Untitled Document
Sign Up | Login    
'ಜೀವಿ' ಗೆ ಶತಕ : ಕನ್ನಡಕ್ಕೆ ಪುಳಕ

ಬ್ಯಾಂಗಲೋರ್ ವೇವ್ಸ್ ಜೊತೆಯಲ್ಲಿ ಪ್ರೊ.ಜಿ.ವಿ.

ನಾಡೋಜ, ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯ ಅವರಿಗೆ ತೊಂಬತ್ತೊಂಬತ್ತು ವರ್ಷ ತುಂಬಿ ನೂರನೆ ವರ್ಷ ಗುರುವಾರ (ಆಗಷ್ಟ್ 23) ಪ್ರಾರಂಭ ಅನ್ನೋದು ಲೆಕ್ಕಕ್ಕೆ ಮಾತ್ರ ಸತ್ಯ.. ಕಣ್ಣಾರೆ ಕಂಡಾಗ ನಂಬೋದು ಕಷ್ಟ.

ಅವರ ದೈಹಿಕ, ಬೌದ್ಧಿಕ ಚೈತನ್ಯದ ಸಾರ್ಥಕ ಶತಕವು ಸಾಹಿತ್ಯ, ಶಿಕ್ಷಣ, ಶಬ್ದಶಾಸ್ತ್ರ ಇಂಥ ವಿದ್ವತ್ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದಲ್ಲ. ಸಮಾಜಸೇವೆ, ಸಂಘಟನೆಯ ಕೆಲಸಗಳು ಅವರಿಗೆ ಇಷ್ಟ.

ಅರ್ಧ ಶತಮಾನ ದಾಟಿರುವ ವಿಶ್ವೇಶ್ವರಪುರದ ಪ್ರಸಿದ್ಧ ರಾಮಕೃಷ್ಣ ವಿದ್ಯಾರ್ಥಿ ನಿಲಯ ಅವರ ಅಧ್ಯಕ್ಷತೆಯಲ್ಲಿ ಶಿಸ್ತುಬದ್ಧವಾಗಿ ಬೆಳೆದಿರುವ ಸಂಸ್ಥೆ..

ಜಯನಗರದ ಜಯರಾಮ ಸೇವಾ ಮಂಡಲಿ ಅವರ ಅಕ್ಕರೆಯ ಇನ್ನೊಂದು ಸೇವಾಸಂಸ್ಥೆ.

ಅವರು ಸಂಸ್ಥಾಪಕ ಸದಸ್ಯರಾಗಿರುವ ರಾಜ್ಯದ ದೊಡ್ಡ ಸಹಕಾರಿ ಬ್ಯಾಂಕು ನ್ಯಾಷನಲ್ ಕೋ ಅಪರೇಟಿವ್ ಬ್ಯಾಂಕ್ ಅವರ ಮೇಲಿನ ಅಭಿಮಾನದಿಂದ ಕಳೆದ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಸನ್ಮಾನಿಸಿತು. ಆಗ ಸಲ್ಲಿಸಿದ ಬಿನ್ನವತ್ತಳೆಯಲ್ಲಿ ನಿರೂಪಿತವಾದ ಅವರ ತುಂಬು ಬದುಕಿನ ಚಿತ್ರವನ್ನು ಬೆಂಗಳೂರ್ ವೇವ್ಸ್ ಇಲ್ಲಿ ಪ್ರಕಟಿಸುತ್ತಿದೆ.

ಕನ್ನಡದ ಶತಮಾನದ ಹಿರಿಯ ಚೇತನಕ್ಕೆ ಅಭಿವಂದನೆ. ಅವರು ಬೆಂಗಳೂರ್ ವೇವ್ಸ್ ಗೆನೀಡಿರುವ ಸಂದರ್ಶನ ಮತ್ತು ಸಂದೇಶದಿಂದ ನಾವು ಧನ್ಯರು.

ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಸಂಘಟನೆಗಳಲ್ಲಿ ಪಾಂಡಿತ್ಯ, ದೂರದರ್ಶಿತ್ವ ಮತ್ತು ಸಮತೂಕದ ವ್ಯಕ್ತಿತ್ವಕ್ಕೆ ಹೆಸರಾದ ನಾಡೋಜ ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯನವರೇ,

ನಾಲ್ಕು ತಲೆಮಾರುಗಳ ದೀರ್ಘ ಕಾಲಾವಧಿಯಲ್ಲಿ ನಮ್ಮ ನಡುವೆ ಹಿರಿಯರಾಗಿ ಹಂತ ಹಂತವಾಗಿ ನಿರಂತರವಾಗಿ ಉತ್ತುಂಗ ಸಾಧಕರಾಗಿ ಸಾಮಾಜಿಕ, ಸಾಂಸ್ಕೃತಿಕ ಭೂಷಣರಾಗಿದ್ದೀರಿ.

ವಿಧ ವಿಧ ಸಭೆ, ಸಮ್ಮೇಳನ, ಉತ್ಸವ ಸಂಭ್ರಮಗಳ ಅಧ್ಯಕ್ಷತೆ, ಮುಖ್ಯ ಭಾಷಣ ಇತ್ಯಾದಿ ಹಿರಿತನಕ್ಕೆ ಅತ್ಯಧಿಕ ಅಪೇಕ್ಷಿತ ಅತಿಥಿಯಾಗಿ ಶ್ರೋತೃಗಳ ಮನೋವಿಕಾಸಕಾರಕರಾಗಿ ,ದಣಿವರಿಯದ ಪೂರ್ಣ ಜೀವಿ ಎಂಬ ಸಾರ್ವತ್ರಿಕ ಮಾನ್ಯ ನಿಜಬಿಂಬವಾಗಿದ್ದೀರಿ.
ಕನ್ನಡ ನವೋದಯ- ನವ್ಯ- ನವ್ಯೋತ್ತರ ಭಾಷೆ, ಸಾಹಿತ್ಯಗಳೆಲ್ಲದರೊಡನೆ ಒಡನಾಡಿರುವ ತಾವು, ಶಾಸನಗಳ ಕನ್ನಡದಿಂದ ಪೂರ್ವ ಹಳಗನ್ನಡ, ಪೂರ್ಣ ಹಳಗನ್ನಡ, ವಚನ, ನಡುಗನ್ನಡ, ಹೊಸಗನ್ನಡ, ಈಗಿನ ಬೇಸುರಿಯ ಕಂಗ್ಲಿಷ್ ಅಥವಾ ಸಂಭಾವ್ಯ ಇಂಗ್ಲನ್ನಡದ ನಾಡಿಮಿಡಿತ ಅರಿತ ಪಂಡಿತರು.

ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ (ತಾಯಿಯ ತವರು) ೨೩ ಆಗಸ್ಟ್ ೧೯೧೩ರಂದು ಹುಟ್ಟಿದೀರಿ. ನಿಮ್ಮ ತಂದೆ ಗಂಜಾಂ ತಿಮ್ಮಣ್ಣಯ್ಯ ಮೈಸೂರು ಅರಮನೆ ವಿದ್ವಾಂಸರು. ಸಂಸ್ಕೃತ, ಕನ್ನಡಗಳಲ್ಲಿ ದೊಡ್ಡ ಪಂಡಿತರು ಮತ್ತು ವೇದೋಪನಿಷತ್ತುಗಳಲ್ಲಿ ಪಾರಂಗತರು. ಪುರಾಣ ಕಥಾವಳಿ ಎನ್ನುವ ಮಾಸಪತ್ರಿಕೆ ಸ್ಥಾಪಿಸಿ ಅದರಲ್ಲಿ ಶಿವಪುರಾಣ, ವಿಷ್ಣುಪುರಾಣ ಮೊದಲಾದ ಪುರಾಣಗಳನ್ನು ಅನುವಾದಿಸಿ ಪ್ರಕಟಿಸುತ್ತಿದ್ದರು. ರಘುವೀರ ಚರಿತೆ ಎನ್ನುವ ನಾಟಕವನ್ನು ರಚಿಸಿದ್ದಾರೆ. ಮಾಲತೀ ಮಾಧವ ನಾಟಕವನ್ನು ಅನುವಾದ ಮಾಡಿದ್ದಾರೆ. ನೀವು ಎಂ.ಎ., ಬಿ.ಟಿ. ಮುಗಿಸಿ ಮೈಸೂರು- ಬೆಂಗಳೂರುಗಳ್ಲಲಿ ಅಧ್ಯಾಪಕ ವೃತ್ತಿ ಮಾಡಿದ್ದೀರಿ.

ನೀವು ಸೂಟುಧಾರಿ ಕನ್ನಡ ಮೇಸ್ಟ್ರಾಗಿ ಸಮಕಾಲೀನರಾಗುತ್ತಲೇ ಭಾಷಾ ಬೋಧನೆಯ ಪೂರ್ವ ವಿವೇಕದ ನೆಲೆಯನ್ನು ವಿಸ್ತರಿಸಿದವರು. ಕನ್ನಡ ಉನ್ನತ ಅಧ್ಯಯನದ ಪ್ರೇರಕರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಮುಂದೆ ಪರಿಷತ್ತಿನ ಆವರೆಗಿನ ಅತಿಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಮಾಡಿದ ಕನ್ನಡದ ಕೆಲಸಕ್ಕೆ ಹೋಲಿಕೆ ಇಲ್ಲ. ಆದರೆ ಅತಿ ವಿಳಂಬವಾಗಿ ಈ ವರ್ಷ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ತಾವು ಅತಿ ಹಿರಿಯ ವಯಸ್ಸಿನಲ್ಲಿ ಈ ಗೌರವ ಪಡೆದವರಾಗಿದ್ದೀರಿ. ೪೦ ವರ್ಷದಿಂದ ಬೀದರ್, ಚಿಕ್ಕಮಗಳೂರು, ಶೃಂಗೇರಿ, ಶ್ರವಣ ಬೆಳಗೊಳ, ಧರ್ಮಸ್ಥಳ, ಶ್ರೀರಂಗಪಟ್ಟಣ, ಮೂಡಬಿದ್ರಿ, ಆಗ್ರಾ, ಕೆನಡಗಳಲ್ಲಿ ನಡೆದ ತಾಲೂಕು, ಜಿಲ್ಲಾ ಮತ್ತು ವಿಶೇಷ ನೆಲೆಯ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷತೆ ವಹಿಸಿರುವ ನೀವು, ಅಧ್ಯಕ್ಷರಾಗಿ, ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ಸಾಹಿತ್ಯಗೋಷ್ಠಿಗಳ ಸಂಖ್ಯೆ ಎಷ್ಟು ನೂರುಗಳೋ ಗೊತ್ತಿಲ್ಲ.
ಹಲವು ಪಂಡಿತ ಕೃತಿಗಳ ರಚನೆ, ಗದ್ಯ-ಪದ್ಯಗಳ ಅನುವಾದ, ಮಕ್ಕಳ ಪುಸ್ತಕಗಳು, ನಿಘಂಟುಗಳೂ ಸೇರಿ ಅನೇಕ ಗ್ರಂಥಗಳ ಸಂಪಾದನೆ- ಇವೆಲ್ಲ ಸೇರಿ ೧೩೫ ಪುಸ್ತಕಗಳನ್ನು ರಚಿಸಿದ್ದೀರಿ.(ಪರಿಷತ್ತಿನ ಕಾರ್ಯಕರ್ತರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಎಂಟು ಸಂಪುಟಗಳಲ್ಲಿರುವ ಮಹಾನಿಘಂಟಿನ ಪ್ರಧಾನ ಸಂಪಾದಕರಾಗಿ) ಅತಿ ದೀರ್ಘ ಕಾಲ ಪರಿಷತ್ತಿನ ಪರಿಚರ್ಯೆ ನಿರ್ವಹಿಸಿದ್ದೀರಿ.

ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಂಪುಟಗಳ ಪ್ರಧಾನ ಸಂಪಾದಕರಾಗಿ, ಎರವಲು ಪದಕೋಶದಂಥ ಅನೇಕ ನಿಘಂಟುಗಳ ಕರ್ತೃವಾಗಿ, ಇಗೋ ಕನ್ನಡ ಅಂಕಣದ ಮೂಲಕ ಕನ್ನಡ ಪದಗಳ ಸೊಗಡಿನ ಪರಿಚಾರಕರಾಗಿದ್ದ ನೀವು, ಇಂದಿಗೂ ಅದ್ಭುತ ಸ್ಮರಣ ಶಕ್ತಿಯಿಂದ, ತರುಣ ಉತ್ಸಾಹದಿಂದ ಓದು, ಸಂಶೋಧನೆ, ಕಿರಿಯರಿಗೆ ಮಾರ್ಗದರ್ಶನದಂತಹ ಕಾರ್ಯಗಳಲ್ಲಿ ನಿರತರಾಗಿದ್ದೀರಿ.

೫೦ ವರ್ಷ ಕನ್ನಡ ನಿಘಂಟು ರಚನೆಯಲ್ಲಿ ತಪಸ್ಸಿನಂತೆ ತೊಡಗಿದ ನೀವು ೧೯೩೦ರಿಂದ ಯಾವುದೇ ಕನ್ನಡ ಗ್ರಂಥ ಪ್ರಕಟವಾಗಲಿ, ನಿಮ್ಮ ಗಮನಕ್ಕೆ ಬಂದ ಹಿಂದಿನ ಹಸ್ತಪ್ರತಿಗಳಾಗಲಿ ಅವುಗಳಲ್ಲಿರುವ ಶಬ್ದಗಳ ಸ್ವರೂಪ ಮತ್ತು ಬಳಕೆಯನ್ನು ಗಮನಿಸುತ್ತ ಅಪಾರ ಶಬ್ದ ಭಂಡಾರ ಬೆಳೆಸಿದ್ದೀರಿ.

ನೀವು ಸ್ನೇಹಿತರ, ಸಹಾಧ್ಯಾಪಕರ, ಸಾಹಿತ್ಯ ಕೃಷಿಕರ ಪುಸ್ತಕಗಳಿಗೆ ಬರೆದಿರುವ ಮುನ್ನುಡಿಗಳಿಗೆ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಪತ್ರಿಕೆಗಳಿಗೆ ಬರೆದಿರುವ ವಿಮರ್ಶೆಗಳಿಗೆ ಲೆಕ್ಕವಿಲ್ಲ.
ಸುಮಾರು ೫೦ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಉಚಿತವಾಗಿ ಊಟ ವಸತಿಗಳನ್ನು ಒದಗಿಸುವ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ ಎಂಬ ಸಂಸ್ಥೆಯ ಅಧ್ಯಕ್ಷರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೀರಿ.

ಇಂದು ಸಾವಿರಾರು ಕನ್ನಡಿಗರಿಗೆ ಅದರಲ್ಲೂ ಅಧ್ಯಾಪಕರಿಗೆ ಮತ್ತು ಬರಹಗಾರರಿಗೆ ಅವರು ನಾಡಿನ ಯಾವ ಮೂಲೆಯಲ್ಲೇ ಇರಲಿ, ಯಾವುದಾದರೂ ಕನ್ನಡ ಪದದ ಅರ್ಥ, ಸ್ವರೂಪ ಮತ್ತು ಬಳಕೆ ಕುರಿತು ಸಂದೇಹ ಉಂmದಲ್ಲಿ ಅದರ ಪರಿಹಾರಕ್ಕೆ ನೆನಪಿಗೆ ಬರುವ ಹೆಸರು ನಿಮ್ಮದು. ನೀವು ಕನ್ನಡ ಸಹಾಯವಾಣಿ ಎನಿಸಿದ್ದೀರಿ. ಸಾವಿರಾರು ಜನ ನಿಮ್ಮಿಂದ ಪತ್ರ, ದೂರವಾಣಿ, ಅಥವಾ ಮುಖತಃ ಭೇಟಿ ಮೂಲಕ ತಿಳಿವಳಿಕೆ ಪಡೆಯುತ್ತಾರೆ. ಈ ಕಾರ್ಯದಲ್ಲಿ ನಿಮಗೆ ಎಂದೂ ಕುಂದದ ಆಸಕ್ತಿ. ೯೯ರ ವಯಸ್ಸಿನಲ್ಲೂ ನಿಮ್ಮ ಕ್ರಿಯಾಶೀಲ ಚೈತನ್ಯಕ್ಕೆ ನೀವೇ ಸಾಟಿ.

ನೀವು ಒಳಾಂಗಣ-ಹೊರಾಂಗಣ ಕ್ರೀಡಾಪಟು. ಕಾವೇರಿ ನದಿಯಲ್ಲಿ ಈಜಿದವರು, ಸ್ಕೌಟ್ ತರಬೇತಿ ಪಡೆದವರು. ಬೋಧನೆ, ಸಂಶೋಧನೆ, ಅನುವಾದ, ವಿಮರ್ಶೆ, ನಿಘಂಟು ರಚನೆ, ಶಿಕ್ಷಣ-ಸಾಹಿತ್ಯ-ಸೇವಾ ಸಂಸ್ಥೆಗಳ ನಿರ್ವಹಣೆ; ಹೀಗೆ ನಿಮ್ಮ ಕಾರ್ಯಕ್ಷೇತ್ರ ವಿಸ್ತಾರ. ದೇಶ ನೋಡಿದವರು, ಕೋಶ ರಚಿಸಿದವರು. ದೇಹ, ಹಾಗೂ ಹೃದಯ-ಮನಸ್ಸುಗಳನ್ನು ತುಂಬ ಆರೋಗ್ಯಕರವಾಗಿ ಇಟ್ಟುಕೊಂಡ ಆದರ್ಶ ಜೀವಿ.

ಶಂಬಾ, ಸೇಡಿಯಾಪು, ಕಾರಂತ, ಮುದ್ದಣ, ಮಾಸ್ತಿ, ಗೊರೂರು, ಅನಕೃ, ತಾಳ್ತಜೆ, ಗೋಕಾಕ್ ಹೆಸರಿನ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ , ಸುವರ್ಣ ಕರ್ನಾಟಕ ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ ಇವು ತಾವು ಪಡೆದಿರುವ ಪುರಸ್ಕಾರಗಳಲ್ಲಿ ಕೆಲವು ಮಾತ್ರ.

ನಿಮ್ಮನ್ನು ಅಭಿನಂದಿಸುವ ಸಾಹಿತ್ಯ ಜೀವಿ ಶಬ್ದಸಾಗರ ವಿದ್ಯುಜ್ಜೀವಿತ ಜೀವಭಾವ ನಿಘಂಟು ಬ್ರಹ್ಮಜೀವಿ ಇತ್ಯಾದಿ ಗ್ರಂಥಗಳನ್ನು ವಿದ್ವಾಂಸರು, ಶಿಷ್ಯರು ಅಭಿಮಾನಿಗಳು ಪ್ರಕಟಿಸಿದ್ದಾರೆ.

ನಮ್ಮ ಬ್ಯಾಂಕಿನ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿ ನಿರಂತರವಾಗಿ ಹಿತೈಷಿಗಳಾಗಿರುವ ನಿಮ್ಮನ್ನು ಇಂದು ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಅತ್ಯಂತ ಗೌರವಪೂರ್ವಕವಾಗಿ ಅಭಿನಂದಿಸಿ ಆಶೀರ್ವಾದವನ್ನು ಕೋರುತ್ತೇವೆ.

ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸರ್ವ ಸದಸ್ಯರು,
ನ್ಯಾಷನಲ್ ಕೋ ಅಪರೇಟಿವ್ ಬ್ಯಾಂಕ್.

 

Author :  

More Articles From Event

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited