಾಳ ಗಳಲ್ಲಿ ಅಡ್ಡಿ ಸಂಭವಿಸಿದಾಗ ಮೆದುಳಿಗೆ ಹರಿಯುತ್ತಿದ್ದ ರಕ್ತ ನಿಲ್ಲುತ್ತದೆ. ಹೃದಯದ ಅಪಧಮನಿಗಳಲ್ಲಿ ಕೊಬ್ಬು ಶೇಖರಣೆಯಾಗಿದ್ದಾಗಲೂ ರಕ್ತದ ಹರಿವಿಗೆ ತಡೆಯುಂಟಾಗಿ, ರಕ್ತದ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಇಂಥಹ ಸಂದರ್ಭದಲ್ಲಿ ಮೆದುಳಿನ ರಕ್ತನಾಳಗಳು ಒಡೆಯುವ ಸಂಭವವಿರುತ್ತದೆ. ಅಥವಾ ಮೆದುಳಿನಲ್ಲಿಯೇ ರಕ್ತನಾಳ ಒಡೆದು ರಕ್ತ ಸೋರುತ್ತಿದ್ದರೆ ಪಾರ್ಶ್ವವಾತ ಕಾಣಿಸಿಕೊಳ್ಳುತ್ತದೆ.

ಪಾರ್ಶ್ವವಾತಕ್ಕೆ ಈಡಾದ ವ್ಯಕ್ತಿ ತನ್ನ ಯಾವುದಾದರೂ ಒಂದು ಚಟುವಟಿಕೆಯನ್ನು ಕಳೆದುಕೊಳ್ಳುತ್ತಾನೆ. ಮಾತು ನಿಲ್ಲಬಹುದು, ನೆನಪಿನ ಶಕ್ತಿಯೇ ಹೊರಟುಹೋಗಬಹುದು ಅಥವಾ ಒಂದು ಬದಿಯ ದೇಹವೇ ಬಲಹೀನಗೊಳ್ಳಬಹುದು. ಹೃದಯಾಘಾತಕ್ಕೆ ಹೇಗೆ ತುರ್ತು ಚಿಕಿತ್ಸೆಯ ಅವಶ್ಯಕತೆಯಿರುವುದೋ.. ಅಷ್ಟೇ ತುರ್ತು ಚಿಕಿತ್ಸೆಯ ಅವಶ್ಯಕತೆ ಪಾರ್ಶ್ವವಾತಕ್ಕೂ ಇರುತ್ತದೆ.
ಹಠಾತ್‌ ಆಗಿ ಕಾಣಿಸಿಕೊಳ್ಳುವುದೇ ಇದರ ಲಕ್ಷಣ ಎಂಬ ನಂಬಿಕೆ ಇದೆ. ಆದರೆ ಹಾಗೇನಿಲ್ಲ, ಮೊದಲು ತನ್ನ ಸೂಚನೆಯನ್ನು ತೋರಿಸಿರಲೂಬಹುದು. ಕಾಲು ಜೋಮು ಹಿಡಿಯುವುದು, ತೋಳುಗಳು ಜುಮ್ಮೆನ್ನುವುದು ಈ ರೀತಿಯ ಲಕ್ಷಣಗಳನ್ನು ಅದು ತೋರಿಸಿರಲೂಬಹುದು. ಈ ಹಂತದಲ್ಲಿ ಮೆದುಳಿನಲ್ಲಿ ಹಾನಿಯಾಗಿರುವುದಿಲ್ಲ ಆದರೆ, ಯಾವುದೇ ಸಂದರ್ಭದಲ್ಲಿಯೂ ಮೆದುಳಿನ ಆ ನಿರ್ದಿಷ್ಟ ಸ್ಥಳಕ್ಕೆ ಘಾಸಿಯಾಗಬಹುದು ಎಂಬ ಮುನ್ಸೂಚನೆ ಅದು.

ಹಠಾತ್ ಆಗಿ ಕಾಲು ಅಥವಾ ಬುಜ ಮರಗಟ್ಟಿದಂತಾಗುವುದು. ಮಾತು ನಿಂತುಹೋಗುವುದು, ದೇಹದ ನಿರ್ದಿಷ್ಟ ಅಂಗ ಬಲಹೀನಗೊಳ್ಳುವುದು, ನಡೆಯುಲು ಸಾಧ್ಯವಾಗದಷ್ಟು ಬಲಹೀನಗೊಳ್ಳುವುದು. ಸ್ವಾದೀನ ತಪ್ಪಿದಂತಾಗಿ ಎಚ್ಚರ ತಪ್ಪುವುದು, ತೀವ್ರ ತಲೆನೋವು ಒಮ್ಮೆಲೇ ಬಂದು ಕಣ್ಣು ಕಾಣದಂತಾಗುವುದು ಮಂಪರು ಅಥವಾ ವಾಕರಿಕೆ ಬಂದಂತಾಗುವುದು ಇವೆಲ್ಲ ಪಾರ್ಶ್ವವಾಯು ರೋಗದ ಲಕ್ಷಣಗಳು.

ಇಂತಹ ಲಕ್ಷಣಗಳು ಕಂಡುಬಂದಾಗ ತಡಮಾಡದೆ ವೈದ್ಯರ ಬಳಿ ಚಿಕಿತ್ಸೆ ಪಡೆಯಲೇ ಬೇಕು. ಮುನ್ನೆಚ್ಚರಿಕೆ ವಹಿಸಿ, ವೈದ್ಯರ ಬಳಿ ಚಿಕಿತ್ಸೆ ಪಡೆದರೆ ಪಾರ್ಶ್ವವಾಯು ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ಹಾಗು ಔಷಧ ಸೂಕ್ತ ಸಮಯದಲ್ಲಿ ಲಭ್ಯವಾದಾಗ, ಅವನು ಚೇತರಿಸಿಕೊಳ್ಳಬಹುದು.

ತೀವ್ರ ತರದ ಹಾನಿಯಾಗದೇ, ಸ್ವಲ್ಪ ಪ್ರಮಾಣದ ಮೆದುಳಿನ ಹಾನಿಯಿಂದ ವ್ಯಕ್ತಿ ನರಳುತ್ತಿರಬಹುದು ಅಥವಾ ಮೆದುಳಿಗೆ ಹಾನಿಯಾಗದೇ ಇದ್ದರೂ, ಅಸಾಮರ್ಥ್ಯದಿಂದ ನರಳುತ್ತಿರಬಹುದು.

ಪಾರ್ಶ್ವವಾತದ ದಾಳಿ ತೀವ್ರತರವಾಗಿದ್ದಾಗ ನಿರ್ದಿಷ್ಟ ಅಂಗ ಶಾಶ್ವತವಾಗಿ ಬಲಹೀನಗೊಳ್ಳುವ ಸಾಧ್ಯತೆಯೂ ಹೆಚ್ಚು, ಕೆಲವೊಮ್ಮೆ ಸಾವೂ ಸಂಭವಿಸಬಹುದು. ಈ ರೀತಿಯ ವೈಕಲ್ಯಗಳು, ಮೆದುಳಿಗೆ ಎಷ್ಟು ಪ್ರಮಾಣದಲ್ಲಿ, ಯಾವ ಭಾಗದಲ್ಲಿ ಹಾನಿಯಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
ಅತಿಯಾದ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳು, ರಕ್ತಸಂಬಂಧಿಗಳಲ್ಲಿ ಪಾರ್ಶ್ವವಾಯು ಸಮಸ್ಯೆ ಇದ್ದಂತವರು ಮತ್ತು ಧೂಮಪಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ. ಹೃದಯ ಕಾಯಿಲೆ ಅಥವಾ ಮಧುಮೇಹ ಕಾಯಿಲೆ ಯುಳ್ಳವರಿಗೂ ಕೂಡ ಪಾರ್ಶ್ವವಾತಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ.

ಮಹಿಳೆಯರಲ್ಲಿ ಗರ್ಭಧರಿಸಿದ ಸಂದರ್ಭದಲ್ಲಿ, ಅಥವಾ ಮಗು ಹುಟ್ಟುವ ಸಂದರ್ಭದಲ್ಲಿ ಮತ್ತು ಋತು ಬಂಧದ ಸಮಯದಲ್ಲಿ ಉಂಟಾಗುವ ಹಾರ್ಮೋನು ಬದಲಾವಣೆಗಳು ಕೂಡ ಪಾರ್ಶ್ವವಾತಕ್ಕೆ ಕಾರಣವಾಗಬಹುದು.

ಪಾರ್ಶ್ವವಾಯುವನ್ನು ತಡೆಯಲು ಸಲಹೆಗಳು:-

ಕಡಿಮೆ ಕೊಬ್ಬಿರುವ ಆಹಾರದ ಸೇವನೆ

ಆಹಾರದಲ್ಲಿ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಬಳಸುವುದು

ತೂಕವನ್ನು ನಿಯಂತ್ರಣದಲ್ಲಿಡುವುದು

ಒತ್ತಡದ ಬದುಕಿಗೆ ಆಗಾಗ ಸ್ಪಲ್ಫ ರಿಲೀಫ್‌ ನೀಡುತ್ತಿರಿ.

ರಕ್ತದೊತ್ತಡವನ್ನು ಆಗಾಗ ಪರೀಕ್ಷಿಸುತ್ತಿರಿ, ವೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳಿ.

ರಕ್ತಪರೀಕ್ಷೆ ಮಾಡಿಸಿಕೊಂಡು, ಕೊಲೆಸ್ಟ್ರಾಲ್‌ ಮಟ್ಟ ಅತೀ ಹೆಚ್ಚು ಇದ್ದರೆ, ಅದನ್ನು ಆರೋಗ್ಯಕರ ರೀತಿಯಲ್ಲಿ ಕಡಿಮೆ ಮಾಡುವ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಿ.

ಧೂಮಪಾನ ಮಾಡದಿರಿ.

ನಿಮಗೆ ಹೃದಯದ ಕಾಯಿಲೆ ಇದ್ದರೆ ಅಥವಾ ಮಧುಮೇಹದ ತೊಂದರೆ ಇದ್ದರೆ, ನಿಮ್ಮ ಆರೋಗ್ಯದ ಬಗ್ಗೆ ಸಮರ್ಪಕವಾದ ರೀತಿಯಲ್ಲಿ ಕಾಳಜಿ ವಹಿಸಿಕೊಳ್ಳಿ. ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಿ ಮತ್ತು ಅವರ ಸಲಹೆಯಂತೆ ಔಷಧಗಳನ್ನು ತೆಗೆದುಕೊಳ್ಳಿ. ನಿಮಗೆ ಸಣ್ಣ ಪ್ರಮಾಣದ ಪಾರ್ಶ್ವವಾತ ತೊಂದರೆ ಇದ್ದರೆ, ಕೂಡಲೇ ಸಹಾಯ ಪಡೆಯಿರಿ. ನಿಮಗೆ ಔಷಧಗಳ ಅಥವಾ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆಯೇ ಎಂಬುದರ ಬಗ್ಗೆ ನಿಮ್ಮ ವೈದ್ಯರೊಡನೆ ಮಾತನಾಡಿ.

 

Author : ಅಮೃತಾ ಹೆಗಡೆ

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited