Untitled Document
Sign Up | Login    
ಯಡಿಯೂರಪ್ಪಗೆ ಪಟ್ಟ, ಕಾಂಗ್ರೆಸ್ಸಿಗೆ ಸಂಕಷ್ಟ

ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ.ಯಡಿಯೂರಪ್ಪ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗಂತೂ ಪಕ್ಷ ಅಧಿಕಾರಕ್ಕೆ ಬಂದು ಬಿ.ಎಸ.ವೈ ಮುಖ್ಯಮಂತ್ರಿಯಾದಷ್ಟೇ ಉತ್ಸಾಹ, ಸಂಭ್ರಮ! 2013ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರು ಆಯ್ಕೆಯಾದ ನಂತರ ಬಹುಶ: ಒಬ್ಬ ವ್ಯಕ್ತಿ, ನಾಯಕ ಪಕ್ಷದ ಚುಕ್ಕಾಣಿ ಹಿಡಿಯಲು ಕಾರ್ಯಕರ್ತರು ಹಾತೊರೆದಿರುವುದು ಇದೇ ಮೊದಲಿರಬಹುದೇನೋ. ಕರ್ನಾಟಕದಲ್ಲಿ ಬಿಜೆಪಿಯನ್ನು ಪುನ: ಅಧಿಕಾರಕ್ಕೆ ತರಲು ಯಡಿಯೂರಪ್ಪನವರ ಅವಶ್ಯಕತೆ ಅಷ್ಟೊಂದಿದೆಯೆ? ರಾಜ್ಯ ಬಿಜೆಪಿಗೆ ಅವರ ನಾಯಕತ್ವ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಅವರ ಪ್ರಭಾವ ಇದೆಯೇ?

ಹೌದು. ಕಾಂಗ್ರೆಸ್ ಸರಕಾರ ತನ್ನ ಅಧಿಕಾರಾವಧಿಯ ಪ್ರಥಮ ದಿನಂದಿಂದಲೇ ಹಳಿತಪ್ಪಿದ ರೈಲಿನಂತಿದ್ದು, ಯಾವ ದಿಕ್ಕಿಗೆ ಚಲಿಸುತ್ತಿದೆ ಎನ್ನುವುದು ಬಹುಶ: ಜನರಿಗೆ ಬಿಡಿ, ಸರಕಾರ ನಡೆಸುವವರಿಗೂ ತಿಳಿಯದಂತಿದೆ. ಆದರೂ ಸರಕಾರ ತಪ್ಪು ಹೆಜ್ಜೆ ಇಟ್ಟಾಗಲೆಲ್ಲ ಎಚ್ಚರಿಸಿ, ಅದರ ವಿರುದ್ಧ ಜನಾಭಿಪ್ರಾಯ ಒಗ್ಗೂಡಿಸುವಲ್ಲಿ ರಾಜ್ಯ ಬಿಜೆಪಿ ನಾಯಕತ್ವ ಸಂಪೂರ್ಣವಾಗಿ ಸೋತಿರುವುದು ಕಾರ್ಯಕರ್ತರಲ್ಲಿ ಇನ್ನಿಲ್ಲದ ಅಸಮಾಧಾನ, ನಿರುತ್ಸಾಹ ಉಂಟುಮಾಡಿತ್ತು. ನಾಯಕರು ಒಳಜಗಳದಲ್ಲೇ ತಲ್ಲೀನರಾಗಿದ್ದು, ಜನರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿ ಸರಕಾರಕ್ಕೆ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಯಾವುದೇ ಗಹನವಾದ ಕೆಲಸದ ಕಡೆಗೆ ರಾಜ್ಯ ಬಿಜೆಪಿ ನಾಯಕರು ಗಮನಹರಿಸದಿರುವುದು ಸರ್ವವೇದ್ಯ. ಇದು ಬಿಜೆಪಿ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಭ್ರಮನಿರಸನ ತಂದಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿಯ ಉಳಿವಿಗೆ, ಬೆಳವಣಿಗೆಗೆ, ತನ್ಮೂಲಕ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರು ನಾಯಕತ್ವ ವಹಿಸಿಕೊಳ್ಳುವುದು ಅನಿವಾರ್ಯ ಎನ್ನುವುದು ಎಲ್ಲರ ಅಭಿಮತವಾಗಿತ್ತು. ಯಾವುದೇ ಮಹತ್ವದ ಸಾಧನೆಗೆ ಕಾರಣರಾಗದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಯಡಿಯೂರಪ್ಪನವರೇ ಆ ಸ್ಥಾನವನ್ನು ತುಂಬಬೇಕೆನ್ನುವುದು ಬಹುಜನರ ಅಪೇಕ್ಷೆಯಾಗಿತ್ತು. ಅವರ ವಿರುದ್ಧ ಕೇಂದ್ರದ ಸಚಿವರೊಬ್ಬರು ಸೇರಿದಂತೆ ಹಲವರು ಅಹೋರಾತ್ರಿ ನಡೆಸಿದ ಪ್ರಯತ್ನಗಳು ನಿಶ್ಪಲಗೊಂಡು ಕೊನೆಗೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿತು.

ಪಕ್ಷದೊಳಗಿನ ಸಮರ

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರಿಗೆ ಬಲವಾದ ಸ್ಪರ್ಧಿಗಳು ಪಕ್ಷದಲ್ಲಿ ಇಲ್ಲವಾದರೂ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ದೊರಕುವುದು ಹಲವರಿಗೆ ಗಂಟಲಲ್ಲಿ ಇಳಿಯದ ಕಡುಬಾಗಿತ್ತು. ಅಧ್ಯಕ್ಷರಾದರೆ ಅವರು ತಮ್ಮ ಚೇಲಾಗಳಿಗೇ ಮಣೆಹಾಕಬಹುದು ಮತ್ತು ಮುಂದಿನ ಚುನಾವಣೆಯಲ್ಲಿ ಆಯಕಟ್ಟಿನ ಸ್ಥಾನಗಳಿಗೆ ಬಿ.ಎಸ್.ವೈ ತಮ್ಮ ಹಿತೈಷಿಗಳನ್ನೇ ನಿಲ್ಲಿಸಬಹುದಾದ್ದರಿಂದ ನಮ್ಮ ವರ್ಚಸ್ಸು, 'ನಮ್ಮವರ' ಅಯ್ಕೆಗಳಿಗೆ ತೊಡಕಾಗಬಹುದು ಎನ್ನುವುದು ಹಿರಿತಲೆಗಳ ಲೆಕ್ಕಾಚಾರ. ಅದರಲ್ಲೂ ಹಲವು ವರ್ಷಗಳಿಂದ ಯಡಿಯೂರಪ್ಪನವರಿಗೆ ಮಗ್ಗುಲ ಮುಳ್ಳಾಗಿಯೇ ಇರುವ ಕೆಂದ್ರ ಸಚಿವರೊಬ್ಬರಂತೂ ಯಡಿಯೂರಪ್ಪನವರ ಆಯ್ಕೆಯನ್ನು ತಡೆಯಲು ಇನ್ನಿಲ್ಲದ ಸರ್ಕಸ್ ಮಾಡಿದ್ದು ಗುಟ್ಟಾಗಿರುವ ವಿಷಯವೇನಲ್ಲ. ಇಷ್ಟೆಲ್ಲಾ ವಿರೋಧ, ಅಡೆತಡೆಗಳಿದ್ದರೂ ಬಿಜೆಪಿ ಹೈಕಮಾಂಡ್ ವಸ್ತುಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಕೊನೆಗೂ ಯಡಿಯೂರಪ್ಪನವರಿಗೆ ಅಧ್ಯಕ್ಷ ಪಟ್ಟವನ್ನು ಕಟ್ಟಿತು. ಈಗಿರುವ ಪ್ರಶ್ನೆ, ಮುಂದೇನು? ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಒಗ್ಗೂಡಿಸಿ ಕಾರ್ಯಕರ್ತರನ್ನು ಹುರಿದುಂಬಿಸಿ ಮುಂದಿನ ಚುನಾವಣೆಗೆ ತಯಾರು ಮಾಡಬಲ್ಲರೆ? ಅವರಿಗಿರುವ ತೊಡಕು, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಹೋರಾಡಬಲ್ಲರೆ? ಈಗಾಗಲೇ ನ್ಯಾಯಾಲಯಗಳಿಂದ ರೋಪಮುಕ್ತರಾಗಿದ್ದರೂ ಸಿದ್ದರಾಮಯ್ಯ ಸರಕಾರ ಮತ್ತೆ ಅವರನ್ನು ಹಣಿಯಲು ತಯಾರಿ ನಡೆಸುತ್ತಿದ್ದು, ಕಾನೂನು, ಕೋರ್ಟು-ಕಟ್ಲೆಗಳನ್ನೆಲ್ಲ ಸಂಭಾಳಿಸಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಲ್ಲರೆ? ಈ ಎಲ್ಲಾ ಸವಾಲುಗಳು ಯಡಿಯೂರಪ್ಪವನರ ಮುಂದಿದೆ. ಆದರೂ ಹುಟ್ಟು ಹೋರಾಟಗಾರರಾದ ಬಿ.ಎಸ್.ವೈ ತಮ್ಮ ಗುರಿ ಸಾಧನಗೆ ಸಾಕಷ್ಟು ತಯಾರಿಗಳನ್ನು ನಡೆಸಿಕೊಂಡೇ ಹೋರಾಟದ ಕಣಕ್ಕೆ ಇಳಿದಿದ್ದಾರೆ. ಅವರ ಆಯ್ಕೆ ಪಕ್ಷದ ಕಾರ್ಯಕರ್ತರಲ್ಲೂ ಉತ್ಸಾಹ ಇಮ್ಮಡಿಸಿದೆ.

ಯಡಿಯೂರಪ್ಪನವರ ಮುಂದಿರುವ ಅವಕಾಶಗಳು ಮತ್ತು ಸವಾಲುಗಳು

ರಾಜ್ಯದಲ್ಲಿ ಕಳೆದೆರಡು ವರ್ಷಗಳಲ್ಲಿ ಪ್ರತಿಪಕ್ಷ ಬಿಜೆಪಿಗಿಂತ ಕಾಂಗ್ರೆಸ್ಸಿನ ಭಿನ್ನಮತೀಯರೇ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಬಹುದು. ಹಗರಣಗಳು, ಕುಂಟುತ್ತಾ ಸಾಗುತ್ತಿರುವ ಅಭಿವೃದ್ಧಿ ಕಾರ್ಯಗಳು, ತೀವ್ರ ಬರಗಾಲದ ನಿರೀಕ್ಷೆಯಿದ್ದರೂ ಬಣರಾಜಕೀಯದಲ್ಲೇ ಸಮಯ ವ್ಯರ್ಥ ಮಾಡುತ್ತಿರುವ ಮಂತ್ರಿ ಮಾಗಧರು.. ಇತ್ಯಾದಿ ಹತ್ತು ಹಲವು ವಿಷಯಗಳು ಇದ್ದರೂ ಬಿಜೆಪಿ ನಾಯಕರು ಪತ್ರಿಕಾ ಹೇಳಿಕೆಗಳನ್ನು ಕೊಡುವುದು ಬಿಟ್ಟರೆ ಬೀದಿಗಿಳಿದು ಸರಕಾರದ ವಿರುದ್ಧ ಹೋರಾಡುವ, ಜನಾಭಿಪ್ರಾಯ ಮೂಡಿಸುವ ಕಾರ್ಯಕ್ಕೆ ಕೈಹಾಕಲಿಲ್ಲ. ಇದೆಲ್ಲ ಉಸಾಬರಿ ತಮಗ್ಯಾಕೆ ಎನ್ನುವ ನಿಲುವು ತಾಳಿದಂತಿದ್ದ ನಾಯಕರ ಧೋರಣೆ ನೋಡಿದರೆ ಮುಂದಿನ ಸಲ ಬಿಜೆಪಿ ಅಧಿಕಾರಕ್ಕೆ ಬಂದರೆ ಅದೇ ಪವಾಡ ಎನ್ನುವಂತಿತ್ತು!. ಇಂಥಹ ಪರಿಸ್ಥಿತಿಯ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಯಡಿಯೂರಪ್ಪ ಪಕ್ಷದ ಸಂಘಟನೆ ಮಾಡಿಕೊಳ್ಳುತ್ತಾ ಹಿಂದಿನ ಸಲದಂತೆ ಕೇವಲ ಹೊಗಳುಭಟರನ್ನು ಅವಲಂಬಿಸದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರ, ಬೆಂಬಲಿಗರ ಸಹಾಯ, ಸಹಕಾರ ಪಡೆದು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಬೇಕಿದೆ. ಕಾಂಗ್ರೆಸ್ ಸರಕಾರದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸುವುದರೊಂದಿಗೆ, ಜನರ ಸಮಸ್ಯೆಗಳನ್ನು ಆಲಿಸುತ್ತ ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಅವುಗಳನ್ನು ನಿಶ್ಚಿತ ಕಾಲಮಿತಿಯೊಳಗೆ ಹೇಗೆ ಬಗೆಹರಿಸುತ್ತದೆ ಎನ್ನುವುದನ್ನು ಸಹ ಜನರಿಗೆ ಮನವರಿಕೆ ಮಾಡಬೇಕು. ಮುಂದಿನ ಚುನಾವಣೆಗೆ ಇನ್ನುಳಿದ ಪ್ರತಿಯೊಂದು ದಿನವನ್ನು ಅವರು ಈ ಕಾರ್ಯಕ್ಕಾಗಿ ಬಳಸಿಕೊಳ್ಳಬೇಕಿದೆ.

ಛಲವಾದಿಯಾದ ಯಡಿಯೂರಪ್ಪನವರಿಗೆ ಮಾತ್ರ ಈ ಸಾಮರ್ಥ್ಯವಿರುವುದು ಪಕ್ಷದ ವರಿಷ್ಠರಿಗೂ ತಿಳಿಯದ ವಿಚಾರವೇನಲ್ಲ. ಪಕ್ಷದ ವರಿಷ್ಥರಲ್ಲಿ ಕೆಲವರ ಅಸಮಾಧಾನ ಬಿಟ್ಟರೆ ಯಡಿಯೂರಪ್ಪನವರಿಗೆ ಕಾರ್ಯಕರ್ತರ ಬೆಂಬಲ ಸಿಗುವುದರಲ್ಲಿ ಸಂದೇಹವಿಲ್ಲ. ಆದರೂ ಜಾತಿ ಲೆಕ್ಕಾಚಾರ ವಿಚಾರ ಬಂದಾಗ ಯಡಿಯೂರಪ್ಪ ಬಹಳ ಎಚ್ಚರಿಕೆಯಿಂದ ತಮ್ಮ ಹೆಜ್ಜೆಯನ್ನು ಇಡಬೇಕಾಗುತ್ತದೆ. ಪಕ್ಷದ ಚುಕ್ಕಾಣಿ ತಮ್ಮ ಕೈಯಲ್ಲಿ ಇರುವುದು ಅವರಿಗೆ ಹೆಚ್ಚಿನ ಬಲವನ್ನು ತಂದುಕೊಟ್ಟಿದೆ. ಸಮರ್ಥ ಕಾರ್ಯಕರ್ತರನ್ನು, ನಾಯಕರನ್ನು ಬಳಸಿಕೊಂಡು ಪಕ್ಷವನ್ನು ಬಲಪಡಿಸುವ ಉದ್ದೇಶಕ್ಕೆ ಇದು ಸಹಜವಾಗಿಯೇ ನೆರವಾಗಬಲ್ಲುದು.

ಇತ್ತ, ಕೇವಲ ಕೆಲವು ಸಮುದಾಯಗಳನ್ನು ಓಲೈಸುತ್ತಾ ಮತಬ್ಯಾಂಕಿಗೇ ಹೆಚ್ಚಿನ ಒತ್ತುಕೊಟ್ಟು ಬಹುಜನರ ಹಿತವನ್ನು ಕಡೆಗಣಿಸಿ, ವಿಶ್ವಾಸ ಕಳೆದುಕೊಂಡ ಸರಕಾರ ನಡೆಸುತ್ತಿರುವ ಕಾಂಗ್ರೆಸ್ಸಿಗೆ ಯಡಿಯೂರಪ್ಪನವರು ಕಣಕ್ಕೆ ಇಳಿದಿರುವುದು ತೀವ್ರ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದಲೇ ಯಡಿಯೂರಪ್ಪನವರ ಈ ಹಿಂದಿನ ಕೆಲವು ಪ್ರಕರಣಗಳನ್ನು ಮತ್ತೆ ಕೆದಕಿ ಅವರನ್ನು ಕಾನೂನು ರೀತ್ಯಾ ಕಟ್ಟಿಹಾಕುವ ಕಾರ್ಯಕ್ಕೆ ಸಿದ್ದು ಸರಕಾರ ಮುಂದಾಗಿದೆ. ಅದೇನೇ ಇದ್ದರೂ 24/7 ರಾಜಕಾರಣಿ ದೇವೇಗೌಡರ ವಿರುದ್ಧವೇ ಕಳೆದ ಬಾರಿ ತೊಡೆತಟ್ಟಿ ಹೋರಾಡಿ ಗೆದ್ದು ಬಂದ ಯಡಿಯೂರಪ್ಪನವರು ತಮ್ಮ ವರ್ಚಸ್ಸು, ಜಾಣನಡೆ, ಅನುಭವದ ಹೆಜ್ಜೆಗಳ ಮೂಲಕ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದು ಪಕ್ಷದ, ಕಾರ್ಯಕರ್ತರ ದೃಢ ನಂಬಿಕೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದೇ ಹೋದರೆ ಅದೊಂದು ಪವಾಡ ಎನ್ನಬಹುದೇನೋ ?!

 

Author : ಸಮಚಿತ್ತ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited