Untitled Document
Sign Up | Login    
ಯೋಗ ನಮಗೆ ಬೇಕೆ?

ಯೋಗಬ್ಯಾಸದಲ್ಲಿ ನಿರತರಾದ ಶಿಬಿರರ್ತಿಗಳು.

ಭಾರತದ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಬಹುರೂಪಿಯಾಗಿ ವಿಶ್ವಾದ್ಯಂತ ಹರಡಿರುವುದು ಮೇಲ್ನೋಟಕ್ಕೇ ಕಾಣಿಸುತ್ತದೆ. ಪತ್ರಿಕೆಗಳ ಆರೋಗ್ಯ ಅಂಕಣಗಳಿಂದ ಟಿವಿ ಚಾನಲ್ ಗಳ ವರೆಗೆ, ಭಾರತದಿಂದ ಅಮೆರಿಕದವರೆಗೆ, ಮಕ್ಕಳಿಂದ ವೃದ್ಧರವರೆಗೆ ಎಲ್ಲೆಲ್ಲೂ ವ್ಯಾಪಕವಾಗಿ ಯೋಗವು ಸರ್ವಸಮ್ಮತವಾಗಿ ಬಿಟ್ಟಿದೆಯೆಂದೇ ಬಿಂಬಿಸಲಾಗುತ್ತಿದೆ. ವಿಜ್ಞಾನ, ಗಣಿತ, ತತ್ವಶಾಸ್ತ್ರ, ಕಲೆ ಇವೇ ಮುಂತಾದ ಕ್ಷೇತ್ರಗಳಿಗೆ ಪ್ರಾಚೀನ ಭಾರತದ ಕೊಡುಗೆಗಳೆಲ್ಲ ನಗಣ್ಯವಾಗಿ ಯೋಗಶಾಸ್ತ್ರವೇ ಮನುಕುಲಕ್ಕೆ ಭಾರತದ ಅತಿ ಶ್ರೇಷ್ಠವಾದ ಕೊಡುಗೆಯೆಂದು ಹೇಳಲಾಗುತ್ತಿದೆ.

ತಪಸ್ವಿಗಳ ಯೋಗಾಭ್ಯಾಸವು ಇಂದು ಹಲವರಿಗೆ ಕೋಟಿಗಟ್ಟಲೆ ವ್ಯವಹಾರದ ಹೆಬ್ಬಾಗಿಲನ್ನೇ ತೆರೆದಿಟ್ಟಂತಾಗಿದೆ. ಕೆಲವರು ಅಪ್ಪಟ ವ್ಯಾವಹಾರಿಕ ಶೈಲಿಯಲ್ಲಿ ವಿಶಿಷ್ಟವಾದ, ಪೇಟೆಂಟ್ ಯುಕ್ತ, ಹವಾನಿಯಂತ್ರಿತ ಯೋಗ 'ಸ್ಟುದಿಯೋ'ಗಳನ್ನು ನಡೆಸುತ್ತಿದ್ದರೆ, ಜನರ ಮರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ನಿಷ್ಣಾತರಾದ ಇನ್ನು ಕೆಲವರು ಯೋಗಾಭ್ಯಾಸದ ಒಂದೆರಡು ವಿಧಗಳನ್ನು ಅಲ್ಪಸ್ವಲ್ಪ ರೂಪಾಂತರಿಸಿ, ಅದಕ್ಕೊಂದು ವಿಶೇಷವಾದ ನಾಮಕರಣ ಮಾಡಿ, ತಲೆಕೂದಲು-ಗಡ್ದಗಳನ್ನು ಅತ್ತಿಂದಿತ್ತ ಇಳಿಬಿಟ್ಟು, ಕಿರುನಗೆ ಬೀರಿ, ಶ್ರೀ ಶ್ರೀ ಯಾ ಮಹಾಪೂಜನೀಯ ಬಿರುದಾಂಕಿತ ಜಗದ್ಗುರುಗಳಾಗಿ ಮೆರೆಯುತ್ತಿದ್ದಾರೆ. ಬಹುಷಃ ಇವರೆಲ್ಲರ 'ಅದ್ಭುತ ಕೆಲಸಗಳಿಂದ' ಪ್ರೇರೇಪಿತರಾಗಿ ಕೇಂದ್ರ ಹಾಗೂ ಕೆಲ ರಾಜ್ಯ ಸರಕಾರಗಳ ಮಂತ್ರಿಗಳು ಶಾಲಾ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕಡ್ಡಾಯ ಯೋಗ ಶಿಕ್ಷಣವನ್ನು ಆರಂಭಿಸುವ ನಿರ್ಧಾರಕ್ಕೆ ಬಂದಂತಿದೆ.

ಭಾರತ ಮೂಲದ ಎಲ್ಲವನ್ನೂ 'ರಕ್ಷಿಸುವ' ಏಕಸ್ವಾಮ್ಯತೆ ತಮ್ಮದೆಂದು ಹೇಳಿಕೊಳ್ಳುವ ಕೆಲ ಶಕ್ತಿಗಳು ಯೋಗವನ್ನೂ ತಮ್ಮ ಬಗಲಿಗೇರಿಸಿಕೊಂಡಿದ್ದು, ಯೋಗದ ಬಗ್ಗೆ ಯಾರಾದರೂ ಏನನ್ನಾದರೂ ಸಂಶಯಗಳನ್ನು ವ್ಯಕ್ತಪಡಿಸಿದರೆ ಅಂತಹವರನ್ನು ಹಿಂದೂ ವಿರೋಧಿಗಳೆಂದೂ, ದೇಶಪ್ರೇಮವಿಲ್ಲದವರೆಂದೂ, ದೇಶದ್ರೋಹಿಗಳೆಂದೂ ಕೂಡಲೇ ಜರೆಯಲಾಗುತ್ತದೆ. ಆದರೆ ಯೋಗಾಭ್ಯಾಸವು ನಮಗೆ ಅಗತ್ಯವೇ? ಅದರಿಂದ ಯಾವುದೇ ಪ್ರಯೋಜನಗಳಿವೆಯೇ? ಅದು ಅತ್ಯಂತ ಸುರಕ್ಷಿತವೇ?

ಯೋಗಯನ್ನುವ ಬಗ್ಗೆ ಮಾಹಿತಿ:

ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಯೋಗಾಭ್ಯಾಸವು ಪ್ರಚಲಿತವಿದ್ದು, ವರ್ಷಗಟ್ಟಲೆ ತಪಸ್ಸಿನಲ್ಲಿ ತೊಡಗಿ ಬಲು ಕಠಿಣವಾದ ಜೀವನಕ್ರಮವನ್ನು ಪಾಲಿಸುತ್ತಿದ್ದ ಋಷಿ-ಮುನಿಗಳು ತಮ್ಮ ಧ್ಯಾನಕಾಲದಲ್ಲಿ ಅದನ್ನು ಬಳಸುತ್ತಿದ್ದಿರಬೇಕು. ಕ್ರಿ.ಪೂ.2ನೇ ಶತಮಾನದಲ್ಲಿ ಪತಂಜಲಿ ಮುನಿ ಬರೆದ 'ಯೋಗ ಸೂತ್ರಗಳು' ಈ ಧ್ಯಾನವಿಧಾನಗಳನ್ನೆಲ್ಲ ಒಳಗೊಂಡ ಯೋಗಶಾಸ್ತ್ರದ ಮೂಲಗ್ರಂಥವೆಂದು ಪರಿಗಣಿಸಲ್ಪಟ್ಟಿದೆ. ಅಲ್ಲಿಂದೀಚೆಗೆ ಯೋಗಾಶಾಸ್ತ್ರದಲ್ಲಿ ಹಲವು ಬಗೆಯ ಬೆಳವಣಿಗೆಗಳಾಗಿದ್ದು, ಸ್ವಾಮಿ ಗೋರಖನಾಥರ ಶಿಷ್ಯನಾಗಿದ್ದ ಯೋಗಿ ಸ್ವಾತ್ಮರಾಮರು ಕ್ರಿ.ಶ. 15ನೇ ಶತಮಾನದಲ್ಲಿ ಬರೆದ ಹಠ ಯೋಗ ಪ್ರದೀಪಿಕ ಅವುಗಳಲ್ಲಿ ಮುಖ್ಯವಾದುದು. ಹಠ ಯೋಗವು ಪತಂಜಲಿಯ ರಾಜ ಯೋಗವನ್ನು ಸಾಧಿಸುವುದಕ್ಕಿರುವ ಮೆಟ್ಟಲೆಂದೂ, ಉನ್ನತ ಧ್ಯಾನಾಭ್ಯಾಸಕ್ಕೆ ದೇಹವನ್ನು ಅಣಿಗೊಳಿಸುವ ದೈಹಿಕ ಶುದ್ಧೀಕರಣದ ಹಂತವೆಂದೂ ಸ್ವಾತ್ಮರಾಮರು ತಮ್ಮ ಗ್ರಂಥವನ್ನು ಪರಿಚಯಿಸುತ್ತಾರೆ.
ಇಂದು ಪತಂಜಲಿಯ ರಾಜ ಯೋಗ ಹಾಗೂ ಸ್ವಾತ್ಮರಾಮರ ಹಠ ಯೋಗಗಳಲ್ಲದೆ ಇನ್ನೂ ಅಸಂಖ್ಯಾತ ಯೋಗ ಹಾಗೂ ಧ್ಯಾನ ವಿಧಾನಗಳು ಕಾಣಸಿಗುತ್ತವೆ: ಅಗ್ನಿ ಯೋಗ, ಅನಾಹತ ಯೋಗ, ಆರ್ಟಿಸ್ಟಿಕ್ ಯೋಗ, ಅಷ್ಟಾಂಗ ವಿನ್ಯಾಸ ಯೋಗ, ಭಕ್ತಿ ಯೋಗ, ಬಿಕ್ರಂ ಯೋಗ ಅಥವಾ ಹಾಟ್ ಯೋಗ, ಡಿಸ್ಕೋ ಯೋಗ. ಈ ವಿವಿಧ ಯೋಗ ವಿಧಾನಗಳ ಗುಣ ವಿಶೇಷಗಳೂ, ಜನಪ್ರಿಯತೆಯೂ ಅವುಗಳ ಪ್ರವರ್ತಕರ ವ್ಯವಹಾರ ಹಾಗೂ ಸಂವಹನ ಕೌಶಲ್ಯಗಳಿಗೆ ಅನುಗುಣವಾಗಿದೆಯೆನ್ನುವುದನ್ನು ಬೇರೆ ಹೇಳ ಬೇಕಾಗಿಲ್ಲ. ಬಾಬಾ ರಾಮದೇವ್ ಸ್ವಾಮಿ ಮಹಾರಾಜರು ಏಳು ವಿಧದ ಪ್ರಾಣಾಯಮಗಳನ್ನು, ಅದರಲ್ಲೂ ವಿಶೇಷವಾಗಿ ಕಪಾಲಭಾತಿಯನ್ನು ಕಲಿಸುವವರಾದರೆ, ಮಹಾಪೂಜನೀಯರಾದ ಶ್ರೀ ಶ್ರೀ ರವಿಶಂಕರ್ ಅವರು 'ಸುದರ್ಶನ ಕ್ರಿಯೆ ಎಂಬ ಅತ್ಯಂತ ಪ್ರಭಾವಶಾಲಿಯಾದ ಉಸಿರಾಟದ ವಿಧಾನವನ್ನು ಜಗತ್ತಿಗೆ ಸಮರ್ಪಿಸುವುದಕ್ಕಾಗಿ ಹತ್ತು ದಿನಗಳ ಕಾಲ ಆಳವಾದ ಚಿಂತನೆ ಹಾಗೂ ಮೌನದಲ್ಲಿ' ಕಳೆಯಬೇಕಾಯಿತಂತೆ.

ಇಂದು ಪ್ರಚಲಿತವಿರುವ 'ಯೋಗ'ದಲ್ಲಿ ಇಷ್ಟೊಂದು ವೈವಿಧ್ಯತೆಯಿರುವಾಗ, ನೀವು ಕಲಿತಿರುವುದು ಯಾ ಮಾಡುತ್ತಿರುವುದು ನಿಜಕ್ಕೂ ಭಾರತದ ಪ್ರಾಚೀನ ಯೋಗವೇ? ಅಲ್ಲದೆ, ತಪಸ್ವಿಗಳ ಅಭ್ಯಾಸವಾಗಿ ರೂಪತಳೆದ ಯೋಗವು ನಮಗೆ ಅಗತ್ಯವೇ?

ಯೋಗದಿಂದಾಗುವ ಪ್ರಯೋಜನಗಳು:

ಧ್ಯಾನದತ್ತ ತಮ್ಮ ಗಮನವನ್ನು ಕೇಂದ್ರೀಕರಿಸಲು ನೆರವಾಗಲೆಂದು ಋಷಿ-ಮುನಿಗಳು ಬಳಸುತ್ತಿದ್ದ ಯೋಗಾಭ್ಯಾಸವು ಇಂದು 'ಸರ್ವರೋಗ ನಿವಾರಕ ವಿಜ್ಞಾನ'ವಾಗಿ ಬೆಳೆದಿರುವುದು ಹೇಗೆ? ಬಾಬಾ ರಾಮದೇವನನ್ನು ನಂಬಬಹುದಾದರೆ, ಅವನು 'ವಿಪುಲವಾಗಿ ದೊರೆಯುವ ಪ್ರಾಣ (ಆಮ್ಲಜನಕ) ವನ್ನು ಔಷಧವಾಗಿ ಬಳಸಿದವರಲ್ಲಿ ವಿಶ್ವದ ಆರೋಗ್ಯದ ಚರಿತ್ರೆಯಲ್ಲಿಯೇ ಮೊತ್ತ ಮೊದಲನೆಯವನಾಗಿದ್ದಾನೆ ಮತ್ತು ಆ ಮೂಲಕ ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಬೇನೆ, ರಕ್ತನಾಳಗಳಲ್ಲಿ ತೊಡಕು, ಬೊಜ್ಜು, ಅಸ್ತಮಾ, ಶ್ವಾಸನಾಳಗಳ ಕಾಹಿಲೆ, ಬಿಳಿತೊನ್ನು, ಖಿನ್ನತೆ, ಪಾರ್ಕಿನ್ಸನ್ ಕಾಹಿಲೆ, ನಿದ್ರಾಹೀನತೆ, ತಲೆಶೂಲೆ, ಥೈರಾಯ್ಡ್, ಸಂಧಿವಾತ, ಕತ್ತು ನೋವು, ಹೆಪಟೈಟಿಸ್, ಮೂತ್ರ ಪಿಂಡಗಳ ವೈಫಲ್ಯ, ಕ್ಯಾನ್ಸರ್, ಯಕೃತ್ತಿನ ವೈಫಲ್ಯ, ಗಾಳಿ, ಮಲಬದ್ಧತೆ, ಆಮ್ಲೀಯತೆ ಇವೇ ಮುಂತಾದ ಮಾರಕ ರೋಗಗಳಿಂದ ಬಳಲುತ್ತಿರುವ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾನೆ. ಪ್ರಾಣ (ಆಮ್ಲಜನಕ)ದ ಔಷಧೀಯ ಗುಣಗಳನ್ನು ತಿಳಿಯುವ ನಿಟ್ಟಿನಲ್ಲಿ ಅವನು ನಡೆಸುತ್ತಿರುವ ಅವಿರತ ಪ್ರಯತ್ನಗಳು ಶೀಘ್ರದಲ್ಲಿಯೇ ಆಧುನಿಕ ವೈದ್ಯ ವಿಜ್ಞಾನದ ದಿಕ್ಕನ್ನೇ ಬದಲಿಸಲಿದೆ.

ರಾಮದೇವನ ಈ ಸರ್ವರೋಗ ನಿವಾರಕ ವಿಧಾನಗಳನ್ನು ಕಲಿಯಬೇಕಾದರೆ ಆತನು ನಡೆಸುವ ಶಿಬಿರಗಳಿಗೆ ಹೋಗಬಹುದು ಅಥವಾ ಅವನೇ ನಡೆಸುವ ಟಿವಿ ವಾಹಿನಿಯಿಂದ ಉಚಿತವಾಗಿ ನೋಡಿ ಕಲಿಯಬಹುದು! ಸಾಮುದಾಯಿಕ ಆರೋಗ್ಯಕ್ಕೆ ಸಮೂಹ ಯೋಗಾಭ್ಯಾಸ! ಯೋಗದ ಪ್ರಚಾರ [ಅಥವಾ ಖಾವಿ ಯಾ ಬಿಳಿವಸ್ತ್ರ, ಉದ್ದನೆಯ ಗಡ್ಡ ಮೀಸೆ, ತುಟಿಯಂಚಿನ ಕಿರುನಗೆಗಳು] ಎಷ್ಟೊಂದು ಪ್ರಭಾವಶಾಲಿಯೆಂದರೆ, ವಿದ್ಯಾವಂತರೆನಿಸಿಕೊಂಡವರೂ,
ದೊಡ್ಡ ವ್ಯಕ್ತಿಗಳೆನಿಸಿಕೊಂಡವರೂ ಈ ಹೇಳಿಕೆಗಳನ್ನೆಲ್ಲ ಯಾವುದೇ ಪ್ರಶ್ನೆಗಳಿಲ್ಲದೆ ತೆಪ್ಪಗೆ ಒಪ್ಪಿಕೊಳ್ಳುತ್ತಾರೆ. ತೀವ್ರ ಹೃದಯಾಘಾತ ಹಾಗೂ ಮಿದುಳಿನ ತೊಂದರೆಗೆ ಒಳಗಾಗಿ ಕೃತಕ ಉಸಿರಾಟವನ್ನು ಪಡೆಯುತ್ತಾ ತೀವ್ರ ನಿಗಾ ಘಟಕದಲ್ಲಿರುವ ಕೇಂದ್ರದ ಸಚಿವ ಪ್ರಿಯ ರಂಜನದಾಸ ಮುನ್ಶಿಯವರ ಚಿಕಿತ್ಸೆಗೆ ಅವರ ಸಂಬಂಧಿಗಳು ರಾಮದೇವನ ಮೊರೆ ಹೋಗಿ, ಅದಕ್ಕಾಗಿ ಪ್ರತಿಷ್ಠಿತ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯಿಂದ ಅವರನ್ನು ಬಿಡಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲುಗೊಳಿಸಿದ್ದು ಇತ್ತೀಚಿನ ನಿದರ್ಶನಗಳಲ್ಲೊಂದು. ಹಲವು ಕೇಂದ್ರ ಹಾಗೂ ಕೆಲ ರಾಜ್ಯ ಸರಕಾರಗಳ ಮಂತ್ರಿಗಳು ಶಾಲಾ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕಡ್ಡಾಯ ಯೋಗ ಶಿಕ್ಷಣವನ್ನು ಆರಂಭಿಸುವ ನಿರ್ಧಾರಕ್ಕೆ ಬಂದಿರುವುದೂ ಬಹುಷಃ ಇದೇ ಕಾರಣಕ್ಕಾಗಿರಬಹುದು. ಆದರೆ ಯೋಗಾಭ್ಯಾಸದಿಂದ ಆರೋಗ್ಯಪಾಲನೆಗೆ ಏನಾದರೂ ಪ್ರಯೋಜನಗಳಿರುವ ಬಗ್ಗೆ ನಿಸ್ಸಂದೇಹವಾದ ಪುರಾವೆಗಳೆಲ್ಲಿ?

ಉಸಿರಾಟ, ಹೃದಯದ ಗತಿ, ರಕ್ತದೊತ್ತಡ, ಸ್ವಾಯತ್ತ ನರಮಂಡಲ, ರೋಗರಕ್ಷೆ ಇವೇ ಮುಂತಾದ ದೈಹಿಕ ಕಾರ್ಯಗಳ ಮೇಲೆ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಮೇದಸ್ಸಿನ ತೊಂದರೆಗಳು, ಅರ್ಬುದ ರೋಗಗಳು, ಅಸ್ತಮಾ, ದಮ್ಮು, ಅಪಸ್ಮಾರ, ಭಾವನೆಗಳು, ಆತಂಕ, ಖಿನ್ನತೆ, ಇಚ್ಚಿತ್ತ ವಿಕಲತೆ, ಗೀಳು ರೋಗ, ಅವಧಾನ ನ್ಯೂನತೆ, ತಿನ್ನುವ ತೊಂದರೆಗಳು, ಕರುಳಿನ ರೋಗಗಳು, ಮೇದೋಜೀರಕಾಂಗದ ಉರಿಯೂತ, ಗರ್ಭಿಣಿಯರು, ಋತುಬಂಧ, ಸ್ನಾಯುವೇದನೆ, ಮಾದಕ ದ್ರವ್ಯವ್ಯಸನ, ಸಂಧಿವಾತ, ಬೆನ್ನು ನೋವು, ಥೈರಾಯ್ಡ್ ಕಾಹಿಲೆಗಳು, ನಿದ್ರೆ, ಪಾರ್ಶ್ವವಾಯು, ಮಲ್ಟಿಪ್ಲ್ ಸ್ಕ್ಲಿರೋಸಿಸ್, ಮುಂಗೈ ನೋವು, ಮೂತ್ರಜನಕಾಂಗದ ಕಾಹಿಲೆಗಳು, ವೃದ್ಧಾಪ್ಯ, ತಲೆಶೂಲೆ, ಕ್ಷಯ, ಫೈಲೇರಿಯ ಇತ್ಯಾದಿ ರೋಗಗಳ ಮೇಲೆ ಯೋಗಾಭ್ಯಾಸದ ಪರಿಣಾಮಗಳ ಬಗ್ಗೆ ಅಧ್ಯಯನಗಳನ್ನು ನಡೆಸಲಾಗಿದೆ. ಈ ಅಧ್ಯಯನಗಳಲ್ಲಿ ಒಂದು ನಿರ್ದಿಷ್ಟವಾದ ಯೋಗವಿಧಾನದ ಬದಲಾಗಿ ಅಷ್ಟಾಂಗ ಯೋಗ, ಸಹಜ ಯೋಗ, ಹಠ ಯೋಗ, ಕುಂಡಲಿನಿ ಯೋಗ, ಐಯ್ಯಂಗಾರ್ ಯೋಗ, ಸಿಲ್ವರ್ ಯೋಗ, ರೆಸ್ಟೊರೇಟಿವ್ ಯೋಗ, ಸಿದ್ಧ ಸಮಾಧಿ ಯೋಗ, ಸುದರ್ಶನ ಕ್ರಿಯೆ, ಇಂಟೆಗ್ರೇಟೆಡ್ ಯೋಗ ಇವೇ ಮುಂತಾದ ವಿಧಾನಗಳನ್ನೂ, ಶವಾಸನ, ಶೀರ್ಷಾಸನ, ಕಪಾಲಭಾತಿ, ಕುಂಜಲ ಕ್ರಿಯೆ, ಅನುಲೋಮ ವಿಲೋಮ ಪ್ರಾಣಾಯಾಮ, ಮುಖ ಭಸ್ತ್ರಿಕ ಮತ್ತಿತರ ಪ್ರತ್ಯೇಕ ಆಸನಗಳನ್ನೂ, ಮಂತ್ರ, ವಿಪಾಸನ, ಟ್ರಾಂಸೆಂಡೆಂಟಲ್ ಮೆಡಿಟೇಶನ್ ಮುಂತಾದ ಧ್ಯಾನ ವಿಧಗಳನ್ನೂ ಬಳಸಿಕೊಳ್ಳಲಾಗಿದೆ.

ಪ್ರಕಟಗೊಂಡಿರುವ ಎಲ್ಲಾ ಅಧ್ಯಯನಗಳ ವಿವರಗಳನ್ನು ಇಲ್ಲಿ ಒದಗಿಸಲು ಸಾಧ್ಯವಿಲ್ಲದಿರುವುದರಿಂದ, ಈ ಅಧ್ಯಯನಗಳ ಬಗ್ಗೆ ಲಭ್ಯವಿರುವ ವಿಮರ್ಶೆಗಳ ವರದಿಗಳ ಸಾರಾಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ. ಇವೆಲ್ಲವೂ, ಯೋಗಾಭ್ಯಾಸದ ಬಗ್ಗೆ ಹೆಚ್ಚಾಗಿ ಯೋಗ ತಜ್ಞರೇ ನಡೆಸಿದ ಅಧ್ಯಯನಗಳಲ್ಲಿ ಹಾಗೂ ಅವುಗಳ ಬಗ್ಗೆ ತಜ್ಞರು ನಡೆಸಿದ ವಿಶ್ಲೇಷಣೆಗಳಲ್ಲಿ ವ್ಯಕ್ತಗೊಂಡಿರುವ ಅಭಿಪ್ರಾಯಗಳೇ ಆಗಿದ್ದು ಲೇಖಕನ ಸ್ವಂತ ಅಭಿಪ್ರಾಯಗಳನ್ನು
ಯೋಗವೂ ಸೇರಿದಂತೆ ಐದು ಧ್ಯಾನ ವಿಧಾನಗಳ ಕುರಿತು 1956ರಿಂದ 2005ರವರೆಗೆ ಪ್ರಕಟಗೊಂಡ 813 ಸಂಶೋಧನಾ ಬರಹಗಳನ್ನು ವಿಶ್ಲೇಷಿಸಿ ಮರಿಯಾ ಒಸ್ಪಿನಾ ಮತ್ತಿತರರು ಪ್ರಕಟಿಸಿರುವ ವರದಿಯನುಸಾರ, ಈ ಅಧ್ಯಯನಗಳ ಒಟ್ಟಾರೆ ಗುಣಮಟ್ಟವು ಕಳಪೆಯಾಗಿದ್ದು, ಬಹುಪಾಲು ಬರಹಗಳಲ್ಲಿ ಅಧ್ಯಯನಗಳ ಸ್ವರೂಪದ ಬಗ್ಗೆ ಪಾರದರ್ಶಕವಾದ ವಿವರಣೆಗಳೇ ಲಭ್ಯವಿರಲಿಲ್ಲ. ಯೋಗ ಅಥವಾ ಟ್ರಾಂಸೆಂಡೆಂಟಲ್ ಮೆಡಿಟೇಶನ್ ಗಳಿಂದ ಅಧಿಕ ರಕ್ತದೊತ್ತಡ, ಬೊಜ್ಜು ಹಾಗೂ ಕೊಲೆಸ್ಟರಾಲ್ ಮೇಲೆ ಯಾವುದೇ ಗಣನೀಯವಾದ ಪರಿಣಾಮಗಳೂ ಈ ಅಧ್ಯಯನಗಳಲ್ಲಿ ಕಂಡುಬರಲಿಲ್ಲ. ಆದ್ದರಿಂದ ಲಭ್ಯವಿರುವ ಸಂಶೋಧನೆಗಳ ಆಧಾರದಲ್ಲಿ ಯೋಗಾಭ್ಯಾಸವು ಈ ಕಾಹಿಲೆಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯೆಂದು ಹೇಳಲಾಗದು.
ಯೋಗ ಮತ್ತು ಮಧುಮೇಹ:

ಯೋಗಾಭ್ಯಾಸದಿಂದ ಮಧುಮೇಹ ನಿಯಂತ್ರಣದ ಮೇಲಾಗುವ ಪರಿಣಾಮಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು, ಇವುಗಳನ್ನು ವಿಶ್ಲೇಷಿಸಿ ಇನ್ನೆಸ್ ಮತ್ತಿತರರು, ಇನ್ನೆಸ್ ಹಾಗೂ ವಿನ್ಸೆಂಟ್, ಯಾಂಗ್, ಅಲ್ಜಸಿರ್ ಮತ್ತು ಅಲೆಕ್ಸಾಂಡರ್ ಅವರೆಲ್ಲ ತಯಾರಿಸಿರುವ ವರದಿಗಳಲ್ಲಿ, ಈ ಅಧ್ಯಯನಗಳು ಅಲ್ಪ ಕಾಲಾವಧಿಯವುಗಳಾಗಿದ್ದು, ಮಧುಮೇಹ ನಿಯಂತ್ರಣದ ಮೇಲೆ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿಯು ಅವುಗಳಲ್ಲಿ ಲಭ್ಯವಿಲ್ಲದಿರುವುದರಿಂದ ಯೋಗಾಭ್ಯಾಸದಿಂದ ಮಧುಮೇಹದ ಚಿಕಿತ್ಸೆಯಲ್ಲಿ ಆಗಬಹುದಾದ ಪ್ರಯೋಜನಗಳ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಾಗದೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಅಧ್ಯಯನಗಳಲ್ಲಿ ಭಾಗವಹಿಸಿದವರಿಗೆ ಆಗಿರಬಹುದಾದ ತೊಂದರೆಗಳ ಬಗೆಗೆ ಯಾವುದೇ ಮಾಹಿತಿಯಿಲ್ಲದಿರುವುದನ್ನೂ ವಿಶ್ಲೇಷಕರು ಗುರುತಿಸಿದ್ದಾರೆ. ಈ ಕಾರಣಗಳಿಂದಾಗಿ ಮಧುಮೇಹದ ಚಿಕಿತ್ಸೆಯಲ್ಲಿ ಯೋಗಾಭ್ಯಾಸವನ್ನು ಬಳಸಬಹುದೆನ್ನುವ ಸಲಹೆಯನ್ನು ನೀಡುವ ಮೊದಲು ಸಾಕಷ್ಟು ದೊಡ್ದದಾದ, ದೀರ್ಘಕಾಲೀನ ಅಧ್ಯಯನಗಳ ಅಗತ್ಯವಿದೆಯೆನ್ನುವುದು ಅವರೆಲ್ಲರ ಅಭಿಪ್ರಾಯವಾಗಿದೆ.

ಯೋಗ ಮತ್ತು ಕ್ಯಾನ್ಸರ್:

ಕ್ಯಾನ್ಸರ್ ರೋಗಿಗಳಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ನಡೆಸಲಾಗಿರುವ ಅಧ್ಯಯನಗಳನ್ನು ಸ್ಮಿತ್ ಹಾಗೂ ಪುಕಾಲ್ [17] ವಿಶ್ಲೇಷಿಸಿದ್ದಾರೆ. ಈ ಅಧ್ಯಯನಗಳಲ್ಲಿ ಭಾಗಿಗಳಾಗಿದ್ದವರು ಬಹುತೇಕ ಮಹಿಳೆಯರಾಗಿದ್ದು, ಸ್ತನದ ಕ್ಯಾನ್ಸರ್ ನಿಂದ ಬಳಲುತ್ತಿದ್ದವರಾಗಿದ್ದರು. ಈ ಅಧ್ಯಯನಗಳ ವೈಧಾನಿಕ ಗುಣಮಟ್ಟಗಳು ವಿಭಿನ್ನವಾಗಿದ್ದುವಲ್ಲದೆ, ಬಳಸಲಾದ ಯೋಗವಿಧಾನದಲ್ಲೂ ವ್ಯತ್ಯಾಸಗಳಿದ್ದವು. ಈ ಕಾರಣಗಳಿಂದಾಗಿ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯೋಗವನ್ನು ಬಳಸಬಹುದೆನ್ನುವ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳುವಂತಿಲ್ಲವೆಂದು ಸ್ಮಿತ್ ಹಾಗೂ ಪುಕಾಲ್ ಅಭಿಪ್ರಾಯ ಪಡುತ್ತಾರೆ.

ಯೋಗ ಮತ್ತು ಅಧಿಕ ರಕ್ತದೊತ್ತಡ:

ಅಧಿಕ ರಕ್ತದೊತ್ತಡದ ನಿಯಂತ್ರಣದಲ್ಲಿ ಯೋಗದ ಪಾತ್ರದ ಕುರಿತು ನಡೆಸಲಾಗಿರುವ ಅಧ್ಯಯನಗಳಲ್ಲಿ ಕೇವಲ ರಕ್ತದೊತ್ತಡದ ಮೇಲಿನ ಪರಿಣಾಮಗಳನ್ನಷ್ಟೇ ಪರಿಗಣಿಸಲಾಗಿದೆಯಲ್ಲದೆ, ರೋಗಿಯ ಮೇಲಾಗುವ ಒಟ್ಟಾರೆ ಪರಿಣಾಮಗಳ ಬಗೆಗಾಗಲೀ, ಸಾವು ಅಥವಾ ಇತರ ತೊಂ
ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಆದ್ದರಿಂದ ಕೇವಲ ಯೋಗವನ್ನಷ್ಟೇ ಬಳಸಿ ಅಧಿಕ ರಕ್ತದೊತ್ತಡದ ಚಿಕಿತ್ಸೆಯನ್ನು ಮಾಡುವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಹಾಗೂ ಹಾಗೆ ಮಾಡುವುದಿದ್ದರೆ ರಕ್ತದೊತ್ತಡವನ್ನೂ, ಅದರಿಂದಾಗ ಬಹುದಾದ ತೊಂದರೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರಬೇಕಾದುದು ಅತ್ಯಗತ್ಯವೆನ್ನುವುದು ಡೋಷ್ ಅವರ ಅಭಿಮತವಾಗಿದೆ.

ಆತಂಕ ಹಾಗೂ ಖಿನ್ನತೆಗಳಿಗೆ ಯೋಗ ಚಿಕಿತ್ಸೆ:

ಆತಂಕ ಮತ್ತು ಖಿನ್ನತೆಗಳ ಚಿಕಿತ್ಸೆಯಲ್ಲಿ ಯೋಗಾಭ್ಯಾಸದ ಬಳಕೆಯ ಬಗೆಗೆ ನಡೆಸಲಾದ ಅಧ್ಯಯನಗಳನ್ನು ವಿಶ್ಲೇಷಿಸಿದ ಪಿಲ್ಕಿಂಗ್ಟನ್ ಮತ್ತಿತರರು, ಜರ್ಮ್ ಮತ್ತಿತರರು, ಕಿರ್ಕ್ ವುಡ್ ಮತ್ತಿತರರು ಹಾಗೂ ಕೊಕ್ರೇನ್ ವಿಮರ್ಶಕರು ಈ ಅಧ್ಯಯನಗಳಲ್ಲಿ ಏಕರೂಪತೆಯ ಕೊರತೆ, ಕಳಪೆ ಗುಣಮಟ್ಟ, ಅಲ್ಪ ಕಾಲದ ವಿವರಗಳು ಹಾಗೂ ಅಡ್ಡ ಪರಿಣಾಮಗಳ ಬಗ್ಗೆ ಸೂಕ್ತ ಮಾಹಿತಿಯ ಕೊರತೆಗಳಿಂದಾಗಿ ಯೋಗಾಭ್ಯಾಸದಿಂದ ಆತಂಕ ಮತ್ತು ಖಿನ್ನತೆಗಳ ಚಿಕಿತ್ಸೆಯಲ್ಲಿ ಯಾವುದೇ ಪ್ರಯೋಜನವಾಗಬಹುದೆಂಬುದನ್ನು ನಿಖರವಾಗಿ ಹೇಳುವಂತಿಲ್ಲವೆಂಬ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.

ಅಸ್ತಮಾಕ್ಕೆ ಯೋಗಚಿಕಿತ್ಸೆ:

ಅಸ್ತಮಾ ಚಿಕಿತ್ಸೆಯಲ್ಲಿ ಬದಲಿ ಪದ್ಧತಿಗಳ ಪ್ರಯೋಗವು ಸಾಮಾನ್ಯವಾಗಿದ್ದು 30-40%ಕ್ಕೂ ಹೆಚ್ಚು ರೋಗಿಗಳು ಒಂದಲ್ಲೊಂದು ಬದಲಿ ಚಿಕಿತ್ಸೆಯ ಮೊರೆ ಹೋಗಿರುತ್ತಾರೆ. ಅಸ್ತಮಾ ಚಿಕಿತ್ಸೆಯಲ್ಲಿಯೂ ಯೋಗ ಹಾಗೂ ಇನ್ನಿತರ 'ಉಸಿರಾಟ ಚಿಕಿತ್ಸೆ'ಗಳನ್ನು ಸಾಕಷ್ಟು ಜನ ಪ್ರಯತ್ನಿಸುತ್ತಾರೆ.

 

Author : ಸೀಮಾ ಎಸ್ ಭಟ್

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited