ಬೆಂಗಳೂರು : ಕೇಂದ್ರ ಸರ್ಕಾರದ ನೂತನ ಕಾರ್ಮಿಕ ನೀತಿ ವಿರೋಧಿಸಿ ಕೇಂದ್ರ ನೌಕರರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ ಕೆಲವೆಡೆ ಉತ್ತಮ ಬೆಂಬಲ ವ್ಯಕ್ತವಾಗಿದ್ದರೆ, ಇನ್ನು ಕೆಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒಂದು ತಿಂಗಳ ಅಂತರದಲ್ಲಿ ರಾಜ್ಯ ಕಾಣುತ್ತಿರುವ ಎರಡನೇ ಬಂದ್ ಇದಾಗಿದ್ದು, ಈ ಬಂದ್‌ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಮ್ಯಾಕ್ಸಿಕ್ಯಾಬ್ ವೆಲ್‌ಫೇರ್ ಅಸೋಸಿಯೇಷನ್, ಆಟೋ ಚಾಲಕರ ಸಂಘ, ಬ್ಯಾಂಕ್ ನೌಕರರ ಸಂಘ, ಶಾಲಾ ವಾಹನಗಳ ಚಾಲಕರ ಸಂಘಗಳೆಲ್ಲವೂ ಒಕ್ಕೊರಲಿನಿಂದ ಬೆಂಬಲ ಘೋಷಿಸಿವೆ. ಕೈಗಾರಿಕಾ ಸಂಘಗಳು ಈಗಾಗಲೇ ಕಾರ್ಖಾನೆಗಳಿಗೆ ರಜೆ ನೀಡಿವೆ.
ಇನ್ನು ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಸರ್ಕಾರಿ ಬಸ್ ಸೇವೆಗಳು ಸ್ಥಗಿತಗೊಂಡ ಹಿನ್ನಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.
ಮೈಸೂರು, ತುಮಕೂರು, ಕೋಲಾರ, ಚಿಕ್ಕಮಗಳೂರು, ಪುತ್ತೂರು ಜಿಲ್ಲೆಗಳಲ್ಲಿ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಬಸ್ ಗಳು ಸಂಚಾರ ಆರಂಭಿಸಿವೆ. ಮೈಸೂರಿನಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಕೆಲವೆಡೆ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಬೆಂಗಳೂರು, ಹಾಸನ, ಹುಬ್ಬಳ್ಳಿ, ಬಳ್ಳಾರಿಯಲ್ಲಿ ಮುಷ್ಕರದ ಬಿಸಿ ತೀವ್ರಗೊಂಡಿದೆ. ಚಿತ್ರದುರ್ಗದಲ್ಲಿ ತಡವಾಗಿ ಬೀದಿಗಳಿದ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಯಾದಗಿರಿ ಪ್ರಮುಖ ರಸ್ತೆಗಳಲ್ಲಿ ಕಾರ್ಮಿಕರ ಸಂಘ ಪ್ರತಿಭಟನೆ ನಡೆಸುತ್ತಿದೆ. ರಾಯಚೂರಿನಲ್ಲಿ ಕಾರ್ಮಿಕರ ಒಕ್ಕೂಟ ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರುದ್ಧ ಬೈಕ್ ರ್ಯಾಲಿ ಹಮ್ಮಿಕೊಂಡಿವೆ.
ಬಸ್ ಡಿಪೋಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಮಧ್ಯಾಹ್ನ ಬಸ್ ಸಂಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಬಹುದು.